1,500 ಇದ್ದ ರೇಟು 50 ರೂ.ಗೆ ಇಳಿದರೆ ಏನಾಗಬೇಡ..? ಕಣ್ಣೀರಲ್ಲಿ ಕೈತೊಳೆಯುತ್ತಿರುವ ಈರುಳ್ಳಿ ಬೆಳೆಗಾರರು

ಬರ ಪರಿಸ್ಥಿತಿಯಲ್ಲಿ ಹಾಗೂ ಹೀಗೂ ಬೆಳೆದ ಅಲ್ಪಸ್ವಲ್ಪ ಬೆಳೆಗೂ ಕನಿಷ್ಠ ಬೆಲೆ ಸಿಗದೆ ಈರುಳ್ಳಿ, ಬೆಳ್ಳುಳ್ಳಿ, ಹಿಪ್ಪುನೇರಳೆ ಬೆಳೆಗಾರರು ಹೈರಾಣವಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹೇಳುವ ಸರಕಾರ ಮಾತ್ರ ಈ ವಿಚಾರದಲ್ಲಿ ಜಾಣಕಿವುಡತನ ತೋರುತ್ತಿರುವುದು ವಿಚಿತ್ರವೇ ಸರಿ..!

Vijayasarthy SN
Updated:November 18, 2018, 5:52 PM IST
1,500 ಇದ್ದ ರೇಟು 50 ರೂ.ಗೆ ಇಳಿದರೆ ಏನಾಗಬೇಡ..? ಕಣ್ಣೀರಲ್ಲಿ ಕೈತೊಳೆಯುತ್ತಿರುವ ಈರುಳ್ಳಿ ಬೆಳೆಗಾರರು
ಈರುಳ್ಳಿ ರಸ್ತೆಗೆ ಸುರಿದು, ಟಯರ್ ಸುಟ್ಟು ರೈತರ ಪ್ರತಿಭಟನೆ
Vijayasarthy SN
Updated: November 18, 2018, 5:52 PM IST
- ರಾಚಪ್ಪ ಬನ್ನಿದಿನ್ನಿ / ಚಂದ್ರಕಾಂತ್ ಸುಗಂಧಿ

ಬಾಗಲಕೋಟೆ/ಬೆಳಗಾವಿ(ನ. 18): ಉತ್ತರ ಕರ್ನಾಟಕದ ಕಬ್ಬು ಬೆಳೆಗಾರ ರೈತರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈರುಳ್ಳಿ ಬೆಳೆಗಾರರ ಕೂಗು ಅರಣ್ಯರೋದನವಾಗಿ ಪರಿಣಮಿಸಿದೆ. ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಧಾರವಾಡ ಮೊದಲಾದ ಜಿಲ್ಲೆಯ ಈರುಳ್ಳಿ ರೈತರು ದಿಢೀರ್ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮೊನ್ನೆಯವರೆಗೂ ಎಪಿಎಂಸಿಗಳಲ್ಲಿ ಪ್ರತೀ ಕ್ವಿಂಟಾಲ್​ಗೆ 1,500 ರೂವರೆಗೂ ಈರುಳ್ಳಿ ಬೆಲೆ 50 ರೂಪಾಯಿಗೆ ಕುಸಿತವಾಗಿ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಬರದಿಂದ ಬಸವಳಿದು ಬೆಳೆದ ಅಲ್ಪಸ್ವಲ್ಪ ಬೆಳೆಗೂ ಕನಿಷ್ಠ ಬೆಲೆ ಸಿಗದೇ ಇರುವುದು ಈರುಳ್ಳಿ ಬೆಳೆಗಾರರನ್ನು ಹೈರಾಣವನ್ನಾಗಿಸಿದೆ.

ನಿನ್ನೆ ಆ ಎರಡು ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಗಾರರು ಹತಾಶೆಗೊಂಡು ಬೃಹತ್ ಪ್ರತಿಭಟನೆಗಳನ್ನೇ ನಡೆಸಿದರು. ಈರುಳ್ಳಿಯನ್ನು ನೆಲಕ್ಕೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಈರುಳ್ಳಿ ಬೆಳೆಗಾರರು ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಯ ಮುಖ್ಯಧ್ವಾರ ಬಂದ್ ಮಾಡಿ ರಸ್ತೆ ತಡೆದು ಧರಣಿ ನಡೆಸಿದರು. ದಲ್ಲಾಳಿಗಳಿಂದಾಗಿ ಈರುಳ್ಳಿ ಬೆಲೆ ಕುಸಿತವಾಗಿದೆ. ಇದನ್ನು ಕಂಡೂ ಸರಕಾರವು ಕಣ್ಮುಚ್ಚಿ ಕುಳಿತಿದೆ ಎಂದು ರೈತರು ಆಕ್ರೋಶ ಹೊರಹಾಕಿದರು. ಬಾಗಲಕೋಟೆ ಕೃಷಿ ಮಾರುಕಟ್ಟೆಯಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ. ಅಲ್ಲಿ ಈರುಳ್ಳಿ ರಸ್ತೆಗೆ ಸುರಿದು, ಟಯರ್​ಗೆ ಬೆಂಕಿ ಹಚ್ಚಿ ರೈತರು ಉಗ್ರಾವತಾರ ತಾಳಿದರು.

ಈರುಳ್ಳಿಯ ಜೊತೆ ಬೆಳ್ಳುಳ್ಳಿಯ ಬೆಲೆ ಕೂಡ ಪ್ರಪಾತಕ್ಕೆ ಕುಸಿದಿದೆ. ಕ್ವಿಂಟಾಲ್​ಗೆ 4-5 ಸಾವಿರ ರೂ ಇದ್ದ ಬೆಳ್ಳುಳ್ಳಿ ಬೆಲೆ ಏಕಾಏಕಿ 1,200 ರೂ.ಗೆ ಕುಸಿದಿದೆ. ಬೆಳ್ಳುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಇಂದು ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಕೋಲಾರ ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರೂ ಬೆಲೆ ಕುಸಿತದಿಂದ ವ್ಯಾಕುಲಗೊಂಡಿದ್ದಾರೆ. ಹಿಪ್ಪುನೇರಳೆ ಬೆಳೆದ ಕೃಷಿಕರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಒಂದು ಎಕರೆ ಹಿಪ್ಪುನೇರಳೆಗೆ 10 ಸಾವಿರ ರೂ ಸಿಗುವುದೂ ಕೂಡ ದುಸ್ತರವೆಂಬಂತಾಗಿದೆ. ಬೆಳೆ ತೆಗೆಯಲು ಹಾಕಿದ ಬಂಡವಾಳವೂ ವಾಪಸ್ ಬರುವುದು ಕಷ್ಟವಾಗಿದೆ. ಹತಾಶೆಗೊಂಡ ಕೆಲ ರೈತರು ತಮ್ಮ ಜಮೀನಿನಲ್ಲಿ ಇಡೀ ಹಿಪ್ಪುನೇರಳೆ ಬೆಳೆಯನ್ನೇ ನೆಲಸಮ ಮಾಡಿ ಆಕ್ರೋಶ ಹೊರಹಾಕಿದರು.

ರೈತರ ಎಲ್ಲಾ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂಬ ಕೂಗಿಗೆ ಈಗ ಇನ್ನಷ್ಟು ಬಲ ಬರುತ್ತಿದೆ. ಬೆಂಬಲ ಬೆಲೆ ನಿಗದಿಗೆ ಕಬ್ಬು ಬೆಳೆಗಾರರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಕಣ್ಣೀರಲ್ಲಿ ತೊಳೆಯುತ್ತಿರುವ ಈರುಳ್ಳಿ ಬೆಳೆಗಾರರು ಸರಕಾರ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಹಿಡಿಶಾಪ ಹಾಕುತ್ತಿದ್ದಾರೆ. ರೈತರ ಉಳಿವಿಗೋಸ್ಕರ ಏನು ಬೇಕಾದರೂ ತ್ಯಾಗಕ್ಕೆ ಸಿದ್ಧವಿದ್ದೇವೆಂದು ಅಧಿಕಾರ ನಡೆಸುತ್ತಿರುವ ಸರಕಾರಕ್ಕೆ ಈಗ ರೈತರ ನೋವು ಅರಿವಿಗೆ ಬಾರದೇಹೋಗಿದೆ ಎಂದು ವಿಪಕ್ಷವು ಹರಿಹಾಯುತ್ತಿದೆ.
Loading...

ಈರುಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು?
* ಬೆಳಗಾವಿ ಮತ್ತು ಬಾಗಲಕೋಟೆ ಕೃಷಿ ಮಾರುಕಟ್ಟೆಗಳಲ್ಲಿ ಏಕಕಾಲಕ್ಕೆ ಈರುಳ್ಳಿ ಆವಕದಲ್ಲಿ ದಿಢೀರ್ ಹೆಚ್ಚಳವಾಗಿದೆ.
* ಈರುಳ್ಳಿ ಬೆಳೆಯ ಪ್ರಮಾಣ ಹೆಚ್ಚಾಗಿದೆ.
* ಮಾರುಕಟ್ಟೆಗೆ ಬಂದಿರುವ ಈರುಳ್ಳಿಯಲ್ಲಿ ಒಣಗಿದ ಈರುಳ್ಳಿಗಿಂತ ಹೆಚ್ಚಾಗಿ ತೇವಾಂಶಭರಿತ ಈರುಳ್ಳಿಯ ಆವಕವಾಗಿದೆ.
* ರೈತರು ಹೊರಗಡೆಯ ಮಾರುಕಟ್ಟೆಗೆ ಈರುಳ್ಳಿಯನ್ನು ರಫ್ತು ಮಾಡಿಲ್ಲ
* ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಮಾರುಕಟ್ಟೆಗಳಿಗೆ ಒಳ್ಳೆಯ ಈರುಳ್ಳಿ ಸರಕು ಬಂದಿದೆ. ವ್ಯಾಪಾರಸ್ಥರು ಕರ್ನಾಟಕ ಬಿಟ್ಟು ಮಹಾರಾಷ್ಟ್ರಕ್ಕೆ ತೆರಳುವಂತಾಗಿದೆ.

ವ್ಯಾಪಾರಸ್ಥರು ಹೇಳೋದೇನು?
ಬೆಳಗಾವಿ, ಬಾಗಲಕೋಟೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕುಸಿತಕ್ಕೆ ವ್ಯಾಪಾರಸ್ಥರು ರೈತರನ್ನೇ ದೂಷಿಸುತ್ತಾರೆ. ರೈತರು ಸಾಕಷ್ಟು ದಿನ ದಾಸ್ತಾನು ಮಾಡಿಕೊಂಡು ತಡವಾಗಿ ಮಾರುಕಟ್ಟೆಗೆ ತಂದಿದ್ದಾರೆ. ಇವು ಹಾಳಾಗುವ ಹಂತದಲ್ಲಿರುವುದರಿಂದ ಹೆಚ್ಚಿನ ಬೆಲೆ ಸಿಕ್ಕಿಲ್ಲ. ಮಹಾರಾಷ್ಟ್ರದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಲಭ್ಯವಿರುವುದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೇಳುವವರು ಇಲ್ಲವಾಗಿದ್ದಾರೆ ಎಂದು ಮಧ್ಯವರ್ತಿಗಳು ಹೇಳುತ್ತಾರೆಂದು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
First published:November 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...