ಜಿಲ್ಲಾಧಿಕಾರಿ ಖಡಕ್ ನಿರ್ದೇಶನದ ನಂತರ ರೈತನ ಜಮೀನಿಗೆ ಒಂದೇ ದಿನದಲ್ಲಿ ವಿದ್ಯುತ್ ಮರುಸಂಪರ್ಕ

ವಿದ್ಯುತ್ ಸಂಪರ್ಕ ನೀಡದೆ ಹೋದರೆ ಹೆಂಡತಿ ಮಕ್ಕಳೊಂದಿಗೆ ವಿಷ ಸೇವಿಸುವುದಾಗಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ್ದರು.ಪ್ರತಿಭಟನೆ ನಡೆಸಿದ್ದ ಮಹದೇವಸ್ವಾಮಿ ಕುಟುಂಬವನ್ನು ಸೆಸ್ಕ್ ಅಧಿಕಾರಿಗಳು ಸಮಾಧಾನಪಡಿಸಿ ಕಳುಹಿಸಿದ್ದರು

news18-kannada
Updated:February 19, 2020, 10:03 PM IST
ಜಿಲ್ಲಾಧಿಕಾರಿ ಖಡಕ್ ನಿರ್ದೇಶನದ ನಂತರ ರೈತನ ಜಮೀನಿಗೆ ಒಂದೇ ದಿನದಲ್ಲಿ ವಿದ್ಯುತ್ ಮರುಸಂಪರ್ಕ
ರೈತನ ಹೊಲಕ್ಕೆ ವಿದ್ಯುತ್​ ಕಂಬ ಹಾಕುತ್ತಿರುವುದು
  • Share this:
ಚಾಮರಾಜನಗರ(ಫೆ.19): ವಿಷದ ಬಾಟಲಿಯೊಂದಿಗೆ ಪ್ರತಿಭಟನೆ ನಡೆಸಿದ್ದ ರೈತನ ಜಮೀನಿಗೆ ಜಿಲ್ಲಾಧಿಕಾರಿಗಳ ಖಡಕ್ ನಿರ್ದೇಶನದ ಪರಿಣಾಮ ಒಂದೇ ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಹೊಸಪಾಳ್ಯ ಗ್ರಾಮದ ರೈತ ಮಹದೇವಸ್ವಾಮಿ ಜಮೀನಿನಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೆಸ್ಕ್ ಕಚೇರಿಗೆ ಹಲವಾರು ಬಾರಿ ದೂರು ನೀಡಿದರು ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಗಮನವಹಿಸಿರಲಿಲ್ಲ. ಪರಿಣಾಮ ಬೆವರು ಸುರಿಸಿ ಬೆಳೆದ ಬೆಳೆಗಳು ಒಣಗಿ ನಿಂತಿದ್ದವು.

ಇದರಿಂದ ಬೇಸತ್ತ ರೈತ ಮಹದೇವಸ್ವಾಮಿ ಫೆ.18 ರಂದು ಕುಟುಂಬ ಸಮೇತ ಹನೂರು ಸೆಸ್ಕ್ ಕಚೇರಿ ಮುಂದೆ ವಿಷದ ಬಾಟಲಿಯೊಂದಿಗೆ ಪ್ರತಿಭಟನೆ ನಡೆಸಿದ್ದರು. ಬೆಳೆಗಳು ಒಣಗಿ ಹಾಳಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳದೆ ಬೇರೆ ದಾರಿ ಇಲ್ಲ ಎಂದು ಅಲವತ್ತುಕೊಂಡಿದ್ದರು.

ಸೆಸ್ಕ್ ಅಧಿಕಾರಿಗಳು ಪಕ್ಕದ ಜಮೀನು ಮಾಲೀಕರಿಗೆ ಹೆದರಿ ವಿದ್ಯುತ್ ಕಂಬ ಅಳವಡಿಸದೆ ಸಮಸ್ಯೆ ಉಲ್ಬಣಿಸುವಂತೆ ಮಾಡಿದ್ದಾರೆ. ಪರಿಣಾಮ ನೀರಿಲ್ಲದೆ ಬೇಸಾಯ ಮಾಡಿ ಜೀವನ ಸಾಗಿಸುವುದು ಕಷ್ಟವಾಗಿದೆ. ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿಧಿಯಿಲ್ಲದೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರುವುದಾಗಿ ಅಳಲು ತೋಡಿಕೊಂಡಿದ್ದರು.

ವಿದ್ಯುತ್ ಸಂಪರ್ಕ ನೀಡದೆ ಹೋದರೆ ಹೆಂಡತಿ ಮಕ್ಕಳೊಂದಿಗೆ ವಿಷ ಸೇವಿಸುವುದಾಗಿ ಕೈಯಲ್ಲಿ ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದ್ದರು. ಪ್ರತಿಭಟನೆ ನಡೆಸಿದ್ದ ಮಹದೇವಸ್ವಾಮಿ ಕುಟುಂಬವನ್ನು ಸೆಸ್ಕ್ ಅಧಿಕಾರಿಗಳು ಸಮಾಧಾನಪಡಿಸಿ ಕಳುಹಿಸಿದ್ದರು.

ಇದನ್ನೂ ಓದಿ :  ಕ್ಷುಲ್ಲಕ ಕಾರಣಕ್ಕೆ ದಲಿತರಿಂದಲೇ ದಲಿತರ ಸಾಮಾಜಿಕ ಬಹಿಷ್ಕಾರ - ಸಾಮೂಹಿಕ ಆತ್ಮಹತ್ಯೆಗೆ ಅನುಮತಿ ನೀಡುವಂತೆ ಪತ್ರ

ಈ ವಿಷಯ ತಿಳಿದ ಕೂಡಲೇ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕೂಡಲೇ ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ನೀಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಸೆಸ್ಕ್ ಅಧಿಕಾರಿಗಳು ಇಂದು ಮಹದೇವಸ್ವಾಮಿ ಜಮೀನಿಗೆ ತೆರಳಿ ಕಂಬ ಅಳವಡಿಸಿ ತಂತಿ ಎಳೆದು ಕೊನೆಗೂ ವಿದ್ಯುತ್ ಸಂಪರ್ಕ ನೀಡಿದ್ದಾರೆ.ಈ ಮೂಲಕ ಸಲ್ಲದ ಕಾರಣ ನೀಡುತ್ತಾ ಜನಸಾಮಾನ್ಯರ ಕೆಲಸ ಮಾಡಲು ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಪರೋಕ್ಷವಾಗಿ ಖಡಕ್ ಸಂದೇಶ ರವಾನಿಸಿದ್ದಾರೆ. ಕೆಲಸ ಮಾಡುವ ಮನಸಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನವಾಗಿದೆ.

 (ವರದಿ : ಎಸ್​ ಎಂ ನಂದೀಶ್)
First published:February 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading