ವಿದ್ಯಾಕಾಶಿ, ಸಾಹಿತಿಗಳ ತವರೂರು ಅಂತಲೇ ಖ್ಯಾತಿ ಪಡೆದಿರೋದು ಧಾರವಾಡ. ಉತ್ತರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಶಿಕ್ಷಣ ಸಂಸ್ಥೆ ಮತ್ತು ಕೋಚಿಂಗ್ ಕೇಂದ್ರಗಳನ್ನು ಹೊಂದಿರೋ ನಗರ ಅಂದ್ರೆ ಅದು ಧಾರವಾಡ. ಉತ್ತಮ ಶಿಕ್ಷಣ ಹಿನ್ನೆಲೆ ರಾಜ್ಯದ ಮೂಲೆಮೂಲೆಯಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದ್ರೆ ಈಗ ಶಿಕ್ಷಣಕ್ಕೆ ಹೆಸರುವಾಸಿಯಾಗಿರೋ ಈ ವಿದ್ಯಾನಗರಿಯ ಕಾಲೇಜೊಂದರಲ್ಲಿ ಹೇಯ ಕೃತ್ಯವೊಂದು ನಡೆದಿದೆ. ಧಾರವಾಡ ಶಿಕ್ಷಣ ಕಾಶಿ ಖ್ಯಾತಿಗೆ ಮಸಿ ಬಳಿಯೋವಂತಹ ಘಟನೆ ನಡೆದಿದೆ. ವಿದ್ಯಾರ್ಥಿನಿಗೆ ಜ್ಯೂಸ್ ಎಂದು ಬಿಯರ್ ಕುಡಿಸಿ ಲೈಂಗಿಕ ಶೋಷಣೆ ಎಸಗಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲೇ ಕೃತ್ಯಕ್ಕೆ ಸಾಥ್ ಕೊಟ್ಟಿದ್ದಾನೆ.
ಶಾಲೆ-ಕಾಲೇಜು ಅಥವಾ ವಿದ್ಯಾದೇಗುಲ ಅಂದಾಕ್ಷಣ ಎಲ್ಲರಿಗೂ ಭಕ್ತಿಭಾವ ಮೂಡುತ್ತೆ. ಬದುಕೋಕೆ ಶಿಕ್ಷಣ ಮುಖ್ಯ ಅಂತಾ ಹೇಳ್ತೇವೆ. ಶಿಕ್ಷಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಿ ಗೌರವಿಸ್ತೇವೆ. ಆದರೆ ಧಾರವಾಡದಲ್ಲಿ ಶಿಕ್ಷಕ ವೃತ್ತಿಗೆ ಕಪ್ಪುಚುಕ್ಕೆಯಂತಹ ಘಟನೆ ನಡೆದಿದೆ.
ಕಾಲೇಜಿನಲ್ಲಿ ಲೈಂಗಿಕ ಶೋಷಣೆ!
ಧಾರವಾಡದ ಜಯನಗರದಲ್ಲಿನ ವಿಶ್ವೇಶ್ವರಯ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ. ವಿದ್ಯಾರ್ಜನೆ ಮಾಡೋ ಜಾಗದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿರೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಮಕ್ಕಳು ಅಸ್ವಸ್ಥರಾಗಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ಹಿಂಗಾ ಹೇಳೋದು! ಪೋಷಕರ ಆಕ್ರೋಶ
ಕಾಲೇಜು ಅಧ್ಯಕ್ಷನಿಂದ ಕೃತ್ಯ!
ಖುದ್ದು ಈ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷನ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ರೆ, ಅದಕ್ಕೆ ಪ್ರಿನ್ಸಿಪಾಲ್ ಸಾಥ್ ನೀಡುತ್ತಾರೆ ಅನ್ನೋ ಆರೋಪವೂ ಜೋರಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ದೂರು ದಾಖಲಾಗಿದೆ.
ಬಿಯರ್ ಕುಡಿಸಿ ವಿದ್ಯಾರ್ಥಿನಿಗೆ ಶೋಷಣೆ!
ವಿದ್ಯಾರ್ಥಿನಿಯನ್ನು ಕಾಲೇಜಿನ ಅಧ್ಯಕ್ಷ ಪುಸಲಾಯಿಸಿ ದಾಂಡೇಲಿಗೆ ಕರೆದುಕೊಂಡು ಹೋಗಿದ್ದನಂತೆ. ನಂತರ ಅಲ್ಲಿ ಜ್ಯೂಸ್ ಅಂತಾ ಹೇಳಿ ಬಿಯರ್ ಕುಡಿಸಿ ಆಕೆ ನಿದ್ದೆಗೆ ಜಾರಿದಾಗ ಶೋಷಣೆ ಮಾಡಿದ್ದಾನಂತೆ. ವಿದ್ಯಾರ್ಥಿನಿಯ ನೋವು ಕೇಳಬೇಕಾದ ಪ್ರಾಚಾರ್ಯನೇ ಅಧ್ಯಕ್ಷನಿಗೆ ಸಾಥ್ ಕೊಟ್ಟಿದ್ದಾನೆ. ಈತನೇ ಅಧ್ಯಕ್ಷರ ಜೊತೆ ವಿದ್ಯಾರ್ಥಿನಿಯರನ್ನು ಕಳುಹಿಸಿ ಕೊಡುತ್ತಿದ್ದ ಅನ್ನೋ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ: ಮಹಿಳೆ ಪ್ರಚೋದನಕಾರಿ ಬಟ್ಟೆ ಧರಿಸಿದ್ದರೆ ಲೈಂಗಿಕ ಕಿರುಕುಳದ ದೂರು ಪರಿಗಣಿಸುವುದಿಲ್ಲ!
ಕಾಲೇಜು ಅಧ್ಯಕ್ಷ ಎಸ್ಕೇಪ್, ಪ್ರಿನ್ಸಿಪಾಲ್ ಪೊಲೀಸ್ ವಶಕ್ಕೆ!
ನೊಂದ ವಿದ್ಯಾರ್ಥಿನಿಯರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹದೇವ ಕುರವತ್ತಿಗೌಡರ ವಿರುದ್ಧ ನೊಂದ ವಿದ್ಯಾರ್ಥಿನಿಯರು ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೇ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಪರಾರಿಯಾಗಿದ್ದು, ಪ್ರಾಚಾರ್ಯ ಮಹದೇವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯಿಂದ ವಿದ್ಯಾರ್ಥಿಗಳ ಪೋಷಕರಿಗೆ ಆತಂಕ
ಧಾರವಾಡದಲ್ಲಿ 30ಕ್ಕೂ ಹೆಚ್ಚು ಖಾಸಗಿ ಕಾಲೇಜಗಳು ಇದೆ. ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆ ಮಾತ್ರವಲ್ಲ ಉತ್ತರ ಕರ್ನಾಟಕ, ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಕಲಿಯೋದಕ್ಕೆ ಅಂತಾ ತಮ್ಮ ಹೆಣ್ಣು ಮಕ್ಕಳನ್ನು ಪಾಲಕರು ಕಳುಹಿಸಿಕೊಡ್ತಾರೆ. ಮೊದಲಿನಿಂದಲೂ ಧಾರವಾಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿರೋ ನಗರ. ಹೀಗಾಗಿ ಇಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ಇರ್ತಾರೆ ಅನ್ನೋ ಕಾರಣಕ್ಕಾಗಿಯೇ ಇಲ್ಲಿಗೆ ಕಲಿಯಲು ಕಳುಹಿಸುತ್ತಾರೆ.
ಆದರೆ ಹಾಗೇ ಕಲಿಯಲು ಬಂದ ಕಾಲೇಜಿನ ಅಧ್ಯಕ್ಷನೇ ಹೀಗೆ ಮಾಡಿರೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದರಲ್ಲಿಯೂ ಅಧ್ಯಕ್ಷನ ವರ್ತನೆಯ ಬಗ್ಗೆ ನೊಂದು ವಿದ್ಯಾರ್ಥಿನಿ ಎಫ್ಐಆರ್ನಲ್ಲಿ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಡೀ ಧಾರವಾಡಕ್ಕೆ ಕಪ್ಪುಚುಕ್ಕೆ
ಈ ಘಟನೆ ಇಡೀ ಧಾರವಾಡಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಧಾರವಾಡದಲ್ಲಿ ಒಂದು ಕಾಲೇಜಿನಲ್ಲಿ ನಡೆದ ನೀಚ ಕೃತ್ಯಕ್ಕೆ ಇಲ್ಲಿಗೆ ಕಲಿಯಲು ಬಂದಿರೋ ಹೆಣ್ಣು ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಆಯಾ ಕಾಲೇಜಗಳಲ್ಲಿ ವಿದ್ಯಾರ್ಥಿನಿಯರ ದೂರು ಕೇಳೋಕೆ ಅಂತಾನೇ ಮಹಿಳಾ ಸೆಲ್ ಕಡ್ಡಾಯವಾಗಿ ಮಾಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ