ಮೂರೂವರೆ ರೂಪಾಯಿ ಸಾಲಕ್ಕಾಗಿ ರೈತನನ್ನು 15 ಕಿ.ಮೀ. ನಡೆಸಿದ ಶಿವಮೊಗ್ಗ ಬ್ಯಾಂಕ್ ಸಿಬ್ಬಂದಿ!

ಕೊರೋನಾ ವೈರಸ್​ನಿಂದ ಇಡೀ ದೇಶವೇ ತತ್ತರಿಸಿದೆ. ಸಾಲ ಮರುಪಾವತಿ ಅವಧಿಯನ್ನೂ ಸರ್ಕಾರ ವಿಸ್ತರಿಸಿದೆ. ಈ ಮಧ್ಯೆ, ಶಿವಮೊಗ್ಗ ಬ್ಯಾಂಕ್​ ಸಿಬ್ಬಂದಿ ಕೇವಲ ಮೂರೂವರೆ ರೂಪಾಯಿಗಾಗಿ ರೈತನನ್ನು 15 ಕಿ.ಮೀ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ.27): ಕೊರೋನಾ ವೈರಸ್​ನಿಂದಾಗಿ ಬಹುತೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಸಾಲ ಮರುಪವಾತಿ ಅವಧಿಯನ್ನು ವಿಸ್ತರಣೆ ಮಾಡಿದೆ. ಹೀಗಿದ್ದರೂ, ಕೇವಲ ಮೂರುವರೆ ರೂಪಾಯಿ ಸಾಲ ಹಿಂಪಡೆಯಲು ಬ್ಯಾಂಕ್​ ಸಿಬ್ಬಂದಿ ರೈತನನ್ನು 15 ಕಿ.ಮೀ ನಡೆಸಿದ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ.

ನಿಟ್ಟೂರು ಸಮೀಪದ ಬರುವೆಯ ರೈತ ಲಕ್ಷ್ಮೀ ನಾರಾಯಣ ಎಂಬುವವರು ನಿಟ್ಟೂರು ಕೆನರಾ ಬ್ಯಾಂಕ್​ನಲ್ಲಿ 35 ಸಾವಿರ ರೂಪಾಯಿ ಕೃಷಿ ಸಾಲ ಮಾಡಿದ್ದರು. ಸರ್ಕಾರದ ಸಾಲ ಮನ್ನಾ ಯೋಜನೆ ಅಡಿಯಲ್ಲಿ 32 ಸಾವಿರ ರೂಪಾಯಿ ಮನ್ನಾ ಆಗಿತ್ತು. 3 ಸಾವಿರ ರೂಪಾಯಿ ಹಣವನ್ನು ಅವರು ಇತ್ತೀಚೆಗೆ ಕಟ್ಟಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಆದರೆ, ಇತ್ತೀಚೆಗೆ ಅವರಿಗೆ ನಿಟ್ಟೂರು ಕೆನರಾ ಬ್ಯಾಂಕ್​ನಿಂದ ಕರೆ ಬಂದಿತ್ತು. ಅಷ್ಟೇ ಅಲ್ಲ, ಅಲ್ಲಿ ಆಘಾತಕಾರಿ ವಿಚಾರವೊಂದನ್ನು ಬ್ಯಾಂಕ್​ ಸಿಬ್ಬಂದಿ ಹೇಳಿದ್ದರು. ‘ನೀವು ಬ್ಯಾಂಕ್​ಗೆ ಹಣ ಕಟ್ಟುವುದು ಬಾಕಿ ಇದೆ. ಹೀಗಾಗಿ ತಕ್ಷಣಕ್ಕೆ ಶಾಖೆಗೆ ಬನ್ನಿ’ ಎಂದು ಬ್ಯಾಂಕ್​ ಸಿಬ್ಬಂದಿ ತಿಳಿಸಿದ್ದರು. ಇದರಿಂದ ಆತಂಕಗೊಂಡ ಲಕ್ಷ್ಮೀ ನಾರಾಯಣ ಅವರು ಬ್ಯಾಂಕ್​ಗೆ ಹೊರಟು ನಿಂತರು.

ಕೊರೋನಾ ವೈರಸ್​ನಿಂದಾಗಿ ಬಸ್​ ಸಂಚಾರ ಈ ಭಾಗದಲ್ಲಿ ವಿರಳವಾಗಿದೆ. ಅಲ್ಲದೆ, ಲಕ್ಷ್ಮೀ ನಾರಾಯಣ ಅವರ ಬಳಿ ಯಾವುದೇ ಸ್ವಂತ ವಾಹನ ಇಲ್ಲ. ಹೀಗಾಗಿ, ದಿಕ್ಕು ತೋಚದೆ ಲಕ್ಷ್ಮೀ ನಾರಾಯಣ ನಡೆದೇ ಬ್ಯಾಂಕ್​ನತ್ತ ಹೆಜ್ಜೆ ಹಾಕಿದ್ದರು. ಒಂದಲ್ಲ, ಎರಡಲ್ಲ ಬರೋಬ್ಬರಿ 15 ಕಿ.ಮೀ ನಡೆದು ಬ್ಯಾಂಕ್​ ತಲುಪಿದ್ದರು ಲಕ್ಷ್ಮೀ ನಾರಾಯಣ.

ಇದನ್ನೂ ಓದಿ: ದೇಶದಲ್ಲಿ ಕೋವಿಡ್​​-19 ಕಾವು: ಒಂದೇ ದಿನ 18,552 ಕೇಸ್​ ಪತ್ತೆ; 5 ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬ್ಯಾಂಕ್​ ತಲುಪಿ ಸಿಬ್ಬಂದಿ ಬಳಿ ವಿಚಾರಿಸಿದಾಗ ಬಾಕಿ ಉಳಿದುಕೊಂಡಿರುವುದು ಕೇವಲ 3.40 ರೂಪಾಯಿ ಎಂಬುದು ಗೊತ್ತಾಗಿದೆ. ಈ ಹಣವನ್ನು ಪಾವತಿಸಿ ಅವರು ಮನೆಗೆ ಮರಳಿದ್ದಾರೆ. ಸದ್ಯ, ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ  ಮೂರುವರೆ ರೂಪಾಯಿಗೆ ರೈತನನ್ನು 15 ಕಿ.ಮೀ ನಡೆಸಿದ ಬ್ಯಾಂಕ್​ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
First published: