Lakhimpur Kheri Violence| ದೇಶದಲ್ಲಿ ಅನ್ನದಾತನಿಗೆ ರಕ್ಷಣೆ ಇಲ್ಲದಾಗಿದೆ; ಉತ್ತರಪ್ರದೇಶದ ಗಲಭೆಗೆ ಡಿ.ಕೆ. ಶಿವಕುಮಾರ್ ವಿಷಾಧ

ದೇಶದಲ್ಲಿ ಸರ್ಕಾರ ಸತ್ತಿದೆ, ಹಿಟ್ಲರ್ ಸರ್ಕಾರ ಇದೆ. ಬಿಜೆಪಿಯವರು ದೇಶವನ್ನು ರಾಮ ರಾಜ್ಯ ಮಾಡುತ್ತೇವೆ ಅಂತಿದ್ರು. ಆದರೆ, ಇದೀಗ ರಾವಣ ರಾಜ್ಯ ಮಾಡಿದ್ದಾರೆ. ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್​ ಆಕ್ರೋಶ ಹೊರಹಾಕಿದ್ದಾರೆ.

ಡಿ.ಕೆ. ಶಿವಕುಮಾರ್.

ಡಿ.ಕೆ. ಶಿವಕುಮಾರ್.

 • Share this:
  ಬೆಂಗಳೂರು (ಅಕ್ಟೋಬರ್​ 04); ಭಾನುವಾರ ಉತ್ತರಪ್ರದೇಶದ (Uttara Pradesh) ಲಖೀಮ್​ಪುರ್​ (Lakhimpur Kheri Violence) ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನ ರೈತರು ಸೇರಿದಂತೆ ಒಟ್ಟು 8 ಜನ ಮೃತಪಟ್ಟಿದ್ದಾರೆ. ನಿನ್ನೆ ಘಟನೆಯ ನಂತರ ಕಾಣೆಯಾಗಿದ್ದ ಸ್ಥಳೀಯ ಪತ್ರಕರ್ತನೊಬ್ಬ ಇಂದು ಮೃತಪಟ್ಟಿರುವುದು ಧೃಡವಾಗಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿದೆ. ಪ್ರಸ್ತುತ ಲಖೀಮ್​ಪುರ್​ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಅವರನ್ನೂ ಸಹ ಬಂಧಿಸಲಾಗಿದೆ. ಈ ನಡುವೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್​ (DK Shivakumar) ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ, "ದೇಶದಲ್ಲಿ ರೈತರಿಗೆ ರಕ್ಷಣೆ ಇಲ್ಲದಂತಾಗಿದೆ" ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

  ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಧ್ಯಕ್ಷ ಡಿ ಕೆ ಶಿವಕುಮಾರ್, "ಭಾರತ ದೇಶ ಯಾವ ಕಡೆ ಹೋಗ್ತಾ ಇರೋದಕ್ಕೆ ಗಾಬರಿಯಾಗುತ್ತಿದೆ. ದೇಶದಲ್ಲಿ ಅನ್ನದಾತನಿಗೆ ರಕ್ಷಣೆ ಇಲ್ಲದಾಗಿದೆ. ರೈತರು ತನ್ನ ರಕ್ಷಣೆಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರೇ ಕಾರು ಹರಿಸಿದ್ದಾರೆ ಎಂಬ ಸುದ್ದಿ ನಿಜಕ್ಕೂ ಆಘಾತಕ್ಕೆ ಕಾರಣವಾಗಿದೆ.

  ಈ ಘಟನೆಯಲ್ಲಿ ನಾಲ್ಕು ಜನರ ರೈತರನ್ನು ಬಲಿ ಪಡೆದಿದೆ. ಗಲಭೆಯಲ್ಲಿ ಒಟ್ಟು ಎಂಟು ಜನರು ಮೃತಪಟ್ಟಿದ್ದಾರೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ, ಪ್ರತಿಭಟನೆಯನ್ನು ಈ ರೀತಿ ಹತ್ತಿಕ್ಕಲು ಮುಂದಾಗುವುದು ನಿಜಕ್ಕೂ ಹೇಯ ಕೃತ್ಯ. ಈ ಘಟನೆಗೆ‌ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮೂವರು ಡಿಸಿಎಂ ರಾಜೀನಾಮೆ ನೀಡಬೇಕು" ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

  ಪ್ರಿಯಾಂಕ ಗಾಂಧಿ ಬಂಧನಕ್ಕೆ ಖಂಡನೆ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್, "ರೈತರ ಸಾವು ಪ್ರಜಾಪ್ರಭುತ್ವದ ಕಗ್ಗೊಲೆ. ಮೃತ ರೈತರ ಕುಟುಂಬಗಳಿಗೆ ಪ್ರಿಯಾಂಕಾ ಗಾಂಧಿ ಸಾಂತ್ವನ ಹೇಳಲು ಹೋಗಿದ್ದರು. ಆದರೆ, ಪೊಲೀಸ್ ಅವರ ಮೇಲೆ ಕೈ ಹಾಕಿದ್ದಾರೆ. ಒಬ್ಬ ಮಹಿಳೆಗೆ ಅವಮಾನ‌ ಮಾಡಿದ್ದಾರೆ. ಯಾವ ದೇಶದಲ್ಲಿ ಇದ್ದೇವೆ ಅಂತ ಅನುಮಾನ ‌ಮೂಡುತ್ತಿದೆ.

  ದೇಶದಲ್ಲಿ ಸರ್ಕಾರ ಸತ್ತಿದೆ, ಹಿಟ್ಲರ್ ಸರ್ಕಾರ ಇದೆ. ಬಿಜೆಪಿಯವರು ದೇಶವನ್ನು ರಾಮ ರಾಜ್ಯ ಮಾಡುತ್ತೇವೆ ಅಂತಿದ್ರು. ಆದರೆ, ಇದೀಗ ರಾವಣ ರಾಜ್ಯ ಮಾಡಿದ್ದಾರೆ. ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ನಾವೆಲ್ಲಾ ಸೇರಿ ಇಂತಹ ಘಟನೆ ಖಂಡಿಸಬೇಕು. ರೈತರು ಶಾಂತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವೊಬ್ಬ ಬಿಜೆಪಿ ನಾಯಕರು ಅವರ ಜೊತೆ ಮಾತನಾಡಲಿಲ್ಲ, ಸಂಧಾನ ಮಾತುಕತೆಗೆ ಕೂಡ ಕರೆಯಲಿಲ್ಲ. ರೈತರು ಅಹಿಂಸೆ ಪ್ರತಿಭಟನೆ ಮಾಡುತ್ತಿದ್ದರು. ಆದರೆ, ದಂಗೆ ಏಳುವ ಪರಿಸ್ಥಿತಿ ಕೇಂದ್ರ ಸರ್ಕಾರ ‌ಮಾಡುತ್ತಿದೆ

  ನಮ್ಮ ನಾಯಕರಿಗೆ ಮನವಿ ಮಾಡುತ್ತೇನೆ. ಯಾರಿಗೂ ಹೆದರಬೇಡಿ ಮುನ್ನುಗ್ಗಿ, ನಿಮ್ಮ ಹಿಂದೆ ನಾವಿದ್ದೇವೆ. ಪ್ರಜಾಪ್ರಭುತ್ವ ವನ್ನು ನಾವು ಉಳಿಸಬೇಕು. ಇನ್ನೂ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಯುವ ನಂಬಿಕೆ ‌ಇಲ್ಲ. ಜನರು ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುತ್ತಾರೆ" ಎಂದು ಡಿ.ಕೆ. ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: Lakhimpur Kheri Violence: ಹಿಂಸಾಚಾರದ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಪ್ರಿಯಾಂಕಾ ಗಾಂಧಿ ಬಂಧನ; ಕಾಂಗ್ರೆಸ್​ ಕಿಡಿ

  ಘಟನೆಯ ವಿವಿರ:

  ಕೇಂದ್ರ ಸಚಿವ ಅಜಯ್​ ಮಿಶ್ರಾ ಮತ್ತು ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ನಿನ್ನೆ ಉತ್ತರ ಪ್ರದೇಶದ ಲಖೀಮ್​ಪುರ್​ಗೆ ಆಗಮಿಸಿದ್ದರು. ಆದರೆ, ಅವರ ಈ ಭೇಟಿಯನ್ನು ತಡೆಯುವ ಸಲುವಾಗಿ ರೈತ ಪ್ರತಿಭಟನಾಕಾರರು ಹೆಲಿಪ್ಯಾಡ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಅಜಯ್ ಮಿಶ್ರಾ ಸೇರಿದಂತೆ ಇನ್ನಿತರರು ರಸ್ತೆ ಮಾರ್ಗವಾಗಿಯೇ ಲಖಿಮಪುರಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಹಿಂದಿರುಗುತ್ತಿದ್ದ ವೇಳೆ ರೈತರ ಗುಂಪು ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

  ಇದನ್ನೂ ಓದಿ: Lakhimpur Kheri Violence| ನಿನ್ನೆ ಕಾಣೆಯಾಗಿದ್ದ ಪತ್ರಕರ್ತ ಇಂದು ಸಾವು, 9ಕ್ಕೇರಿದ ಸಾವಿನ ಸಂಖ್ಯೆ, ಅಖಿಲೇಶ್ ಯಾದವ್ ಧರಣಿ!

  ಈ ವೇಳೆ ಸಚಿವರ ಪುತ್ರ ರೈತರ ಮೇಲೆ ಕಾರ್ ಚಲಾಯಿಸಿದ್ದಾರೆ. ಈ ಘಟನೆಯಲ್ಲಿ 4 ಜನ ರೈತರು ಸೇರಿದಂತೆ ಒಟ್ಟು 9 ಜನ ಮೃತಪಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಹಿಂಸಾಚಾರದಲ್ಲಿ ಪೊಲೀಸರು ಸಹ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಈ ಘಟನೆ ನಂತರ ಲಖೀಮ್​ಪುರ್​ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿದೆ.
  Published by:MAshok Kumar
  First published: