ರೈತರ ಸಾಲಮನ್ನಾ ಘೋಷಣೆ ಮಾಡಿದ್ದರೂ ಬ್ಯಾಂಕ್​ಗಳಿಂದ ಅನ್ನದಾತನಿಗೆ ನೋಟಿಸ್​​

news18
Updated:September 6, 2018, 4:46 PM IST
ರೈತರ ಸಾಲಮನ್ನಾ ಘೋಷಣೆ ಮಾಡಿದ್ದರೂ ಬ್ಯಾಂಕ್​ಗಳಿಂದ ಅನ್ನದಾತನಿಗೆ ನೋಟಿಸ್​​
news18
Updated: September 6, 2018, 4:46 PM IST
-ರಾಘವೇಂದ್ರ ಗಂಜಾಮ್, ನ್ಯೂಸ್ 18 ಕನ್ನಡ

ಮಂಡ್ಯ,(ಸೆ.06): ಸಿಎಂ ಕುಮಾರಸ್ವಾಮಿಯವರ ಸಾಲಮನ್ನಾ ಘೋಷಣೆಯ ನಡುವೆ ಕೂಡ ಕೆಲ ಬ್ಯಾಂಕ್​ಗಳು ರೈತರಿಗೆ ಸಾಲ ಮರುಪಾವತಿಸಿ ಎಂದು ನೋಟಿಸ್​ ನೀಡಿದ್ದಾರೆ. ಇದರಿಂದ ಕೆರಳಿರುವ ರೈತರು ಇದೀಗ ಪ್ರತಿಭಟನೆಗೆ ಇಳಿದಿದ್ದಾರೆ.

ಹೌದು, ಸಿಎಂ ಕುಮಾರಸ್ವಾಮಿ ಸಾಲಮನ್ನಾ ಘೋಷಣೆ ಬಳಿಕವು ಸಾಲ ವಸೂಲಾತಿ ನೋಟಿಸ್​ ನೀಡಿದ ಬ್ಯಾಂಕ್​ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿಸಿಸಿ ಸಹಕಾರಿ ಬ್ಯಾಂಕ್​ ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್​ ನೀಡಿದೆ. ಹೀಗಾಗಿ ಬ್ಯಾಂಕ್ ಅಧಿಕಾರಿಗಳ ಈ ನಡೆಯನ್ನು ಖಂಡಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದಮೇಲೆ ರೈತರಿಗೆ ಅನುಕೂಲವಾಗಲಿ ಎಂದು ಸಾಲಮನ್ನಾ ಘೋಷಣೆ ಮಾಡಿದ್ದಾರೆ. ಅಲ್ಲದೇ ಸಾಲ ಮರು ಪಾವತಿ ಮಾಡಿ ಎಂದು  ರೈತರಿಗೆ  ತೊಂದರೆ ನೀಡಬಾರದೆಂದು ತಿಳಿಸಿದ್ದಾರೆ. ಆದರೆ ಇದೀಗ ಬ್ಯಾಂಕಿನ ವ್ಯವಸ್ಥಾಪಕರು ರೈತರು ಸಾಲ ಮರುಪಾವತಿ ಮಾಡಲೇಬೇಕು ಎಂದು ನೋಟಿಸ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಡಿಸಿಸಿ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡ ಚನ್ನಸಂದ್ರ ಲಕ್ಷ್ಮಣ್ ರೈತರಿಗೆ ನೋಟೀಸ್ ನೀಡುತ್ತಿರುವುದನ್ನು ಖಂಡಿಸಿ ತಮ್ಮ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು.

ಇನ್ನು ಇದಕ್ಕೂ ಮೊದಲು ಮದ್ದೂರಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಾಲ ಮರುಪಾವತಿ ಮಾಡುವಂತೆ ನೂರಾರು ರೈತರಿಗೆ ನೋಟಿಸ್ ನೀಡಿದ್ದು, ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರೈತರಿಗೆ ಬ್ಯಾಂಕ್​​ಗಳಿಂದ ಇದೇ ರೀತಿ ನೋಟಿಸ್ ಗಳು ಬಂದರೆ ರೈತರು ಆತ್ಮಹತ್ಯೆ ಹಾದಿ ತುಳಿಯುವ ಎಚ್ಚರಿಕೆ ನೀಡಿದರು. ಸತತ 3 ವರ್ಷಗಳ ಬರಗಾಲದ ನಂತರ ರೈತರು ಇದೀಗ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರಿಗೆ  ಅಗತ್ಯವಾಗುವಂತೆ ಹೊಸ ಸಾಲ ನೀಡಬೇಕು. ಅದನ್ನು ಬಿಟ್ಟು ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡುವ ಕ್ರಮ ಅದೆಷ್ಟು ಸರಿ ಎಂದು ಪ್ರಶ್ನಿಸಿದರು. ಅಲ್ಲದೇ ಬ್ಯಾಂಕಿನ ಮ್ಯಾನೇಜರ್ ಜೊತೆ ವಾಗ್ವಾದಕ್ಕಿಳಿದು ಕೂಡಲೇ ನೀವು ನೀಡಿರುವ  ನೋಟಿಸ್ ವಾಪಾಸ್ ಪಡೆಯಬೇಕು.  ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮುಂದುವರೆಸುವ  ಎಚ್ಚರಿಕೆ ನೀಡಿ ಬ್ಯಾಂಕಿನ ನೋಟಿಸ್ ಸುಟ್ಟು ಹಾಕುವ  ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ರೈತರು ಸಂಕಷ್ಟದಲ್ಲಿರುವಾಗಲೇ  ಬ್ಯಾಂಕ್ ನೋಟಿಸ್ ನೀಡಿರುವುದಕ್ಕೆ ಜಿಲ್ಲೆಯ ರೈತರು ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಈ ನಾಡಿನ ದೊರೆ ಕುಮಾರಸ್ವಾಮಿ ರೈತರಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದು,ಅವರೇ ಅಧಿಕಾರಿಗಳಿಗೆ ನೋಟಿಸ್ ನೀಡದಂತೆ ಎಚ್ಚರಿಕೆ ನೀಡುವ ಮೂಲಕ ರೈತರ  ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಮನವಿ ಮಾಡಿದರು. ಬ್ಯಾಂಕುಗಳು ಇನ್ಮುಂದೆಯಾದರೂ ರೈತರಿಗೆ ನೋಟೀಸ್ ಇಸ್ಯೂ ಮಾಡುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಬಾರದು ಎನ್ನುತ್ತಿದ್ದಾರೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ