ಕೋಲಾರ: ಕಾಂಗ್ರೆಸ್‌ನಲ್ಲಿ (Congress) ಸಿದ್ದರಾಮಯ್ಯ (Siddaramaiah) ಮೂಲೆಗುಂಪು ಮಾಡಿದರೆ ಕಷ್ಟ. ಕರ್ನಾಟಕ (Karnataka) ರಾಜ್ಯದಲ್ಲಿ ಸಿದ್ದರಾಮಯ್ಯ ಮುನಿಸಿಕೊಂಡು ಪಕ್ಕಕ್ಕೆ ಹೋದರೆ ಆಂಧ್ರ ಪ್ರದೇಶದಲ್ಲಿ (Andhra Pradesh) ಕಾಂಗ್ರೆಸ್‌ಗೆ ಬಂದ ಗತಿಯೇ ಇಲ್ಲಿಯೂ ಬರುತ್ತದೆ ಎಂದು ಸಿದ್ದರಾಮಯ್ಯ ಆಪ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ರಮೇಶ್ ಕುಮಾರ್ ಅವರ ಮಾತುಗಳನ್ನು ಕೇಳಿದರೆ ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯರನ್ನ ಮೂಲೆ ಗುಂಪು ಮಾಡಲು ಹುನ್ನಾರ ನಡೆಸಲಾಗುತ್ತಿದೆಯಾ ಎಂಬ ಪ್ರಶ್ನೆ ಎದುರಾಗುತ್ತದೆ.
ಆಂಧ್ರ ಕಾಂಗ್ರೆಸ್‌ಗೆ ಬಂದ ಗತಿಯೇ ಇಲ್ಲಿಯೂ ಬರುತ್ತದೆ
ಕೋಲಾರದ ಶ್ರೀನಿವಾಸಪುರದಲ್ಲಿ ನಡೆದ ಕುರುಬರ ಸಂಘದ ಸಭೆಯಲ್ಲಿ ಮಾತನಾಡಿರುವ ರಮೇಶ್ ಕುಮಾರ್ ಅವರು, ಸಿದ್ದರಾಮಯ್ಯರನ್ನ ಕಾಂಗ್ರೆಸ್ ಪಕ್ಷದಲ್ಲಿ ಮೂಲೆ ಗುಂಪು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಇರುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಮುನಿಸಿಕೊಂಡು ಪಕ್ಕಕ್ಕೆ ಹೋದರೆ ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಂದ ಗತಿಯೇ ಇಲ್ಲಿಯೂ ಬರುತ್ತದೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ನಿಂದ ಹೊರ ಬಂದರೆ ಅವರ ಸ್ಥಾನ ನನಗೆ ಸಿಗುತ್ತೆ ಎಂಬ ಆಸೆ ಇಲ್ಲ. ಸಿದ್ದರಾಮಯ್ಯ ಕೋಲಾರಕ್ಕೆ ಬಾರದೆ ಹೋದರೆ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಳುಗಿ ಹೋಗುತ್ತೆ. ಮತ್ತೆ ಮತ್ತೆ ಕಸರತ್ತು ಮಾಡಿ ರಾಹುಲ್ ಗಾಂಧಿ ಮನಸ್ಸು ಪರಿವರ್ತನೆ ಮಾಡಿಸಬೇಕು. ಇಲ್ಲ ಎಂದರೆ ಸಿದ್ದರಾಮಯ್ಯರನ್ನು ಕರ್ನಾಟಕದಲ್ಲಿ ಮತ್ತೆ ವಿರೋಧ ಪಕ್ಷದಲ್ಲಿ ಕೂರಿಸಬೇಕಾಗುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ನಾನು ಮಾನಸಿಕವಾಗಿ ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧ
ಇನ್ನು, ನಿನ್ನೆಯಷ್ಟೇ ಕೋಲಾರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಲು ಮಾನಸಿಕವಾಗಿ ಸಿದ್ಧ ಎಂದು ಹೇಳಿದ್ದರು. ಕೋಲಾರ ಸ್ಪರ್ಧೆ ಹಿನ್ನಲೆ ವಾರ್ ರೂಮ್ಗೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಮಾನಸಿಕವಾಗಿ ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧವಾಗಿದ್ದೇನೆ. ಆದರೆ ಹೈಕಮಾಂಡ್ ತೀರ್ಮಾನದಂತೆ ಆಗಲಿದೆ. ಸ್ಪರ್ಧೆ ಕುರಿತಂತೆ ಮಾಧ್ಯಮಗಳೇ ಗೊಂದಲ ಉಂಟು ಮಾಡುತ್ತಿವೆ ಎಂದು ದೂರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ