ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೆ ರೈತರು ಮತ್ತು ಸಾರಿಗೆ ನೌಕರರ ಪ್ರತಿಭಟನೆ?

ತಮ್ಮ ವಿವಿಧ ಬೇಡಿಕೆಗಳನ್ನ ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ನೌಕರರು ಬೆಂಗಳೂರಿನಲ್ಲಿ ಮತ್ತೊಮ್ಮೆ ಮುಷ್ಕರ ನಡೆಸುವ ಸಾಧ್ಯತೆ ಇದೆ. ಹಾಗೆಯೇ, ದೆಹಲಿ ಬಳಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲವಾಗಿ ರಾಜ್ಯದಲ್ಲೂ ರೈತರು ಪ್ರತಿಭಟಿಸುವ ಸಾಧ್ಯತೆ ಇದೆ.

ಕೋಡಿಹಳ್ಳಿ ಚಂದ್ರಶೇಖರ್​

ಕೋಡಿಹಳ್ಳಿ ಚಂದ್ರಶೇಖರ್​

  • Share this:
ಬೆಂಗಳೂರು(ಫೆ. 02): ಪದೇ ಪದೇ ಪ್ರತಿಭಟನೆಗಳಿಂದ ಹೈರಾಣಾಗಿರುವ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರತಿಭಟನೆಯ ಕಾವು ಏರುವ ಸಾಧ್ಯತೆ ಇದೆ. ರೈತರು ಮತ್ತು ಸಾರಿಗೆ ನೌಕರರು ಮತ್ತೆ ಬೀದಿಗಿಳಿದು ಹೋರಾಟ ನಡೆಸಲು ಅಣಿಯಾಗುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರೇ ಈ ಎರಡೂ ಹೋರಾಟಗಳಿಗೆ ನೇತೃತ್ವ ವಹಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದೆಹಲಿಯಲ್ಲಿ ರೈತರ ಹೋರಾಟ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲವಾಗಿ ರಾಜ್ಯದ ರೈತರು ನಗರದಲ್ಲಿ ಸಾಂಕೇತಿಕವಾಗಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

ಇನ್ನೊಂದೆಡೆ, ಕಳೆದ ತಿಂಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಲ್ಕು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರು ಮತ್ತೆ ತಮ್ಮ ಹೋರಾಟ ಮುಂದುವರಿಸುವ ಇರಾದೆಯಲ್ಲಿದ್ದಾರೆ. ತಮ್ಮ ಬೇಡಿಕೆಗಳನ್ನ ಈಡೇರಿಸುತ್ತೇನೆಂದು ಭರವಸೆ ನೀಡಿದ್ದ ಸರ್ಕಾರ ಈವರೆಗೂ ಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ಸಾರಿಗೆ ನೌಕರರ ಸಂಘಟನೆಗಳು ಆರೋಪಿಸಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಸಿಂಗ್ ಆಂಧ್ರದಲ್ಲಿ ಶವವಾಗಿ ಪತ್ತೆ; ಒಬ್ಬ ವ್ಯಕ್ತಿ ಬಂಧನ

ಸಾರಿಗೆ ನೌಕರರ ಕೆಲ ಪ್ರಮುಖ ಬೇಡಿಕೆಗಳು:
1) ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು
2) ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ಧನ ಒದಗಿಸಬೇಕು
3) ಸಾರಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡಬೇಕು
4) ಕೊರೋನಾದಿಂದ ಬಂದಾಗಿನಿಂದ ಡಿಪೋಗಳಲ್ಲಿ ಸರಿಯಾಗಿ ಡ್ಯೂಟಿ ಸಿಗುತ್ತಿಲ್ಲ. ಡಿಪೋದಿಂದ ಡಿಪೋಗೆ ವರ್ಗಾವಣೆ ಆಗುತ್ತಿದೆ. ಇಂಥ ಸಮಸ್ಯೆಗಳನ್ನ ಬಗೆಹರಿಸಬೇಕು
5) ಸಾರಿಗೆ ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಬೇಕು

ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವುದನ್ನ ಬಿಟ್ಟು ಉಳಿದ ಬೇಡಿಕೆಗಳನ್ನ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ತಮ್ಮ ಮುಷ್ಕರವನ್ನ ಹಿಂಪಡೆದುಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಸರ್ಕಾರ ಭರವಸೆ ಕೊಟ್ಟಂತೆ ಬೇರೆ ಬೇಡಿಕೆಗಳನ್ನೂ ಈಡೇರಿಸಿಲ್ಲ ಎಂದು ಸಾರಿಗೆ ನೌಕರರು ಆಪಾದಿಸಿದ್ದಾರೆ. ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ಧನ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇಲ್ಲಿಯವರೆಗೆ ಯಾವೊಬ್ಬ ನೌಕರನ ಕುಟುಂಬಕ್ಕೆ ಪರಿಹಾರ ಹಣ ಸಿಕ್ಕಿಲ್ಲ. ಸರ್ಕಾರ ಘೋಷಿಸಿರುವ ಈ ಯೋಜನೆ ಆದಷ್ಟು ಬೇಗ ಅನುಷ್ಠಾನಕ್ಕೆ ಬರಬೇಕು ಎಂದು ನೌಕರರು ಆಗ್ರಹಿಸಿದ್ಧಾರೆ.

ಇದನ್ನೂ ಓದಿ: ಬಿಡಿಎ ಸಿಬ್ಬಂದಿಗೆ ವರ್ಗಾವಣೆ ಬಿಸಿ; ಬಿಡಿಎ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಡಿಸೆಂಬರ್ ತಿಂಗಳಲ್ಲಿ ಕೇವಲ ಅರ್ಧ ಸಂಬಳ ನೀಡಲಾಗಿದೆ. ಫೆಬ್ರವರಿಯಾದರೂ ಇನ್ನೂ ಜನವರಿ ತಿಂಗಳ ಸಂಬಳ ಸಹ ಕನ್ಫರ್ಮ್ ಆಗಿಲ್ಲ. ಕೋವಿಡ್ ಬಳಿಕ ಗಳಿಕೆ ರಜೆ, ಆ ರಜೆ, ಈ ರಜೆ ಎಂದು ಸಂಬಳ ಕಡಿತ ಮಾಡುತ್ತಿದ್ದ ಸಾರಿಗೆ ನಿಗ ಈಗ ಅರ್ಧ ಸಂಬಳ ಹಾಕಿ ನೌಕರರ ಬಾಳಲ್ಲಿ ಕತ್ತಲೆ ಮೂಡುವಂತೆ ಮಾಡಿದೆ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ತಮ್ಮ ಮಕ್ಕಳಿಗೆ ನಿಗದಿಯಾಗಿರುವ ಶೇ. 70 ಶುಲ್ಕವನ್ನ ಕಟ್ಟಲೂ ಸಾಧ್ಯವಾಗುತ್ತಿಲ್ಲ ಎಂದು ಬಿಎಂಟಿಸಿ ನೌಕರರು ಅಲವತ್ತುಕೊಂಡಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಸಂಘಟನೆಗಳು ಹಾಗು ಸಾರಿಗೆ ನೌಕರರ ಸಂಘಟನೆಗಳು ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಮುಂದಿನ ಹೋರಾಟಗಳನ್ನ ಯಾವ ರೀತಿ ನಡೆಸಬೇಕೆಂದು ಸಮಾಲೋಚಿಸಲಾಗುತ್ತಿದೆ. ಇಂದು ಮಧ್ಯಾಹ್ನ ಅಥವಾ ಸಂಜೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು, ಪ್ರತಿಭಟನೆಗಳ ವಿವರ ನೀಡುವ ಸಾಧ್ಯತೆ ಇದೆ.

ವರದಿ: ಶರಣು ಹಂಪಿ
Published by:Vijayasarthy SN
First published: