Kodagu: ಶಾಸಕರಿಗೆ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ರೌಡಿಶೀಟರ್ ಅಂದರ್!
ನೀವು ಒಂದು ಕೋಟಿ ರೂಪಾಯಿ ಕೊಡಿ ಎಸಿಬಿ ರೈಡ್ ಮಾಡುವುದಿಲ್ಲ ಎಂದಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಕೆ. ಜಿ ಬೋಪಯ್ಯ ನಾನು ಹಣ ಕೊಡೋದಿಲ್ಲ ನೀವು ಬೇಕಾದರೆ ರೈಡ್ ಮಾಡಿ ಅಂತ ಹೇಳಿ ಫೋನ್ ಇಟ್ಟಿದ್ದರು
ಕೊಡಗು : ಯಾರನ್ನೋ ಕಿಡ್ನಾಪ್ (Kidnap) ಮಾಡಿ ಆ ನಂತರ ಅವರ ಸಂಬಂಧಿಕರಿಗೆ ಕರೆ ಮಾಡಿ ಒಂದಷ್ಟು ಹಣಕ್ಕಾಗಿ ಬೇಡಿಕೆ (Money Demand) ಇಡುವ ಪ್ರಕರಣಗಳನ್ನು ನೀವು ನೋಡಿರುತ್ತೀರಿ. ಇನ್ನು ಯಾವುದೋ ವಿಷಯಗಳನ್ನು ಇಟ್ಟುಕೊಂಡು ಅದೇ ಕಾರಣಕ್ಕೆ ಅವರಿಂದ ಹಣಕ್ಕಾಗಿ ಬೇಡಿಕೆ ಇಡೋದನ್ನು ನೀವು ಕೇಳಿರುತ್ತೀರಿ, ನೋಡಿರ್ತೀರಿ. ಆದರೆ ಇಲ್ಲೊಬ್ಬ ಭೂಪ ನಾವು ಎಸಿಬಿ ಅಧಿಕಾರಿಗಳು (ACB Officers) ಅಂತ ಅವರ ಹೆಸರು ಹೇಳಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅದು ಕೂಡ ಒಂದು ಕ್ಷೇತ್ರದ ಶಾಸಕರಿಗೆ (MLA) ಅನ್ನೋದು ಅಚ್ಚರಿ ವಿಷಯ. ಹಾಗಾದರೆ ಆ ಕಿರಾತಕ ಎಸಿಬಿ ಅಧಿಕಾರಿಗಳು ಅಂತ ಬೆದರಿಕೆ ಹಾಕಿದ್ದಾದರೂ ಯಾವ ಶಾಸಕರಿಗ?. ಬೆದರಿಕೆ ಹಾಕಿದ್ದಾದರೂ ಏನಂತ ಎನ್ನೋದು ಅಚ್ಚರಿಯ ವಿಷಯ.
ಹೌದು ಕೊಡಗು ಜಿಲ್ಲೆ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ (MLA K G Bopaiah) ಅವರಿಗೆ ಕರೆ ಮಾಡಿದ್ದ ಅಪರಿಚಿತನೊಬ್ಬ ನಾವು ಎಸಿಬಿ ಅಧಿಕಾರಿಗಳು ನಿಮ್ಮ ಮನೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಹೊಂದಿದ್ದೀರಿ. ಆದ್ದರಿಂದ ನಿಮ್ಮ ಮನೆಯ ಮೇಲೆ ಎಸಿಬಿ ರೈಡ್ ಆಗುತ್ತೆ ಎಂದು ಕರೆ ಮಾಡಿ ಹೇಳಿ ಫೋನ್ ಕರೆ ಕಟ್ ಮಾಡಿದ್ದ. ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕಾಲ್ ಮಾಡಿದ್ದ ಅನಾಮಿಕ ಈ ಎಸಿಬಿ ದಾಳಿ ತಪ್ಪಬೇಕಾದರೆ, ನಾವು ಒಂದು ಡೀಲ್ ಮಾಡಿಕೊಳ್ಳೋಣ ಎಂದಿದ್ದ.
ಅದೇನ್ ಅಂದ್ರೆ ನೀವು ಒಂದು ಕೋಟಿ ರೂಪಾಯಿ ಕೊಡಿ ಎಸಿಬಿ ರೈಡ್ ಮಾಡುವುದಿಲ್ಲ ಎಂದಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಕೆ. ಜಿ ಬೋಪಯ್ಯ ನಾನು ಹಣ ಕೊಡೋದಿಲ್ಲ ನೀವು ಬೇಕಾದರೆ ರೈಡ್ ಮಾಡಿ ಅಂತ ಹೇಳಿ ಫೋನ್ ಇಟ್ಟಿದ್ದರು. ಬಳಿಕ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಆಂಧ್ರ ಪ್ರದೇಶದಿಂದ ಬಂದಿತ್ತು ಕೆರೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಮೊದಲು ಕರೆ ಬಂದಿದ್ದು ಎಲ್ಲಿಂದ ಎಂದು ಟವರ್ ಲೊಕೇಷನ್ ಚೆಕ್ ಮಾಡಿದ್ದರು. ಆ ಫೋನ್ ಕರೆಗಳು ಆಂಧ್ರದಿಂದ ಬಂದಿದ್ದು ಎನ್ನೋದು ಗೊತ್ತಾಗಿತ್ತು. ಮೊದಲ ಕರೆ ಬಂದಿದ್ದ ನಂಬರ್ ಝಹೀಬ್ ಖಾನ್ ಹೆಸರಿನಲ್ಲಿದ್ದರೆ, ಎರಡನೇ ಬಾರಿಗೆ ಬಂದ ಕರೆಯ ನಂಬರ್ ಅಂದಾನಮ್ಮ ಎಂಬುವವರ ಹೆಸರಿನಲ್ಲಿತ್ತು.
ತನಿಖೆ ಮುಂದುವರಿಸಿದ ಪೊಲೀಸರಿಗೆ ಆ ಖದೀಮ ತುಮಕೂರು ಜಿಲ್ಲೆಯ ಕೊರಟಗೆರೆಯ ರೌಡಿಶೀಟರ್ ಆನಂದ್ ಎನ್ನೋದು ಗೊತ್ತಾಗಿತ್ತು. ಆ ಖತರ್ನಾಕ್ ಆಂಧ್ರಕ್ಕೆ ತೆರಳಿ ಅಲ್ಲಿಂದ ಕರೆ ಮಾಡಿ ಬಳಿಕ ಕರ್ನಾಟಕಕ್ಕೆ ವಾಪಸ್ ಬರುತ್ತಿದ್ದ. ಇದೆಲ್ಲವನ್ನೂ ಮೊಬೈಲ್ ಲೊಕೇಷನ್ ಆಧರಿಸಿಯೇ ಕೊಡಗಿನ ಪೊಲೀಸರು ಕಿರಾತಕನಿಗಾಗಿ ಬೆಂಗಳೂರಿನಲ್ಲಿ ಬಲೆ ಬೀಸಿದ್ದರು.
ಬೆಂಗಳೂರಿಗೆ ಬಂದು ರೈಲು ಇಳಿಯುತ್ತಿದ್ದಂತೆ ಆ ರೌಡಿಶೀಟರ್ ನ್ನನ್ನು ಖೆಡ್ಡಾಕ್ಕೆ ಕೆಡವಿದ್ದರು. ಈ ಆರೋಪಿ ಕೊಡಗಿನ ಐವರೊಂದಿಗೆ ಸೇರಿ ಶಾಸಕ ಬೋಪಯ್ಯ ಅವರಿಗೆ ಬೆದರಿಕೆ ಹಾಕಿ ಅವರಿಂದ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎನ್ನೋದು ಗೊತ್ತಾಗಿದೆ.
ಇನ್ನುಳಿದ ಐವರು ಯಾರು?
ಸದ್ಯ ಆತನ್ನನ್ನು ಬಂಧಿಸಿದ ಪೊಲೀಸರು ಮಡಿಕೇರಿಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಇವನ ಕೃತ್ಯಕ್ಕೆ ಸಹಕರಿಸಿದ ಕೊಡಗಿನ ಐವರು ಯಾರು ಅನ್ನೋದು ಗೊತ್ತಾಗಬೇಕಾಗಿದೆ.
ಒಟ್ಟಿನಲ್ಲಿ ಹಣಕ್ಕಾಗಿ ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಶಾಸಕರಿಗೆ ಕರೆ ಮಾಡಿ ಬೆದರಿಕೆಯೊಡ್ಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ