ಕರ್ನಾಟಕ ಗೃಹ ಮಂಡಳಿ ವಸತಿ ಯೋಜನೆಗೆ ಆರಂಭಿಕ ವಿಘ್ನ: ಸೂಕ್ತ ಪರಿಹಾರದ ಬಳಿಕ ಭೂಸ್ವಾಧೀನಕ್ಕೆ ರೈತರ ಒತ್ತಾಯ

ರೈತರಿಗೆ ಅಂತಿಮ ಹಂತದ ನೋಟೀಸ್ ಕೂಡ ಜಾರಿಗೊಳಿಸಿ ಸಾರ್ವಜನಿಕರು ಸಹ ನಿವೇಶನಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅಧಿ ಸೂಚನೆ ಹೊರಡಿಸಿದೆ. ಈ ನಡುವೆ ರೈತರು ಸೂಕ್ತ ಪರಿಹಾರ ನೀಡದೇ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಗೃಹ ಮಂಡಳಿ

ಕರ್ನಾಟಕ ಗೃಹ ಮಂಡಳಿ

 • Share this:
  ಆನೇಕಲ್​​​(ಜ.24): ಕಡಿಮೆ ದರದಲ್ಲಿ ಅತ್ಯುತ್ತಮ ಸೌಲಭ್ಯವುಳ್ಳ ಗುಣಮಟ್ಟದ ನಿವೇಶನಗಳನ್ನು ಸಾರ್ವಜನಿಕರಿಗೆ ನೀಡುವ ಸಲುವಾಗಿ ಕರ್ನಾಟಕ ಗೃಹ ಮಂಡಳಿ ಬೃಹತ್ ವಸತಿ ಯೋಜನೆ ರೂಪಿಸಿತ್ತು. ಇತ್ತೀಚಿಗೆ ಸುಮಾರು 2000 ಎಕರೆಗೂ ಅಧಿಕ ವಿಸ್ತೀರ್ಣದಲ್ಲಿ ಸೂರ್ಯನಗರ 4ನೇ ಹಂತದ ಯೋಜನೆಗೆ ಪ್ರಾರಂಭದಲ್ಲಿಯೇ ವಿಘ್ನ ಎದುರಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ಕೋನಸಂದ್ರ. ಇಂಡ್ಲವಾಡಿ, ಕಾಡುಜಕ್ಕನಹಳ್ಳಿ, ಬಗ್ಗನದೊಡ್ಡಿ ಸೇರಿದಂತೆ ಸುಮಾರು 10ಕ್ಕೂ ಅಧಿಕ ಹಳ್ಳಿಗಳ 2220 ಎಕರೆ ಪ್ರದೇಶದಲ್ಲಿ ಸೂರ್ಯನಗರ 4ನೇ ಹಂತದ ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಗೃಹ ಮಂಡಳಿ ಈಗಾಗಲೇ ಚಾಲನೆ ನೀಡಿದೆ. 

  ರೈತರಿಗೆ ಅಂತಿಮ ಹಂತದ ನೋಟೀಸ್ ಕೂಡ ಜಾರಿಗೊಳಿಸಿ ಸಾರ್ವಜನಿಕರು ಸಹ ನಿವೇಶನಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅಧಿ ಸೂಚನೆ ಹೊರಡಿಸಿದೆ. ಈ ನಡುವೆ ರೈತರು ಸೂಕ್ತ ಪರಿಹಾರ ನೀಡದೇ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

  ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯಂತೆ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನೀಡಬೇಕು. ಎಕರೆಗೆ 60*40 ನಿವೇಶನ ಸೇರಿದಂತೆ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡಿದ ಬಳಿಕ ರೈತರ ಜಮೀನುಗಳ ಸ್ವಾಧೀನಕ್ಕೆ ಮುಂದಾಗಬೇಕು ಎಂದು ರೈತ ಮುಖಂಡ ವೆಂಕಟಾಚಲಯ್ಯ ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: ನಿಖಿಲ್​ ಎಲ್ಲಿದಿಯಪ್ಪ ಆಯ್ತು ಈಗ ಮಿಣಿ ಮಿಣಿ ಪೌಡರ್ ಸರದಿ; ಟ್ರೋಲಿಗರ ಡಾರ್ಲಿಂಗ್ ಆದ ಹೆಚ್​.ಡಿ. ಕುಮಾರಸ್ವಾಮಿ

  ಇನ್ನೂ ಸೂರ್ಯನಗರ ನಾಲ್ಕನೇ ಹಂತದ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನಿನಲ್ಲಿ ಸರ್ಕಾರಿ ಗೋಮಾಳ ಇದ್ದು, ಸಾವಿರಾರು ಮಂದಿ ರೈತರು ಹತ್ತಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಸಕ್ರಮಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಉಳ್ಳವರಿಗೆ ಮಾತ್ರ ಹಕ್ಕು ಪತ್ರ ಸಿಕ್ಕಿದೆ. ಬಡವರಿಗೆ ಹಕ್ಕು ಪತ್ರ ಇನ್ನೂ ವಿತರಣೆಯಾಗಿಲ್ಲ. ಹಾಗಾಗಿ ಹಕ್ಕುಪತ್ರ ಇಲ್ಲದ ರೈತರಿಗೆ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ನಯಾ ಪೈಸೆ ಪರಿಹಾರ ನೀಡುವುದಿಲ್ಲ ಎನ್ನುತ್ತಿದ್ದಾರೆ. ಇದರಿಂದ ಸಾವಿರಾರು ರೈತರು ಬೀದಿ ಪಾಲಾಗಲಿದ್ದು, ಸರ್ಕಾರ ಬಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಇಲ್ಲವೇ ಹಕ್ಕುಪತ್ರ ನೀಡಬೇಕು ಎಂದು ರೈತ ಮಹಾದೇವಪ್ಪ ಒತ್ತಾಯಿಸಿದ್ದಾರೆ.

  ಒಟ್ನಲ್ಲಿ ಕರ್ನಾಟಕ ಗೃಹ ಮಂಡಳಿ ಅಂತಿಮ ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಗು ನಿವೇಶನಗಳಿಗಾಗಿ ಅರ್ಜಿ‌ ಕೂಡ ಅಹ್ವಾನಿಸಿದ್ದು, ಈ ನಡುವೆ ರೈತರು ಸಮರ್ಪಕ ಪರಿಹಾರಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆ ಅನುಷ್ಠಾನ ಮತ್ತಷ್ಟು ವಿಳಂಭವಾಗುವ ಸಾಧ್ಯತೆ ದಟ್ಟವಾಗಿದ್ದು, ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ನಿವೇಶನ ದೊರೆಯುವುದು ಅನುಮಾನವಾಗಿದೆ.

  (ವರದಿ: ಆದೂರು ಚಂದ್ರು)
  First published: