ಆನೇಕಲ್(ಆ.17): ಅಲ್ಲಿಗೆ ಕೈಗಾರಿಕೆಗಳು ಬರುವ ಮುನ್ನ ಆ ಕೆರೆ ಜನರ ಜೀವನಾಡಿಯಾಗಿತ್ತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನ ಜಾನುವಾರುಗಳಿಗೆ ನೀರಿನ ಮೂಲವಾಗಿತ್ತು. ಆದ್ರೆ ಇಂದು ಕೈಗಾರಿಕೆಗಳ ತ್ಯಾಜ್ಯದ ತವರೂರು ಆಗಿದೆ. ಸಾಲದಕ್ಕೆ ಒತ್ತುವರಿ ಸಹ ಆಗಿದ್ದು, ಕೆರೆ ಸಂರಕ್ಷಣೆ ಮಾಡುವಂತೆ ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಬಹುತೇಕ ಕೆರೆಗಳು ಇಂದು ಕೈಗಾರಿಕಾ ತ್ಯಾಜ್ಯದ ಡಸ್ಟ್ ಬಿನ್ಗಳಾಗಿವೆ.
ಕೆಮಿಕಲ್ ಕಂಪನಿಗಳ ತ್ಯಾಜ್ಯ ಕೆರೆಗಳನ್ನು ಸೇರಿ ಕಲುಷಿತಗೊಂಡಿವೆ. ಅದರಲ್ಲೂ ಕೊನಸಂದ್ರ ಕೆರೆಗೆ ಹೈಕಲ್, ಕುಮಾರ್ ಆರ್ಗ್ಯಾನಿಕ್ ಸೇರಿದಂತೆ ಸುತ್ತಮುತ್ತಲ ಕೆಮಿಕಲ್ ಕಾರ್ಖಾನೆಗಳು ಶುದ್ಧಿಕರಿಸದೇ ನೇರವಾಗಿ ವಿಷಕಾರಿ ತ್ಯಾಜ್ಯವನ್ನು ಕೆರೆಗೆ ಹರಿಬಿಟ್ಟು ಸಂಪೂರ್ಣ ಕಲುಷಿತಗೊಳಿಸಿವೆ. ಮಾತ್ರವಲ್ಲದೆ ಕೆರೆಯನ್ನು ಒತ್ತುವರಿ ಸಹ ಮಾಡಿಕೊಂಡಿವೆ. ಈ ಬಗ್ಗೆ ಹಲವು ಬಾರಿ ಸ್ಥಳೀಯರು ಪ್ರತಿಭಟನೆ ನಡೆಸಿದರೂ, ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಸುತ್ತಮುತ್ತಲ ಹಳ್ಳಿ ಜನರ ವಿರೋಧ ಹೆಚ್ಚಾಗುತ್ತಿದ್ದಂತೆ ಕೆರೆ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಸ್ಥಳೀಯರಾದ ನಾಗರಾಜ್ ಆರೋಪಿಸಿದ್ದಾರೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ
ಇನ್ನು ಸುಮಾರು 16 ಎಕರೆ ವಿಸ್ತೀರ್ಣವುಳ್ಳ ಕೊನಸಂದ್ರ ಕೆರೆ ಜಾಗದಲ್ಲಿ ಕೇವಲ 12 ಎಕರೆ ಮಾತ್ರ ಅಭಿವೃದ್ಧಿ ಮಾಡಿ ಎಂದು ಹೈಕಲ್ ಕಂಪನಿಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಪರವಾನಗಿ ಪತ್ರ ನೀಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಓ ನಮಗೆ ಕೆರೆ ವಿಸ್ತೀರ್ಣ 16 ಎಕರೆ ಎಂಬುದು ತಿಳಿದಿರಲಿಲ್ಲ. ಹಾಗಾಗಿ 12 ಎಕರೆ ಅಭಿವೃದ್ಧಿ ಮಾಡುವಂತೆ ಪರವಾನಗಿ ನೀಡಿದ್ದೆವು. ಇದೀಗ ಸರ್ವೆ ನಂ 5 ರಲ್ಲಿನ 12 ಎಕರೆ 20 ಗುಂಟೆ ಜೊತೆಗೆ ಸರ್ವೆ ನಂ 25 ರಲ್ಲಿ 3 ಎಕರೆ 24 ಗುಂಟೆ ಸರ್ಕಾರಿ ಕೆರೆ ಜಾಗವಿದ್ದು, ಮೇಲ್ನೋಟಕ್ಕೆ ಹೈಕಲ್ ಕಂಪನಿಯವರು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸಲು ತಹಶೀಲ್ದಾರರಿಗೆ ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಕಲ್ಲುಬಾಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುನಿರಂಗಪ್ಪ ತಿಳಿಸಿದ್ದಾರೆ.
ಅಂದಹಾಗೆ ವಿಷಕಾರುವ ಕೆಮಿಕಲ್ ಕಂಪನಿಗಳಿಂದ ಈಗಾಗಲೇ ಇಡೀ ಪರಿಸರ ಸಂಪೂರ್ಣ ವಿಷವಾಗಿದೆ. ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ಸುತ್ತಮುತ್ತಲ ಹಳ್ಳಿ ಜನ ತುತ್ತಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ಎಲ್ಲಿ ನೋಡಿದರೂ ಕೆಮಿಕಲ್ ಮಿಶ್ರಿತ ನೊರೆಯುಕ್ತ ನೀರು ಸಿಗುತ್ತಿದ್ದು, ಹಣ ಕೊಟ್ಟು ನೀರು ಕುಡಿವಂತಾಗಿದೆ. ಆದ್ರೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಜನರಿಗೆ ಮಾರಕವಾದ ಕೆಮಿಕಲ್ ಕಾರ್ಖಾನೆಗಳ ಜೊತೆ ಶಾಮೀಲಾಗಿ ನೆಪಕ್ಕೆ ಕೆರೆ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಸ್ಥಳೀಯರಾದ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Population Control Bill: ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ ಮಸೂದೆಯಲ್ಲಿ ಏನೇನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಒಟ್ಟಿನಲ್ಲಿ ಕೆರೆಗಳು ಕಲುಷಿತಗೊಳ್ಳುತ್ತಿದ್ದರೂ ರಾಜ್ಯ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಹಾಗಾಗಿ ಬಹುತೇಕ ಕಂಪನಿಗಳು ಮಾಮೂಲಿಯಾಗಿ ಕೆರೆಗೆ ಕಲುಷಿತ ನೀರನ್ನು ಹರಿಬಿಡುತ್ತಿದ್ದು, ಪರಿಸ್ಥಿತಿ ಮೊದಲಿನಂತೆ ಇದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೇವಲ ಭರವಸೆಗಳಿಗೆ ಸೀಮಿತವಾಗದೆ ತಪ್ಪಿತಸ್ಥರ ವಿರುದ್ಧ ಸೂಕ್ತ ವಹಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ