ಜಾತಿಯನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ; ಹೆಚ್​.ಡಿ. ದೇವೇಗೌಡ

ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ ಎಂದು ಮಾಜಿ ಪ್ರಧಾನಿ‌ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

  • Share this:
ಬೆಂಗಳೂರು (ಅ. 11): ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಜೆಡಿಎಸ್​ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಹೆಚ್​.ಡಿ. ದೇವೇಗೌಡ ಹೇಳಿದ್ದಾರೆ. ಆರ್.ಆರ್. ನಗರದಲ್ಲಿ ಡಿಕೆ ಶಿವಕುಮಾರ್ ಅವರಿಂದ ಜಾತಿ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ದೇವೇಗೌಡರು, ನನಗೂ ಸಾಕಷ್ಟು ಅನುಭವ ಇದೆ. ಆದರೆ, ನಾನು ಮಾತಾಡೋಕೆ ಹೋಗುವುದಿಲ್ಲ. ಅವರು ಹೇಳಲಿ, ಅವರಿಗೆ ಅಧಿಕಾರ ಇದೆ. ಆದರೆ, ಅಂತಿಮವಾಗಿ ಮತದಾರರು ತೀರ್ಮಾನ ಮಾಡ್ತಾರೆ. ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ ಎಂದು ಜೆಪಿ‌ ಭವನದಲ್ಲಿ ಮಾಜಿ ಪ್ರಧಾನಿ‌ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

ನಮ್ಮ ಪಕ್ಷವನ್ನ ಯಾರಾದರೂ ಒಡೆಯುತ್ತಾರೆ ಎಂದರೆ ಅದು ಅವರ ಭ್ರಮೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷವನ್ನು ಒಡೆಯಲು ಸಾಧ್ಯವಿಲ್ಲ. ಜೆಡಿಎಸ್​ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ. ಯಾರು ಏನು ಬೇಕಾದರೂ ಹೇಳಲಿ. ನಮ್ಮ ‌ಪಕ್ಷ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ನಾನು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ ಎಂದು ಕಾಂಗ್ರೆಸ್-ಬಿಜೆಪಿಗೆ ದೇವೇಗೌಡ ತಿರುಗೇಟು ನೀಡಿದ್ದಾರೆ.

ದೇಶದಲ್ಲಿ ಮುಸ್ಲಿಂ ಮೀಸಲಾತಿ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ನಮ್ಮ ಸರ್ಕಾರ. ಸಾಮಾಜಿಕ ನ್ಯಾಯ ಅನುಷ್ಠಾನ ಮಾಡಿದ್ದು ನಮ್ಮ ಸರ್ಕಾರ. ನನ್ನ ಹೆಸರಲ್ಲಿ ಗೌಡ ಅಂತ ಸೇರಿಕೊಂಡಿದೆ. ಹಾಗಂತ ನಿಂದನೆ ಮಾಡೋದು ಸರಿಯಾ?  ನಿಂದಕರಿರಬೇಕಯ್ಯ ಅಂತ ಬಸವಣ್ಣನವರು ಹೇಳಿದ್ದಾರೆ. ನಿಂದನೆ ಮಾಡಿದ್ದಕ್ಕೆ ಅವರೇ ಅನುಭವಿಸುತ್ತಾರೆ ಬಿಡಿ. ಅವರು ಚುನಾವಣೆಯಲ್ಲಿ ಗೆಲ್ಲೋಕೆ, ಅವರ ಅಭ್ಯರ್ಥಿ ಗೆಲ್ಲಿಸೋಕೆ ಯಾವ ಪ್ರಯೋಗ ಮಾಡ್ತಾರೋ ಮಾಡಲಿ. ಅದಕ್ಕೆ ಅವರು ಸ್ವತಂತ್ರರು ಎಂದು ಡಿ.ಕೆ. ಶಿವಕುಮಾರ್ ವಿರುದ್ದ ದೇವೇಗೌಡ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ನಾಳೆಯಿಂದ 3 ವಾರ ಶಿಕ್ಷಕರು, ವಿದ್ಯಾರ್ಥಿಗಳಿಗೆ ದಸರಾ ರಜೆ; ಸಿಎಂ ಯಡಿಯೂರಪ್ಪ ಘೋಷಣೆ

ನಮ್ಮದು ಫ್ಯಾಮಿಲಿ ಪಕ್ಷವಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಈ ಪಕ್ಷ ಬಡವರ ಪರ, ರೈತರು, ಅತ್ಯಂತ ಕೆಳ ವರ್ಗದಲ್ಲಿ ಇರುವವರ ಪರವಾದ ಪಕ್ಷ. ಈಗಿನ ಸರ್ಕಾರ ಬಡವರ ಪರ, ರೈತ ಪರ ಇಲ್ಲ ಎಂದು ದೇವೇಗೌಡ ಕಿಡಿಕಾರಿದ್ದಾರೆ.

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡ, ಬುಧವಾರ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ಸೋಲು ಗೆಲುವು ಆಮೇಲೆ. ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಟಿಕೆಟ್ ನೀಡಲಾಗುವುದು. ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ. ಅವರು ಹೀಗೆ ಬಂದು ಹಾಗೆ ಹೋಗಿರೋದನ್ನು ನೋಡಿದ್ದೇವೆ. ಅದೊಂದು ಹಿಂಸೆ. ನಮಗೆ ಆಯಾ ರಾಮ್ ಗಯಾ ರಾಮ್ ರೀತಿಯವರು ಬೇಕಾಗಿಲ್ಲ. ಬುಧವಾರ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎಂದು ದೇವೇಗೌಡ ತಿಳಿಸಿದ್ದಾರೆ.
Published by:Sushma Chakre
First published: