ರೈತರು ಹಾಗೂ ಮಾಲೀಕರ ಜೊತೆ ಸಿಎಂ ಸಭೆ ವಿಫಲ; ಇನ್ನೂ ಕಗ್ಗಂಟಾಗಿಯೇ ಉಳಿದ ಸಮಸ್ಯೆ..!

 ಸಕ್ಕರೆ ಕಾರ್ಖಾನೆ ಮಾಲೀಕರು ಒಂದೇ ಹಂತದಲ್ಲಿ ಬಾಕಿ ತೀರಿಸಲು ಆಗಲ್ಲ. ರೈತರು ಬೇಡಿಕೆ ಇಟ್ಟಿರುವಷ್ಟು ಹಣವನ್ನೂ ಕೊಡಲು ಸಾಧ್ಯವಿಲ್ಲ ಎಂದರು. ಹಂತಹಂತವಾಗಿ ಬಾಕಿ ತೀರಿಸುವ ಭರವಸೆ ನೀಡಿದರು.

Latha CG | news18
Updated:November 20, 2018, 6:07 PM IST
ರೈತರು ಹಾಗೂ ಮಾಲೀಕರ ಜೊತೆ ಸಿಎಂ ಸಭೆ ವಿಫಲ; ಇನ್ನೂ ಕಗ್ಗಂಟಾಗಿಯೇ ಉಳಿದ ಸಮಸ್ಯೆ..!
ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಚರ್ಚೆ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ, ಸಚಿವ ಡಿಕೆಶಿ, ಸಚಿವ ಕೆ.ಜೆ. ಜಾರ್ಜ್​​
  • News18
  • Last Updated: November 20, 2018, 6:07 PM IST
  • Share this:
ಬೆಂಗಳೂರು (ನ.20): ಕಬ್ಬಿನ ಬಾಕಿ ಸಂದಾಯ ವಿಚಾರದಲ್ಲಿ ರೈತರು, ಮಾಲೀಕರ ನಡುವೆ ಸಂಧಾನ ಏರ್ಪಡಿಸಲು ಇಂದು ಸಿಎಂ ಸಭೆ ನಡೆಸಿದರು. ಸಿಎಂ ಕುಮಾರಸ್ವಾಮಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಿದರು. ರೈತ ಮುಖಂಡರು ತಮ್ಮ ಸಮಸ್ಯೆಗಳನ್ನು ಸಿಎಂ ಮುಂದೆ ಬಿಚ್ಚಿಟ್ಟರು. ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗದೆ ರೈತರು ಪಡುತ್ತಿರುವ ಸಮಸ್ಯೆ ಹಾಗೂ ಸಕ್ಕರೆ ಮಾಲೀಕರಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು. ಆದರೆ ಮಾಲೀಕರು ಒಂದೇ ಹಂತದಲ್ಲಿ ರೈತರ ಬಾಕಿ ತೀರಿಸಲು ಸಾಧ್ಯವಿಲ್ಲ ಎಂದರು. ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಕಾದಿದ್ದ ರೈತರಿಗೆ ನಿರಾಸೆಯ ತಣ್ಣೀರೆರಚಿದಂತಾಯಿತು.

ಅಳಲು ತೋಡಿಕೊಂಡ ರೈತರು:
ಬೆಳೆದ ಕಬ್ಬಿಗೆ ಸರಿಯಾಗಿ ಬೆಲೆ ಸಿಗ್ತಿಲ್ಲ. ಮಾಲೀಕರು ಮನ ಬಂದಂತೆ ದರ ವಿಧಿಸ್ತಾರೆ. ಅನಿವಾರ್ಯವಾಗಿ ನಾವು ಕಬ್ಬನ್ನು ಅವರಿಗೆ ಕೊಡಬೇಕು. ನಂತರ ಅವರು ಕಬ್ಬು ತೆಗೆದುಕೊಂಡು ಕಾರ್ಖಾನೆಗಳಿಗೆ ಹೋಗ್ತಾರೆ. ಆದರೆ ಕಾರ್ಖಾನೆಗಳ ಮಾಲೀಕರು ಸರಿಯಾದ ಹಣ ಕೊಡುವುದಿಲ್ಲ. ಒಂದೊಂದು ಕಾರ್ಖಾನೆ ಮಾಲೀಕರು ಕೋಟ್ಯಾಂತರ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದ್ದಾರೆ‌. ಇದರಿಂದ ನಮಗೆ ಬಹಳ ತೊಂದರೆ ಆಗುತ್ತಿದೆ. ನಾವು ಕಬ್ಬಿನ ಬೆಳೆಯನ್ನೇ ನಂಬಿಕೊಂಡಿದ್ದೇವೆ‌. ಈಗಿರುವ ನಮಗೆ ಸರಿಯಾಗಿ ಬೆಲೆ ಸಿಗದೆ ಇದ್ದಾಗ ನಾವು ಏನು ಮಾಡಬೇಕು..? ಮುಖ್ಯಮಂತ್ರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.

ಮಾಲೀಕರ ದೌರ್ಜನ್ಯ:

ಈಗಾಗಲೇ ಹಲವು ಕಾರ್ಖಾನೆಗಳಿಂದ ಕೋಟ್ಯಾಂತರ ರೂಪಾಯಿ ಹಣ ಬಾಕಿ ಕೊಡಬೇಕು. ಅದನ್ನು ಕೇಳಿದರೆ ಮಾಲೀಕರು ನಮ್ಮನ್ನೆ ಬೆದರಿಸ್ತಾರೆ. ಇದರಿಂದ ‌ನಮಗೆ ಬಹಳ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಸಚಿವರ ಗಮನಕ್ಕೂ ತಂದರೂ ಅದು ಪ್ರಯೋಜನವಾಗುತ್ತಿಲ್ಲ. ಈ ಸಕ್ಕರೆ ಕಾರ್ಖಾನೆಗಳಲ್ಲಿರುವ ರಾಜಕಾರಣಿಗಳೇ ಮಾಲೀಕರಾಗಿದ್ದಾರೆ.ಸರ್ಕಾರದಲ್ಲಿರುವ ಸಚಿವರುಗಳೇ ಮಾಲೀಕರು ಆಗಿದ್ದಾರೆ. ಹೀಗಿರುವಾಗ ‌ನಾವು ಯಾರನ್ನು ಕೇಳಬೇಕು ಎಂದು ಕಬ್ಬು ಬೆಳೆಗಾರರು ಸಿಎಂ ಬಳಿ ಎಳೆ ಎಳೆಯಾಗಿ ತಮ್ಮ ಸಮಸ್ಯೆಗಳ ಕುರಿತು ಹೇಳಿದರು.

ಎಫ್ ಆರ್​ ಪಿ ದರ ಹೆಚ್ಚಳಕ್ಕೆ ಮನವಿ:

ಎಫ್ ಆರ್ ಪಿ ದರ ಅಂದರೆ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಎಫ್ ಆರ್ ಪಿ ಮೇಲೆ ಹೆಚ್ಚಿನ ದರ ನೀಡುವುದಾಗಿ ಸಕ್ಕರೆ ಕಾರ್ಖಾನೆಗಳು ತಿಳಿಸುತ್ತಿವೆ. ಆದರೆ ಎಫ್ ಆರ್ ಪಿ- ಮೇಲೆ ಹೆಚ್ಚಿನ ದರ ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ. ಮೊದಲು ಹೆಚ್ಚಿನ ದರ ನೀಡುವುದಾಗಿ ಕಬ್ಬು ಅರೆಯುತ್ತಾರೆ. ಆದರೆ ಆ ನಂತರ ಆಮೇಲೆ ಎಫ್ ಆರ್ ಪಿ ದರವನ್ನೂ ಕೂಡ ಸರಿಯಾಗಿ ನೀಡುತ್ತಿಲ್ಲ ಎಂದು ರೈತರ ವಾದ. ಎಫ್ ಆರ್ ಪಿ ದರ ಕಬ್ಬು ಬೆಳೆಗಾರರಿಗೆ ನೀಡಿದ ಮೇಲೆ ಮುಗಿಯಿತು ಅನ್ನೋದು ಸಕ್ಕರೆ ಕಾರ್ಖಾನೆ ಮಾಲೀಕರ ವಾದ‌. ಎಫ್ ಆರ್ ಪಿಯನ್ನು ಕೂಡ ಹಲವು ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ ಅಂತ ರೈತರು ಆರೋಪಿಸಿದರು.ಎಫ್ ಆರ್ ಪಿ ದರದ ಪ್ರಕಾರ ಪ್ರತಿ ಟನ್ ಕಬ್ಬಿಗೆ 2750 ರೂ. ಕೊಡಬೇಕು. ಬೆಂಬಲ ಬೆಲೆ 200 ರೂ. ಸೇರಿ 2950 ರೂ. ನೀಡಬೇಕು. ಎಫ್.ಆರ್ ಪಿ ಗಿಂತ ಕಡಿಮೆ ಹಣ ನೀಡಿರುವ ಕಾರ್ಖಾನೆಗಳು ತಕ್ಷಣ ಬಾಕಿ ಹಣ ಪಾವತಿಸಬೇಕು. ಪಾವತಿಸದಿದ್ದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಎಫ್ ಆರ್.ಪಿ ಮೇಲೆ ಹೆಚ್ಚಿನ ದರ ಕೊಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಪಟ್ಟು ಹಿಡಿದರು. ಯಾಕೆ ಸಾಧ್ಯವಿಲ್ಲ ಎಂದು ರೈತರ ತರಾಟೆಗೆ ತೆಗೆದುಕೊಂಡರು.

ರೈತರಿಗೆ ಸಿಎಂ ಅಭಯ:

ಸರ್ಕಾರದ ಅಂಕಿ-ಅಂಶದ 36 ಕೋಟಿ ಬಾಕಿ ನಾನು ಕೊಡಿಸುತ್ತೇನೆ. ತಕ್ಷಣ ಈ ಬಗ್ಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಉಳಿಕೆ‌ ಮಾಲೀಕರು‌ ನೀಡಬೇಕಾದ ಬಾಕಿ‌ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ನಾನು ಪ್ರಯತ್ನ ಮಾಡ್ತೀನಿ. ನೀವು ಶಾಂತಿಯುತವಾಗಿ ಇರಬೇಕು. ರಸ್ತೆಯಲ್ಲಿ ಸುಮ್ಮನೆ ಪ್ರತಿಭಟನೆ ಮಾಡಬೇಡಿ ಎಂದು ರೈತರಿಗೆ ಸಿಎಂ ಕುಮಾರಸ್ವಾಮಿ‌ ಮನವಿ ಮಾಡಿದರು.

ನಮ್ಮ ಹೊಲಗಳಲ್ಲಿ ಕಬ್ಬಿನ ಶುಗರ್ ಕಂಟೆಂಟ್ ಇಳುವರಿ ಶೇ 15, 16 ರವರೆಗೆ ಬರುತ್ತದೆ. ಆದರೆ ಕಾರ್ಖಾನೆಗೆ ಹೋದ ತಕ್ಷಣ ಶೇ. 9 ರಷ್ಟು ರಿಕವರಿ ತೋರಿಸ್ತಾರೆ. ಇದರಲ್ಲಿ ಮೋಸವಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರಿಕವರಿ ಟೆಸ್ಟ್ ಮಾಡಲು ಆಯೋಗ ರಚಿಸುವ ಬಗ್ಗೆ ಚಿಂತನೆ ಮಾಡೋದಾಗಿ ಸಿಎಂ ಭರವಸೆ ನೀಡಿದರು. ಎಫ್ ಆರ್ ಪಿ ದರದಂತೆ ರೈತರಿಗೆ ಹಣ ನೀಡದಿದ್ದರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತೆಲಂಗಾಣ ಮಾದರಿಯಲ್ಲಿ ದರ ನಿಗದಿ ಮಾಡಬೇಕೆಂದು ರೈತರು ಪಟ್ಟು ಹಿಡಿದರು. ಅದಕ್ಕೆ ಸಿಎಂ ಅದು ಯಾವ ಮಾದರಿ ಎಂದು ತಿಳಿಸಿ ಎಂದರು. ಮಾಹಿತಿ ಪಡೆದು ಆ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.

ರಮೇಶ್​ ಜಾರಕಿಹೊಳಿ ವಿರುದ್ಧ ಕಿಡಿಕಾರಿದ ರೈತರು:

ಸಭೆಯಲ್ಲಿ ರೈತರು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಯ ಸಮಸ್ಯೆ ಬಗ್ಗೆ ನಾವು ಬೆಳಗಾವಿಯಲ್ಲಿ ಹೋರಾಟ ಮಾಡಿದ್ದೇವೆ. ಅಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ಅಲ್ಲಿಗೆ ರಮೇಶ್​ ಜಾರಕಿಹೊಳಿ ಬಂದಿಲ್ಲ. ಸೌಜನ್ಯಕ್ಕಾದರೂ ಅವರು ನಮ್ಮನ್ನು ಭೇಟಿ ಮಾಡಿಲ್ಲ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಲ್ಲಿ ಅವರು ಪ್ರಭಾವಿ ಸಚಿವರಾಗಿದ್ದಾರೆ. ಅವರು ಮನಸ್ಸು ಮಾಡಿದರೆ ನಮ್ಮ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ತೀರ್ಮಾನ ಮಾಡಬಹುದಿತ್ತು. ಆದರೆ ಅವರು ಈ ಕೆಲಸ ಮಾಡಿಲ್ಲ. ತನ್ನ ಜಿಲ್ಲೆಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ತಲೆಕೆಡಿಸಕೊಳ್ಳದ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನದಲ್ಲಿ ಏಕೆ ಇದ್ದಾರೆ..? ಮೊದಲು ಅವರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಕಿಡಿಕಾರಿದರು.

ಸಿಎಂ ವಿರುದ್ಧ ರೈತರ ಆಕ್ರೋಶ:

ಸಿಎಂ ಕುಮಾರಸ್ವಾಮಿ ರೈತರನ್ನು ಗೂಂಡಾಗಳೆಂದು ಕರೆದಿದ್ದ ಹೇಳಿಕೆಗೆ ಸಭೆಯಲ್ಲೇ ರೈತರು ಕೆಂಡಾಮಂಡಲರಾದರು. ಗೂಂಡಾಗಳು, ದರೋಡೆಕೋರು ಅಂತ ಯಾರಿಗೆ ಹೇಳಿದ್ದೀರಿ ನೀವು..? ನಾವು ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದವರು. ನಾವು ಯಾರ ಮನೆ ದರೋಡೆ ಮಾಡಿಲ್ಲ, ಯಾರನ್ನು ಕೊಲೆ ಮಾಡಿಲ್ಲ. ಹೀಗಿದ್ರು ನಾವು ಹೇಗೆ ಗೂಂಡಾಗಳು ಆಗ್ತೀವಿ‌. ನಮ್ಮನ್ನ ಗೂಂಡಾಗಳಿಗೆ ಹೊಲಿಸ್ತೀರಾ? ನಾಲಿಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತಾಡಿ‌.ರೈತ ಮಹಿಳೆ ಬಗ್ಗೆ ನೀವು ಬಳಸಿದ ಪದ ಸರಿಯಲ್ಲ. ನ್ಯಾಯಕ್ಕಾಗಿ ನಾವು ಹೋರಾಟ ಮಾಡ್ತಿದ್ದೇವೆ.ರಾಜಕೀಯಕ್ಕೆ ನಾವು ಹೋರಾಟ ಮಾಡ್ತಿಲ್ಲ. ರೈತ ಸಿಎಂ ರೈತರ ಸಿಎಂ ಅಂತೀರಾ ರೈತರನ್ನೇ ಗೂಂಡಾ ಅಂತೀರಾ? ಎಂದು ರೈತರು ಸಿಎಂ ವಿರುದ್ದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಆಕ್ರೋಶಕ್ಕೆ ಸಮಜಾಯಿಷಿ ನೀಡಿದ ಸಿಎಂ:

ರೈತರ ಆಕ್ರೋಶಕ್ಕೆ ಸಮಜಾಯಿಷಿ ನೀಡಿದ ಸಿಎಂ ಕುಮಾರಸ್ವಾಮಿ, ನಾನು ರೈತರ ವಿರುದ್ದ ಯಾವುದೇ ತಪ್ಪು ಮಾತಾಡಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ರೈತ ಮಹಿಳೆ ಬಗ್ಗೆ ನಾನು ಕೆಟ್ಟದಾಗಿ ಮಾತಾಡಿಲ್ಲ. ನಮ್ಮ ಆಡು ಭಾಷೆಯಲ್ಲಿ ಮಾತಾಡಿದ್ದೇನೆ ಅಷ್ಟೆ. ಯಾರ ಮನಸ್ಸು ನೋವು ಮಾಡೋ ಉದ್ದೇಶ ನನ್ನದಲ್ಲ. ನನ್ನ ಹೇಳಿಕೆ‌ ನಿಜವಾದ ರೈತರಿಗೆ ಅಲ್ಲ. ನಿಮ್ಮ ಹೆಸರಲ್ಲಿ ರಾಜಕೀಯ ಮಾಡ್ತಿರೋರಿಗೆ ಹೇಳಿದ್ದು. ನಮ್ಮದು ರೈತ ಕುಟುಂಬ. ನಮ್ಮ ತಂದೆ ರೈತರಿಗಾಗಿ ಅನೇಕ ಯೋಜನೆ ತಂದಿದ್ದಾರೆ. ನಾನು ರೈತರಿಗಾಗಿ ಸಿಎಂ ಆಗಿದ್ದೇನೆ. 45 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ. ರೈತರ ಮೇಲೆ ಕಾಳಜಿ ಇಲ್ಲದೆ ಇದೆಲ್ಲ ಮಾಡ್ತೀನಾ. ಯಾವುದೋ ಒಂದು ಮಾತಿಗೆ ನನ್ನನ್ನ ರೈತ ವಿರೋಧಿ ಅನ್ನಬೇಡಿ. ನಿಮ್ಮ ಸಮಸ್ಯೆ ಇದ್ದರೆ ನನ್ನ ಬಳಿ ಹೇಳಿ. ಅದು ಬಿಟ್ಟು ಬೀದಿಯಲ್ಲಿ ಹೋರಾಟ ಮಾಡೋದು ಸರಿಯಲ್ಲ. ನಾನು ಸಿಎಂ ಆಗಿರುವುದು ನಿಮಗಾಗಿ. ನಿಮ್ಮ ಯಾವುದೇ ಸಮಸ್ಯೆ ನಾನು ಪರಿಹಾರ ಮಾಡ್ತೀನಿ. ನನ್ನ ಮೇಲೆ ನಂಬಿಕೆ ಇಡಿ ಎಂದು ರೈತರನ್ನು ಸಮಧಾನಪಡಿಸಿದರು.

ರೈತರ ನಡೆಗೆ ಸಿಎಂ ಆಕ್ರೋಶ:

ರಾಜಕೀಯ ಮಾಡೋಕೆ‌ ನಂಗೂ ಗೊತ್ತು. ನನ್ನ ಭಾವಚಿತ್ರಕ್ಕೆ ಕೊಡಲಿಯಲ್ಲಿ ಹೊಡೆಯುತ್ತೀರಾ? ಅದೇ ಅವಕಾಶ ಎಂದು ಮೀಡಿಯಾದಲ್ಲಿ ದೊಡ್ಡದಾಗಿ ತೋರಿಸುತ್ತಾರೆ. ನಾನು ಬಂದ ಮೇಲೆ ನಿಮಗೆ ಸಮಸ್ಯೆ ಬಂದಿದ್ದಾ? ನಾನು ಎಷ್ಟೇ ಮಾಡಿದ್ರು ನನ್ನ ಮೇಲೆ ಯಾಕೆ ಈ ರೀತಿ ಮಾಧ್ಯಮಕ್ಕೆ ಪ್ರತಿಕ್ರಿಯೆ ಮಾಡ್ತೀರಾ.? ಎಂದು ಸಭೆಯಲ್ಲಿ ನೇರವಾಗಿ ರೈತರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಖಾನೆ ಮಾಲೀಕರ ಜೊತೆ ಪ್ರತ್ಯೇಕ ಸಭೆ ವಿಫಲ:

ಸಿಎಂ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಮಾತುಕತೆ ವಿಫಲವಾಯಿತು. ಕಾರ್ಖಾನೆ ಮಾಲೀಕರು 2900 ರೂ.ದರ ನೀಡಲು ಒಪ್ಪಲಿಲ್ಲ. ಇಷ್ಟು ಹಣ ನೀಡಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದರು. ಸಿಎಂ ಮಾಲೀಕರ ಮನವೊಲಿಸುವ ಪ್ರಯತ್ನ ಮಾಡಿದರೂ ಸಹ ವಿಫಲವಾಯಿತು. ನಂತರ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾದ ಸಿಎಂ,ಕಾರ್ಖಾನೆ ಮಾಲೀಕರ ಜೊತೆಗೆ ಪ್ರತ್ಯೇಕ ಮಾತುಕತೆಗೆ ಸಚಿವ ಡಿಕೆಶಿ ಕೊಠಡಿಗೆ ತೆರಳಿದರು.

ಸಚಿವ ಕೆ.ಜೆ.ಜಾರ್ಜ್​ ಹಾಗೂ ಸಿಎಂ ಕುಮಾರಸ್ವಾಮಿ ಕಾರ್ಖಾನೆ ಮಾಲೀಕರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಮಾಲೀಕರ ಜೊತೆ ಸಭೆಯೂ ವಿಫಲವಾಯಿತು. ಸಕ್ಕರೆ ಕಾರ್ಖಾನೆ ಮಾಲೀಕರು ಒಂದೇ ಹಂತದಲ್ಲಿ ಬಾಕಿ ತೀರಿಸಲು ಆಗಲ್ಲ. ರೈತರು ಬೇಡಿಕೆ ಇಟ್ಟಿರುವಷ್ಟು ಹಣವನ್ನೂ ಕೊಡಲು ಸಾಧ್ಯವಿಲ್ಲ ಎಂದರು. ಹಂತಹಂತವಾಗಿ ಬಾಕಿ ತೀರಿಸುವ ಭರವಸೆ ನೀಡಿದರು.

ಇಂಗ್ಲೀಷ್​ನಲ್ಲಿ ಮಾತನಾಡಿದ್ದಕ್ಕೆ ಸಿಎಂ ಗರಂ:

ಕಬ್ಬು ದರ ನಿಗದಿ ಕುರಿತು ವಿಧಾನಸೌಧದಲ್ಲಿ ನಡೆಯುತ್ತಿರುವ ಸಭೆ ವೇಳೆ ಸಕ್ಕರೆ ಮಾಲೀಕರು ಸಿಎಂಗೆ ಇಂಗ್ಲಿಷ್​ನಲ್ಲಿ ವಿವರಿಸಲು ಯತ್ನಿಸಿದ್ದಾರೆ. ಸಂಘದ ಅಧ್ಯಕ್ಷ ರೆಡ್ಡಿಗೆ ಸಿಎಂ ಹೆಚ್​ಡಿಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹೊರರಾಜ್ಯದವರು ನಮ್ಮ ಸಮಸ್ಯೆ ಹೇಳ್ತಾರೆ. ಕನ್ನಡಿಗರೇ ನಮ್ಮ ಸಂಘಟನೆ ಅಧ್ಯಕ್ಷರಾಗಲಿ. ನಮ್ಮ ಸಮಸ್ಯೆ ನಮ್ಮವರಿಗಷ್ಟೇ ಗೊತ್ತಿರುತ್ತೆ ಎಂದು ಸಂಘದ ವಿರುದ್ಧ ಗರಂ ಆದರು. ಸಿಎಂ ಮಾತಿಗೆ ರೈತರು ಸಂತಸದಿಂದ ಚಪ್ಪಾಳೆ ತಟ್ಟಿದರು.

ಸಭೆಯಲ್ಲಿ ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದರು.  ಡಿಸಿಎಂ ಪರಮೇಶ್ವರ್, ಸಚಿವರಾದ ಜಾರ್ಜ್, ಮನಗುಳಿ, ಬಿಜೆಪಿ ಶಾಸಕ ರಾಜೀವ್‌, ಸಂಸದ ಪ್ರಕಾಶ್ ಹುಕ್ಕೇರಿ, ಸಚಿವ ಎಚ್ ಡಿ ರೇವಣ್ಣ, ಶಾಸಕ ಶ್ರೀಮಂತ ಪಾಟೀಲ್ , ಶಾಸಕ ಮಹೇಶ್ ಕುಮಟಳ್ಳಿ ಭಾಗಿಯಾಗಿದ್ದರು.

ಸಿಎಂ ಸಭೆಗೆ ಗೈರಾದ ಪ್ರಮುಖ ಸಕ್ಕರೆ ಕಾರ್ಖಾನೆ ಮಾಲೀಕರು:

ಕಾಂಗ್ರೆಸ್ ನ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಸಿಎಂ ಸಭೆಗೆ ಗೈರಾಗಿದ್ದರು. ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ್, ಆನಂದ ನ್ಯಾಮಗೌಡ, ಎಸ್ ಆರ್ ಪಾಟೀಲ್ ಗೈರಾಗಿದ್ದರು. ಬಿಜೆಪಿಯಲ್ಲಿರುವ ಮುರುಗೇಶ್ ನಿರಾಣಿ, ಉಮೇಶ ಕತ್ತಿ , ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳು ಗೈರಾಗಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ , ಆನಂದ ನ್ಯಾಮಗೌಡ, ಪ್ರಭಾಕರ್ ಕೋರೆ ಗೈರಾಗಿದ್ದರು.

 

First published:November 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading