ಕೊಡಗು (ಜೂ 11): ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಮಾರಾಟಕ್ಕೆ ಕೊಡಗು ಜಿಲ್ಲೆ ಪ್ರಸಿದ್ಧಿ. ಅಷ್ಟು ವ್ಯಾಪಾರ ವಹಿವಾಟು ನಡೆಸುತ್ತದೆ ಅಬಕಾರಿ ಇಲಾಖೆ (Excise Department). ಆದರೆ ಅದೇ ಅಬಕಾರಿ ಇಲಾಖೆಯ 70 ಲಕ್ಷ ಮೌಲ್ಯ ವ್ಯಯಿಸಿ ಮಾಡಿದ್ದ ಕಟ್ಟಡ ಪಾಳುಬಿದ್ದು, ಭೂತ ಬಂಗಲೆಯಾಗಿ ಮಾರ್ಪಟ್ಟಿದೆ. ಕೊಡಗು (Kodagu) ಜಿಲ್ಲೆಯಿಂದ ಸರ್ಕಾರದ (Government) ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತುಂಬುವ ಅಬಕಾರಿ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ 2006 ರಿಂದ ಇದುವರೆಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎನ್ನುವುದು ನಿಜಕ್ಕೂ ಅಚ್ಚರಿಯ ವಿಷಯ. ಹೌದು ಅಬಕಾರಿ ಇಲಾಖೆಯ ಕಟ್ಟಡ (Building) ನಿರ್ಮಾಣಕ್ಕೆಂದು 2006 ರಲ್ಲಿ ಲೋಕೋಪಯೋಗಿ ಇಲಾಖೆ ಅಂದಾಜು ಪಟ್ಟಿ ತಯಾರಿಸಿ ಎರಡುವರೆ ಕೋಟಿ ರೂಪಾಯಿ ಅನುದಾನ ಬೇಕು ಎಂದು ವರದಿ ನೀಡಿತ್ತು.
70 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
ಇದನ್ನು ಸರ್ಕಾರಕ್ಕೆ ನೀಡಿದ್ದ ಅಬಕಾರಿ ಇಲಾಖೆಗೆ ಅಂದು 70 ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಈ ಅನುದಾನ ಬಳಸಿ ಮಡಿಕೇರಿ ಹೊರವಲಯದಲ್ಲಿರುವ ಕೂಟವೊಳೆ ಸಮೀಪದಲ್ಲಿ ಕಟ್ಟಡದ ಕಾಮಗಾರಿಯನ್ನು ಮಾಡಲಾಗಿತ್ತು. ಅದಾದ ಮೇಲೆ ಮೂಲಸೌಕರ್ಯಕ್ಕೂ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ನೆಲ ಅಂತಸ್ತು ಕಟ್ಟಡ ನಿರ್ಮಾಣವಾಗಿದ್ದರೂ 16 ವರ್ಷಗಳಿಂದ ಕಟ್ಟಡ ಬಳಕೆಯೇ ಆಗಲಿಲ್ಲ.
ಕಾಡು ಬೆಳೆದು ಇಡೀ ಕಟ್ಟಡ ಶಿಥಿಲಾವಸ್ಥೆ
ಕಟ್ಟಡದ ಸುತ್ತಮುತ್ತ ಸಂಪೂರ್ಣ ಕಾಡು ಬೆಳೆದು ಇಡೀ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ವಿಪರ್ಯಾಸವೆಂದರೆ ಈ ಇಲಾಖೆಯ ಕಚೇರಿ ಸದ್ಯ ಮಡಿಕೇರಿ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಪ್ರತೀ ತಿಂಗಳ ಬರೋಬ್ಬರಿ 86 ಸಾವಿರ ರೂಪಾಯಿಯನ್ನು ಬಾಡಿಗೆ ಹಣವಾಗಿ ಪಾವತಿ ಮಾಡಲಾಗುತ್ತಿದೆ. ಅಂದರೆ ವಾರ್ಷಿಕ ಬರೋಬ್ಬರಿ 10.32 ಲಕ್ಷ ಹಣವನ್ನು ಬಾಡಿಗೆಯಾಗಿ ಖಾಸಗಿ ವ್ಯಕ್ತಿಗೆ ಕೊಡಲಾಗುತ್ತಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇಲಾಖೆ ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಿದರೆ ಅನುದಾನಕ್ಕಾಗಿ ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.
ಇದನ್ನೂ ಓದಿ: Gubbi Srinivas: ರಾಜೀನಾಮೆ ಕೇಳೋಕೆ ಅವನ್ಯಾರು; H.D ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ವಾಗ್ದಾಳಿ
ಕೊಡಗಿನಲ್ಲಿ ಅತೀ ಹೆಚ್ಚು ಮದ್ಯ ಮಾರಾಟ
2018 ರಲ್ಲೂ ಕೂಡ ಇದನ್ನು ರಿನೋವೇಷನ್ ಮಾಡುವುದರ ಜೊತೆಗೆ ಅಗತ್ಯವಿರುವಷ್ಟು ಕಟ್ಟಡ ಮತ್ತು ಮೂಲ ಸೌಕರ್ಯಕ್ಕೆ ಅಂದಾಜು ಪಟ್ಟಿ ತಯಾರಿಸಿದ್ದು, 4.95 ಕೋಟಿ ಅನುದಾನ ಬೇಕೆಂದು ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಬಿಡುಗಡೆಯಾಗಿಲ್ಲ. ಆ ಬಳಿಕ 2021 ರಲ್ಲೂ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಇಲಾಖೆ ಉಪ ಆಯುಕ್ತ ಹೇಳುತ್ತಾರೆ. ಜಿಲ್ಲೆಗೆ ಅತೀ ಹೆಚ್ಚು ಪ್ರವಾಸಿಗರು ಬಂದು ಹೋಗುತ್ತಾರೆ. ಜೊತೆಗೆ ಜಿಲ್ಲೆಯಲ್ಲಿ ಮದುವೆ ಮತ್ತಿತರ ಸಮಾರಂಭಗಳಲ್ಲಿ ಮದ್ಯ ಅತೀ ಹೆಚ್ಚು ಬಳಕೆ ಆಗುವುದರಿಂದ ಕೊಡಗಿನಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತದೆ.
ಅನುದಾನ ಬಿಡುಗಡೆ ಮಾಡಿಲ್ಲ
ಹೀಗಾಗಿ ಸರ್ಕಾರಿ ಅತೀ ಹೆಚ್ಚು ಆದಾಯ ತಂದುಕೊಡುತ್ತದೆ. ಇಷ್ಟಾಗಿಯೂ ಸರ್ಕಾರ ಇದೇ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎನ್ನುವುದು ಅಚ್ಚರಿಯ ವಿಷಯ. ಹೀಗಾಗಲೇ 70 ಲಕ್ಷ ವ್ಯಯಿಸಿ ಮಾಡಿರುವ ಕಟ್ಟಡ ಸಂಪೂರ್ಣ ಹಾಳಾಗಿದ್ದು ಆ 70 ಲಕ್ಷ ಜನರ ದುಡ್ಡು ಹಾಳಾಗಿ ಹೋಗಿದೆ.
ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ
ಸರ್ಕಾರಕ್ಕೆ ನಷ್ಟ ಸರಿ ಮಾಡುವಂತೆ ಆಗ್ರಹ
ಇತ್ತ ಪ್ರತಿ ತಿಂಗಳು 86 ಸಾವಿರ ಬಾಡಿಗೆ ಕೊಡುತ್ತಿರುವುದರಿಂದ ಇದರಿಂದಲೂ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಕೂಡಲೇ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾಗಿರುವ ಹಣವನ್ನು ಬಿಡುಗಡೆ ಮಾಡಿ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಸರಿಮಾಡಬೇಕು ಎನ್ನುವುದು ಜನರ ಆಗ್ರಹ.
ವರದಿ; ರವಿ ಸಾನೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ