ಶಿರಾಡಿ ಘಾಟ್ನಲ್ಲಿ(Shiradi Ghat) ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಜತೆ ಸುರಂಗ ಮಾರ್ಗದ ಕಾಮಗಾರಿ ಹಲವರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಅಪಾಯದ(Dangerous) ಮುನ್ಸೂಚನೆಗಳನ್ನು ಸಹ ಹೊಂದಿದೆ. ತೀವ್ರ ವಿರೋಧದ ನಡುವೆಯೇ ಮಂಗಳೂರು-ಬೆಂಗಳೂರು(Mangaluru-Bengaluru) ಸಂಪರ್ಕದ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಶಿರಾಡಿ ಘಾಟಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಗಾ ಸುರಂಗ ರಸ್ತೆ ಯೋಜನೆಗೆ(Mega Tunnel Road Plan) ಸಂಬಂಧಿಸಿದಂತೆ ವರದಿಗಳು ಹೊರ ಬರುತ್ತಿವೆ.
ಏನು ಹೇಳುತ್ತದೆ ವಿಸ್ತೃತ ಯೋಜನಾ ವರದಿ?
ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಲ್ಲಿಕೆಯಾಗಿದ್ದು, ಯೋಜನೆ ವರದಿ ಶಿರಾಡಿ ಘಾಟ್ ವಿಭಾಗದಲ್ಲಿ ಸುರಂಗ ನಿರ್ಮಾಣ ಅಷ್ಟು ಸುಲಭವಾಗಿಲ್ಲ, ಇಲ್ಲಿ ʼಕಟ್ ಅಂಡ್ ಫಿಲ್’ ವಿಧಾನದ ಜೊತೆ ಕೆಲವೆಡೆ ಬ್ಲಾಸ್ಟಿಂಗ್, ಭೂಮಿ ಕೊರೆತ, ಬೆಟ್ಟ ಅಗೆಯುವಿಕೆ ಮಾಡಲೇಬೇಕಿದೆ, ಇದು ಅವಶ್ಯಕ ಎಂದು ತಿಳಿಸಿದೆ.
ಈ ಯೋಜನೆಯಲ್ಲಿ ಕೆಲಸ ಮಾಡಿದ ನಾಲ್ಕು ಜಪಾನ್ ಕಂಪನಿಗಳ ತಜ್ಞರು ಯೋಜನೆಯ ಬಗ್ಗೆ ವಿವರಣೆ ನೀಡಿದ್ದು ಎಲ್ಲಾ ಅಪಾಯಗಳ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ವರದಿಯು ಆರು ಸುರಂಗಗಳು (13.84 ಕಿಮೀ) ಮತ್ತು ಐದು ಸೇತುವೆಗಳನ್ನು ಒಳಗೊಂಡಿರುವ ಯೋಜನೆಯೊಂದಿಗೆ ಗುಂಡಿಯಾ ಮತ್ತು ಮಾರನಹಳ್ಳಿ ನಡುವೆ 22.8 ಕಿಮೀ ಚತುಷ್ಪಥ ನಿರ್ಮಾಣವನ್ನು ಸೂಚಿಸಿದೆ.
ಇದನ್ನೂ ಓದಿ: Land Dispute: ವೃದ್ಧೆ ನೆಟ್ಟಿದ್ದ 84 ತೆಂಗಿನ ಮರ ಉರುಳಿಸಿದ ದುಷ್ಕರ್ಮಿಗಳು, ಪ್ರಶ್ನಿಸಿದವರಿಗೆ ಆವಾಜ್!
ಉಳಿದ ವಿಭಾಗವನ್ನು ಕಟ್ ಮತ್ತು ಕವರ್ ವಿಧಾನದ ಮೂಲಕ ನೆಲಸಮ ಮಾಡಲಾಗುತ್ತದೆ. ಅಪಾಯಕಾರಿ ವಸ್ತುಗಳ ಸಾಗಣೆಯನ್ನು ಅನುಮತಿಸುವ ಸುರಂಗಗಳ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸುರಂಗ ಮತ್ತು ಸೇತುವೆ ವಿಭಾಗಗಳನ್ನು ವರದಿ ಶಿಫಾರಸ್ಸು ಮಾಡಿದೆ.
ಅತ್ಯಂತ ಸೂಕ್ಷ್ಮ ಮೀಸಲು ಅರಣ್ಯದಲ್ಲಿ ಕಾಮಗಾರಿ
ವಾಯುವ್ಯದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ದಕ್ಷಿಣ ಭಾಗದಲ್ಲಿ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವನ್ನು ಸಂಪರ್ಕಿಸುವ ಅತ್ಯಂತ ಸೂಕ್ಷ್ಮ ಮೀಸಲು ಅರಣ್ಯದಲ್ಲಿ ಕೆಲಸ ನಡೆಯಲಿದೆ ಎಂದು ವರದಿಯು ಹೇಳಿದೆ.
ಪರಿಸರಕ್ಕೆ ಹಾನಿ ಸಾಧ್ಯತೆ
ಭಾರಿ ಮೊತ್ತದ ಹಾಗೂ ಪಶ್ಚಿಮಘಟ್ಟ ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಯ ಬಗ್ಗೆಯೂ ಯೋಜನಾ ವರದಿ ಹೇಳಿದೆ. ಎರಡು ಸಂರಕ್ಷಿತ ಪ್ರದೇಶಗಳ ನಡುವೆ ಪ್ರಾಣಿಗಳು ಓಡಾಡುವುದರಿಂದ ಆ ಬಗ್ಗೆಯೂ ಯೋಚಿಸಬೇಕಿದೆ.
“ಗುಂಡಿಯಾ ಇಂಡಿಯನ್ ಫ್ರಾಗ್ ಮತ್ತು ಕೊಟ್ಟಗೆಹರ ಬುಷ್ ಫ್ರಾಗ್ ಯೋಜನಾ ಪ್ರದೇಶದ ಬಳಿ ವಾಸಿಸುತ್ತವೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ರೆಡ್ ಲಿಸ್ಟ್ನಲ್ಲಿ ಅವುಗಳನ್ನು ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಬೇಧಗಳಾಗಿ ವರ್ಗೀಕರಿಸಲಾಗಿದೆ” ಎಂದು ವರದಿಯು ಪ್ರಾಣಿ ಸಂಕುಲಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ.
"ಬ್ಲಾಸ್ಟಿಂಗ್ ಮತ್ತು ಭೂಮಿ ಕೊರೆತ ಅವಶ್ಯಕ"
ಅಧ್ಯಯನವು ಬೋರಿಂಗ್ಗಳಂತಹ ಭೌಗೋಳಿಕ ತನಿಖೆಯನ್ನು ಮತ್ತು ಸ್ಥಿತಿಸ್ಥಾಪಕ ತರಂಗ ಪರಿಶೋಧನೆಯ ಮೂಲಕ ಅಗತ್ಯವಾದ ಭೂಕಂಪನ ದತ್ತಾಂಶವನ್ನು ಕಂಡುಕೊಂಡಿದೆ. ಸುರಂಗ ಮಾರ್ಗ ನಿರ್ಮಿಸಲು ಕೆಲವೆಡೆ ಬ್ಲಾಸ್ಟಿಂಗ್ ಮತ್ತು ಭೂಮಿ ಕೊರೆತವನ್ನು ಅಗತ್ಯವಾಗಿ ಮಾಡಬೇಕಿದೆ ಎಂದು ತಿಳಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಕೆ
ಯೋಜನೆಯ ಡಿಪಿಆರ್ ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಅದನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
15,000 ಕೋಟಿ ವೆಚ್ಚವನ್ನು ಡಿಪಿಆರ್ನಲ್ಲಿ ಅಂದಾಜಿಸಲಾಗಿದ್ದು ಅದನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಗಡ್ಕರಿ ಅವರು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಭರವಸೆ ನೀಡಿದ್ದಾರೆ.
ಪರಿಸರ ವ್ಯವಸ್ಥೆಯ ಚೇತರಿಕೆಗೆ ಬೇಕಾದ ಸಮಯವನ್ನು ಅರ್ಥಮಾಡಿಕೊಳ್ಳಲು ಯೋಜನೆಯ ನಂತರದ ಮೌಲ್ಯಮಾಪನವನ್ನು ಮಾಡಬೇಕಾಗಿದೆ. ಜೋಶಿಮಠ ದುರಂತದಿಂದ ನಾವೆಲ್ಲಾಪಾಠ ಕಲಿಯಬೇಕಿದೆ, ಇದನ್ನೇಲ್ಲಾ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನಿದು ಯೋಜನೆ?
ಅಡ್ಡಹೊಳೆಯಿಂದ ಸುಮಾರು 37 ಕಿ.ಮೀ. ಉದ್ದವಿರುವ ಶಿರಾಡಿ ಘಾಟಿ ರಸ್ತೆಗೆ ಪರ್ಯಾಯವಾಗಿ 23.6 ಕಿ.ಮೀ. ಉದ್ದದ ಸುರಂಗ ನಿರ್ಮಿಸುವ ಉದ್ದೇಶವಿದ್ದು, ಜಪಾನಿ ಕಂಪನಿ ಮೂಲಕ ಸಮಗ್ರ ಸಮೀಕ್ಷೆ ನಡೆಸಿ, ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲಾಗಿದೆ. ಅಂದಾಜು 15 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದೆ.
ಇಲ್ಲಿನ ವಾಸ್ತವ ಪರಿಸ್ಥಿತಿ ರಸ್ತೆ ಅಗಲೀಕರಣದಿಂದ ಮರಗಳ ನಾಶದ ಬಗ್ಗೆ ತಜ್ಞರು ವರದಿ ನೀಡಿದ ನಂತರ ಕಾಮಗಾರಿ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ