ಬಂಟ್ವಾಳ: ಬಂಟ್ವಾಳದ ಮಾಜಿ ಶಾಸಕ, ಸಚಿವರಾಗಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಬಿ ರಮಾನಾಥ ರೈ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲೆಯ ಹಿರಿಯ ನಾಯಕ ರಮಾನಾಥ ರೈ ಅವರು, ನಾನು ಸೋತರೂ ಕೂಡ ಪಕ್ಷ ಸಂಘಟನೆ, ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುತ್ತೇನೆ. ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾದರೂ ರಾಜ್ಯದಲ್ಲಿ ಸರ್ಕಾರ ರಚಿಸಿದ್ದೇವೆ. ಈ ಹಿಂದೆ ಮಾಡಿಕೊಂಡು ಬಂದಂತೆ ಮುಂದೆಯೂ ಜನರಿಗಾಗಿ ಸದಾ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Mallikarjun Kharge: ಪಿಎಫ್‌ಐ ಜೊತೆ ಭಜರಂಗದಳ ಹೋಲಿಕೆ, ಮಲ್ಲಿಕಾರ್ಜುನ ಖರ್ಗೆ ಕೋರ್ಟ್‌ನಿಂದ ಸಮನ್ಸ್!
ಚುನಾವಣೆಯಲ್ಲಿ ಸೋಲುಂಟಾದ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ ಎಂದ ರಮಾನಾಥ ರೈ ಅವರು, ಈ ಬಾರಿ ನನ್ನ ಸೋಲಿನ ಮತಗಳ ಅಂತರ ಕಡಿಮೆಯಾಗಿದೆ. ಗೆಲುವಿನ ವಿಶ್ವಾಸವಿತ್ತು. ಆದರೂ ಸೋಲಾಗಿದೆ. ಮುಂಬರುವ ಚುನಾವಣೆಯಲ್ಲಿ ಸಾರ್ವಜನಿಕರು ಕಾಂಗ್ರೆಸ್ ಅನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ರೈ ಹೇಳಿದರು.
ಕೊನೆಯ ಚುನಾವಣೆ ಎಂದಿದ್ದ ರೈ
ಮಾಜಿ ಸಚಿವ ರಮಾನಾಥ ರೈ ಅವರು ಈ ಬಾರಿಯ ಚುನಾವಣೆಗೆ ಮೊದಲೇ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಅದಾಗ್ಯೂ ಬಂಟ್ವಾಳದ ಮತದಾರರು ಅವರ ಕೈ ಹಿಡಿದಿರಲಿಲ್ಲ. ಒಂದು ವೇಳೆ ರಮಾನಾಥ ರೈ ಅವರು ಗೆದ್ದಿದ್ದೇ ಆದಲ್ಲಿ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಅವರಿಗೆ ಅತ್ಯುನ್ನತ ಮಟ್ಟದ ಸಚಿವ ಸ್ಥಾನ ಸಿಗುವುದು ಖಚಿತ ಆಗಿತ್ತು. ಆದರೆ ಬಂಟ್ವಾಳ ಕ್ಷೇತ್ರ ಸಚಿವ ಸ್ಥಾನದಿಂದ ವಂಚಿತಗೊಂಡಿದೆ.
ಪ್ರಾಮಾಣಿಕ ರಾಜಕಾರಣಿಯೆಂಬ ಹೆಗ್ಗಳಿಕೆ
ಅಂದ ಹಾಗೆ ರಮಾನಾಥ ರೈ ಅವರು ಕಳೆದ ನಾಲ್ಕೈದು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಏಳು ಬಾರಿ ಬಂಟ್ವಾಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರೂ ಎರಡ್ಮೂರು ಬಾರಿ ಸೋಲನುಭವಿಸಿದ್ದರು. ವಿವಿಧ ಸರ್ಕಾರಗಳಲ್ಲಿ ಪ್ರಭಾವಿ ಸಚಿವ ಸ್ಥಾನವನ್ನು ಅಲಂಕರಿಸಿದ್ದ ರಮಾನಾಥ ರೈ ಅವರ ವಿರುದ್ಧ ಈ ವರೆಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿರಲಿಲ್ಲ. ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದ ರಮಾನಾಥ ರೈ ಅವರು, ತಾನ ಶಾಸಕನಾಗಿದ್ದ ಅವಧಿಯಲ್ಲಿ ಅತೀ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು. ಅಭಿವೃದ್ಧಿ ಮತ್ತು ಭ್ರಷ್ಟಾಚಾರ ರಹಿತ ಪ್ರಾಮಾಣಿಕ ರಾಜಕಾರಣಿ ಎಂಬ ಹೆಗ್ಗಳಿಕೆಯನ್ನು ಜಿಲ್ಲೆಯಲ್ಲಿ ಬಿಜೆಪಿಗರಿಂದಲೂ ಪಡೆದ ಖ್ಯಾತಿ ರಮಾನಾಥ ರೈ ಅವರದ್ದು.
ಇದನ್ನೂ ಓದಿ: ಹಿಂದುತ್ವ ಅನ್ನೋದು ಧರ್ಮವಲ್ಲ, ಬಜರಂಗ ದಳ ಗೂಂಡಾಗಳ ಗುಂಪು: ಹೀಗಂದಿದ್ದು ಯಾರು ನೀವೇ ನೋಡಿ!
ನಿರಂತರ 2 ಬಾರಿ ಸೋಲು
2014ರಲ್ಲಿ ಬಂಟ್ವಾಳ ಶಾಸಕರಾಗಿದ್ದ ರಮಾನಾಥ ರೈ ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಮಧ್ಯೆ ಬಂಟ್ವಾಳದ ಕಲ್ಲಡ್ಕದಲ್ಲಿರುವ ಪ್ರಭಾಕರ್ ಭಟ್ ಮಾಲಿಕತ್ವದ ಶ್ರೀ ರಾಮ ಶಾಲೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಿಂದ ಅಕ್ರಮವಾಗಿ ಧವಸ ಧಾನ್ಯಗಳು ಹೋಗುತ್ತಿರುವುದನ್ನು ನಿಲ್ಲಿಸಿ ಸರ್ಕಾರದಿಂದಲೇ ಪಡೆಯುವಂತೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಇದನ್ನು ರಾಜಕೀಯವಾಗಿ ತಿರುಗಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲಾ ಮಕ್ಕಳ ಮೂಲಕ ಪ್ರತಿಭಟನೆ ನಡೆಸಿ ಮಕ್ಕಳ ಅನ್ನ ಕಿತ್ತುಕೊಂಡರು ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ ಇದರ ಲಾಭವನ್ನು ಪಡೆದುಕೊಂಡ ಪರಿಣಾಮ 2018ರಲ್ಲಿ ರಮಾನಾಥ ರೈ ಅವರ ಸೋತಿದ್ದರು.
ಇದೀಗ ತನ್ನ ಕೊನೆಯ ಚುನಾವಣೆಯಲ್ಲಿಯೂ ರಮಾನಾಥ ರೈ ಅವರು ಸೋಲನ್ನು ಅನುಭವಿಸಿದ್ದು, ಹೀಗಾಗಿ ಭಾವುಕವಾಗಿಯೇ ತಾವು ಚುನಾವಣಾ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ನಾಯಕ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿದ್ದಂತೆ ರಮಾನಾಥ ರೈ ಅವರ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ