ವಿಭಜನಾ ಪತ್ರ (Partition Deed)ದ ಮೂಲಕ ಪಡೆದ ಆಸ್ತಿಯನ್ನು (Property) ಹಿಂದೂ ಮಹಿಳೆಯು ವಿಲ್ ಮಾಡದೇ ನಿಧನ ಹೊಂದಿದರೆ ಅದು ಮೂಲ ವಾರಸುದಾರರಿಗೆ ಮರಳುವುದಿಲ್ಲ ಮತ್ತು ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ಅದನ್ನು "ಪಿತ್ರಾರ್ಜಿತ" ಎಂದು ಪರಿಗಣಿಸಲಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್ (High Court) ತೀರ್ಪು ನೀಡಿದೆ. ಇಂತಹ ಪ್ರಕರಣದಲ್ಲಿ ಮೃತ ಪತ್ನಿಯ ಆಸ್ತಿಯನ್ನು ಆಕೆಯ ಕುಟುಂಬ ಸದಸ್ಯರ ಬದಲಿಗೆ ಪತಿಯೇ ವಾರಸುದಾರನಾಗುತ್ತಾನೆ ಎಂದು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದ್ದು, ಈ ತೀರ್ಪನ್ನು ನೀಡಿದೆ. ಪ್ರಕರಣವೊಂದರಲ್ಲಿ ಅರ್ಜಿದಾರರು ತನ್ನ ಪತ್ನಿ ತೀರಿಹೋದ ನಂತರ ಆಸ್ತಿಯನ್ನು ಪತ್ನಿಯ (Wife) ಸಂಬಂಧಿಕರು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಈಗ ಅರ್ಜಿದಾರರ ಹಲವು ದಿನಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದ್ದು, ನ್ಯಾಯಾಲಯ ಅರ್ಜಿದಾರರ ಮೇಲ್ಮನವಿಯನ್ನು ಅಂಗೀಕರಿಸಿ ಅವರ ಪರ ತೀರ್ಪು ಹೊರಡಿಸಿದೆ.
ಪ್ರಕರಣ ಏನಾಗಿತ್ತು? ಅರ್ಜಿದಾರರ ವಾದ ಏನಿತ್ತು?
ಅರ್ಜಿದಾರ ಬಸನಗೌಡ ಆಸ್ತಿ ವರ್ಗಾವಣೆಯಲ್ಲಿ ಪತ್ನಿ ಈರಮ್ಮ ಕಡೆ ಕುಟುಂಬದವರು ವಂಚಿಸಿದ್ದಾರೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 1998ರಲ್ಲಿ ಮಕ್ಕಳಿಲ್ಲದೆ ಪತ್ನಿ ತೀರಿಹೋದ ನಂತರ 22 ಎಕರೆ ಕೃಷಿ ಭೂಮಿಯನ್ನು ಒಳಗೊಂಡ ಆಸ್ತಿಯನ್ನು ಪತಿ ಬಸನಗೌಡರಿಗೆ ನೀಡದೇ ಈರಮ್ಮ ಸಂಬಂಧಿಕರು ಆಸ್ತಿಯನ್ನು ಆಕ್ರಮಿಸಿಕೊಂಡಿದ್ದರು ಮತ್ತು ಸ್ವಾಧೀನಕ್ಕೆ ಅಡ್ಡಿಪಡಿಸಿದ್ದರು.
ಈ ವಿಚಾರವಾಗಿ ಪತ್ನಿಯ ಆಸ್ತಿ ತನಗೆ ಸೇರಬೇಕು ಎಂದು ಅರ್ಜಿದಾರ ಬಸನಗೌಡ ಪ್ರತಿಪಾದಿಸಿದ್ದರು. ಪತ್ನಿಯ ಆಸ್ತಿ ಅವಳು ಮತ್ತು ಸಹೋದರರ ನಡುವೆ ಹಂಚಿಕೆಯಾದ ನಂತರ 22 ಎಕರೆ ಕೃಷಿ ಭೂಮಿಯನ್ನು ಮಡದಿಗೆ ನೀಡಲಾಗಿತ್ತು. ಆದರೆ ಈಗ ಆಕೆ ಮರಣ ಹೊಂದಿದ ನಂತರ ಮತ್ತೆ ಸಹೋದರರೇ ಅದನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂದು ಬಸನಗೌಡ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Lokayukta In Bengaluru: ಅಧಿಕಾರಿಗಳು ಲಂಚ ಕೇಳ್ತಿದ್ದಾರಾ? ದೂರು ನೀಡಲು ಸುವರ್ಣಾವಕಾಶ
ಈ ಹಿಂದೆ ಕೆಳಹಂತದ ಸಿವಿಲ್ ನ್ಯಾಯಾಲಯಗಳಲ್ಲಿ ಈ ವಿಷಯದ ಕುರಿತು ವಾದ ವಿವಾದ ನಡೆದಿತ್ತು. ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 (2)a ಪ್ರಕಾರ ಮಹಿಳೆಯ ಒಡಹುಟ್ಟಿದವರು ಆಸ್ತಿಯನ್ನು ಪಡೆದುಕೊಳ್ಳುತ್ತಾರೆಯೇ ಹೊರತು ಆಕೆಯ ಪತಿಯಲ್ಲ ಎಂಬ ತೀರ್ಮಾನವನ್ನು ಕೆಳಹಂತದ ನ್ಯಾಯಾಲಯ ನೀಡಿತ್ತು.
ಮಾನ್ವಿಯ ಸ್ಥಳೀಯ ನ್ಯಾಯಾಲಯವು ಮತ್ತು 2008ರಲ್ಲಿ ರಾಯಚೂರಿನ ಸಿವಿಲ್ ನ್ಯಾಯಾಲಯವು ಅವರ ಮನವಿಯನ್ನು ತಿರಸ್ಕರಿಸಿ, ವಿಭಜನೆ ಮಾಡಿದ ಆಸ್ತಿಯನ್ನು ಈರಮ್ಮ ಅವರಿಗೆ ಮಂಜೂರು ಮಾಡಿದ್ದರೂ ಅದು ಪಿತ್ರಾರ್ಜಿತವಾಗಿದೆ ಎಂಬ ತೀರ್ಮಾನಕ್ಕೆ ಎರಡೂ ನ್ಯಾಯಾಲಯಗಳು ಬಂದಿದ್ದವು. ಹೀಗಾಗಿ ಇಲ್ಲಿಂದ ಉನ್ನತ ಮಟ್ಟಕ್ಕೆ ಬಸನಗೌಡ ಅರ್ಜಿ ಹಾಕಿದ್ದರು. ನಂತರ ಈ ಕೇಸ್ ರಾಜ್ಯ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ.
ಹೈಕೋರ್ಟ್ ತೀರ್ಪು
ಸೆಕ್ಷನ್ 15 (2) ಬಿ ಪ್ರಕಾರ, ಗಂಡನ ಕಡೆಯಿಂದ ಪಡೆದ ಆಸ್ತಿಯು ಪತಿ ಅಥವಾ ಅವರ ವಾರಸುದಾರರಿಂದ ಆನುವಂಶಿಕವಾಗಿ ಬರುತ್ತದೆ. ಪ್ರಕರಣದಲ್ಲಿ ಕೆಳಹಂತದ ಸಿವಿಲ್ ನ್ಯಾಯಾಲಯಗಳ ತೀರ್ಪನ್ನು ತಳ್ಳಿ ಹಾಕಿದ ರಾಜ್ಯ ಹೈಕೋರ್ಟ್ ಪೀಠವು ವ್ಯತಿರಿಕ್ತ ಅಭಿಪ್ರಾಯವನ್ನು ಹೊರಡಿಸಿದೆ.
ವಿಭಜನಾ ಪತ್ರ ಮತ್ತು ವಿಭಜನೆಯ ನಂತರ ಆಸ್ತಿಯು ಹೆಂಡತಿಯ ಸಂಪೂರ್ಣ ಮಾಲೀಕತ್ವಕ್ಕೆ ಹೋಗುತ್ತದೆ ಎಂಬ ಅಂಶವನ್ನು ಆಧರಿಸಿ ಅದನ್ನು ಪಿತ್ರಾರ್ಜಿತವಾಗಿ ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
ಹೀಗಾಗಿ ಈ ಪ್ರಕರಣದಲ್ಲಿ ಅರ್ಜಿದಾರ ಎಂದರೆ ಬಸನಗೌಡ ಮೃತ ಮಡದಿಯ ಆಸ್ತಿಗೆ ಸಂಪೂರ್ಣ ಉತ್ತರಾಧಿಕಾರಿಯಾಗುತ್ತಾರೆ ಎಂದು ಕೋರ್ಟ್ ಘೋಷಿಸಿದೆ. ಕೂಡಲೇ ಮಹಿಳೆಯ ಕುಟುಂಬದ ಸದಸ್ಯರು ಅವರ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡದೇ, ಆಕೆಯ ಪತಿಗೆ ಆಸ್ತಿಯನ್ನು ವರ್ಗಾಯಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ