ಬಿಸಿಲನಾಡಲ್ಲಿ ಅಧಿಕ ಮಳೆ, ಕಡಿಮೆಯಾದ ತೊಗರಿ ಇಳುವರಿ; ಸಂಕಷ್ಟದಲ್ಲಿ ರೈತರು

ನೀರಿಕ್ಷೆಗಿಂತ ಹೆಚ್ಚಿನ ಮಳೆಯಾದ ಪರಿಣಾಮ ಈಗ ಇಳುವರಿ ಕಡಿಮೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಯಚೂರು (ಜ. 8): ಬಿಸಿಲ ನಾಡ ಜಿಲ್ಲೆಯಲ್ಲಿ ಭತ್ತ, ಹತ್ತಿಯೊಂದಿಗೆ ಪ್ರಮುಖ ಬೆಳೆ ತೊಗರಿಯಾಗಿದೆ. ಬಹುತೇಕ ರೈತರು ಮಳೆಯಾಶ್ರಿತದಲ್ಲಿ ತೊಗರಿಯನ್ನು ಬೆಳೆಯುತ್ತಿದ್ದಾರೆ. ಈ ಬಾರಿ ಮಳೆ ಉತ್ತಮವಾಗಿ ಆದ ಹಿನ್ನಲೆ ರೈತರು ನಿಗಿದಿಗಿಂತ ಅಧಿಕ ಪ್ರಮಾಣದ ತೊಗರಿಯನ್ನು ಬಿತ್ತನೆ ಮಾಡಿದ್ದಾರೆ. ಆದರೆ, ನಿರೀಕ್ಷೆಗಿಂತ ಹೆಚ್ಚಿನ ಮಳೆಯಾದ ಪರಿಣಾಮ ಈಗ ಇಳುವರಿ ಕಡಿಮೆಯಾಗಿದೆ. ಈ ನಡುವೆ  ರೈತರು  ತೊಗರಿಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಮಾರುಕಟ್ಟೆಯಲ್ಲಿಯೂ ದರ ಇಳಿಕೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶದಲ್ಲಿ ಒಟ್ಟು 46,410 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬೆಳೆಯುವ ಪ್ರದೇಶವೆಂದು ಗುರುತಿಸಲಾಗಿತ್ತು.  ಅದರೆ ಬಿತ್ತನೆಯಾಗಿದ್ದ 10,2802 ಹೆಕ್ಟರ್ ಪ್ರದೇಶದಲ್ಲಿ. ಇನ್ನು ಮಳೆಯಾಶ್ರಿತ ಪ್ರದೇಶದಲ್ಲಿ 43560 ಹೆಕ್ಟರ್ ಪ್ರದೇಶ ಪ್ರದೇಶದಲ್ಲಿ ಬಿತ್ತನೆ ಮಾಡುವ ಅಂದಾಜು ಇತ್ತು, ಆದರೆ, ಬಿತ್ತನೆ ಮಾಡಿದ್ದು 95664 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಡಿದ್ದಾರೆ.

ಈ ಬಾರಿ ಅಧಿಕ ಮಳೆಯಾಗಿದ್ದರಿಂದ ತೊಗರಿ ಬೆಳೆಯಲು ಖರ್ಚು ಅಧಿಕವಾಗಿ ಬಂದಿದೆ, ಕಳೆ, ಔಷಧಿ, ಸಿಂಪಡಣೆಯಿಂದ ಪ್ರತಿ ಎಕರೆಗೆ 8-10 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಪ್ರತಿ ಎಕರೆಗೆ ಸುಮಾರು 4-5 ಕ್ವಿಂಟಾಲ್ ತೊಗರಿ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅಧಿಕ ಮಳೆಯಿಂದಾಗಿ  ಪ್ರತಿ ಎಕರೆ 2-3 ಕ್ವಿಂಟಾಲ್ ಮಾತ್ರ ಇಳುವರಿ ಬಂದಿದೆ, ಇದರಿಂದಾಗಿ ರೈತರಿಗೆ ಬೆಳೆಯಲು ಮಾಡಿದ ಖರ್ಚು ಸಹ ಬರುವುದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ತೊಗರಿಗೆ ಕ್ವಿಂಟಾಲಿಗೆ 6,000 ರೂಪಾಯಿಯವರೆಗೂ ಮಾರಾಟವಾಗುತ್ತಿದ್ದು,  ರೈತನಿಗೆ ಲಾಭವಾಗುತ್ತಿಲ್ಲ.ಕಳೆದ ವರ್ಷ ತೊಗರಿಯನ್ನು ಬೆಂಬಲ ಬೆಲೆಯಲ್ಲಿ 6,100 ರೂಪಾಯಿಗೆ ಖರೀದಿಸಿದ್ದರು, ಆದರೆ ಈ ವರ್ಷ ಇನ್ನೂ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗಿಲ್ಲ. ಈಗ ತೊಗರಿ ಖರೀದಿಗೆ ನೊಂದಣಿ ಕಾರ್ಯ ನಡೆದಿದೆ, ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ 6000 ರೂಪಾಯಿಯವರೆಗೂ ಮಾರಾಟವಾಗುತ್ತಿರುವದರಿಂದ ರೈತರು ಮುಕ್ತ ಮಾರುಕಟ್ಟೆಗೆ ತೊಗರಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾರೆ. ರೈತ ತೊಗರಿ ಬೆಳೆಯಲು ಮಾಡಿರುವ ಖರ್ಚು ವಾಪಸ್ಸು ಬಂದು ಒಂದಿಷ್ಟು ಲಾಭವಾಗಬೇಕಾದರೆ ಕನಿಷ್ಠ 7500 ರೂಪಾಯಿಯನ್ನು ಕ್ವಿಂಟಾಲ್ ಗೆ ನೀಡಬೇಕು. ಈಗ ಮಾರಾಟ ಮಾಡಿದರೆ ರೈತ ನಷ್ಟ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ರೈತರು.

ತೊಗರಿ ಸೇರಿದಂತೆ ಎಲ್ಲಾ ಬೆಳೆಗೆ ಜಿಲ್ಲೆಯಲ್ಲಿ ಈ ಬಾರಿ 58509 ರೈತರು 175305 ಎಕರೆ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಸಿದ್ದಾರೆ,  ಮಳೆಯಿಂದ ಬೆಳೆ ಹಾನಿಯಾಗಿದ್ದು ಜಿಲ್ಲಾಡಳಿತವು ಸರಿಯಾದ ಸಮೀಕ್ಷೆ ಮಾಡಿ ಹಾನಿಯಾಗಿರುವುದಕ್ಕೆ ಬೆಳೆ ವಿಮೆ ಕೊಡಿಸಬೇಕಾಗಿದೆ. ಈಗ ಕಳೆದೆರಡು ದಿನಗಳಿಂದ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ತುಂತುರು ಮಳೆಯಾಗುತ್ತಿದೆ., ಕಟಾವು ಮಾಡಿ ರಾಶಿ ಹಾಕಿರುವ ತೊಗರಿ ಒಣಗಿಸಿ ಮಾರಾಟ ಮಾಡಬೇಕು. ಆದರೆ ಒಣಗಿಸಲು ಆಗುತ್ತಿಲ್ಲ, ಬಹಳ ಹೊತ್ತು ಹೊದಿಕೆ ಹೊದಿಸಿ ಇಡುವದರಿಂದ ತೊಗರಿ ಹಾಳಾಗುತ್ತಿದೆ, ಇದರಿಂದ ಇನ್ನಷ್ಟು ನಷ್ಟವಾಗಲಿದೆ ಎನ್ನುತ್ತಿದ್ದಾರೆ ರೈತರು.
Published by:Seema R
First published: