HOME » NEWS » State » FARMERS PROTEST AT HUBLI TO OPPOSE APMC ACT LG

ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ

ನೂತನ ಕಾಯ್ದೆಗಳು ರೈತರಿಗೆ ಮಾರಕವಾಗಿವೆ.‌ ಅತಿವೃಷ್ಟಿ, ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದಿಡಲಿವೆ. ಕೆಲವೇ ಕೆಲವು ವ್ಯಾಪಾರಿಗಳು ಮತ್ತು ಬಂಡವಾಳ ಶಾಹಿಗಳು ಅಮಾಯಕರ ಸುಲಿಗೆ ಮಾಡಲಿದ್ದಾರೆ ಎಂದು ಆರೋಪಿಸಿದರು.

news18-kannada
Updated:September 25, 2020, 9:27 AM IST
ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ
ಸಾಂದರ್ಭಿಕ ಚಿತ್ರ
  • Share this:
ಹುಬ್ಬಳ್ಳಿ(ಸೆ.25): ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಮ್‌ಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ರಸ್ತೆ ಮಧ್ಯ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ಕಾಯ್ದೆಗಳು ರೈತರಿಗೆ ಮಾರಕವಾಗಿವೆ.‌ ಅತಿವೃಷ್ಟಿ, ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಮತ್ತಷ್ಟು ಸಂಕಷ್ಟಗಳನ್ನು ತಂದಿಡಲಿವೆ. ಕೆಲವೇ ಕೆಲವು ವ್ಯಾಪಾರಿಗಳು ಮತ್ತು ಬಂಡವಾಳ ಶಾಹಿಗಳು ಅಮಾಯಕರ ಸುಲಿಗೆ ಮಾಡಲಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನ‌ ವಿರೋಧಿ ಕಾಯ್ದೆಗಳನ್ನು‌ ತಕ್ಷಣ ಹಿಂಪಡೆಯುವಂತೆ  ಆಗ್ರಹಿಸಿ ಹುಬ್ಬಳ್ಳಿ ತಹಶೀಲ್ದಾರ್ ಮುಖಾಂತರ ಸಿಎಂ‌ಗೆ ಮನವಿ ಸಲ್ಲಿಸಿದರು.

ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಸ್ಥಾಪನೆ

ಹುಬ್ಬಳ್ಳಿಯಲ್ಲಿ ರೇಣುಕಾ ಶಿಕ್ಷಣ ಸಂಸ್ಥೆಯಿಂದ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಸುನಿತಾ ದಿವಟೆ ತಿಳಿಸಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,  ಗಣೇಶಪೇಟೆಯ ಕೊರವಿ ಪ್ಲಾಜಾದಲ್ಲಿ ಸೆಪ್ಟೆಂಬರ್ 25ರಂದು ನೂತನ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ. ಕಳೆದ 15 ವರ್ಷಗಳಿಂದ ರೇಣುಕಾ ಶಿಕ್ಷಣ ಸಂಸ್ಥೆ ಯುವಕ- ಯುವತಿಯರಿಗೆ ವೃತ್ತಿಪರ ತರಬೇತಿ ನೀಡುತ್ತಿದೆ.‌ ರೇಣುಕಾ ಶಿಕ್ಷಣ ಸಂಸ್ಥೆಯ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರ ಭಾರತ ಸರ್ಕಾರ ಮತ್ತು ಕರ್ನಾಟಕ ಸರಕಾರದ‌ ಮಾನ್ಯತೆ ಪಡೆದಿದೆ.

Karnataka Bandh: ರೈತ ವಿರೋಧಿ ಕಾಯ್ದೆ ಖಂಡಿಸಿ ಇಂದು ರಸ್ತೆ ತಡೆ; ಎಲ್ಲೆಲ್ಲಿ ಪ್ರತಿಭಟನೆ ಬಿಸಿ?

ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಕಾರ್ಯಾರಂಭಿಸಲಿದೆ. ಅಸಿಸ್ಟೆಂಟ್ ಫ್ಯಾಶನ್ ಡಿಸೈನರ್, ಕೈಗಾರಿಕಾ ಹೊಲಿಗೆ ಯಂತ್ರ ಚಲಾವಣೆ, ರಿಟೇಲ್ ಸೇಲ್ಸ್ ಅಸೋಸಿಯೆಟ್ ತರಬೇತಿಯನ್ನು ಮೂರು ತಿಂಗಳ ಅವಧಿಯಲ್ಲಿ ನೀಡಲಾಗುತ್ತಿದೆ. ಎಸ್ ಎಸ್ ಎಲ್ ಸಿ ಉತ್ತೀರ್ಣರಾದ 18 ರಿಂದ 35 ವರ್ಷದವರು ತರಬೇತಿಯಲ್ಲಿ ಭಾಗವಹಿಸಬಹುದು ಎಂದವರು ಹೇಳಿದ್ದಾರೆ.

ತರಬೇತಿ ಕೇಂದ್ರದ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಹಿರಿಯ ಸಾಹಿತಿ ಶಿವಲಿಂಗಯ್ಯ ಮಲ್ಲಿಕಾರ್ಜುನ ಕಟ್ಟಿ, ಕರ್ನಾಟಕ ಕೌಶಲ್ಯಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ, ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ ಆಗಮಿಸುವರು, ದಿವ್ಯ ಸಾನಿಧ್ಯವನ್ನು ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು, ವಿರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು ವಹಿಸುವರು, ಅಧ್ಯಕ್ಷತೆಯನ್ನು ರೇಣುಕಾ ಶಿಕ್ಷಣ ಮತ್ತು ಕಲ್ಯಾಣ ಕೇಂದ್ರದ ಅಧ್ಯಕ್ಷೆ ಸುನಿತಾ ದಿವಟೆ ವಹಿಸುವರು.
Youtube Video
ಮುಖ್ಯ ಅತಿಥಿಗಳಾಗಿ ಹು- ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸಮಾಜ ಸೇವಕ ಸಂತೋಷ ಆರ್ ಶೆಟ್ಟಿ, ಐಎನ್ ಟಿಯುಸಿಯ ಧಾರವಾಡ ವಿಭಾಗದ  ಅಧ್ಯಕ್ಷ ಬಂಗಾರೇಶ ಹಿರೇಮಠ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ರೇಣುಕಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಿಕಾಂತ ದಿವಟೆ, ಪ್ರಾಜೆಕ್ಟ್ ಮ್ಯಾನೇಜರ್ ಕಲ್ಲಪ್ಪ ಮಾದರ ಉಪಸ್ಥಿತರಿದ್ದರು.
Published by: Latha CG
First published: September 25, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories