• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಅರಕಲಗೂಡು ಎ ಮಂಜು; ಡಿಕೆಶಿ ಸಾಹಸಕ್ಕೆ ಸಿದ್ದರಾಮಯ್ಯ ಬ್ರೇಕ್!

ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ಅರಕಲಗೂಡು ಎ ಮಂಜು; ಡಿಕೆಶಿ ಸಾಹಸಕ್ಕೆ ಸಿದ್ದರಾಮಯ್ಯ ಬ್ರೇಕ್!

ಪ್ರಸನ್ನಕುಮಾರ್ ಹಾಗೂ ಎ ಮಂಜು

ಪ್ರಸನ್ನಕುಮಾರ್ ಹಾಗೂ ಎ ಮಂಜು

ಎ ಮಂಜು ಘರ್ ವಾಪಸಿಗೆ ಸದ್ಯಕ್ಕೆ ಸಿದ್ದರಾಮಯ್ಯ ಅವರು ರೆಡ್ ಸಿಗ್ನಲ್ ಕೊಟ್ಟಿದ್ದಾರೆ. ಎ ಮಂಜು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದರು  ಸಿದ್ದರಾಮಯ್ಯ ವಿರೋಧದಿಂದಾಗಿ ಅದು ಜಟಿಲವಾಗುತ್ತಿದೆ. 

  • Share this:

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಶೀತಲ ಸಮರ ಮುಂದುವರೆದಿದೆ. ಅದು ಅರಕಲಗೂಡು ಮಾಜಿ ಶಾಸಕ ಎ ಮಂಜು ವಿಚಾರವಾಗಿ ಮತ್ತೊಮ್ಮೆ ಭುಗಿಲೇಳುವ ಸಂಭವವಿದೆ. ಈ ಹಿಂದೆ ಕಾಂಗ್ರೆಸ್​ನಲ್ಲಿದ್ದು, ಬಳಿಕ ಬಿಜೆಪಿ ಸೇರಿದ್ದ ಎ ಮಂಜು ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. 


ಹೀಗೆ ಅವರು ಮತ್ತೆ ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಮನಸು ಮಾಡಲು ಹಲವು ಕಾರಣಗಳು ಇವೆ. ಪ್ರಸ್ತುತ ಹಾಸನ ಜಿಲ್ಲಾ ಬಿಜೆಪಿಯಲ್ಲಿ ಎ ಮಂಜು ಲಿಸ್ಟ್ ಗೆ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಕಾರಣ ಶಾಸಕ ಪ್ರೀತಂಗೌಡ. ಹಾಸನ ಜಿಲ್ಲಾ ಬಿಜೆಪಿಯಲ್ಲಿ ಹಿಡಿತ ಸಾಧಿಸಿರುವ ಶಾಸಕ ಪ್ರೀತಂಗೌಡ ರಾಜಕೀಯ ಹೊಡೆತಕ್ಕೆ ಎ ಮಂಜು ತತ್ತರಿಸಿದ್ದಾರೆ. ಇತ್ತ ರಾಜ್ಯ ಬಿಜೆಪಿ ನಾಯಕರು ಎ ಮಂಜುಗೆ ಕ್ಯಾರೇ ಎನ್ನುತ್ತಿಲ್ಲ. ಪ್ರಜ್ವಲ್ ರೇವಣ್ಣ ಎದುರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ಮಂಜು ರಾಜಕೀಯವಾಗಿ ಕಳೆದು ಹೋಗುತ್ತಿದ್ದಾರೆ. ಹೀಗಾಗಿ 2023ರ ವಿಧಾನಸಭೆ ಚುನಾವಣೆಯದ್ದೆ ಎ ಮಂಜುಗೆ ಚಿಂತೆಯಾಗಿದೆ.


ಅರಕಲಗೂಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತರೆ ಎ ಮಂಜುಗೆ ಸೋಲು ಖಚಿತ. ಇದೇ ಕಾರಣಕ್ಕೆ ಅವರು ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಎ ಮಂಜು ಘರ್ ವಾಪಸಿಗೆ ಡಿಕೆಶಿ ಯೆಸ್ ಅಂದಿದ್ದಾರೆ. ಮಂಜುಗೆ ಟಕೆಟ್ ಕೊಟ್ಟು ಗೆಲ್ಲಿಸಿಕೊಂಡರೆ ಡಿಕೆಶಿ ಬೆನ್ನಿಗೆ ನಿಲ್ಲಬಹುದೆಂಬ ಲೆಕ್ಕಚಾರ ಸಹ ಇದೆ. ಇದೇ ಕಾರಣಕ್ಕೆ ಎ ಮಂಜು ಮತ್ತೆ ಕೈ ಹಿಡಿಯಲು ಡಿಕೆ ಶಿವಕುಮಾರ್ ಸಹಾಯ ಮಾಡಲು ಮುಂದಾಗಿದ್ದಾರೆ. ಆದರೆ ಘರ್ ವಾಪಸಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಎ ಮಂಜು ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ. ಸಾಲದ್ದಕ್ಕೆ ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಕೂಡ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಎ ಮಂಜುಗೆ ಘರ್ ವಾಪಸಿಗೆ ಭಾರೀ ಹಿನ್ನಡೆ ಆಗಿದೆ.


ಇದನ್ನು ಓದಿ: Cabinet Reshuffle: ಕೇಂದ್ರ ಸಚಿವ ಸಂಪುಟ ಪುನರ್ರಚನೆ; ರಾಜ್ಯದಿಂದ ಯಾರಿಗೆ ಸಿಗುತ್ತೆ ಕೇಂದ್ರ ಸಚಿವ ಸ್ಥಾನ?


ಸಿದ್ದರಾಮಯ್ಯ ಅವರು ಎ ಮಂಜು ಪಕ್ಷ ಸೇರ್ಪಡೆ ವಿರೋಧಿಸಲು ಮೂರು ಕಾರಣಗಳಿವೆ. ಹಾಲಿ ಜೆಡಿಎಸ್ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ಮೇಲೆ ಸಿದ್ದರಾಮಯ್ಯಗೆ ಒಲವು ಇರುವುದು. ಎಟಿಆರ್ ಬಗ್ಗೆ ಸಾರ್ವಜನಿಕ ಅಭಿಪ್ರಾಯವೂ ಚೆನ್ನಾಗಿದೆ. ಜೊತೆಗೆ ರಾಜಕೀಯವಾಗಿಯೂ ಕ್ಲೀನ್ ಇಮೇಜ್ ಇದೆ. ಇವರನ್ನು ಕಾಂಗ್ರೆಸ್ ಗೆ ಕರೆ ತಂದು ಟಿಕೆಟ್ ಕೊಟ್ರೆ ಗೆಲುವು ಗ್ಯಾರಂಟಿ. ಆ ಬಳಿಕ ತಮ್ಮ ಜೊತೆಗೆ ನಿಲ್ಲುತ್ತಾರೆ ಎಂಬುದು ಸಿದ್ದರಾಮಯ್ಯ ಲೆಕ್ಕಚಾರ. ಒಂದು ವೇಳೆ ಎಟಿಆರ್ ಕೈ ಹಿಡಿಯದಿದ್ದರೆ ಅವರ ಆಪ್ತ ಶಿಷ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುವ ಉದ್ದೇಶ ಅವರಿಗೆ ಇದೆ. ಇದೇ ಕಾರಣಕ್ಕೆ ಎ ಮಂಜು ಘರ್ ವಾಪಸಿಗೆ ಸಿದ್ದರಾಮಯ್ಯ ಅವರು ವಿರೋಧ ತೋರುತ್ತಿದ್ದಾರೆ.


ಸಿದ್ದರಾಮಯ್ಯ ವಿರೋಧದಿಂದ ಎ ಮಂಜು ಕಂಗಾಲಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸಿದ್ದರಾಮಯ್ಯ ಅವರ ನಿವಾಸಕ್ಕೆ ಎ ಮಂಜು ಆಪ್ತರನ್ನು ಕಳಿಸಿಕೊಟ್ಟಿದ್ದರು. ಮತ್ತೆ ಮಂಜುರನ್ನು ಪಾರ್ಟಿಗೆ ತೆಗೆದುಕೊಳ್ಳಿ ಎಂದು ಮನವಿ ಮಾಡಿಸಿದ್ದರು. ಆದರೆ, ಎ ಮಂಜು ಘರ್ ವಾಪಸಿಗೆ ಸದ್ಯಕ್ಕೆ ಸಿದ್ದರಾಮಯ್ಯ ಅವರು ರೆಡ್ ಸಿಗ್ನಲ್ ಕೊಟ್ಟಿದ್ದಾರೆ. ಎ ಮಂಜು ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಕೆಶಿ ಶತಪ್ರಯತ್ನ ಮಾಡುತ್ತಿದ್ದರು  ಸಿದ್ದರಾಮಯ್ಯ ವಿರೋಧದಿಂದಾಗಿ ಅದು ಜಟಿಲವಾಗುತ್ತಿದೆ.


ವರದಿ: ಚಿದಾನಂದ ಪಟೇಲ್

Published by:HR Ramesh
First published: