Ropeway: ರೋಪ್ ವೇ ಉಳಿಸಿದ ಕೃಷಿಕನ ಶ್ರಮ, ಹೇಗಂತೀರಾ‌ ಈ ಸ್ಟೋರಿ ನೋಡಿ...

ಈ ಕೆಲಸಕ್ಕಾಗಿಯೇ ಸಾಕಷ್ಟು ಹಣ ಹಾಗೂ ಸಮಯ ಪೋಲಾಗುತ್ತಿರುವುದನ್ನು ಮನಗಂಡ ಶ್ರೀಹರಿ ಭಟ್ ರೋಪ್ ವೇ ಮೂಲಕ ಕೃಷಿ ಉತ್ಪನ್ನ ಮತ್ತು ಗೊಬ್ಬರಗಳನ್ನು ಕೃಷಿತೋಟಕ್ಕೆ ಸಾಗಿಸುವ ಸಾಧನವೊಂದನ್ನು ಪರಿಚಯಿಸಿದ್ದಾರೆ.

 ಶ್ರೀಹರಿ ಭಟ್

ಶ್ರೀಹರಿ ಭಟ್

  • Share this:
ಪುತ್ತೂರು (ಡಿ. 30):  ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳು ಭೌಗೋಳಿಕವಾಗಿ ಏರು ತಗ್ಗಿನಿಂದ ಕೂಡಿದ ಪ್ರದೇಶಗಳಾಗಿವೆ. ಇಲ್ಲಿನ ಹೆಚ್ಚಿನ ಕೃಷಿಕರ ಮನೆ ಮತ್ತು ಅಂಗಳ ಎತ್ತರದಲ್ಲಿದ್ದರೆ, ಕೃಷಿ ತೋಟವಿರುವುದು (Farm land) ಮೂವತ್ತೋ, ನಲವತ್ತೋ ಅಡಿ ಆಳದಲ್ಲಿ. ಕೃಷಿಗೆ ಬೇಕಾದ ಗೊಬ್ಬರ ಇತ್ಯಾದಿ ಮೇಲಿನಿಂದ ಕೆಳಕ್ಕೆ ಹೊರುವ ಕಷ್ಟ ಒಂದೆಡೆಯಾದರೆ, ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಕೆಳಗಿನ ತೋಟದಿಂದ ಮನೆಯೆದುರಿನ (Home) ಅಂಗಳಕ್ಕೆ ತರುವ, ಹೊರುವ ಕೆಲಸ ತ್ರಾಸದಾಯಕ ಮತ್ತು ಕಷ್ಟಕರ. ಈ ಸಮಸ್ಯೆಗೆ ಪರಿಹಾರ (Solution) ಕಂಡುಕೊಳ್ಳುವಲ್ಲಿ ಇಲ್ಲೊಬ್ಬರು ರೈತರು ಯಶಸ್ವಿಯಾಗಿದ್ದಾರೆ.

ಮಾದರಿಯಾದ ಕೃಷಿಕ

ಪೆರ್ಲ ಸಮೀಪದ ಸಜಂಗದ್ದೆ ನಿವಾಸಿ ಪ್ರಗತಿಪರ ಕೃಷಿಕರಾಗಿರುವ ಶ್ರೀಹರಿ ಭಟ್ ಅವರ ಹೊಸ ಸಂಶೋಧನೆಯಾಗಿದೆ. ಕರಾವಳಿ ಭಾಗದಲ್ಲಿ ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಇರುವಂತೆ ಕೃಷಿತೋಟ ಒಂದು ಕಡೆ, ಮನೆ ಒಂದು ಕಡೆಯಂತೆ ಶ್ರೀಹರಿ ಭಟ್ ಅವರದ್ದೂ ಸಮಸ್ಯೆಯಾಗಿದೆ. ಇವರ ಮನೆ ಕೃಷಿ ತೋಟದಲ್ಲಿ ಸುಮಾರು 40 ಅಡಿ ಎತ್ತರದಲ್ಲಿದ್ದು, ಕೃಷಿ ಉತ್ಪನ್ನಗಳನ್ನು ಹಾಗೂ ತೋಟಗಳಿಗೆ ಹಾಕಬೇಕಾದ ಗೊಬ್ಬರಗಳನ್ನು ಹೊತ್ತುಕೊಂಡೇ ಸಾಗಿಸಬೇಕಾದ ಅನಿವಾರ್ಯತೆಯಿತ್ತು. ಈ ಕೆಲಸಕ್ಕಾಗಿಯೇ ಸಾಕಷ್ಟು ಹಣ ಹಾಗೂ ಸಮಯ ಪೋಲಾಗುತ್ತಿರುವುದನ್ನು ಮನಗಂಡ ಶ್ರೀಹರಿ ಭಟ್ ರೋಪ್ ವೇ ಮೂಲಕ ಕೃಷಿ ಉತ್ಪನ್ನ ಮತ್ತು ಗೊಬ್ಬರಗಳನ್ನು ಕೃಷಿತೋಟಕ್ಕೆ ಸಾಗಿಸುವ ಸಾಧನವೊಂದನ್ನು ಪರಿಚಯಿಸಿದ್ದಾರೆ. ಈ ಸಾಧನದ ಅಳವಡಿಕೆಯ ಬಳಿಕ ಶ್ರೀಹರಿ ಭಟ್ ಇದೀಗ ಫುಲ್ ಖುಷಿಯಾಗಿದ್ದು, ಇತರ ಕೃಷಿಕರಿಗೂ ತಮ್ಮಂತೆಯೇ ಮಾಡುವಂತೆ ಹುರಿದುಂಬಿಸುತ್ತಿದ್ದಾರೆ.ಮನೆಯಿಂದ ತೋಟಕ್ಕೆ ರೋಪ್​ ವೇ

ಮನೆಯಿಂದ ನೇರವಾಗಿ ಕೃಷಿತೋಟಕ್ಕೆ ಹಾಗೂ ಕೃಷಿತೋಟದಿಂದ ನೇರವಾಗಿ ಮನೆಗೆ ಸಂಪರ್ಕ ಕಲ್ಪಿಸುವ ರೋಪ್ ವೇ ಒಂದನ್ನು ಶ್ರೀಹರಿ ಭಟ್ ಅಳವಡಿಸಿಕೊಂಡಿದ್ದು, 50 ಕಿಲೋಗಿಂತಲೂ ಮಿಕ್ಕಿದ ಸಾಮಾಗ್ರಿಗಳನ್ನು ಈ ರೋಪ್ ವೇ ಮೂಲಕ ಅನಾಯಾಸವಾಗಿ ಸಾಗಿಸಬಹುದಾದ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರಿಗೆ ಪ್ರಯೋಜನಕಾರಿಯಾಗಿರುವ ಈ ರಾಟೆ ರೋಪ್‌ವೇ ತಯಾರಿಸಲು ಒಂದಷ್ಟು ಸಲಕರಣೆಗಳು ಬೇಕಾಗುತ್ತಿದ್ದು  ಶ್ರೀಹರಿ ಭಟ್ ಅವರು  ಈ ವಿಧಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ.

ಇದನ್ನು ಓದಿ: ಚಿನ್ನ ಅಲ್ಲ..ಹಣ ಅಲ್ಲ.. ಅಬ್ಬಬ್ಬಾ ಯಾರೂ ಊಹಿಸಲು ಸಾಧ್ಯವಾಗದನ್ನು ಕದ್ದೊಯ್ದ ಖದೀಮರು!

ಹೇಗೆ ಅಳವಡಿಸಲಾಯಿತು ರೋಪ್​ ವೇ

ಈ ವಿಧಾನ ಅಳವಡಿಸಲು ಎರಡು ರಾಟೆ ಗಳು ಮತ್ತು ಕ್ಲಾಂಪ್‌ಗಳನ್ನು ಶ್ರೀಹರಿ ಭಟ್ ಬಳಸಿಕೊಂಡಿದ್ದಾರೆ. ಜೊತೆಗೆ ಮನೆಯ ಅಂಗಳದಲ್ಲಿ ಒಂಭತ್ತು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಕಬ್ಬಿಣದ ಗಟ್ಟಿ ಸಲಾಕೆ. ಇನ್ನೊಂದು ಸುಮಾರು ಐವತ್ತು ಅಡಿ ತಗ್ಗಿನಲ್ಲಿ ಇರುವ ತೋಟದಲ್ಲಿ ಏಳು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಗಟ್ಟಿ ಸಲಾಕೆ. ಇವೆರಡರ ನಡುವೆ 8 MM ದಪ್ಪದ ಕಬ್ಬಿಣದ ಕೇಬಲ್ ಎಳೆದು ಕಟ್ಟಿ, ಅದರ ಮೇಲೆ ಚಲಿಸುವ ರಾಟೆ ಅಳವಡಿಸಿದ್ದಾರೆ. ಕೇಬಲ್ ಮೇಲೆ ಚಲಿಸುವ ರಾಟೆ ಇದ್ದರೆ ಅಂಗಳದ ಕಂಬದ ಬಳಿ ಸ್ಥಿರ ರಾಟೆ ಅಳವಡಿಸಿ ನೈಲಾನ್ ಹಗ್ಗ ಅಳವಡಿಸಲಾಗಿದೆ. ಸ್ಥಿರ ರಾಟೆ ಯಿಂದ ಕೇಬಲ್ ಮೇಲಿನ ರಾಟೆ ಎಳೆಯಲು ಸಂಪರ್ಕ ಕೊಡಲಾಗಿದೆ. ಇದರ ಗರಿಷ್ಠ ಸಾಮರ್ಥ್ಯ ಇನ್ನೂರು ಕಿಲೋ ಕ್ಕೂ  ಅಧಿಕವಾಗಿದ್ದು,  ಸುಮಾರು ನಲವತ್ತು-ಐವತ್ತು ಕಿಲೋ ಭಾರದ ಅಡಿಕೆಯ ಮೂಟೆ ನಿಮಿಷಾರ್ಧದಲ್ಲಿ ತೋಟದಿಂದ ಅಂಗಳಕ್ಕೆ ಅನಾಯಾಸವಾಗಿ ತಲುಪುತ್ತದೆ.

ಇದನ್ನು ಓದಿ: 10ನೇ ತರಗತಿ ವಿದ್ಯಾರ್ಥಿ ಮದುವೆಯಾದ ಮಹಿಳಾ ಶಿಕ್ಷಕಿ; ಪೋಕ್ಸೋ ಕಾಯ್ದೆ ಅಡಿ ಬಂಧನ

ರೈತನ ಕಾರ್ಯಕ್ಕೆ ಮೆಚ್ಚುಗೆ

ತೋಟದ ಮೂಲೆ ಮೂಲೆ ತಲುಪಲು ತೋಟದ ನಡುವೆ ಮಾರ್ಗ ನಿರ್ಮಿಸಲಾಗಿದೆ. ಜೊತೆಗೆ ಎರಡು ಚಕ್ರದ ಮಾನವ ಚಾಲಿತ ಕೈಗಾಡಿಯೂ ಇದ್ದು,  ಎಲ್ಲಾ ಕಡೆಯಿಂದ ಹೆಚ್ಚಿನ ಪ್ರಯಾಸವಿಲ್ಲದೆ ಅಡಿಕೆಗಳನ್ನು ಸಂಗ್ರಹಿಸಿ ರೋಪ್ ವೇ ಇರುವ  ಜಾಗದಲ್ಲಿ ಶೇಖರಿಸಲಾಗುತ್ತದೆ. ಹೀಗೆ ಶೇಖರಿಸಿದ ಕೃಷಿ ಉತ್ಪನ್ನಗಳನ್ನು ಗೋಣಿ ಚೀಲದಲ್ಲಿ ತುಂಬಿ ನೇರವಾಗಿ ಮನೆಯ ಅಂಗಳದಲ್ಲಿ ಡಂಪ್ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಅತ್ಯಂತ ಕಡಿಮೆ ಖರ್ಚಿನ ಈ ಸಾಧನಕ್ಕೆ ಸುಮಾರು 15 ಸಾವಿರ ರೂಪಾಯಿಗಳ ವೆಚ್ಚ ತಗುಲುತ್ತಿದ್ದು, ಈ ವೆಚ್ಚವನ್ನು ಕೇವಲ 25 ಕಿಲೋ ಅಡಿಕೆ ಮಾರಿ ಪಡೆಯಬಹುದು ಎನ್ನುತ್ತಾರೆ ಶ್ರೀಹರಿ ಭಟ್. ಈ ರಾಟೆಯಿಂದಾಗಿ ಸುಮಾರು 50 ಶೇಕಡಾ ಶ್ರಮ ಹಾಗೂ ಸಮಯದ ಉಳಿತಾಯವಾಗಿದ್ದು, ಈ ರೀತಿಯ ತೋಟದ ವ್ಯವಸ್ಥೆಯನ್ನು ಹೊಂದಿರುವ ಕೃಷಿಕರು ಇಂಥ ಸಾಧನದತ್ತ ಗಮನಹರಿಸಬೇಕು ಎನ್ನುವ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.
Published by:Seema R
First published: