HOME » NEWS » State » FAKE STAMP PAPER SCAM BUSTED IN BENGALURU GVTV SNVS

ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆ; ಛೋಟಾ ತೆಲಗಿ ಸೇರಿ ನಾಲ್ವರ ಬಂಧನ

ಬೆಂಗಳೂರಿನಲ್ಲಿ ಸುಳ್ಳು ದಾಖಲಾತಿಗಳ ಸೃಷ್ಟಿಗೆ ಬೇಕಾದ ನಕಲಿ ಛಾಪಾ ಕಾಗದ, ಸೀಲ್, ಸ್ಟಾಂಪ್​ಗಳನ್ನ ತಯಾರಿಸುತ್ತಿದ್ದ ಆರೋಪದ ಮೇಲೆ ಛೋಟಾ ತೆಲಗಿ, ಹರೀಶ್, ಸೀಮಾ ಮತ್ತು ಫಾತಿಮಾ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

news18-kannada
Updated:October 10, 2020, 3:26 PM IST
ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆ; ಛೋಟಾ ತೆಲಗಿ ಸೇರಿ ನಾಲ್ವರ ಬಂಧನ
ಛಾಪಾ ಕಾಗದ ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಅ. 10): ಸುಳ್ಳು ದಾಖಲಾತಿಗಳನ್ನ ಸೃಷ್ಟಿಸಲು ಬಳಸುವ ನಕಲಿ ಛಾಪಾ ಕಾಗದದ ದೊಡ್ಡ ದಂಧೆಯ ಜಾಲವನ್ನು ನಗರದ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಛೋಟಾ ತೆಲಗಿ ಎಂಬಾತ ಹಾಗೂ ಆತನ ಗ್ಯಾಂಗನ್ನು ಎಸ್​ಜೆ ಪಾರ್ಕ್ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ಧಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಛೋಟಾ ತೆಲಗಿ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಹಸೈನ್ ಮೋದಿ ಬಾಬು ಅಲಿಯಾಸ್ ಛೋಟಾ ತೆಲಗಿ, ಹರೀಶ್, ಶವರ್ ಅಲಿಯಾಸ್ ಸೀಮಾ ಹಾಗೂ ನಜ್ಮಾ ಫಾತಿಮಾ ಬಂಧಿತ ಆರೋಪಿಗಳಾಗಿದ್ಧಾರೆ.

ಛೋಟಾ ತೆಲಗಿ ಪ್ರಮುಖ ಆರೋಪಿಯಾದರೆ, ಹರೀಶ್ ಎ2 ಆರೋಪಿ ಆಗಿದ್ದಾರೆ. ಸಿಟಿ ಸಿವಿಲ್ ಕೋರ್ಟ್​ನಲ್ಲಿ ಹರೀಶ್ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಾನೆ. ಇತರ ಇಬ್ಬರು ಆರೋಪಿಗಳಾದ ಸೀಮಾ ಮತ್ತು ನಜ್ಮಾ ಕಂದಾಯ ಭವನದಲ್ಲಿ ಟೈಪಿಸ್ಟ್ ಆಗಿದ್ಧಾರೆ. ಈ ನಾಲ್ವರಿಂದ 2.71 ಕೋಟಿ ಮೌಲ್ಯದ ಒಟ್ಟು 443 ನಕಲಿ ಛಾಪಾ ಕಾಗದಗಳನ್ನ ಪೊಲೀಸರು ಜಫ್ತಿ ಮಾಡಿಕೊಂಡಿದ್ಧಾರೆ.

ಇದನ್ನೂ ಓದಿ: ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ; ವಿಪಕ್ಷ, ಪೋಷಕರ ವಿರೋಧದ ಬಳಿಕ ಎಚ್ಚೆತ್ತ ಸರ್ಕಾರ

ಪ್ರಮುಖ ಆರೋಪಿ ಹುಸೈನ್ ಅಲಿಯಾಸ್ ಛೋಟಾ ತೆಲಗಿ ಹಾಗೂ ಹರೀಶ್ ಇಬ್ಬರೂ ಬಹಳ ಹಿಂದಿನಿಂದಲೂ ನಕಲಿ ಛಾಪಾ ಕಾಗದ ದಂಧೆ ನಡೆಸುತ್ತಾ ಬಂದಿರುವುದು ತಿಳಿದುಬಂದಿದೆ. ಈ ಹಿಂದೆ ಪೊಲೀಸರು ಇವರಿಬ್ಬರನ್ನ ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕವೂ ಇವರು ಅದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಿವಿಲ್ ಕೋರ್ಟ್ ಮತ್ತು ಕಂದಾಯ ಭವನಕ್ಕೆ ಬರುವ ವ್ಯಕ್ತಿಗಳನ್ನ ಇವರು ಟಾರ್ಗೆಟ್ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ಸುಳ್ಳು ದಾಖಲಾತಿಗಳನ್ನ ಸೃಷ್ಟಿಸಲು ಇವರು ನಕಲಿ ಛಾಪಾ ಕಾಗದ ಬಳಕೆ ಮಾಡುತ್ತಿದ್ದರು. ಜಿಪಿಎ, ವಿಲ್, ಕರಾರು ಪತ್ರಗಳನ್ನ ಇವರು ಸುಳ್ಳು ಸೃಷ್ಟಿ ಮಾಡುತ್ತಿದ್ದರು. ಹತ್ತು ರೂಪಾಯಿಯಿಂದ 25 ಸಾವಿರ ರೂಪಾಯಿ ಮುಖ ಬೆಲೆಯ ನಕಲಿ ಸ್ಟ್ಯಾಂಪ್ ಪೇಪರ್ ಅನ್ನು ಇವರು ತಯಾರಿಸುತ್ತಿದ್ದರು. ಎಸ್​ಪಿ ರೋಡ್​ನಲ್ಲಿ ಇವರು ನಕಲಿ ಸ್ಟಾಂಪ್ ಪೇಪರ್ ಮುದ್ರಿಸುತ್ತಿದ್ದುದು ತಿಳಿದುಬಂದಿದೆ. ಹಾಗೆಯೇ, ಸೀಲ್, ಸ್ಟಾಂಪ್​ಗಳನ್ನೂ ನಕಲಿ ಮಾಡುತ್ತಿದ್ದರು. 2002ರಲ್ಲಿ ಸರ್ಕಾರ ನಿಷೇಧಿಸದ್ದ ಛಾಪಾ ಕಾಗದ ಅಷ್ಟೇ ಅಲ್ಲ, ಮೈಸೂರು ಮಹಾರಾಜರ ಕಾಲದ ಛಾಪಾ ಕಾಗದಗಳನ್ನೂ ಇವರು ನಕಲಿ ಮಾಡುತ್ತಿದ್ದರು. ಹಳೆಯ ದಾಖಲೆಗಳನ್ನ ನೋಡಿಕೊಂಡು ಅದರ ಮೇಲೆ ಇದ್ದ ಸೀಲ್​ನಂತೆಯೇ ನಕಲಿ ಸೀಲ್ ತಯಾರಿಸುತ್ತಿದ್ದರು.

ಇದನ್ನೂ ಓದಿ: ಲಿಂಗ ಪರಿವರ್ತನೆಗಾಗಿ ಬೆಲೆಬಾಳುವ ಸೀರೆ ಕದ್ದು ಗೂರ್ಖನ ಕೈಗೆ ಸಿಕ್ಕಿಬಿದ್ದ ತೃತೀಯ ಲಿಂಗಿ

ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರಾ ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಸಿಕ್ಕಿಬಿದ್ದಿರುವ ಆರೋಪಿಗಳ ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಹೊರಬರುವ ನಿರೀಕ್ಷೆ ಇದೆ.ವರದಿ: ಗಂಗಾಧರ ವಾಗಟ
Published by: Vijayasarthy SN
First published: October 10, 2020, 3:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories