ಸಂಪುಟ ವಿಸ್ತರಣೆ ಪದೇ ಪದೇ ವಿಳಂಬ: ಆರ್. ಶಂಕರ್, ಎಸ್.ಟಿ. ಸೋಮಶೇಖರ್ ಏನಂತಾರೆ?

ಸಚಿವ ಸ್ಥಾನ ಸಿಗದಿದ್ದರೆ ಮುಂದೇನು ಎಂದು ನೋಡೋಣ. ತಾಳಿದವನು ಬಾಳಿಯಾನು ಎಂಬಂತೆ ಕಾದು ನೋಡೋಣ. ಅವರ ಮಾತಿನ ಮೇಲೆ ನಂಬಿಕೆ ಇದೆ. ನನಗೆ ಸಚಿವ ಸ್ಥಾನ ಸಿಗದಿದ್ದರೆ ಕಾರ್ಯಕರ್ತರಿಗೆ ಬೇಸರವಾಗುವುದು ನಿಶ್ಚಿತ ಎಂದು ಆರ್ ಶಂಕರ್ ಪರೋಕ್ಷ ಅಸಮಾಧಾನವನ್ನೂ ಹೊರಹಾಕಿದ್ಧಾರೆ.

ಆರ್​ ಶಂಕರ್​

ಆರ್​ ಶಂಕರ್​

  • News18
  • Last Updated :
  • Share this:
ಬೆಂಗಳೂರು(ಜ. 28): ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆಯ ಕಗ್ಗಂಟು ಈಗಲೇ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಜ. 31ಕ್ಕೆ ಸಂಪುಟ ವಿಸ್ತರಣೆ ಆಗಬಹುದು ಎನ್ನಲಾಗುತ್ತಿದೆಯಾದರೂ ಯಾರ್ಯಾರಿಗೆ ಮಂತ್ರಿಭಾಗ್ಯ ದೊರೆಯುತ್ತದೆ ಎಂಬ ಸುಳಿವು ಸ್ಪಷ್ಟವಾಗಿ ಸಿಕ್ಕಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ರಾಜೀನಾಮೆ ಕೊಟ್ಟು ಮೈತ್ರಿ ಸರಕಾರ ಉರುಳಿಸಿದ್ದ ಎಲ್ಲಾ 17 ಮಂದಿಗೂ ಸಚಿವ ಸ್ಥಾನ ಸಿಗಬೇಕೆಂಬ ಕೂಗು ಒಂದು ಕಡೆ ಇದೆ. ಈ 17 ಮಂದಿ ಪೈಕಿ ಉಪಚುನಾವಣೆಯಲ್ಲಿ ಗೆದ್ದ 11 ಮಂದಿಗಾದರೂ ಸಚಿವ ಸ್ಥಾನ ಕೊಡಿ ಎಂಬ ಪ್ರಬಲ ಬೇಡಿಕೆ ಇನ್ನೊಂದೆಡೆ ಇದೆ. ಆದರೆ, ಬಿಜೆಪಿ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳ ಪ್ರಕಾರ ಬಿಎಸ್​ವೈ ಸಂಪುಟ ವಿಸ್ತರಣೆಯಲ್ಲಿ ಸುಮಾರು ಏಳೆಂಟು ಮಂದಿಯನ್ನಷ್ಟೇ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದು ಮಾಜಿ ರೆಬೆಲ್​​ಗಳನ್ನು ಹತಾಶೆಗೊಳಿಸಿದೆ. ಬಹುತೇಕ ಯಾವ ರೆಬೆಲ್​ಗಳೂ ಕೂಡ ಯಾವುದೇ ಅಪಸ್ವರ ಎತ್ತದೇ ಬಹುತೇಕ ಮೌನಕ್ಕೆ ಶರಣಾಗಿದ್ದಾರೆ. ಆದರೂ ಒಳಗಿಂದೊಳಗೆ ಹತಾಶೆ ಮಡುಗಟ್ಟಿದ್ದು, ಸಂಪುಟ ವಿಸ್ತರಣೆಯ ದಿನ ವ್ಯತಿರಿಕ್ತ ಪರಿಸ್ಥಿತಿ ಬಂದು ಅದು ಸ್ಫೋಟಗೊಂಡರೆ ಅಚ್ಚರಿ ಇಲ್ಲ.

ಇನ್ನು, ಯಡಿಯೂರಪ್ಪ ಮನವಿ ಮೇರೆಗೆ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ ಆರ್. ಶಂಕರ್ ಅವರದ್ದಂತೂ ತೀರಾ ಸಂದಿಗ್ಧತೆಯ ಸ್ಥಿತಿಯಾಗಿದೆ. ಮೈತ್ರಿ ಸರಕಾರದಲ್ಲಿ ಎರಡು ಬಾರಿ ಮಂತ್ರಿಯಾಗಿದ್ದ ಅವರು ಈಗ ಅಕ್ಷರಶಃ ಅತಂತ್ರರಾಗಿದ್ಧಾರೆ. ರಾಣೆಬೆನ್ನೂರು ಟಿಕೆಟ್ ತ್ಯಾಗ ಮಾಡಿದರೆ ಎಂಎಲ್​ಸಿ ಮಾಡಿ ಆ ನಂತರ ಮಂತ್ರಿ ಮಾಡುತ್ತೇವೆ ಎಂದು ಯಡಿಯೂರಪ್ಪ ವಾಗ್ದಾನ ಕೊಟ್ಟಿದ್ದರು. ಅದನ್ನು ನಂಬಿಕೊಂಡೇ ಆರ್. ಶಂಕರ್ ಇಷ್ಟೂ ದಿನ ಎಲ್ಲಿಯೂ ಅಪಸ್ವರ ಎತ್ತಿಯೇ ಇಲ್ಲ. ಅಕ್ಷರಶಃ ಜೆಂಟಲ್​ಮ್ಯಾನ್ ರೀತಿ ವರ್ತನೆ ತೋರುತ್ತಿದ್ದಾರೆ.

ಇದನ್ನೂ ಓದಿ: ಜ. 31ರಂದು ಬಿಎಸ್​ವೈ ಸಂಪುಟ ವಿಸ್ತರಣೆ ಸಾಧ್ಯತೆ

ತ್ಯಾಗಕ್ಕೆ ಫಲ ಸಿಗುವ ನಿರೀಕ್ಷೆಯಲ್ಲಿ ಶಂಕರ್:

“ಯಡಿಯೂರಪ್ಪ ಅವರ ಮಾತಿನ ಮೇರೆಗೆ ತ್ಯಾಗ ಮಾಡಿದ್ಧೇನೆ. ಅವರ ಮೇಲೆ ವಿಶ್ವಾಸ ಇದೆ. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ನಂಬಿಕೆ ಇದೆ…. ಸಚಿವ ಸ್ಥಾನ ತಪ್ಪುತ್ತೆ ಎಂದನಿಸೋದಿಲ್ಲ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ಪಕ್ಷ ಹಾಗೂ ವ್ಯಕ್ತಿ ಬಗ್ಗೆ ನಾನು ಯಾವುದೇ ರೀತಿಯ ವ್ಯತಿರಿಕ್ತ ಹೇಳಿಕೆ ನೀಡಿಲ್ಲ. ಯಡಿಯೂರಪ್ಪ ಮಾತನ್ನು ನಂಬಿ ಕೆಟ್ಟಿದ್ದೇನೆ ಎನಿಸಲ್ಲ. ಸೋತವರಿಗೆ ಸಚಿವ ಸ್ಥಾನ ಕೊಡುವುದಿಲ್ಲ ಎನ್ನುವ ಮಾತು ಚುನಾವಣೆಗೆ ಸ್ಪರ್ಧಿಸದ ತನಗೆ ಅನ್ವಯಿಸುವುದಿಲ್ಲ” ಎಂದು ಮಾಜಿ ರಾಣೆಬೆನ್ನೂರು ಶಾಸಕ ಆರ್. ಶಂಕರ್ ಹೇಳಿದ್ದಾರೆ.

ಈಗ ಖಾಲಿ ಇರುವ ಎಂಎಲ್​ಸಿ ಸ್ಥಾನದ ಟಿಕೆಟ್​ಗೆ ಲಕ್ಷ್ಮಣ್ ಸವದಿ ಜೊತೆ ಪೈಪೋಟಿ ಇರುವ ಬಗ್ಗೆ ಮಾತನಾಡಿದ ಆರ್. ಶಂಕರ್, “ಇದರ ಬಗ್ಗೆ ನಾನೇನೂ ಹೇಳಲ್ಲ. ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಕೊಡಿ ಎಂದು ದುಂಬಾಲು ಬೀಳುವುದು ನನಗಿಷ್ಟವಿಲ್ಲ. ಅವರಿಗೆ ನನ್ನ ತ್ಯಾಗ ಎಂಥದ್ದೆಂದು ಗೊತ್ತಿದೆ” ಎಂದು ತಿಳಿಸಿದ್ದಾರೆ.

ಸಚಿವ ಸ್ಥಾನ ಸಿಗದಿದ್ದರೆ ಮುಂದೇನು ಎಂದು ನೋಡೋಣ. ತಾಳಿದವನು ಬಾಳಿಯಾನು ಎಂಬಂತೆ ಕಾದು ನೋಡೋಣ. ಅವರ ಮಾತಿನ ಮೇಲೆ ನಂಬಿಕೆ ಇದೆ. ನನಗೆ ಸಚಿವ ಸ್ಥಾನ ಸಿಗದಿದ್ದರೆ ಕಾರ್ಯಕರ್ತರಿಗೆ ಬೇಸರವಾಗುವುದು ನಿಶ್ಚಿತ ಎಂದು ಆರ್ ಶಂಕರ್ ಪರೋಕ್ಷ ಅಸಮಾಧಾನವನ್ನೂ ಹೊರಹಾಕಿದ್ಧಾರೆ.

ಇದನ್ನೂ ಓದಿ: ಸ್ವಚ್ಛ ಗ್ರಾಮದಿಂದ ಸದೃಢ ಭಾರತ- ಕಸದಿಂದ ರಸ ತೆಗೆದು ಸ್ವಾವಲಂಬಿಯಾಗುತ್ತಿರುವ ಅಂಚಟಗೇರಿ ಗ್ರಾಮ

ರಮೇಶ್ ಜಾರಕಿಹೊಳಿ ಮೂಲಕ ಸಚಿವ ಸ್ಥಾನಕ್ಕೆ ತಾನು ಲಾಬಿ ಮಾಡುತ್ತಿದ್ದೇನೆ ಎಂಬ ವಿಚಾರವನ್ನು ಆರ್. ಶಂಕರ್ ಈ ಸಂದರ್ಭದಲ್ಲಿ ತಳ್ಳಿಹಾಕಿದ್ಧಾರೆ. ನಾನು ಯಾರ ಮೂಲಕವೂ ಲಾಬಿ ಮಾಡುತ್ತಿಲ್ಲ. ನನಗೆ ಆ ಅಗತ್ಯವೂ ಇಲ್ಲ. ಕೇಳುವುದಿದ್ದರೆ ನೇರವಾಗಿಯೇ ಕೇಳುತ್ತೇನೆ. ತೆರೆಮರೆಯ ಪ್ರಯತ್ನದ ಪ್ರಶ್ನೆಯೇ ಇಲ್ಲ ಎಂದು ನ್ಯೂಸ್18 ಕನ್ನಡದ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟು ದಿನವೇ ಕಾದಿದ್ದೇವೆ, ಇನ್ನೆರಡು ದಿನ ನೋಡಣ ಎಂದ ಸೋಮಶೇಖರ್:

ಇನ್ನೊಂದೆಡೆ, ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಂಪುಟ ವಿಸ್ತರಣೆಯ ವಿಳಂಬದ ಬಗ್ಗೆ ತಮಗಿರುವ ಹತಾಶೆಯನ್ನು ಹೆಚ್ಚು ತೋರ್ಪಡಿಸಿಕೊಂಡಿದ್ಧಾರೆ. ಸಂಪುಟ ವಿಸ್ತರಣೆ ಪದೇ ಪದೇ ವಿಳಂಬವಾಗುತ್ತಿರುವುದಕ್ಕೆ ಅವರಿಗಿರುವ ಹತಾಶೆಯು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.

“ಉಪಚುನಾವಣೆಯಲ್ಲಿ ಗೆದ್ದ ನಂತರ ಮಂತ್ರಿ ಮಾಡುತ್ತೇವೆ ಎಂದಿದ್ದರು. ಧನುರ್ಮಾಸ ಕಳೆದ ನಂತರ ಮಾಡುತ್ತೇವೆ ಅಂದರು. ನಂತರ ಮುಖ್ಯಮಂತ್ರಿ ವಿದೇಶಕ್ಕೆ ಹೋದರು. ವಿದೇಶದಿಂದ ಬಂದ ನಂತರ ಅಮಿತ್ ಶಾ ಜೊತೆ ಮಾತನಾಡಿ ಮಾಡುತ್ತೇವೆ ಎಂದರು. ಈಗ ಜನವರಿ 31 ಅಂದು ಹೇಳುತ್ತಿದ್ದಾರೆ. ವಾರ ಆಯ್ತು, ತಿಂಗಳು ಆಯ್ತು, ಇನ್ನೂ ಎರಡು ಮೂರು ದಿನ ಅಲ್ವಾ ನೋಡುತ್ತೇವೆ” ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ಧಾರೆ.

ಜ. 31ರೊಳಗೆ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋ ವಿಶ್ವಾಸ ಇದೆ. ಮಾಡಿ ಅಂದರೆ ನೇರವಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಾತುಕತೆ ಮಾಡುತ್ತೇವೆ ಎಂದು ಎಸ್.ಟಿ.ಎಸ್. ತಿಳಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: