ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು | ಪರೀಕ್ಷೆ ದೃಷ್ಟಿಗಿಂತ ಜ್ಞಾನಾರ್ಜನೆ ನಿಟ್ಟಿನಲ್ಲಿ ಕಲಿಸಿದರೆ ಮಕ್ಕಳಿಗೆ ಯಾವ ಪರೀಕ್ಷೆಗಳು ಕಷ್ಟವಲ್ಲ

ಶಿಕ್ಷಕರು ತಿಳಿದೋ –ತಿಳಿಯದೆಯೋ ತರಗತಿ ಕೋಣೆಯಲ್ಲಿ ಪಾಠವನ್ನು ಮಾಡುವಾಗ ಅನೇಕ ಬಾರಿ ‘ಈ ಪಾಠ ಪರೀಕ್ಷೆ ದೃಷ್ಟಿಯಿಂದ ಮುಖ್ಯ’ ಎಂದೋ ಅಥವಾ ಇದು ‘ಅತ್ಯಂತ ಕಷ್ಟಕರವಾದ ವಿಷಯವಾದ್ದರಿಂದ ಪರೀಕ್ಷೆಯಲ್ಲಿ ಹಲವು ಬಾರಿ ಕೇಳಿದ್ದಾರೆ, ಎಚ್ಚರವಿರಲಿ?’ಎಂದೋ ಹೇಳುವುದು ರೂಢಿಗತವಾಗಿದೆ. ಮಕ್ಕಳಿಗೆ ಇಲ್ಲಿಂದಲೇ ಪರೀಕ್ಷೆಯ ಭಯ ಪ್ರಾರಂಭವಾಗುತ್ತದೆ.

ಶಿಕ್ಷಣ ತಜ್ಞ ನಿರಂಜನಾರಾಧ್ಯ

ಶಿಕ್ಷಣ ತಜ್ಞ ನಿರಂಜನಾರಾಧ್ಯ

  • Share this:
ಶಿಕ್ಷಣ ವ್ಯವಸ್ಥೆಯಲ್ಲಿನ ಕಲಿಕಾ ಪದ್ಧತಿಯಲ್ಲಿ ನಾವು ಸಮಗ್ರ ಆಮೂಲಾಗ್ರ ಬದಲಾವಣೆಗಳನ್ನು ತರುವವರೆಗೆ ಪರೀಕ್ಷೆಗಳು ನಮಗೆ ಅನಿವಾರ್ಯ ಮತ್ತು ಅಗತ್ಯ (Examination is a necessary evil) . ಹೀಗಾಗಿ, ಪರೀಕ್ಷೆಗಳ ಬಗ್ಗೆ ಭಯ, ಆತಂಕ ಮತ್ತು ಒತ್ತಡಗಳನ್ನು ಬೆಳೆಸಿಕೊಳ್ಳುವುದು (ವಿದ್ಯಾರ್ಥಿಗಳು) ಅಥವಾ ಭಯ, ಆತಂಕ ಮತ್ತು ಒತ್ತಡಗಳನ್ನು ಹುಟ್ಟು ಹಾಕುವುದರಿಂದ (ಶಿಕ್ಷಕರು, ತಂದೆ-ತಾಯಿ ಮತ್ತು ಸಮಾಜ) ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಬದಲಾಗಿ, ಪರೀಕ್ಷೆಗಳನ್ನು ಅಗತ್ಯ ಸಿದ್ಧತೆ ಮತ್ತು ಆತ್ಮಸ್ಥೈರ್ಯದಿಂದ ಎದುರಿಸುವ ಕಾರ್ಯತಂತ್ರ ಮತ್ತು ಮನೋಬಲವನ್ನು ಬೆಳೆಸಿಕೊಳ್ಳುವ ಬಗ್ಗೆ ಯೋಚಿಸಬೇಕು.

ಈ ಸರಣಿ ಬರಹಗಳು, ಪರೀಕ್ಷೆಗಳ ಸಿದ್ಧತೆ ಕುರಿತಂತೆ ವಿದ್ಯಾರ್ಥಿಗಳು , ಶಿಕ್ಷಕರು , ಪಾಲಕರು-ಪೋಷಕರು ಮತ್ತು ನಾಗರಿಕ ಸಮಾಜ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿ ಕೈಗೊಳ್ಳಬಹುದಾದ ಸಣ್ಣ-ಸಣ್ಣ ಉಪಕ್ರಮಗಳ ಬಗ್ಗೆ ಚರ್ಚಿಸುವ ಆಶಯವನ್ನು ಹೊಂದಿವೆ.

ಪರೀಕ್ಷೆ ಎಂದರೇನು?

ಶಿಕ್ಷಣ ವ್ಯವಸ್ಥೆಯ ವಿವಿಧ ಹಂತಗಳಾದ ಶಾಲೆ, ಪದವಿ-ಪೂರ್ವ (ಕೆಲವು ಪಠ್ಯಕ್ರಮಗಳಲ್ಲಿ 11 ಮತ್ತು 12ನೇ ತರಗತಿ ಕೂಡ ಉನ್ನತ ಪ್ರೌಢ ಶಿಕ್ಷಣದ ಶಾಲಾ ಹಂತವಾಗಿರುತ್ತದೆ), ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಮಕ್ಕಳು ಕಲಿಕೆಯ ಮೂಲಕ ಪಡೆದುಕೊಂಡಿರುವ ಜ್ಞಾನವನ್ನು (ಬಹುತೇಕ ಸಂದರ್ಭದಲ್ಲಿ ಇದು ಕಂಠ ಪಾಠ- ಅಥವಾ ಸ್ಮರಣೆಯ ಮೂಲಕ ಪಡೆದ ಮಾಹಿತಿಯಾಗಿರುವುದರಿಂದ ಒತ್ತಡವನ್ನು ಸೃಷ್ಟಿಸುತ್ತದೆ) ಮೌಲ್ಯಮಾಪನ ಮಾಡಲು ಬಳಸುವ ಸಾಧನವೇ ಪರೀಕ್ಷೆ.

ಪರೀಕ್ಷೆಗೆ ಒಂದು ನಿರ್ದಿಷ್ಟ ಚೌಕಟ್ಟಿಗೆ ಒಳಪಟ್ಟಿರುತ್ತದೆ

ಸಾರ್ವಜನಿಕ (ಪಬ್ಲಿಕ್) ಪರೀಕ್ಷೆ ಅಥವಾ ಸಾಮಾನ್ಯವಾಗಿ ಪರೀಕ್ಷೆಯನ್ನು ವಿದ್ಯಾರ್ಥಿ, ಶಿಕ್ಷಕರು ಮತ್ತು ಪಾಲಕರ ಇಷ್ಟ ಅಥವಾ ಮನಸೋಇಚ್ಛೆ ನಡೆಸಲು ಸಾಧ್ಯವಿಲ್ಲ. ಪರೀಕ್ಷೆಗಳು ವಸ್ತುನಿಷ್ಠವಾಗಿ ಮತ್ತು ಪಾರದರ್ಶಕತೆಯಿಂದ ನಡೆಯಬೇಕಾಗುತ್ತದೆ. ಕೆಲವು ಅಂಗವಿಕಲತೆ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ಸಿಗಬಹುದಾದ ವಿಶೇಷ ರಿಯಾತಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಮಕ್ಕಳು ಪರೀಕ್ಷೆಯನ್ನು ಏಕರೂಪವಾಗಿ ಎದುರಿಸಬೇಕಾಗುತ್ತದೆ. ಅಂದರೆ, ಪರೀಕ್ಷೆಯ ವಿಷಯ, ಸ್ಥಳ, ಸಮಯ, ಪರೀಕ್ಷೆಯ ಅವಧಿ, ಅನುಸರಿಸಬೇಕಾದ ನಿಯಮ ಇತ್ಯಾದಿಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಸರಿಯಾಗಿ ಅರ್ಥೈಸಿಕೊಂಡು ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕಾಗುತ್ತದೆ.

ಪರೀಕ್ಷೆಗಾಗಿ ಕಲಿಕೆಯಲ್ಲ ಜ್ಞಾನಕ್ಕಾಗಿ ಕಲಿಕೆ

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಶಿಕ್ಷಕರು-ಪಾಲಕರು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಹೇಳುವ ಮೂಲಕ ಭಯ ಮತ್ತು ಆತಂಕವನ್ನು ಸೃಷ್ಟಿಸುವುದು ಸಾಮಾನ್ಯ ಸಂಗತಿಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನಾರ್ಜನೆಗಾಗಿ ಕಲಿಯುವುದಕ್ಕಿಂತ ಹೆಚ್ಚಾಗಿ ಪರೀಕ್ಷೆಯಲ್ಲಿ ಅಂಕ ಅಥವಾ Rank ಗಳಿಸಲೆಂದೇ ಕಲಿಯುವ ಪರಿಪಾಠ ಬಂದಿದೆ. ಶಿಕ್ಷಕರು ತಿಳಿದೋ –ತಿಳಿಯದೆಯೋ ತರಗತಿ ಕೋಣೆಯಲ್ಲಿ ಪಾಠವನ್ನು ಮಾಡುವಾಗ ಅನೇಕ ಬಾರಿ ‘ಈ ಪಾಠ ಪರೀಕ್ಷೆ ದೃಷ್ಟಿಯಿಂದ ಮುಖ್ಯ’ ಎಂದೋ ಅಥವಾ ಇದು ‘ಅತ್ಯಂತ ಕಷ್ಟಕರವಾದ ವಿಷಯವಾದ್ದರಿಂದ ಪರೀಕ್ಷೆಯಲ್ಲಿ ಹಲವು ಬಾರಿ ಕೇಳಿದ್ದಾರೆ, ಎಚ್ಚರವಿರಲಿ?’ಎಂದೋ ಹೇಳುವುದು ರೂಢಿಗತವಾಗಿದೆ. ಮಕ್ಕಳಿಗೆ ಇಲ್ಲಿಂದಲೇ ಪರೀಕ್ಷೆಯ ಭಯ ಪ್ರಾರಂಭವಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಪರೀಕ್ಷಾ ದೃಷ್ಟಿಗಿಂತಲೂ ಕಲಿಕೆ ಮತ್ತು ಜ್ಞಾನಾರ್ಜನೆ ದೃಷ್ಟಿಯಿಂದ ಕಲಿಸಿದರೆ ಮಕ್ಕಳಿಗೆ ಯಾವ ಪರೀಕ್ಷೆಗಳು ಕಷ್ಟವೆನಿಸುವುದಿಲ್ಲ. ಆದ್ದರಿಂದ, ಶಿಕ್ಷಕರು ಕಲಿಕೆಯನ್ನು ಸಂತಸದಾಯಕ ಪ್ರಕ್ರಿಯೆಯಾಗಿಸುವ ಮತ್ತು ಮಕ್ಕಳು ವಿಷಯಗಳನ್ನು ಸುಲಭವಾಗಿ ತಿಳಿದು ಅರ್ಥೈಸಿಕೊಳ್ಳುವ ರೀತಿಯಲ್ಲಿ ಕಲಿಕಾ ಪ್ರಕ್ರಿಯೆ ಮತ್ತು ಅನುಭವಗಳನ್ನು ಒದಗಿಸಬೇಕು.

ನಿಜ ಹೇಳಬೇಕೆಂದರೆ, ಎಲ್ಲವೂ ಶಿಕ್ಷಕರಿಂದ ಪ್ರಾರಂಭವಾಗುತ್ತದೆ. ಅಂದರೆ, ಒಂದು ವಿಷಯದ ಕಲಿಕೆ ಸುಲಭ-ಕಠಿಣ ಆ ಶಿಕ್ಷಕರನ್ನು ಅವಲಂಬಿಸಿರುತ್ತದೆ. ಶಿಕ್ಷಕರು ತಾವು ಕಲಿಸುವ ವಿಷಯವನ್ನು ಮಕ್ಕಳು ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳುವ ಮತ್ತು ತಮ್ಮದೇ ಭಾಷೆಯಲ್ಲಿ ಅದನ್ನು ಪುನಃ ಬಿಡಿಸಿ ಹೇಳುವ ರೀತಿಯಲ್ಲಿ ಕಲಿಸಿದರೆ, ಮಕ್ಕಳು ಯಾವ ಪರೀಕ್ಷೆಗೂ ಹೆದರುವ ಅವಶ್ಯಕತೆಯಿರುವುದಿಲ್ಲ. ಹೀಗಾಗಿ , ಮಕ್ಕಳ ಆತ್ಮಸ್ಥೈರ್ಯ ಮತ್ತು ವಿಷಯ ಜ್ಞಾನ ಶಿಕ್ಷಕರು ಕಲಿಸುವ ವಿಧಾನ ಮತ್ತು ಒದಗಿಸುವ ಕಲಿಕಾ ಅನುಭವಗಳನ್ನು ಅವಲಂಬಿಸಿರುತ್ತದೆ.

ಎಲ್ಲಾ ಮಕ್ಕಳು ಎಲ್ಲಾ ವಿಷಯದಲ್ಲಿ ಒಂದೇ ಬಗೆಯ ಆಸಕ್ತಿ ಅಥವಾ ಸಾಮರ್ಥ್ಯ ಹೊಂದಿರುವುದಿಲ್ಲ

ಎಲ್ಲಾ ಮಕ್ಕಳು ಎಲ್ಲಾ ವಿಷಯಗಳಲ್ಲಿ ಒಂದೇ ಬಗೆಯ ಆಸಕ್ತಿ ಅಥವಾ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಪ್ರತಿಯೊಂದು ಮಗುವು ವಿಶಿಷ್ಟವಾಗಿರುತ್ತದೆ ಮತ್ತು ವಿವಿಧ ಬಗೆಯ ಅಭಿರುಚಿಯನ್ನು ಹೊಂದಿರುತ್ತವೆ. ತಂದೆ-ತಾಯಂದಿರು ಮಕ್ಕಳ ಈ ವೈಶಿಷ್ಟತೆಯನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸುವುದು ಅವರ ಸಾಮರ್ಥ್ಯಗಳನ್ನು ಇತರೆ ಮಕ್ಕಳ ಸಾಮರ್ಥ್ಯಗಳೊಂದಿಗೆ ಓರೆ ಹಚ್ಚುವುದು ತಪ್ಪು. ತಮ್ಮ ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಗೌರವಿಸಿ ಅದರಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಲು ಪ್ರೋತ್ಸಾಹಿಸಬೇಕು. ಇದು ಎಲ್ಲ ಪಾಲಕರು ಅರಿತುಕೊಳ್ಳಬೇಕಾದ ಮಹತ್ವದ ಅಂಶ. ಮಕ್ಕಳನ್ನು ಪರೀಕ್ಷೆಗೆ ಆರೋಗ್ಯಕರವಾಗಿ ಅಣಿಗೊಳಿಸುವ ಕೆಲಸ ಇಲ್ಲಿಂದ ಪ್ರಾರಂಭವಾಗುತ್ತದೆ.

  • ನಿರಂಜನಾರಾಧ್ಯ ವಿ.ಪಿ.


(ಲೇಖಕರು: ಶಿಕ್ಷಣ ತಜ್ಞರು ಹಾಗೂ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಸೀನಿಯರ್ ಫೆಲೋ)
First published: