Mining: ಜೆ ಕೆ ಸಿಮೆಂಟ್ ಕಾರ್ಖಾನೆ ಗಣಿಗಾರಿಕೆಗೆ ರೈತರ ವಿರೋಧ, ಆಕ್ರೋಶ!

ಗಣಿಗಾರಿಕೆ ಪ್ರದೇಶದಲ್ಲಿ ಹಗಲಿನಲ್ಲೇ ಬಾಂಬ್​ ಸ್ಪೋಟ ಮಾಡುತ್ತಿದ್ದಾರೆ. ಇದರಿಂದ ಎರಡು ಗ್ರಾಮದಲ್ಲಿ ಅನೇಕ ಮನೆಗಳು ಬಿರುಕು ಬಿಟ್ಟಿವೆ. ಅಂತರ್ಜಲ‌ಮಟ್ಟ ಕುಸಿದು ಕೃಷಿಗೆ ನೀರಿಲ್ಲದಂತಾಗಿದೆ.

ಗಣಿಗಾರಿಕೆಗೆ ಜನರ ಆಕ್ರೋಶ

ಗಣಿಗಾರಿಕೆಗೆ ಜನರ ಆಕ್ರೋಶ

 • Share this:
  ಬಾಗಲಕೋಟೆ (ಮಾ. 13) : ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಸುಣ್ಣದ ಕಲ್ಲು ಹೇರಳವಾಗಿದ್ದು,  ಸಿಮೆಂಟ್ ಕಾರ್ಖಾನೆಗಳು ಕಾರ್ಯ ನಡೆಸುತ್ತಿವೆ.  ಅದರಲ್ಲೂ  ಜೆ ಕೆ ಸಿಮೆಂಟ್ ಕಾರ್ಖಾನೆ ಕಳೆದ ಹತ್ತು ವರ್ಷಗಳಿಂದ ಹಲಕಿ ನಿಂಗಾಪೂರ ಗ್ರಾಮದ ಬಳಿ  ಲೈಮ್ ಸ್ಟೋನ್ ಗಣಿಗಾರಿಕೆ  ಮಾಡುತ್ತಿದೆ.ಆದರೆ ಇತ್ತೀಚೆಗೆ ಕಳೆದ ಮೂರು ತಿಂಗಳಿಂದ ಕಂಪನಿ ತಮ್ಮದೇ ಜಾಗದಲ್ಲಿ ಲೈಮ್ ಸ್ಟೋನ್ ಗಣಿಗಾರಿಕೆ ನಡೆಸುತ್ತಿದೆ. ಆದರೆ ಈ ಜಾಗ ಹಲಕಿ ನಿಂಗಾಪುರ ಗ್ರಾಮದ ಮಧ್ಯೆಯಿದ್ದು, ಸುತ್ತಲೂ ಕೃಷಿ ಜಮೀನು, ಜೊತೆಗೆ ಊರಿಗೆ ತೀರಾ ಸಮೀಪದಲ್ಲಿದೆ. ಗಣಿಗಾರಿಕೆ ಪ್ರದೇಶದಲ್ಲಿ ಹಗಲಿನಲ್ಲೇ ಬಾಂಬ್​ ಸ್ಪೋಟ ಮಾಡುತ್ತಿದ್ದಾರೆ. ಇದರಿಂದ ಎರಡು ಗ್ರಾಮದಲ್ಲಿ ಅನೇಕ ಮನೆಗಳು ಬಿರುಕು ಬಿಟ್ಟಿವೆ. ಅಂತರ್ಜಲ‌ಮಟ್ಟ ಕುಸಿದು ಕೃಷಿಗೆ ನೀರಿಲ್ಲದಂತಾಗಿದೆ. ಧೂಳಿನಿಂದ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಇನ್ನು ಗಣಿ ಸಚಿವರು ಇದೇ ಜಿಲ್ಲೆಯವರಾಗಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲೇ ಈ ರೀತಿ ನಡೆಯುತ್ತಿದ್ದು,ರೈತರು ಸಚಿವ ಮುರುಗೇಶ್ ನಿರಾಣಿ, ಡಿಸಿಎಂ ಗೋವಿಂದ ಕಾರಜೋಳ ಈ ಬಗ್ಗೆ ಕ್ರಮ ಕೈಗೊಂಡು ಈ ಜಾಗದಲ್ಲಿ ಗಣಿಗಾರಿಕೆ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

  ಕಳೆದ ಮೂರು ತಿಂಗಳಿಂದ ಈ ಜಾಗದಲ್ಲಿ ಲೈಮ್ ಸ್ಟೋನ್ ಗಣಿಗಾರಿಕೆ ನಡೆಯುತ್ತಿದ್ದು ಮೂರು ತಿಂಗಳಲ್ಲಿ ಐದು ಎಕರೆಗೂ ಹೆಚ್ಚು ಜಾಗದಲ್ಲಿ ಭೂಮಿಯನ್ನು ಗಣಿಗಾರಿಕೆಗಾಗಿ  ಬಗೆದಿದ್ದಾರೆ.ಸ್ಥಳದಲ್ಲಿ ಹಗಲು ರಾತ್ರಿ ಎನ್ನದೇ ಗಣಿಗಾರಿಕೆ ಬ್ಲಾಸ್ಟ್ ಮಾಡುತ್ತಿದ್ದು, ಹಲಕಿ ಹಾಗೂ ನಿಂಗಾಪುರ ಗ್ರಾಮಸ್ಥರಲ್ಲಿ ಆತಂಕ‌ ಮನೆ ಮಾಡಿದೆ. ಇನ್ನು 1600ಮೀಟರ್ ನಿಂಗಾಪೂರ ಗ್ರಾಮದ ಕೂಗಳತೆಯಲ್ಲಿ ಸ್ಪೋಟ ಸಂಗ್ರಹದ ಕೋಣೆಯಿದೆ. ಇದರಿಂದ ಮತ್ತಷ್ಟು ಆತಂಕ ವಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು. ಸ್ಪೋಟದಿಂದ ಮನೆಗಳು ಬಿರುಕು ಬಿಡುತ್ತಿದ್ದು, ಬೀಳುವ ಭಯ ಪ್ರತಿಕ್ಷಣ ಕಾಡುತ್ತಿದೆ. ಹೊಲಗಳಲ್ಲಿ ಕೆಲಸ‌ ಮಾಡುವಾಗ ಬ್ಲಾಸ್ಟ್ ಮಾಡಿದ ಕಲ್ಲುಗಳು ಮೈ‌ಮೇಲೆ‌ ಬಿದ್ದರೆ ಎಂಬ ಭೀತಿಯಿಂದ ಜನರು ಕೆಲಸ‌ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

  ಇದನ್ನು ಓದಿ: ಸಿಡಿ ಪ್ರಕರಣ ಕುರಿತು ಅಧಿಕೃತ ದೂರು ದಾಖಲಿಸಿದ ರಮೇಶ್​ ಜಾರಕಿಹೊಳಿ

  ಸದ್ಯ ಐದು ಎಕರೆಗೂ ಹೆಚ್ಚು ಜಾಗದಲ್ಲಿ ಗಣಿಗಾರಿಕೆ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಇನ್ನು ವಿಸ್ತರಿಸುವ ಸಾಧ್ಯತೆ ಇದೆ. ಇಲ್ಲಿ ಜಮೀನು ಕಂಪನಿಗೆ ಸೇರಿದ್ದರೂ ಗ್ರಾಮದ ಸಮೀಪ ಬ್ಲಾಸ್ಟ್ ‌ಮಾಡಬಾರದು ಎಂಬ ನಿಯಮವಿದೆ. ಆದರೆ, ಕಂಪನಿಯಿಂದ ಈ ನಿಯಮ ಉಲ್ಲಂಘನೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

  ಇನ್ನು ಈ ಬಗ್ಗೆ   ಜಿಲ್ಲಾ ಉಸ್ತುವಾರಿ ಸಚಿವ ,ಮುಧೋಳ ಶಾಸಕರೂ ಆಗಿರುವ ಗೋವಿಂದ‌ ಕಾರಜೋಳ ಅವರನ್ನು ಕೇಳಿದರೆ ಜೆಕೆ ಕಂಪನಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿವರೆಗೂ ಅವರಿಂದ ಯಾವುದೇ ‌ನಿಯಮ ಉಲ್ಲಂಘನೆಯಾಗಿಲ್ಲ.ಸ್ಥ ಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸುತ್ತೇವೆ. ಒಂದು ವೇಳೆ ಅಲ್ಲಿ ಯಾವುದೇ ಕಾನೂನು ಬಾಹಿರ ಕಾರ್ಯ ಆಗಿದ್ದರೆ, ಮುಂದಿನ ಕ್ರಮ ಕೈಗೊಳ್ಳುವದಾಗಿ ಹೇಳುತ್ತಿದ್ದಾರೆ. ಇನ್ನು ಕಾರ್ಖಾನೆಯ ಜನರಲ್ ಮ್ಯಾನೇಜರ್ ಶಿವಯ್ಯ ಸ್ವಾಮಿ, ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆ ಮಾಡ್ತಿಲ್ಲ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲಾಗಿದೆ ಎಂದು ಸಮಜಾಯಿಷಿ ನೀಡ್ತಿದ್ದಾರೆ.
  Published by:Seema R
  First published: