ಸಿಎಂ ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ಹಾಕಿ; ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ

ಸೆಪ್ಟೆಂಬರ್ 28ರ ಬಂದ್ ಅನ್ನು ಯಶಸ್ವಿಗೊಳಿಸುತ್ತೇವೆ. ಜೊತೆಗೆ ಮುಖ್ಯಮಂತ್ರಿಗಳನ್ನು ಕಂಡ ಕಂಡಲ್ಲಿ ಘೇರಾವ್ ಮಾಡಿ ಮಸೂದೆಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

news18-kannada
Updated:September 26, 2020, 7:10 PM IST
ಸಿಎಂ ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ಹಾಕಿ; ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ
ರಾಜ್ಯ ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಐಕ್ಯ ಹೋರಾಟ ಸಮಿತಿಯ ನಾಯಕರು.
  • Share this:
ಬೆಂಗಳೂರು (ಸೆಪ್ಟೆಂಬರ್​ 26); ಕರ್ನಾಟಕ ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಇಂದು ರಾಜ್ಯ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ಆಕ್ರೋಶಗೊಂಡ ವಿರೋಧ ಪಕ್ಷದ ಶಾಸಕರು ಮಸೂದೆಯ ಪ್ರತಿಯನ್ನು ಹರಿದು ಸದನದಿಂದ ಹೊರನಡೆದಿದ್ದಾರೆ. ನಂತರ ಈ ಕಾಯ್ದೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಿಗೆ ಪತ್ರಿಕಾಗೋಷ್ಠಿ ನಡೆಸಿರುವ ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ನಾಯಕರು, “ತಮ್ಮ ಮಾತಿಗೆ ಕಿವಿಗೊಡದೆ, ಕನಿಷ್ಟ ಪ್ರಜಾತಾಂತ್ರಿಕ ವಿಧಾನವನ್ನು ಅನುಸರಿಸದೆ, ಸರ್ವಾಧಿಕಾರಿ ವಿಧಾನದಲ್ಲಿ ಈ ಸರ್ಕಾರ ಬಡಜನರ ಮರಣ ಶಾಸನಗಳನ್ನು ಅನುಮೋದಿಸಿದೆ. ಆ ಮೂಲಕ ಕೊನೆಗೂ ಯಡಿಯೂರಪ್ಪ ಸರ್ಕಾರ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದೆ. ಹಾಗಾಗಿ ಈ ಜನದ್ರೋಹಿ ಮುಖ್ಯಮಂತ್ರಿಯನ್ನು ಕಂಡಕಂಡಲ್ಲಿ ಘೇರಾವ್ ಮಾಡಲು ಎಂದು ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ನಿರ್ಧರಿಸಿದೆ” ಎಂದು ತಿಳಿಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಐಕ್ಯಹೋರಾಟ ಸಮಿತಿಯ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಹಿಡಿದ ಯಡಿಯೂರಪ್ಪನವರು ಇಂದು ರೈತರ ಎದೆಗೆ ನೇರಾನೇರಾ ಚೂರಿ ಹಾಕಿ ತಾನು ರೈತರ ಪರ ಅಲ್ಲ, ಕಾರ್ಪೊರೇಟ್ ಪರ ಎಂಬುದನ್ನು ರುಜುವಾತು ಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

"ಉಳುವವರಿಗೇ ಭೂಮಿ" ಎಂಬ ಸಮಾಜವಾದಿ ಆಶಯದ ಕೊಲೆಗೈದು ” ಉಳ್ಳವರದೇ ಎಲ್ಲಾ ಭೂಮಿ” ಎಂಬ ಬಲಾಢ್ಯ ಹಿತಾಸಕ್ತಿಯನ್ನು ಎತ್ತಿಹಿಡಿದಿದ್ದಾರೆ. ಕಾರ್ಪೋರೇಟ್ ಮತ್ತು ರಿಯಲ್ ಎಸ್ಟೇಟ್ ಲಾಭಿಗೆ ನಮ್ಮ ಬಡಜನರ ಬದುಕನ್ನು ಬಲಿ ಕೊಟ್ಟಿದ್ದಾರೆ ಎಂದು ರೈತ ಮುಖಂಡರು ದೂರಿದ್ದಾರೆ.ಎಪಿಎಂಸಿ ಮಾರುಕಟ್ಟೆಯನ್ನು ನಿರ್ನಾಮ ಮಾಡಿ ಕಾರ್ಪೊರೇಟ್ ಮಾರುಕಟ್ಟೆಗೆ ರತ್ನಗಂಬಳಿ ಹಾಸಲಾಗಿದೆ. ರೈತರನ್ನು ಕಾರ್ಪೊರೇಟ್ ಕಣ್ಕಟ್ಟಿನ ಜಾಲಕ್ಕೆ ಸಿಲುಕಿಸಲಾಗಿದೆ. ಸ್ಥಳೀಯ ವರ್ತಕರನ್ನು ದಿವಾಳಿ ಮಾಡಲಾಗುತ್ತದೆ ಮತ್ತು ಸಹಸ್ರಾರು ಹಮಾಲಿ ಮತ್ತು ಇತರೆ ಉದ್ಯೋಗಿಗಳನ್ನು ಬೀದಿಪಾಲು ಮಾಡಲಾಗುತ್ತಿದೆ. ಇದಲ್ಲದೆ, ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸುವ ಹೆಸರಿನಲ್ಲಿ ಕಾರ್ಮಿಕ ಅನೇಕ ನ್ಯಾಯಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡರು ಆರೋಪಿಸಿದ್ದಾರೆ.

ಲಕ್ಷಾಂತರ ಜನರ ಹೋರಾಟದ ನಡುವೆಯೂ ಈ ಮಸೂದೆಗಳಿಗೆ ವಿಧಾನಸಭಾ ಒಪ್ಪಿಗೆ ಪಡೆದಿದ್ದರೂ ಅದನ್ನು ಜಾರಿಯಾಗಲು ಬಿಡುವುದಿಲ್ಲ. ಇದುವರೆಗೆ ನಡೆಸಿದ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ದುಡಿಯುವ ಜನರ ಜನ ಸಂಗ್ರಾಮವನ್ನಾಗಿ ಪರಿವರ್ತಿಸುತ್ತದೆ. ನಿಮ್ಮ ಜನದ್ರೋಹದ ಹಿಂದಿರುವ ಹುನ್ನಾರವನ್ನು ಹಳ್ಳಿಹಳ್ಳಿಗೆ ತಲುಪಿಸುತ್ತೇವೆ. ಈ ದುಷ್ಟ ಮಸೂದೆಗಳ ಹಿಂದಿರುವ ಒಂದು ಲಕ್ಷ ಕೋಟಿಯ ಹಗರಣವನ್ನು ಜನರ ಎದುರು ಬಯಲುಗೊಳಿಸುತ್ತೇವೆ ಎಂದು ಮುಖಂಡರು ಪಣ ತೊಟ್ಟಿದ್ದಾರೆ.

ಇದನ್ನೂ ಓದಿ : ಸದನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ; ಗದ್ದಲದ ನಡುವೆ ಬಿಲ್ ಪಾಸ್

ಸೆಪ್ಟೆಂಬರ್ 28ರ ಬಂದ್ ಅನ್ನು ಯಶಸ್ವಿಗೊಳಿಸುತ್ತೇವೆ. ಜೊತೆಗೆ ಮುಖ್ಯಮಂತ್ರಿಗಳನ್ನು ಕಂಡ ಕಂಡಲ್ಲಿ ಘೇರಾವ್ ಮಾಡಿ ಮಸೂದೆಗಳ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಗುರುಪ್ರಸಾದ್ ಕೆರಗೋಡು, ಕರ್ನಾಟಕ ರಾಜ್ಯರೈತ ಸಂಘದ ರಾಜ್ಯಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್, ಸಿಐಟಿಯು ರಾಜ್ಯಾ‍ಧ್ಯಕ್ಷೆ ವರಲಕ್ಷ್ಮಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ ಮುಂತಾದವರು ಭಾಗವಹಿಸಿದ್ದರು.
Published by: MAshok Kumar
First published: September 26, 2020, 7:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading