Lakhimpur Violence| ರೈತರ ಹತ್ಯೆ, ಪ್ರಿಯಾಂಕಾ ಗಾಂಧಿ ಬಂಧನ; ಬಿಜೆಪಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ

ಕಾನೂನು ಬಾಹಿರವಾಗಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡಬೇಕು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ತಪ್ಪಿಸಬೇಕು ಎಂದು ಕಾಂಗ್ರೆಸ್​ ನಾಯಕರು ಒತ್ತಾಯಿಸಿದ್ದಾರೆ.

ಪಂಜಿನ ಮೆರವಣಿಗೆ ನಡೆಸಿರುವ ಕಾಂಗ್ರೆಸ್​ ನಾಯಕರು.

ಪಂಜಿನ ಮೆರವಣಿಗೆ ನಡೆಸಿರುವ ಕಾಂಗ್ರೆಸ್​ ನಾಯಕರು.

 • Share this:
  ಬೆಂಗಳೂರು: ಉತ್ತರಪ್ರದೇಶದ ಲಖೀಂಪುರ್​ (Lakhimpur Violence) ರೈತ ಹೋರಾಟ (Farmers Protest) ಭಾನುವಾರ ಸಂಜೆ ಹೊತ್ತಿಗೆ ಗಲಭೆಗೆ ಕಾರಣವಾಗಿತ್ತು. ಕೇಂದ್ರ ಸಚಿವ ಅಜಯ್​ ಮಿಶ್ರಾ (Ajay Mishra) ಅವರ ಮಗ ಆಶೀಶ್​ ಮಿಶ್ರಾ (Asish Mishra) ಪ್ರತಿಭಟನಾ ನಿರತ ರೈತರ ಮೇಲೆ ಕಾರ್ ಚಲಾಯಿಸಿದ್ದರು. ಈ ಘಟನೆಯಲ್ಲಿ 4 ಜನ ರೈತರು ಮೃತಪಟ್ಟಿದ್ದಾರು. ನಂತರ ನಡೆದ ಗಲಭೆಯಲ್ಲಿ ಒಟ್ಟು 5 ಜನ ಸಾವಿಗೀಡಾಗಿದ್ದರು. ಹೀಗಾಗಿ ಸೋಮವಾರ ಲಖೀಂಪುರ್​​ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿತ್ತು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಆಗಮಿಸಿದ್ದ ಕಾಂಗ್ರೆಸ್​ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ಅವರನ್ನೂ ಬಂಧಿಸಲಾಗಿತ್ತು. ಈ ಘಟನೆಗೆ ರಾಷ್ಟ್ರಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಉತ್ತರಪ್ರದೇಶದ ಈ ನಡೆಗೆ ಆಕ್ರೋಶ ಹೊರಹಾಕಿರುವ ರಾಜ್ಯ ಕಾಂಗ್ರೆಸ್​ (KPCC) ಘಟಕ ಸೋಮವಾರ ಪಂಜಿನ ಮೆರವಣಿಗೆ ನಡೆಸುವ ಮೂಲಕ ಬಿಜೆಪಿ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.

  ಮೆರವಣಿಗೆ ನಂತರ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವ ಕಾಂಗ್ರೆಸ್​, "ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದೇಶದ ಅನ್ನದಾತನಲ್ಲಿ ಅನಾಥ ಪ್ರಜ್ಞೆ ಕಾಡುವಂತಾಗಿದೆ. ರೈತ ವಿರೋಧಿ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಉಸಿರನ್ನೇ ಅಡಗಿಸಿದೆ" ಎಂದು ಆರೋಪಿಸಿದೆ.

  ಅಲ್ಲದೆ ನಿನ್ನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದನ್ನು ಹಾಗೂ ಹತ್ಯೆಗೊಳಗಾದ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಅವರ ಮೇಲೆ ಪೊಲೀಸರ ದೌರ್ಜನ್ಯ, ಕಾನೂನು ಬಾಹಿರ ಬಂಧನ ಖಂಡಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಪಂಜಿನ ಮೆರವಣಿಗೆ ನಡೆಸಿದರು.

  ಸೋಮವಾರ ಸಂಜೆ 6 ಗಂಟೆಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಬಾಳೆಕುಂದ್ರಿ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು, ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ರಾಜ್ಯಪಾಲರನ್ನು ಭೇಟಿ ಮಾಡಿ, ರೈತರ ಹತ್ಯೆ ಮಾಡಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆ ಪಡೆದು, ಅವರನ್ನು ಬಂಧಿಸಬೇಕು.

  ಕಾನೂನು ಬಾಹಿರವಾಗಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಿಡುಗಡೆ ಮಾಡಬೇಕು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ತಪ್ಪಿಸಬೇಕು. ರೈತರ ಮರಣ ಶಾಸನವಾಗಿರುವ ಕೃಷಿ ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

  ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಇಂದು ದೇಶದಲ್ಲಿ ಸ್ವಾತಂತ್ರ್ಯಕ್ಕೆ ದೊಡ್ಡ ಅಪಮಾನವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹುಟ್ಟಿರುವುದೇ ಹೋರಾಟದಿಂದ. ಹೋರಾಟ ನಮ್ಮ ಹಕ್ಕು. ದೇಶದ ಅನ್ನದಾತ ಹೋರಾಟ ಮಾಡುವಾಗ ಅವರನ್ನು ಗೌರವಯುತವಾಗಿ ನೋಡಲಿಲ್ಲ, ಅವರ ಕಷ್ಟ ಆಲಿಸಲಿಲ್ಲ. ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಕುಟುಂಬ ಕಾರು ಹರಿಸಿ ಕೊಲೆ ಮಾಡಿರುವುದು, ಮಾನವ ಕುಲಕ್ಕೇ ಮಾಡಿರುವ ಅಪಮಾನ, ಅನ್ಯಾಯ.

  ಈ ಸಾವು ಯಾರಿಂದ, ಯಾವ ಕಾರಣಕ್ಕೆ ಆಗಿದೆ ಎಂಬುದು ಈಗಿನ ಪ್ರಶ್ನೆ. ರೈತರನ್ನು ಹತ್ಯೆ ಮಾಡಿದ ಮಂತ್ರಿ ಮಗನನ್ನು ಇದುವರೆಗೂ ಬಂಧಿಸಲು ಸಾಧ್ಯವಾಗಿಲ್ಲ ಎಂದರೆ ಇದು ಯಾವ ಆಡಳಿತ? ಯಾವ ಪ್ರಜಾಪ್ರಭುತ್ವ? ಯಾವ ಕಾನೂನು? ಇಷ್ಟು ಹೊತ್ತಿಗೆ ಉತ್ತರ ಪ್ರದೇಶದ ಸಿಎಂ ಹಾಗೂ ಡಿಸಿಎಂ, ಕೇಂದ್ರ ಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ. ರಾಜೀನಾಮೆಯೂ ಇಲ್ಲ, ಬಂಧನವೂ ಇಲ್ಲ.

  ನಮ್ಮ ರಾಷ್ಟ್ರೀಯ ನಾಯಕಿ, ಆ ರಾಜ್ಯದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಅವರು ರೈತರಿಗೆ ಸಾಂತ್ವನ ಹೇಳಲು ಹೋದರೆ, ಅದು ನಮ್ಮ ಹಕ್ಕಲ್ಲವೇ? ಹೋರಾಟವು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗವಲ್ಲವೇ?

  ಪ್ರಿಯಾಂಕಾ ಗಾಂಧಿ ಅವರು ಕೇವಲ 4 ಜನರ ಜತೆ ತೆರಳಿದಾಗ, ಅವರನ್ನು ಎಳೆದಾಡಿ ಬಂಧಿಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ರೈತರ ಹತ್ಯೆ ಜಲಿಯನ್ ವಾಲಬಾಗ್ ನರಮೇಧಕ್ಕಿಂತ ಹೀನಾಯ ಕೃತ್ಯ. ಬಿಜೆಪಿ ಸರ್ಕಾರ ಬ್ರಿಟೀಷರಿಗಿಂತ ಹೀನಾಯವಾಗಿ ನಡೆದುಕೊಳ್ಳುತ್ತಿದೆ.

  ಕಾನೂನು ದುರುಪಯೋಗ ಆಗುತ್ತಿದ್ದು, ಜನ ಎಚ್ಚೆತ್ತುಕೊಳ್ಳಬೇಕು. ನಾವು ಹೋರಾಟ ಮಾಡುತ್ತಿದ್ದು, ನಾಳೆ, ನಾಡಿದ್ದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ, ಪ್ರಸ್ತಾವನೆ ಸಲ್ಲಿಸಬೇಕು. ಇದು ಕೇವಲ ಪಕ್ಷದ ವಿಚಾರವಲ್ಲ. ಪ್ರಜಾಪ್ರಭುತ್ವದ ಉಳಿವಿನ ವಿಚಾರ.

  ಸಾಂತ್ವನ ಹೇಳುವುದು ಭಾರತೀಯ ಸಂಸ್ಕೃತಿಯ ಭಾಗವೋ ಅಲ್ಲವೋ ಎಂಬ ಪ್ರಶ್ನೆಯೂ ಈಗ ಮೂಡಿದೆ. ಯಾವುದೇ ಕಾನೂನಿನ ವಾರೆಂಟ್ ಇಲ್ಲದೆ ನಮ್ಮ ನಾಯಕಿಯನ್ನು ಬಂಧಿಸಿದ್ದು, ಅದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಗ್ರವಾಗಿ ಖಂಡಿಸುತ್ತದೆ. ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಇಡೀ ಕಾಂಗ್ರೆಸ್ ಪಕ್ಷ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದಾದ್ಯಂತ ರೈತರ ಪರವಾಗಿ ಹೋರಾಟ ಮಾಡುತ್ತದೆ. ಅವರ ಧ್ವನಿಯಾಗಿ ನಾವೆಲ್ಲರೂ ನಿಲ್ಲುತ್ತೇವೆ.

  ಇದನ್ನೂ ಓದಿ: Lakhimpur Violence: ಲಖೀಮ್​ಪುರ್ ಹಿಂಸಾಚಾರ; ರೈತರ ಸಾವು, 13 ಜನರ ವಿರುದ್ಧ ಕೇಸ್..ಇಲ್ಲಿವರಗೆ ಆಗಿದ್ದೇನು?

  ರೈತರನ್ನು ಕೊಂದವರನ್ನು ಈವರೆಗೂ ಬಂಧಿಸಿಲ್ಲ. ಅವರ ವಿರುದ್ಧ ಸರಿಯಾದ ಸೆಕ್ಷನ್ ಗಳ ಮೂಲಕ ಪ್ರಕರಣ ದಾಖಲಿಸಿಲ್ಲ. ಅವರನ್ನು ಬಂಧಿಸುವ ಬದಲು ಸಾಂತ್ವನ ಹೇಳಲು ಹೊರಟವರನ್ನು ಬಂಧಿಸಿದೆ. ಪ್ರತಿಭಟನೆ ಮಾಡುವುದು, ಸಾಂತ್ವನ ಹೇಳುವುದು ನಮ್ಮ ಹಕ್ಕು. ರೈತರನ್ನು ಹತ್ಯೆ ಮಾಡಿದವರನ್ನು ಬಂಧಿಸಬೇಕು. ಈ ಕೊಲೆಗಡುಕ, ನೀಚ ಸರ್ಕಾರದ ವಿರುದ್ಧ ನಾವು ಹೋರಾಟ ಮುಂದುವರೆಸುತ್ತೇವೆ" ಎಂದು ತಿಳಿಸಿದ್ದಾರೆ.
  Published by:MAshok Kumar
  First published: