ಸರ್ಕಾರ ಉಳಿಸಿಕೊಳ್ಳಲು ದೇವೇಗೌಡ ಮಾಸ್ಟರ್​ಪ್ಲಾನ್​; ಡಿಕೆಶಿ ಜೊತೆ ಮೋದಿಯನ್ನು ಭೇಟಿ ಮಾಡಲಿದ್ದಾರಾ ಮಾಜಿ ಪ್ರಧಾನಿ?

news18
Updated:September 9, 2018, 12:14 PM IST
ಸರ್ಕಾರ ಉಳಿಸಿಕೊಳ್ಳಲು ದೇವೇಗೌಡ ಮಾಸ್ಟರ್​ಪ್ಲಾನ್​; ಡಿಕೆಶಿ ಜೊತೆ ಮೋದಿಯನ್ನು ಭೇಟಿ ಮಾಡಲಿದ್ದಾರಾ ಮಾಜಿ ಪ್ರಧಾನಿ?
news18
Updated: September 9, 2018, 12:14 PM IST
ಡಿಎಂಜಿ ಹಳ್ಳಿ ಅಶೋಕ್, ನ್ಯೂಸ್​18 ಕನ್ನಡ

ಹಾಸನ (ಸೆ. 9): ಕಾಂಗ್ರೆಸ್​-ಬಿಜೆಪಿ ಹಗ್ಗಜಗ್ಗಾಟದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೂ ಕುತ್ತು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ, ಸರ್ಕಾರವನ್ನು ಉಳಿಸಿಕೊಳ್ಳಲು  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ರಾಜ್ಯ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲು ದೇವೇಗೌಡರು ಸಿಎಂ ಕುಮಾರಸ್ವಾಮಿ  ಮತ್ತು ಸಚಿವ ಡಿಕೆ ಶಿವಕುಮಾರ್​ ಅವರೊಂದಿಗೆ ನಾಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ. ನಾಳೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಅತಿವೃಷ್ಟಿಯ ಪರಿಹಾರ ಮೊತ್ತ ಮತ್ತು ತೈಲಬೆಲೆ ಏರಿಕೆಯ ಬಗ್ಗೆ ಮಾತನಾಡಲು ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ಇದೇವೇಳೆ, ಇಡಿ ದಾಳಿಯ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಸಚಿವ ಡಿಕೆಶಿ ಮೇಲೆ ಇಡಿ ಅಥವಾ ಐಟಿ ಅಸ್ತ್ರವನ್ನು ಪ್ರಯೋಗಿಸಲು ಕೇಂದ್ರ ಸರ್ಕಾರ  ಮುಂದಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಲು ಎಲ್ಲ ರೀತಿಯ ಜವಾಬ್ದಾರಿಗಳನ್ನು ವಹಿಸಿಕೊಂಡು ಶ್ರಮಿಸಿದ ಡಿಕೆಶಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದರೆ ಸರ್ಕಾರ ಉರುಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಒಕ್ಕಲಿಗ ನಾಯಕರಾದ ಡಿಕೆ ಶಿವಕುಮಾರ್​ ಅವರನ್ನು ಉಳಿಸಿಕೊಳ್ಳುವ ಮೂಲಕ ತಮ್ಮ ಸರ್ಕಾರವನ್ನೂ ಉಳಿಸಿಕೊಳ್ಳಲು ದೇವೇಗೌಡರು ತಂತ್ರ ರೂಪಿಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಒಂದೆಡೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ  ಸಹೋದರರ ಮುಸುಕಿನ ಗುದ್ದಾಟ, ಮತ್ತೊಂದೆಡೆ ಸರ್ಕಾರಕ್ಕೆ ಡಿಕೆಶಿ ಮೇಲೆ ಕೇಂದ್ರದ ದಾಳಿ ಸಂಕಷ್ಟ ಎರಡೂ ಜೆಡಿಎಸ್​ಗೆ ತಲೆನೋವಾಗಿ ಪರಿಣಮಿಸಿದೆ.  ಹೀಗಾಗಿ, ದೇವೇಗೌಡರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರಧಾನಿಯವರೊಂದಿಗೆ ಖುದ್ದು ಮಾತುಕತೆ ನಡೆಸಲಿದ್ದಾರೆ ಎಂಬ ಸುದ್ದಿ ಅವರ ಆಪ್ತ ವಲಯದಲ್ಲಿ ಎದ್ದಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...