HOME » NEWS » State » FARMERS ARE IN THE NEED OF FLOOD RELIEF IN UDUPI GNR

ಕೃಷಿಕರಿಗೆ ‌ಶೀಘ್ರ ಬೇಕಿದೆ ನೆರೆ ಪರಿಹರ - ಅತಂತ್ರರಾದ ಮಟ್ಟು ಗುಳ್ಳ ‌ಕೃಷಿಕರು

ಸದ್ಯ ಗದ್ದೆಗಳಲ್ಲಿ ನೀರು ನಿಂತು ಬೆಳೆದಿರುವ ಗಿಡಗಳ ಬೇರುಗಳೆಲ್ಲ ಕೊಳೆತು ಹೋಗಿವೆ. ಇದರಿಂದ ಗಿಡಗಳೂ ಕೊಳೆತರೆ, ಇನ್ನು ಕೆಲವೆಡೆ ಬಾಡಿವೆ. ಇವುಗಳನ್ನೆಲ್ಲ ಕಿತ್ತು ತೆಗೆದು, ಹೊಸ ಸಸಿಗಳನ್ನು ನಾಟಿ ಮಾಡಬೇಕು. ಆದರೆ ಎಲ್ಲ ರೈತರು ನಾಟಿ ಕೆಲಸ ಮುಗಿಸಿದ್ದರಿಂದ ಯಾರಲ್ಲಿಯೂ ಸಸಿಗಳು ತಯಾರಿಲ್ಲ. ಹೊಸ ಸಸಿಗಳ ತಯಾರಿಗೆ ಇನ್ನೂ ಒಂದು ತಿಂಗಳು ಹಿಡಿಯುತ್ತದೆ.

news18-kannada
Updated:September 27, 2020, 9:44 PM IST
ಕೃಷಿಕರಿಗೆ ‌ಶೀಘ್ರ ಬೇಕಿದೆ ನೆರೆ ಪರಿಹರ - ಅತಂತ್ರರಾದ ಮಟ್ಟು ಗುಳ್ಳ ‌ಕೃಷಿಕರು
ಮಳೆಯಿಂದ ಕೃಷಿ ನಾಶ
  • Share this:
ಉಡುಪಿ(ಸೆ.27): ಉಡುಪಿ ಜಿಲ್ಲೆಯಲ್ಲಿ ಜಲಪ್ರಳಯ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಕಳೆದ ಶನಿವಾರ ಒಂದೇ ರಾತ್ರಿ ಸುರಿದ ಮಹಾಮಳೆಗೆ ಸಾವಿರಾರು ಜನರ ಮನೆ ಬದುಕು ಮಣ್ಣುಪಾಲಾಗಿದೆ. ಮಣ್ಣು ನೆರೆಯಲ್ಲಿ ಕೊಚ್ಚಿ ಹೋಗಿದೆ. ಭತ್ತದ ತೆನೆಯಲ್ಲಿ ಹಾಲು ಕಟ್ಟುವಾಗಲೇ ಸುರಿದ ಮಳೆ, ರೈತರ ಬದುಕನ್ನು ಮೂರಾಬಟ್ಟೆಯಾಗಿದೆ. ಮಟ್ಟು ಎಂಬ ಗ್ರಾಮದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ತಳಿಯ ಬದನೆಯ ಸಂತಾನವೇ ಉಳಿಯದಂತೆ ಗಿಡಗಳು ನೀರುಪಾಲಾಗಿವೆ. ಅನಿರೀಕ್ಷಿತವಾಗಿ ಸುರಿದ ಭಾರೀ ಮುಸಲಧಾರೆಯಿಂದ ಕೃಷಿಕರ ಬದುಕಿಗೆ ಕತ್ತಲೆ ಮುಸುಕಿದೆ. ಇನ್ನೇನು ತಿಂಗಳೊಳಗೆ ಕೈಸೇರಲಿದ್ದ ಬೆಳೆಗಳೆಲ್ಲ ಕೊಳೆತು ನಾರುತ್ತಿದೆ. ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಮಟ್ಟುಗುಳ್ಳ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಕಟಪಾಡಿ ಸಮೀಪದ ಮಟ್ಟು ಗ್ರಾಮದಲ್ಲಿ ಭತ್ತದ ಬೇಸಾಯ ಮಾಡದೇ ಗದ್ದೆಗಳನ್ನು ಹಡೀಲು ಬಿಟ್ಟು ಒಂದು-ಒಂದುವರೆ ತಿಂಗಳ ಹಿಂದೆ ಮಟ್ಟುಗುಳ್ಳದ ಸಸಿಗಳನ್ನು ನಾಟಿ ಮಾಡಲಾಗಿತ್ತು. ಮಟ್ಟು ಗ್ರಾಮದ 62 ರೈತರು 40 ಎಕರೆ ಪ್ರದೇಶದಲ್ಲಿ ಈ ಗುಳ್ಳದ ಗಿಡಗಳನ್ನು ಬೆಳೆಸಿದ್ದರು. ಗಿಡಗಳು ಹುಲುಸಾಗಿ ಬೆಳೆದು ಹೂವು ಬಿಡುವುದಕ್ಕೆ ತಯಾರಾಗಿದ್ದವು. ಆದರೆ ಗ್ರಾಮದಲ್ಲಿ ಹರಿಯುವ ಪಿನಾಕಿನಿ ಹೊಳೆಯ ಭೀಕರ ನೆರೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತು ಗಿಡಗಳೇ ಕೊಳೆತುಹೋಗಿವೆ.

ವಿಶೇಷ ಏನಪ್ಪಾ ಅಂದ್ರೆ ಗಿಡ ಹೇಗಿರುತ್ತೆ ನೋಡೋಣ ಅಂದ್ರೂ ಈ ಗ್ರಾಮದಲ್ಲಿ ಸಿಂಗಲ್ ಸಸಿ ಉಳಿದಿಲ್ಲ. ಮಟ್ಟು ಗುಳ್ಳ 'ಜಿ ಐ' ಮಾನ್ಯತೆ ಅಂದರೆ ಪೇಟೆಂಟ್ ಪಡೆದ ಅಪರೂಪದ ಬೆಳೆ. ಮಾನ್ಯತೆ- ಮರ್ಯಾದೆಗಳೇನೇ ಇದ್ದರೂ ಈಗ ಯಾವುದೂ ನೆರವಿಗೆ ಬರುತ್ತಿಲ್ಲ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಮಟ್ಟು ಗುಳ್ಳದ ಸಸಿಗಳನ್ನು ನಾಟಿ ಮಾಡಿದರೆ, ಅಕ್ಟೋಬರ್ ಎರಡನೇ ವಾರದಲ್ಲಿ ಗುಳ್ಳ ಕೊಯ್ಲಿಗೆ ಬರುತ್ತಿತ್ತು. ಈ ಬಾರಿ ಗುಳ್ಳದ ಗಿಡಗಳು ಹೂವು ಬಿಟ್ಟು, ಕಾಯಿ ಕಚ್ಚಿ, ಕೊಯ್ಲಿಗೆ ಬರಲು ಇನ್ನು 3-4 ವಾರಗಳಿರುವಾಗಲೇ ನೆರೆಗೆ ತುತ್ತಾಗಿವೆ. ಮಲ್ಚಿಂಗ್ ಮಾಡಿ ಸಸಿಗಳನ್ನು ನೆಡುವುದರಿಂದ ಎಕರೆಗೆ ಕನಿಷ್ಠ 40ಸಾವಿರ ರೂ.ವರೆಗೆ ವೆಚ್ಚ ಮಾಡಲಾಗಿದೆ. ಗ್ರಾಮದಲ್ಲಿ 15 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ಮಾಡಿ ಬೆಳೆಸಿದ ಮಟ್ಟುಗುಳ್ಳ ದ ಬೆಳೆಯೀಗ ನೀರುಪಾಲಾಗಿದೆ.

ಸದ್ಯ ಗದ್ದೆಗಳಲ್ಲಿ ನೀರು ನಿಂತು ಬೆಳೆದಿರುವ ಗಿಡಗಳ ಬೇರುಗಳೆಲ್ಲ ಕೊಳೆತು ಹೋಗಿವೆ. ಇದರಿಂದ ಗಿಡಗಳೂ ಕೊಳೆತರೆ, ಇನ್ನು ಕೆಲವೆಡೆ ಬಾಡಿವೆ. ಇವುಗಳನ್ನೆಲ್ಲ ಕಿತ್ತು ತೆಗೆದು, ಹೊಸ ಸಸಿಗಳನ್ನು ನಾಟಿ ಮಾಡಬೇಕು. ಆದರೆ ಎಲ್ಲ ರೈತರು ನಾಟಿ ಕೆಲಸ ಮುಗಿಸಿದ್ದರಿಂದ ಯಾರಲ್ಲಿಯೂ ಸಸಿಗಳು ತಯಾರಿಲ್ಲ. ಹೊಸ ಸಸಿಗಳ ತಯಾರಿಗೆ ಇನ್ನೂ ಒಂದು ತಿಂಗಳು ಹಿಡಿಯುತ್ತದೆ. ಬಳಿಕ ಅವುಗಳನ್ನು ನಾಟಿ ಮಾಡಿ ಬೆಳೆ ಬರಲು ಇನ್ನೆರಡು ತಿಂಗಳು ಕಾಯಬೇಕು. ಆದ್ದರಿಂದ ಈ ಬಾರಿ ಮಾರುಕಟ್ಟೆಗೆ ಮಟ್ಟುಗುಳ್ಳ ಬರುವುದು ಇನ್ನೂ ಮೂರು ತಿಂಗಳು ವಿಳಂಬವಾಗಲಿದೆ. ಈ ಸಲ ಕೊರೋನಾದಿಂದಾಗಿ ಪರವೂರಿನಲ್ಲಿರುವವರು ಕೂಡ ಊರಿಗೆ ಬಂದಿದ್ದರಿಂದ ಹೆಚ್ಚಿನ ಕೃಷಿಯಾಗಿತ್ತು. ಆದರೆ ಬೆಳೆದ ಬೆಳೆ ಕೈಗೆ ಬರುವ ಮೊದಲೇ ಎಲ್ಲ ನಾಶವಾಗಿದೆ.
Youtube Video

ಇದನ್ನೂ ಓದಿ: ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗೆ ವಿರೋಧ - ನಾಳೆ ಹುಬ್ಬಳ್ಳಿ ಬಂದ್​​ಗೆ ಮುಂದಾದ ಬಿಜೆಪಿಯೇತರ ಪಕ್ಷಗಳು

ಉತ್ತಮ ಫಸಲಿನ ನಿರೀಕ್ಷೆಯಲ್ಲಿ ನೆಟ್ಟಿದ್ದ ಗಿಡಗಳು, ಫಸಲು ಬರುವುದಕ್ಕೆ ಮುನ್ನವೇ ಕಣ್ಣೆದುರು ನಾಶವಾಗಿರುವುದನ್ನು ಕಂಡು ರೈತ ಮರುಗುತ್ತಿದ್ದಾನೆ. ಮಟ್ಟುಗುಳ್ಳದ ಜೊತೆಯಲ್ಲಿ ಹರಿವೆ ಗಿಡಗಳನ್ನೂ ನಾಟಿ ಮಾಡಿದ್ದು, ಅವುಗಳೂ ನಾಶವಾಗಿವೆ. ಬೆಳೆ ಸಂಪೂರ್ಣ ನಾಶವಾಗಿ ಕಂಗಾಲಾಗಿರುವ ರೈತರು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಸರ್ಕಾರಿ ಲೆಕ್ಜಾಚಾರದ ಪಟ್ಟಿಯಲ್ಲಿ ಈ ಬಿಡಿ ಬೆಳೆಗಾರರು ಪರಿಹಾರ ಪಡೆಯಲು ಅರ್ಹತೆ ಪಡೆದೇ ಇಲ್ಲ ಅನ್ನೋದು ಮಾತ್ರ ದುರಂತ.
Published by: Ganesh Nachikethu
First published: September 27, 2020, 9:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories