• Home
  • »
  • News
  • »
  • state
  • »
  • Hubballi: ಸ್ಪಾರ್ಕರ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಸ್ಫೋಟ; 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

Hubballi: ಸ್ಪಾರ್ಕರ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಸ್ಫೋಟ; 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಕಾರ್ಖಾನೆಯಲ್ಲಿ ಸ್ಫೋಟ

ಕಾರ್ಖಾನೆಯಲ್ಲಿ ಸ್ಫೋಟ

ಹುಬ್ಬಳ್ಳಿಯ ಹೊರವಲಯದಲ್ಲಿರೋ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಎಂಟು ಜನ ಗಾಯಗೊಂಡಿದ್ದು, ಈ ಪೈಕಿ ಮುವ್ವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಮಾಡಿದ್ದಾರೆ.

  • Share this:

ಹುಬ್ಬಳ್ಳಿ (ಜು.23): ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ (Explosion ) ಸಂಭವಿಸಿದ ಪರಿಣಾಮ 8 ಜನ ಗಾಯಗೊಂಡ ಘಟನೆ ಹುಬ್ಬಳ್ಳಿ ಹೊರಲವಯದ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಡೆದಿದೆ. ಸ್ಪಾರ್ಕರ್ ಕ್ಯಾಂಡಲ್ ತಯಾರಿಕಾ ಕಾರ್ಖಾನೆಯಲ್ಲಿ (Sparker Candle Factory) ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಭಾರಿ ಸ್ಫೋಟಕ್ಕೆ ಕಾರಣವಾಗಿದೆ. ಗಾಯಾಳುಗಳ (Injured) ಪೈಕಿ ಮುವ್ವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


 ಸ್ಫೋಟದಲ್ಲಿ ಕಾರ್ಮಿಕರಿಗೆ ಗಂಭೀರ ಗಾಯ


ಹುಬ್ಬಳ್ಳಿ ಹೊರವಲಯದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಆರಂಭಿಸಿರೋ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಬರ್ತ್ ಡೇ ಕ್ಯಾಂಡಲ್ ರೂಪದಲ್ಲಿ ಬಳಸುವ ಸ್ಪಾರ್ಕರ್ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಕಾರ್ಖಾನೆಯ ಒಳಗೆ ಕೆಲಸ ಮಾಡ್ತಿದ್ದ ಎಲ್ಲ ಎಂಟು ಜನ ಕಾರ್ಮಿಕರೂ ಗಾಯಗೊಂಡಿದ್ದಾರೆ. ಮುವ್ವರಿಗೆ ಶೇ. 80 ರಷ್ಟು ದೇಹ ಸುಟ್ಟು ಹೋಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಗೌರಮ್ಮ, ವಿಜಯಲಕ್ಷ್ಮಿ ಹಾಗೂ ಮಾಲೇಶ್ ಎಂದು ಗುರುತಿಸಲಾಗಿದೆ.


ಇದನ್ನೂ ಓದಿ: H D Kumaraswamy: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಗೆ ಸಿದ್ಧತೆ; ಯಾವಾಗ ಎಲೆಕ್ಷನ್ ಬಂದ್ರು ನಾವ್ ರೆಡಿ


ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡು ಬೆಂಕಿ


ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ಹೊತ್ತಿಕೊಂಡು ಇಡೀ ಕಾರ್ಖಾನೆ ಆವರಿಸಿದೆ. ಸ್ಪಾರ್ಕರ್ ಗೆ ಸ್ಫೋಟಕ ಮಾದರಿಯ ಪುಡಿ ಬಳಸುವುದರಿಂದಾಗಿ ಅದು ಏಕಾಏಕಿ ಹೊತ್ತಿಕೊಂಡು ಬ್ಲಾಸ್ಟ್ ಗೆ ಕಾರಣವಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಖಾನೆಯಲ್ಲಿ ಸಿಲುಕಿಕೊಂಡ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸೋ ಕಾರ್ಯ ನಡೆಯಿತು. ಬೆಂಕಿ ನಂದಿಸುವ ವೇಳೆಯಲ್ಲಿಯೂ ಕಾರ್ಖಾನೆಯಲ್ಲಿ ಸ್ಫೋಟದ ಸದ್ದು ಕೇಳುತ್ತಲೇ ಇತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.


ಶಾಸಕ ಅರವಿಂದ ಬೆಲ್ಲದ್ ಭೇಟಿ 


ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಆಯುಕ್ತ ಲಾಭೂ ರಾಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಎಸ್.ಪಿ. ಲೋಕೇಶ್, ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಘಟನೆ ನಡೆದ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಡಿಸಿ ಗುರುದತ್ತ ಹೆಗಡೆ, ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಸ್ಪಾರ್ಕರ್ಸ್ ಉತ್ಪಾದನೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಕಾರ್ಖಾನೆಗೆ ಅನುಮತಿ ಪಡೆದಿರುವ ಕುರಿತೂ ಅನುಮಾನಗಳಿವೆ. ಈ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದರು.


ಇದನ್ನೂ ಓದಿ: Karnataka Politics: ಜಮೀರ್ ಅಹ್ಮದ್​ಖಾನ್ ನಮ್ಮ ಪಕ್ಷದ ಬಾಹುಬಲಿ; ಸತೀಶ್ ಜಾರಕಿಹೊಳಿ


ಇದೇ ವೇಳೆ ಮಾತನಾಡಿದ ಎಸ್.ಪಿ. ಲೋಕೇಶ್, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳ ಇಲಾಖೆ ಜಂಟಿಯಾಗಿ ತನಿಖೆ ನಡೆಸಲಿವೆ. ಕಾರ್ಖಾನೆ ಮಾಲೀಕ ಸೇರಿ ನಿರ್ಲಕ್ಷ್ಯ ತೋರಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮತ್ತೊಂದೆಡೆ ಕಿಮ್ಸ್ ಆಸ್ಪತ್ರೆಗೂ ಭೇಟಿ ನೀಡಿದ ಡಿಸಿ, ಎಸ್.ಪಿ ಮತ್ತು ಪೊಲೀಸ್ ಕಮೀಷನರ್, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಕಿಮ್ಸ್ ಗೆ ಆಗಮಿಸಿದ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರದೇ ಇರುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರೋ ಕಾರ್ಖಾನೆ ಮ್ಯಾನೇಜರ್ ಮಂಜುನಾಥ್, ಅನುಮತಿ ಪಡೆದಿದ್ದಾರೋ, ಇಲ್ಲವೊ ಗೊತ್ತಿಲ್ಲ. ನಾನು ಸಹ ಕೆಲ ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದೇನೆ. ಮುಂಬೈ ಮೂಲದ ಅಬ್ದುಲ್ ಎನ್ನುವವರಿಗೆ ಸೇರಿದ ಕಾರ್ಖಾನೆಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ನಡೆದಿದೆ. ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರೂ, ದೊಡ್ಡ ಅನಾಹುತ ಆಗಿ ಹೋಗಿದೆ ಎಂದಿದ್ದಾರೆ. ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆಸಾಗಿದೆ.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು