ಆನ್‌ಲೈನ್ ಶಿಕ್ಷಣಕ್ಕೆ ಸಮಿತಿ ಕೊನೆಗೂ ಅಸ್ತು; ಅಷ್ಟಕ್ಕೂ ತಜ್ಞರ ಸಮಿತಿ ವರದಿಯಲ್ಲೇನಿದೆ ಗೊತ್ತಾ?

ಆನ್​ಲೈನ್​ ಶಿಕ್ಷಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸುರೇಶ್ ಕುಮಾರ್ ಅವರು, ರಾಜ್ಯದಲ್ಲಿ ಶಾಲಾ ಕಾಲೇಜುಗಳ ಪ್ರಾರಂಭ ಅಥವಾ ಆನ್‍ಲೈನ್ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

news18-kannada
Updated:July 8, 2020, 2:31 PM IST
ಆನ್‌ಲೈನ್ ಶಿಕ್ಷಣಕ್ಕೆ ಸಮಿತಿ ಕೊನೆಗೂ ಅಸ್ತು; ಅಷ್ಟಕ್ಕೂ ತಜ್ಞರ ಸಮಿತಿ ವರದಿಯಲ್ಲೇನಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು; ಕೋವಿಡ್-19 ಸಂಕಷ್ಟದಲ್ಲಿ ರಾಜ್ಯದಲ್ಲಿ ಅನ್​ಲೈನ್ ಶಿಕ್ಷಣ‌ದ ವಿಚಾರವಾಗಿ ಪರ-ವಿರೋಧವಾಗಿ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಅದರಲ್ಲೂ ಎಲ್​ಕೆಜಿ, ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ಮನವಿ ಮಾಡಿಕೊಂಡಿತ್ತು‌. ಅದರಂತೆ ಇದೀಗ ಶಿಕ್ಷಣ ತಜ್ಞ ಎಂ ಕೆ ಶ್ರೀಧರ್ ಹಾಗೂ 18 ಸದಸ್ಯರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ಶಿಕ್ಷಣ ತಜ್ಞ ಎಂ.ಕೆ. ಶ್ರೀಧರ್ ನೇತೃತ್ವದ ಸಮಿತಿ ವರದಿ ಸಿದ್ದಪಡಿಸಿ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವರದಿ ಸಲ್ಲಿಕೆ ಮಾಡಿದೆ. ವರದಿ ಸಲ್ಲಿಕೆವರೆಗೆ ಕೇಂದ್ರ ಸರ್ಕಾರದ ಆನ್ ಲೈನ್ ಮಾರ್ಗಸೂಚಿಯಂತೆ ಶಾಲೆಗಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವಂತೆ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಅದರಂತೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದೀಗ ಸಮಿತಿಯ ವರದಿ ಸಲ್ಲಿಕೆಯಾಗಿದ್ದು, ಸಮಿತಿಯ ಶಿಫಾರಸ್ಸಿನಂತೆ ಕಾರ್ಯರೂಪಗೊಳಿಸಬೇಕಿದೆ.

3 ರಿಂದ 6 ವರ್ಷ ವಯೋಮಾನದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟ, ಕಥೆ ಸೇರಿದ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ/ ಮುದ್ರಿತ  ಬೋಧನಾ ವಿಧಾನಗಳು ಜರುಗಲಿದೆ. ವಾರಕ್ಕೆ ಮೂರು ದಿನ ಪ್ರತಿದಿನ ಒಂದು ಅವಧಿಯಂತೆ ಕಲಿಸಬಹುದು. ಅದೇ ರೀತಿ 1ರಿಂದ  2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ಮಾತ್ರ ವಾರಕ್ಕೆ ಮೂರು ದಿನ ಪ್ರತಿದಿನ  ಎರಡು ಅವಧಿಯ ಕಲಿಕೆಗೆ ಅವಕಾಶ  ನೀಡಬಹುದು ಎಂಬ ಕುರಿತು ವರದಿಯಲ್ಲಿ ವಿವರಿಸಲಾಗಿದೆ.

3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಆನ್ ಲೈನ್ ಬೋಧನೆ ಮಾಡಬಹುದೆಂದು ಸಮಿತಿ ಹೇಳಿದೆ. ಪಠ್ಯಕ್ಕೆ ಪೂರಕ ಬೋಧನೆಯನ್ನು ಅಳವಡಿಸಿಕೊಳ್ಳಬಹುದು. 6ರಿಂದ 8ನೇ ತರಗತಿಗೆ 30ರಿಂದ 45 ನಿಮಿಷಗಳ ಗರಿಷ್ಠ  3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಶಿಫಾರಸು  ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಪರ್ಯಾಯ ಬೋಧನಾ ಕ್ರಮಗಳ ಕುರಿತಂತೆ ಇಷ್ಟರಲ್ಲಿಯೇ ದೂರದರ್ಶನ/ಆಕಾಶವಾಣಿ ಮೂಲಕ ಸೇತುಬಂಧ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಪ್ರತಿ ಶಿಕ್ಷಕರನ್ನು ಪ್ರತಿ ವಿದ್ಯಾರ್ಥಿಯೊಂದಿಗೆ ಮ್ಯಾಪಿಂಗ್ ಮಾಡಿ ಕಲಿಕೆಯನ್ನು ಅನುಪಾಲಿಸುವ ಸಮರ್ಥ ವ್ಯವಸ್ಥೆ ರೂಪಿಸಲಾಗುತ್ತಿದೆ. ವಿಶಿಷ್ಟವಾಗಿ ಸಂಕಷ್ಟದ ಸಮಯದಲ್ಲಿ ಅಲ್ಲದೇ ಆ ನಂತರವೂ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ನಮ್ಮ  ಮಕ್ಕಳಿಗೆ ಯಾವ ರೀತಿಯಲ್ಲಿ ನೀಡಬಹುದು, ಅದಕ್ಕೆ ಯಾವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು, ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ಸಮಯ ಇಂತಹ ಶಿಕ್ಷಣ ನೀಡಬಹುದೆನ್ನುವುದು ಸೇರಿದಂತೆ ಸವಿಸ್ತಾರವಾದ ವರದಿಯನ್ನು ಸಮಿತಿ‌ ಸಲ್ಲಿಸಿದೆ.

ಕೋವಿಡ್ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕಲಿಕೆ ಮುಂದುವರೆಸುವ ಸಂಬಂಧದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತಂತೆ  ಪ್ರೊ. ಎಂ.ಕೆ. ಶ್ರೀಧರ್ ಅಧ್ಯಕ್ಷತೆಯ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಮಿತಿಯ ವರದಿಯ ಪೂರ್ಣಪಾಠವನ್ನು ಅಧ್ಯಯನ ಮಾಡಿ ಅದು ಸೂಚಿಸಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಆನ್‍ಲೈನ್ ಶಿಕ್ಷಣ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡುವ ತೀರ್ಪಿಗನುಗುಣವಾಗಿ ನಿಯಮಗಳನ್ನು ಸಿದ್ಧಪಡಿಸಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಸಮಿತಿಯಲ್ಲಿ ಸಮಾಜದ ಹಲವಾರು ಸ್ತರಗಳನ್ನು ಪ್ರತಿನಿಧಿಸುವ ಸದಸ್ಯರಿದ್ದಾಗ್ಯೂ ಎಲ್ಲರ ಉದ್ದೇಶವೂ ನಮ್ಮ ಶಿಕ್ಷಣದ ಪ್ರಮುಖ ಪಾಲುದಾರರಾದ ಮಕ್ಕಳ ಹಿತವನ್ನೇ ಗಮನದಲ್ಲಿ ಇಟ್ಟುಕೊಂಡಿದ್ದರಿಂದ ಒಂದು ಉತ್ತಮವಾದ ವರದಿಯನ್ನು ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಯಿತು ಎಂದು ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶಿಕ್ಷಣ ತಜ್ಞ ಪ್ರೊ. ಎಂ.ಕೆ. ಶ್ರೀಧರ್ ಹೇಳಿದರು. ಇದು ಕೊರೋನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ನಮ್ಮ ಮಕ್ಕಳ ಶಿಕ್ಷಣ ಕಲಿಕೆಯ ಮುಂದುವರಿಕೆಗೆ ತೊಂದರೆಯಾಗಬಾರದು, ಅದನ್ನು ಹೇಗೆ ಮುಂದುವರೆಸಬೇಕು, ಮುಂದುವರಿಕೆ ಕ್ರಮಗಳಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ವ್ಯತ್ಯಯವಾಗದಂತೆ ಯಾವ ರೀತಿ ಅದನ್ನು ಮುಂದವರೆಸೆಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಸಮಿತಿ ವರದಿ ಸಲ್ಲಿಸಿದೆ ಎಂದು ಅವರು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗ ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲದಲ್ಲಿ ಆರಂಭವಾಗದಿರುವಾಗ ಕೆಲ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಶಿಕ್ಷಣ ನೀಡಲು ಮುಂದಾದವು. ಇನ್ನೂ ಕೆಲ ಸಂಸ್ಥೆಗಳು ಅದರ ಹೆಸರಲ್ಲಿ ಪ್ರತ್ಯೇಕ ಶುಲ್ಕ ವಸೂಲು ಮಾಡಲು ಶುರು ಮಾಡಿದವು. ಹಾಗೆಯೇ  ಅವೈಜ್ಞಾನಿಕವಾಗಿ ಆನ್‍ಲೈನ್ ಬೋಧನೆ ಅನುಸರಿಸುತ್ತಿದ್ದ ಕೆಲ  ಶಿಕ್ಷಣ ಸಂಸ್ಥೆಗಳಿಗೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕೆಂಬ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಕುರಿತಂತೆ ವಿಸ್ತೃತ ವರದಿ ಪಡೆಯಲು ಸರ್ಕಾರ ತಜ್ಞರ ಸಮಿತಿ ರಚಿಸಿತ್ತು.ಇದನ್ನು ಓದಿ: ‘ಒಂದು ತಿಂಗಳಿನಲ್ಲಿ ಎಲ್ಲಾ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವಂತೆ ನಾಳೆಯೇ ಆದೇಶ‘ - ಸಚಿವ ಶ್ರೀರಾಮುಲು ಭರವಸೆ

ಆನ್​ಲೈನ್​ ಶಿಕ್ಷಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸುರೇಶ್ ಕುಮಾರ್ ಅವರು, ರಾಜ್ಯದಲ್ಲಿ ಶಾಲಾ ಕಾಲೇಜುಗಳ ಪ್ರಾರಂಭ ಅಥವಾ ಆನ್‍ಲೈನ್ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.‌ ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯಗಳನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಜನೆಯ ಪರ ಕೈಗೊಳ್ಳಲು ಸಮರ್ಥವಾಗಿದೆ ಮತ್ತು ಅಂಥ ನಿರ್ಣಯಗಳನ್ನು ಕೈಗೊಳ್ಳುತ್ತದೆ. ಪಾಲಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಕುರಿತು ಯಾವುದೇ ಆತಂಕ ಅಥವಾ ಕಪೋಲಕಲ್ಪಿತ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ. ತಜ್ಞರ ಸಮಿತಿ ವರದಿ ಅಥವಾ ಬೇರೆ ಬೇರೆ ಆಯಾಮಗಳಲ್ಲಿ ಸರ್ಕಾರದ ಹಂತದಲ್ಲಿ ನಡೆಯುವ ಚರ್ಚೆಗಳು ಎಂದಿಗೂ ಅಂತಿಮ ನಿರ್ಣಯವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Published by: HR Ramesh
First published: July 8, 2020, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading