ರೈತರ ಸಾಲಮನ್ನಾ ಮಾಡದ ಹೆಚ್ ಡಿಕೆ; ಬಹುಮತವಿಲ್ಲದೇ ಹೋದರೆ ಸಿಎಂ ಕುರ್ಚಿ ಬಿಟ್ಟು ತೊಲಗಲಿ – ಶಾಸಕ ಶ್ರೀರಾಮುಲು

news18
Updated:May 24, 2018, 3:37 PM IST
ರೈತರ ಸಾಲಮನ್ನಾ ಮಾಡದ ಹೆಚ್ ಡಿಕೆ; ಬಹುಮತವಿಲ್ಲದೇ ಹೋದರೆ ಸಿಎಂ ಕುರ್ಚಿ ಬಿಟ್ಟು ತೊಲಗಲಿ – ಶಾಸಕ ಶ್ರೀರಾಮುಲು
  • Share this:
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಮೇ.24) :  ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರದಲ್ಲಿ ಯೂ ಟರ್ನ್ ಹೊಡೆಯುತ್ತಿದ್ದಾರೆ. ರೈತಪರ ನಿರ್ಧಾರ ತೆಗೆದುಕೊಳ್ಳಲು ಬಹುಮತವಿಲ್ಲದೇ ಹೋದರೆ ಸಿಎಂ ಕುರ್ಚಿ ಬಿಟ್ಟು ತೊಲಗಲಿ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳ್ಳಾರಿಯಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಮುನ್ನ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಕುಮಾರಸ್ವಾಮಿ ಘೋಷಿಸಿದ್ದರು. ಆದರೆ ಇದೀಗ ಮುಖ್ಯಮಂತ್ರಿಯಾದ ಮೇಲೆ ಯು ಟರ್ನ್ ಹೊಡೆಯುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ ಎಂದೇಳುತ್ತಿದ್ದಾರೆ. ಮುಖ್ಯಮಂತ್ರಿಯಾದ ಮೇಲೆ ಕುಮಾರಸ್ವಾಮಿ ಬದ್ಧತೆ ತೋರಿಸಬೇಕು. ಕೂಡಲೇ ರೈತರ ಸಾಲಮನ್ನಾ ಮಾಡಬೇಕು ಎಂದರು.

ಸರ್ಕಾರದ ಮುಖ್ಯಸ್ಥರಾಗಿ ಕುಮಾರಸ್ವಾಮಿ ನನಗೆ ಸಂಪೂರ್ಣ ಬಹುಮತವಿಲ್ಲವೆನ್ನುವುದು ಸರಿಯಲ್ಲ. ರೈತರ ಸಾಲಮನ್ನಾ ಮಾಡಲಿ ಇಲ್ಲವೇ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಲಿ. ಹೇಳಿದಂತೆ ನಡೆದುಕೊಳ್ಳದೇ ಇರುವವರು ಸಿಎಂ ಕುರ್ಚಿ ಬಿಟ್ಟು ತೊಲಗಲಿ ಎಂದು ತರಾಟೆಗೆ ತೆಗೆದುಕೊಂಡರು.

‘ನಾವದರ ತಂಟೆಗೆ ಹೋಗಲ್ಲ’

ರಾಜಕಾರಣದಲ್ಲಿ ಏನಾದರೂ ಆಗಬಹುದು. ಯಾರು ಯಾವ ಸಮಯದಲ್ಲಿಯಾದ್ರೂ ಯಾರ ಪರವಾದ್ರೂ ವಾಲಬಹುದು. ನಮಗೆ ಸರ್ಕಾರಕ್ಕೆ ಬೆಂಬಲ ಸಿಗುತ್ತೆ ಎಂದು ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಕೆಲ ಶಾಸಕರ ವಿಶ್ವಾಸಮತ ಸಿಗದೇ ಸೋಲನುಭವಿಸಬೇಕಾಯಿತು.

ಆದರೆ ಇದೀಗ ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಯಾರ ತಂಟೆಗೆ ಹೋಗುವುದಿಲ್ಲ. ನಾವು ಯಾವುದೇ ಶಾಸಕರನ್ನು ಕರೆತರುವ ಕೆಲಸ ಮಾಡುವುದಿಲ್ಲ. ಒಂದುವೇಳೆ ಅಸಮಾಧಾನಗೊಂಡ ಶಾಸಕರು ನಮ್ಮ ಬಳಿ ಬಂದರೂ ನಾವು ಸೊಪ್ಪು ಹಾಕುವುದಿಲ್ಲ. ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸಲಿ. ಅದರ ಗೊಡವೆಗೆ ನಾವು ಕೈಹಾಕುವುದಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.‘ತೃತೀಯರಂಗ ಅಣಬೆಗಳಂತೆ’

ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಒಂದೆಡೆ ಸೇರುವುದು ಸಹಜ. ಮಳೆಗಾಲದಲ್ಲಿ ಅಣಬೆ ಹುಟ್ಟಿದಂತೆ ವಿವಿಧ ಪಕ್ಷಗಳು ಒಂದೆಡೆ ಸೇರಿ ತೃತೀಯ ರಂಗ ರಚಿಸುತ್ತವೆ. ಆದರೆ ಚುನಾವಣಾ ನಂತರ ಅವು ಕಾಣಸಿಗುವುದಿಲ್ಲ. ತೃತೀಯ ರಂಗಕ್ಕೆ ಬದ್ಧತೆಯಿಲ್ಲ. ಅವರಲ್ಲಿಯೇ ಅಸಮಾಧನಗಳಿವೆ. ಕಾಂಗ್ರೆಸ್ ಪತನಕ್ಕೆ ತೃತೀಯ ರಂಗ ಮೊಟ್ಟ ಮೊದಲ ಮೆಟ್ಟಿಲು ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮಕ್ಕೆ ದೇಶದ 13 ರಾಜ್ಯಗಳ ಮುಖ್ಯಸ್ಥರನ್ನು ಕರೆತಂದಿದ್ದಾರೆ. ಬರುವ ಲೋಸಕಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ತೃತೀಯ ರಂಗ ರಚಿಸಲು ಮುಂದಾಗಿದ್ಧಾರೆ. ಆದರೆ ಇವರಲ್ಲಿ ಬಹುತೇಕರು ಮೋದಿ ವಿರುದ್ಧ ಸೋತು ಸುಣ್ಣಾದವರೇ ಹೆಚ್ಚಿದ್ದಾರೆ. ಬಿಜೆಪಿ ಸೋಲಿಸಲು ಎಲ್ಲರೂ ಒಂದಾಗುತ್ತಿದ್ದಾರೆ ಎಂದು ಹೇಳಿದರು.

ತೃತೀಯ ರಂಗದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿರುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಗೆಲ್ಲಲು ನಮ್ಮವರ ಅತಿಯಾದ ಆತ್ಮವಿಶ್ವಾಸವೇ ಕಾರಣ. ಹಲವು ಕಾರಣಗಳಿಂದ ಬಿಜೆಪಿ ಗೆಲ್ಲುವ ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ ಎಂದು ಸೋಲಿನ ಪರಾಮರ್ಶೆ ಮಾಡಿಕೊಂಡರು.
First published:May 24, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ