‘ಕಳಸಾ ಬಂಡೂರಿ ಯೋಜನೆ ಜಾರಿ ಮಾಡಿ; ಇಲ್ಲವೆ ಅರಬ್ಬಿ ಸಮುದ್ರದ ಮಧ್ಯೆ ಆತ್ಮಹತ್ಯೆಗೆ ಅವಕಾಶ ಕೊಡಿ‘- ರೈತರ ಆಕ್ರೋಶ

ಇನ್ನು, ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಪದೇಪದೇ ನ್ಯಾಯಾಲಯ ಮುಂದೂಡುತ್ತಿದೆ. ರಾಜ್ಯ ಸರ್ಕಾರ ಸರಿಯಾಗಿ ಕಾನೂನು ಹೋರಾಟ ಮಾಡುತ್ತಿಲ್ಲ. ಕೋರ್ಟು ಕೇಸು ನಿರ್ವಹಣೆಗೆ ನಮ್ಮ ಬಳಿ ಹಣವಿಲ್ಲ. ಸಾರ್ವಜನಿಕರೇ ಹಣಕಾಸಿನ ನೆರವು ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದರು ರೈತ ಹೋರಾಟಗಾರ ವೀರೇಶ ಸೊಬರದಮಠ.

Ganesh Nachikethu | news18-kannada
Updated:February 18, 2020, 4:28 PM IST
‘ಕಳಸಾ ಬಂಡೂರಿ ಯೋಜನೆ ಜಾರಿ ಮಾಡಿ; ಇಲ್ಲವೆ ಅರಬ್ಬಿ ಸಮುದ್ರದ ಮಧ್ಯೆ ಆತ್ಮಹತ್ಯೆಗೆ ಅವಕಾಶ ಕೊಡಿ‘- ರೈತರ ಆಕ್ರೋಶ
ರೈತರ ಪ್ರತಿಭಟನೆ
  • Share this:
ಹುಬ್ಬಳ್ಳಿ(ಫೆ.18): ಅನಾದಿಕಾಲದಿಂದಲೂ ಬರಪೀಡಿತ ಉತ್ತರ ಕರ್ನಾಟಕದ ಕೆಲ ಭಾಗಗಳಿಗೆ ಮಹದಾಯಿ ನೀರು ಹರಿಸಬೇಕೆಂದು ರೈತರು ನಿರಂತರ ಹೋರಾಟ ನಡಸುತ್ತಲೇ ಇದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ರೈತರ ಹೋರಾಟಕ್ಕೆ ಬೆಲೆಯೇ ನೀಡದಂತೆ ಅಮಾನುಷವಾಗಿ ವರ್ತಿಸುತ್ತಿದೆ. ಅತ್ತ ಕುಡಿಯುವ ನೀರಿನ ಉದ್ದೇಶದಿಂದ ಕೂಡಿರುವ ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ತಡೆ ನೀಡಿಲ್ಲ. ಕರ್ನಾಟಕ ಈ ಯೋಜನೆಯನ್ನು ಪ್ರಾರಂಭಿಸಲು ಅಡ್ಡಿ ಇಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳುತ್ತಿದೆ. ಇತ್ತ ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆಯೇ ತೋರುತ್ತಿಲ್ಲ ಎಂದು ಉತ್ತರ ಕರ್ನಾಟಕದ ರೈತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಮಧ್ಯೆಯೇ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಿ ಇಲ್ಲದಿದ್ದರೆ ರೈತರಿಗೆ ದಯಾಮರಣ ನೀಡಿ ಎಂದು ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ ಆಕ್ರೋಶ ಹೊರಹಾಕಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ರೈತ ಸೇನಾ ಅಧ್ಯಕ್ಷ ವೀರೇಶ ಸೊಬರದಮಠ, ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ನಮ್ಮ ಮನವಿಯನ್ನು ಕೇಂದ್ರ ಸರ್ಕಾರ ತೆಗೆದು ಬುಟ್ಟಿಗೆ ಹಾಕಿದೆ. ಇಲ್ಲಿಯವರೆಗೂ ಯೋಜನೆ ಅನುಷ್ಠಾನಕ್ಕೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಿಲ್ಲ. ಈ ಸಂಬಂಧ ನಾವು ಸುಪ್ರೀಂಕೋರ್ಟ್​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇದೇ ತಿಂಗಳು ಫೆ.28ನೇ ತಾರೀಕು ವಿಚಾರಣೆ ನಡೆಯಲಿದೆ ಎಂದರು.

ಇನ್ನು, ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಪದೇಪದೇ ನ್ಯಾಯಾಲಯ ಮುಂದೂಡುತ್ತಿದೆ. ರಾಜ್ಯ ಸರ್ಕಾರ ಸರಿಯಾಗಿ ಕಾನೂನು ಹೋರಾಟ ಮಾಡುತ್ತಿಲ್ಲ. ಕೋರ್ಟು ಕೇಸು ನಿರ್ವಹಣೆಗೆ ನಮ್ಮ ಬಳಿ ಹಣವಿಲ್ಲ. ಸಾರ್ವಜನಿಕರೇ ಹಣಕಾಸಿನ ನೆರವು ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಎಂದರು ರೈತ ಹೋರಾಟಗಾರ ವೀರೇಶ ಸೊಬರದಮಠ.

ಇದನ್ನೂ ಓದಿ: ಎಲ್‍ಪಿಜಿ ದರ ಏರಿಕೆ: ಎಲ್ಲಿದ್ದೀಯಕ್ಕಾ ಸ್ಮೃತಿ ಇರಾನಿ? ಎಂದು ಆಪ್​​ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

ಈ ಸಂಬಂಧ ಮನವಿ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗಳ ಭೇಟಿಗೆ ಅವಕಾಶ ಸಿಗುತ್ತಿಲ್ಲ. ರಾಜಕಾರಣಿಗಳೇ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಮಹದಾಯಿ ಯೋಜನೆ ಜಾರಿಯಾಗುವವರೆಗೂ ನಾವು ಹೋರಾಟ ನಡೆಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೆಜೆಟ್ ಡಿ ನೋಟಿಫಿಕೇಶನ್ ಮಾಡಿಸಿಕೊಂಡು ಬರುವಂತೆ ನಾಲ್ವರು ಸಂಸದರಿಗೆ ಒಂದು ವರ್ಷದ ಹಿಂದೆಯೇ ತಲಾ ಐದು ಸಾವಿರ ರೂ. ನೀಡಿದ್ದೇವೆ. ಸಂಸದ ಪ್ರಲ್ಹಾದ್ ಜೋಶಿ, ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ, ಪಿ.ಸಿ ಗದ್ದಿಗೌಡರ್ ಖಾತೆಗೆ ನೇರ ಹಣ ಕಳಿಸಿದ್ದೇವೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್​​.ಡಿ ಕುಮಾರಸ್ವಾಮಿಗೂ 10 ಸಾವಿರ ನೀಡಿದ್ದೇವೆ. ಈ ಪೈಕಿ ಪಿ.ಸಿ ಗದ್ದಿಗೌಡರ್  5 ಸಾವಿರ ರೂ. ವಾಪಸ್ ಕಳಿಸಿದ್ದಾರೆ. ಮಿಕ್ಕವರು ರೈತರ ಹಣ ತೆಗೆದುಕೊಂಡು ಯೋಜನೆ ಜಾರಿಗೆ ಯಾವುದೇ ಕೆಲಸ ಮಾಡಿಲ್ಲ. ಕಳಸ ಬಂಡೂರಿ ಯೋಜನೆ ಜಾರಿ ಮಾಡದಿದ್ದರೆ ದಯಾಮರಣ ನೀಡಲಿ, ಅರಬ್ಬಿ ಸಮುದ್ರದ ಮಧ್ಯೆ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಲಿ ಎಂದು ಬೇಸರ ವ್ಯಕ್ತಪಡಿಸಿದರು.
First published:February 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ