ಗೋವಾ ಬೀಚ್​ನಲ್ಲಿ ಕಡಲೆ ಮಾರುತ್ತಿದ್ದ ಕನ್ನಡಿಗ ಹುಡುಗ ಬ್ರಿಟನ್ ಸೇನೆ ಸೇರಿದ ರೋಚಕ ಕಥೆ

ಕೊಪ್ಪಳದಿಂದ ಗೋವಾಕ್ಕೆ ಹೋಗಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಜೀವನೋತ್ಸಾಹ ಕಳೆದುಕೊಳ್ಳದ ಗೋಪಾಲ ವಾಕೋಡೆ ಈಗ ಬ್ರಿಟನ್ ಸೇನೆ ಸೇರಿದ್ದಾರೆ. ಅಲ್ಲಿನ ಸ್ಥಳೀಯ ಕ್ರಿಕೆಟ್​ನಲ್ಲೂ ಮಿಂಚಿದ್ದಾರೆ. ಇವರ ಜೀವನದ ಕಥೆ ಚಿತ್ರೀಕರಣ ಆಗಲಿದೆ.

ಕೊಪ್ಪಳದ ಹುಡುಗ ಗೋಪಾಲ ವಾಕೋಡೆಯ ಯಶೋಗಾಥೆ

ಕೊಪ್ಪಳದ ಹುಡುಗ ಗೋಪಾಲ ವಾಕೋಡೆಯ ಯಶೋಗಾಥೆ

  • Share this:
ಕೊಪ್ಪಳ: ಬಡತನ ಮತ್ತು ಅನಕ್ಷರತೆ ತಾಂಡವವಾಡುತ್ತಿದ್ದ ಕುಟುಂಬದಲ್ಲಿ ಜನಿಸಿದ್ದ ಶಹಪುರ ಗ್ರಾಮದ ಗೋಪಾಲ ವಾಕೋಡೆ ಎಂಬ ಬಾಲಕ ಕೌಟುಂಬಿಕ ಸಮಸ್ಯೆಯ ಸುಳಿಗಳಿಂದ ಸುಧಾರಿಸಿಕೊಂಡು, ವರ್ತಮಾನ ಕಾಲದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟೀಷ್ ಸೇನೆ ಸೇರಿದ್ದಾನೆ. ಇಂಗ್ಲೆಂಡ್​ನ ಈಸ್ಟ್ ಮಿಡ್ಲ್ ನಲ್ಲಿರುವ ಬ್ರಿಟೀಷ್ ಮಿಲಿಟರಿಯಲ್ಲಿ ಇದೀಗ ಸೇವೆ ಸಲ್ಲಿಸುತ್ತಿದ್ದಾನೆ. ಮೂಲತಃ ಕೊಪ್ಪಳ ಜಿಲ್ಲೆಯ ಶಹಪುರ ಗ್ರಾಮದ ಎಲ್ಲಪ್ಪ ವಾಕೋಡೆ ಮತ್ತು ಫಕೀರವ್ವ ದಂಪತಿಯ ಐದು ಮಕ್ಕಳಲ್ಲಿ ಗೋಪಿ ಕೂಡ ಒಬ್ಬರು. ಈತನಿಗೆ ಒಬ್ಬ ಅಣ್ಣ ಮುತ್ತು ಮೂವರು ಸಹೋದರಿಯರಿದ್ದಾರೆ. ಗೋಪಿ ಬಾಲ್ಯದಲ್ಲಿದ್ದಾಗ ತಂದೆ ಎಲ್ಲಪ್ಪ ವಾಕೋಡೆ ಕುಟುಂಬ ಸಮೇತ ಗೋವಾಕ್ಕೆ ತೆರಳುತ್ತಾರೆ. ಆಗ ಮದ್ಯವ್ಯಸನಿಯಾಗಿ ರೂಪುಗೊಂಡ ಎಲ್ಲಪ್ಪ ವಾಕೋಡೆ 1995ರಲ್ಲೇ ಸಾವಿಗೀಡಾಗುತ್ತಾರೆ. ತಂದೆಯ ನಿಧನದ ಬಳಿಕ ತಾಯಿಯೂ ಮೃತಪಟ್ಟಿದ್ದಾರೆ. ಅಣ್ಣ ಮದುವೆಯಾಗಿ ಕೆಲವೇ ದಿನಗಳಲ್ಲಿ ಇಹಲೋಕ ತ್ಯಜಿಸಿದ್ದಾನೆ. ಗೋಪಾಲನ ಅತ್ತಿಗೆ ಶಹಪುರ ಗ್ರಾಮದಲ್ಲಿಯೇ ಇರುತ್ತಾರೆ. ಮೂವರು ಸೋದರಿಯರಿಗೆ ಗ್ರಾಮದ ಗೋಗರೆ ಮತ್ತು ನಾಯ್ಕಲ್ ಮನೆತನದ ಯುವಕರಿಗೆ ಮದುವೆ ಮಾಡಿಕೊಡಲಾಗಿದೆ.

ಗೋವಾ ಬೀಚ್​ನಲ್ಲಿ ಕಡಲೆ ಮಾರಾಟ: ಎಲ್ಲಪ್ಪ ವಾಕೋಡೆ ತನ್ನ ಕುಟುಂಬದೊಂದಿಗೆ ಗೋವಾಕ್ಕೆ ತೆರಳಿದಾಗ ಗೋಪಾಲನಿಗೆ 10 ವರ್ಷ. ಗೋವಾಕ್ಕೆ ತೆರಳಿದಾಗ ಅಲ್ಲಿ ಆಗಿದ್ದೇ ಬೇರೆ. ತಂದೆ ಮದ್ಯವ್ಯಸನಿಯಾಗಿ ತಾಯಿಗೆ ಕಿರುಕುಳ ನೀಡುತ್ತಿರುತ್ತಾರೆ. ತಂದೆ-ತಾಯಿಯ ಜಗಳ ಕಂಡು ಗೋಪಿ ದಿನವೂ ಕಣ್ಣೀರು ಹಾಕುತ್ತಿರುತ್ತಾನೆ. ಅಣ್ಣ ಮತ್ತು ಸೋದರಿಯರು ಮುಗ್ಧರು. ಆ ದೌರ್ಭಾಗ್ಯದ ದಿನಗಳಿಗಾಗಿ ದುಃಖಿಸುತ್ತಾನೆ. ಜೀವನಕ್ಕೆ ಏನು ಮಾಡುವುದೆಂದು ಯೋಚಿಸಿದ ಗೋಪಾಲ ಶಿಕ್ಷಣ ತೊರೆದು ಬೀಚ್ ಗಳಲ್ಲಿ ಕಡಲೆ ಮಾರಾಟ ಮಾಡಲು ಅಣಿಯಾಗುತ್ತಾನೆ. ದೈಹಿಕ ಶ್ರಮ, ಹಣಕಾಸಿನ ಸ್ಥಿತಿ ಲೆಕ್ಕಿಸದೇ ಕುಟುಂಬ ನಿರ್ವಹಣೆಗೆ ಹಗಲಿರುಳೂ ಶ್ರಮಿಸುತ್ತಾನೆ.

ಬ್ರಿಟೀಷ್ ಹಿರಿಯ ನಾಗರಿಕರ ಕಣ್ಣಿಗೆ ಬಿದ್ದ ಗೋಪಾಲ: ಬ್ರಿಟ್ಸ್ ಕೊರೊಲ್ ಥಾಮಸ್ ಮತ್ತು ಕೊಲಿನ್ ಹ್ಯಾನ್ಸನ್ ಎನ್ನುವ ಬ್ರಿಟೀಷ್ ನಾಗರಿಕ ಹಿರಿಯ ದಂಪತಿ ತಮ್ಮ ನಿಕಟವರ್ತಿ ಲಿಂಡಾ ಹ್ಯಾನ್ಸನ್ ಅವರೊಂದಿಗೆ ಪ್ರತಿವರ್ಷ ಭಾರತ ಪ್ರವಾಸ ಕೈಗೊಳ್ಳುವುದು ವಾಡಿಕೆ. ಗೋವಾದ ಬೆತೆಲ್ ಬಾತಿ ಬೀಚ್ ನಲ್ಲಿ ಗೋಪಿ ಕಡಲೆ ಮಾರಾಟ ಮಾಡುವುದನ್ನು ಆಕಸ್ಮಿಕವಾಗಿ ಗಮನಿಸುತ್ತಾರೆ. ಬಿಸಿಲನ್ನೂ ಲೆಕ್ಕಿಸದೇ ಬೀಚಿನಲ್ಲಿ ಬಾಲಕ ಗೋಪಿ ಪ್ರವಾಸಿಗರಿಗೆ ಕಡಲೆ ತಗೊಳ್ಳಿ ಎಂದು ವಿನಂತಿಸುವ ಪರಿ, ಮುಗ್ಧತೆ, ಅವನಲ್ಲಿನ ಜೀವನ ಪ್ರೀತಿ ಕಂಡು ಮುಮ್ಮಲ ಮರುಗುತ್ತಾರೆ. ಅಂತಃಕರಣದಿಂದ ಈತನಿಗೆ ಹತ್ತಿರದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ಹಾಗೂ ಕಡಲೆ ಮಾರಾಟ ಮಾಡುವ ಬಿದಿರಿನ ಬುಟ್ಟಿ, ವಾಚು ಕೊಡಿಸುತ್ತಾರೆ. ನಂತರ ಮಡಗಾಂವ್ ನಗರದ ರಸ್ತೆಯ ಪಕ್ಕದಲ್ಲಿರುವ ಆತನ ಟೆಂಟ್ ಮತ್ತು ತಾಯಿಯನ್ನೂ ನೋಡಿ ಮರುಕ ಪಡುತ್ತಾರೆ. ಆತನಿಗೆ ಆ ವರ್ಷ ಬೀಳ್ಕೊಟ್ಟು ಮುಂದಿನ ವರ್ಷ ಭೇಟಿಯಾಗುವ ಭರವಸೆ ನೀಡಿ ವಿದಾಯ ಹೇಳುತ್ತಾರೆ. ನಂತರ ಈತನ ಬದುಕಿನಲ್ಲಿ ನಡೆದದ್ದೇ ಬೇರೆ.

ಇದನ್ನೂ ಓದಿ: ಮನೆ ಕಾಂಪೌಂಡ್​ನಲ್ಲೇ ಭಿತ್ತಿಚಿತ್ರಗಳ ಮೂಲಕ ವೈವಾಹಿಕ ಬೆಳ್ಳಿಹಬ್ಬ ಆಚರಿಸಿದ ಬಡಕಾರ್ಮಿಕ

ಪ್ರೀತಿಯ ಧಾರೆ ಎರೆದ ಬ್ರಿಟನ್ ನಾಗರಿಕರು: ಕಡಲೆ ಮಾರುತ್ತಿದ್ದ ಗೋಪಿಯ ದೈನ್ಯತೆ, ಬಡತನ ಐದಾರು ವರ್ಷ ಕಳೆದರೂ ನೀಗಿರಲಿಲ್ಲ. ವರ್ಷಕ್ಕೊಮ್ಮೆ ಬರುತ್ತಿದ್ದ ಬ್ರಿಟಿಷ್ ದಂಪತಿಗಳು ಗೋಪಿಗೆ ಹಣಕಾಸಿನ ನೆರವು ನೀಡಿ ಅಂತಃಕರಣದ ಧಾರೆ ಎರೆಯುತ್ತಿದ್ದರು. 19 ವರ್ಷ ಆಗುತ್ತಿದ್ದಂತೆ ಗೋಪಿಯನ್ನು ಇಂಗ್ಲೆಂಡ್​ಗೆ ಕರೆದುಕೊಂಡು ಹೋದರು. ಬ್ರಿಟ್ಸ್ ಕೊರೊಲ್ ಮತ್ತು ಕೊಲಿನ್ ಹ್ಯಾನ್ಸನ್ ದಂಪತಿ ಅಲ್ಲಿಂದಲೇ ಗೋಪಿಯ ಕುಟುಂಬದವರಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ಆಗ ಗೋಪಿಯ ಸಹೋದರಿಯರ ಮದುವೆ ಮತ್ತು ಮನೆ ಕಟ್ಟಲು ನೆರವಾದರು. ಈ ನಡುವೆ ಗೋಪಿಗೆ ಇಂಗ್ಲೆಂಡ್​ನ ಸ್ಥಳೀಯ ಮಿಲಿಟರಿ ಬ್ಯಾರಕ್​ನಲ್ಲಿ ಕ್ರಿಕೆಟ್ ತರಬೇತಿ ಕೊಡಿಸಿದರು. ಹಂತ ಹಂತವಾಗಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಗೋಪಿ ಸ್ಥಳೀಯ ಕ್ರಿಕೆಟ್ ತಂಡದ ನಾಯಕನಾಗಿ ಗಮನ ಸೆಳೆಯುತ್ತಾನೆ. ಆತನ ನಡೆ, ನುಡಿ, ಆಟೋಟದಲ್ಲಿನ ಪ್ರತಿಭೆಗೆ ಸಂಘ-ಸಂಸ್ಥೆಗಳು ಅಭಿನಂದಿಸಿ ಆದರಿಸುತ್ತವೆ. ಕ್ರಿಕೆಟ್ ನಲ್ಲಿನ ಈತನ ಚಾಣಾಕ್ಷತೆ ಕಂಡು ಮಿಲಿಟರಿ ಪಡೆಯ ಅಧಿಕಾರಿಯೊಬ್ಬರು ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ.

ಬ್ರಿಟನ್ ಪ್ರಜೆಯಾದ ಗೋಪಿ: ಇಂಗ್ಲೆಂಡ್​ನ ಜಾಸ್ಮಿನ್ ಎಂಬ ಯುವತಿಯನ್ನು ವಿವಾಹವಾಗಿರುವ ಗೋಪಾಲ್, ಡೈಸಿ ಎಂಬ ಹೆಣ್ಣುಮಗುವಿನ ತಂದೆಯಾಗಿದ್ದಾನೆ. ಕಳೆದ 10 ವರ್ಷದಿಂದ ಇಂಗ್ಲೆಂಡ್​ನಲ್ಲಿ ವಾಸ ಮಾಡಿಕೊಂಡಿದ್ದು, ಕ್ರಿಕೆಟ್ ಮತ್ತು ಮಿಲಿಟರಿ ಸೇವೆಗಾಗಿ ಅಫ್ಘಾನಿಸ್ತಾನ, ಕೀನ್ಯಾ ಮತ್ತು ಜರ್ಮನಿಯಲ್ಲೂ ಸಂಚರಿಸಿದ್ದಾನೆ. ಬ್ರಿಟೀಷ್ ಪ್ರಜೆಯಾದರೂ ಭಾರತದ ಬಗ್ಗೆ ಹೆಮ್ಮೆ, ಹುಟ್ಟೂರಿನ ಬಗ್ಗೆ ಅಭಿಮಾನ ಹೊಂದಿದ್ದಾನೆ. ಮೂರು ವರ್ಷಕ್ಕೊಮ್ಮೆ ಜನ್ಮ ನೀಡಿದ ಗ್ರಾಮಕ್ಕೆ ಆಗಮಿಸಿ ಬಂಧುಗಳೊಂದಿಗೆ ಬೆರೆಯುತ್ತಾನೆ.

ಬಡತನದ ಬೇಗುದಿಯಲ್ಲಿ ಬೆಂದ ಗೋಪಾಲ್ ವಾಕೋಡೆ ಸ್ವಸಾಮರ್ಥ್ಯದಿಂದ ಬ್ರಿಟೀಷ್ ಮಿಲಿಟರಿ ಪಡೆ ಸೇರಿದ ಬಗೆ ಅಚ್ಚರಿಗೆ ಕಾರಣವಾಗಿದೆ. ಗೋಪಾಲನ ನಡೆ, ನುಡಿ, ವಿನಮ್ರತೆ, ಕ್ರೀಡೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ ವಿದೇಶೀ ಮಾಧ್ಯಮಗಳು ವರದಿ ಮಾಡಿವೆ. ಕೊಪ್ಪಳದ ಕುಗ್ರಾಮವೊಂದರಲ್ಲಿ ಜನಿಸಿ ಬ್ರಿಟೀಷ್ ಮಿಲಿಟರಿ ಹೇಗೆ ಸೇರಿದ ಎನ್ನುವ ಕುರಿತು ಈತನ ಕುರಿತು ಇಷ್ಟರಲ್ಲೇ ಜೀವನಗಾಥೆ ಚಿತ್ರೀಕರಣವಾಗಲಿದೆ. ಇದೇ ಜು.12ರಂದು ಈತನ ಸ್ಫೂರ್ತಿದಾಯಕ ಕಥೆ ಆಲಿಸಲು ದೇಶ ವಿದೇಶಗಳ ಮಾಧ್ಯಮ ಪ್ರತಿನಿಧಿಗಳು, ಮಿಲಿಟರಿ ಪಡೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: