ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅವರ ನಡುವಿನ ರಾಜಕೀಯ ಕೆಸರೆರಚಾಟ ಇಂದು ನಿನ್ನೆಯದಲ್ಲ. ಇಬ್ಬರೂ ಕೂಡ ಒಂದೇ ಪಕ್ಷದಲ್ಲಿದ್ದಾಗಲೂ ಪರಸ್ಪರ ಕಿತ್ತಾಡಿಕೊಂಡಿದ್ದರು. ರಮೇಶ್ ಜಾರಕಿಹೊಳಿ ಬಿಜೆಪಿಗೆ (BJP) ಹೋದ ಮೇಲಂತೂ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ರಾಜಕೀಯವಾಗಿ (Politics) ಮೂಲೆ ಗುಂಪಾಗಿಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದು, ಇದರ ಮುಂದುವರಿದ ಭಾಗವಾಗಿ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಬೆಳಗಾವಿಯ ಸುಳೇಭಾವಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಅಭಿಮಾನಿ ಬಳಗದಿಂದ ಅಭಿಮಾನದ ಕಾರ್ಯಕರ್ತರ ಸಮಾವೇಶ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅಭಿಮಾನಿಗಳು ರಮೇಶ್ ಜಾರಕಿಹೊಳಿಗೆ ಅದ್ಧೂರಿ ಸ್ವಾಗತ ಮಾಡಿದ್ದರು. ತನ್ನ ಅಶ್ಲೀಲ ಸಿಡಿ ಪ್ರಕರಣ ಬಹಿರಂಗಗೊಂಡ ಬಳಿಕ ಅಷ್ಟೇನೂ ದೊಡ್ಡಮಟ್ಟದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಮೇಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿಶೇಷ ಅಂದ್ರೆ ಪಕ್ಷದ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸದ ಕಾರಣ ಅನೇಕ ಮಂದಿ ಬಿಜೆಪಿ ನಾಯಕರು, ಟಿಕೆಟ್ ಆಕಾಂಕ್ಷಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದರು.
ಇದನ್ನೂ ಓದಿ: Belagavi: ಕುಕ್ಕರ್, ತಟ್ಟೆ-ಲೋಟ ಆಯ್ತು ಈಗ ಹಾಟ್ ಬಾಕ್ಸ್; ಬೆಳಗಾವಿಯಲ್ಲಿ ಮುಂದುವರಿದ ಗಿಫ್ಟ್ ಪಾಲಿಟಿಕ್ಸ್
ಡಿಕೆಶಿ ವಿರುದ್ಧ ಹರಿಹಾಯ್ದ ಜಾರಕಿಹೊಳಿ
ಅಭಿಮಾನಿಗಳ ಸಮಾವೇಶದಲ್ಲಿ ಭಾಗಿಯಾಗಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ಭಾಷಣದುದ್ದಕ್ಕೂ ತನ್ನ ರಾಜಕೀಯ ವೈರಿಗಳ ವಿರುದ್ಧ ಸಮರ ಸಾರಿದರು. ಸಂಜೆ ವೇಳೆ ಕಾರ್ಯಕ್ರಮವನ್ನು ಆಯೋಜಿಸಬೇಡಿ. ಹೆಣ್ಣು ಮಕ್ಕಳಿಗೆ ಮನೆಗೆ ಹೋಗೋಕೆ ತಡವಾಗುತ್ತೆ ಎಂದಿದ್ದೆ ಎಂದು ಜಾರಕಿಹೊಳಿ, ಕಾರ್ಯಕ್ರಮಕ್ಕೆ ಬರುವವರಿಗೆ ಗಿಫ್ಟ್ ಕೊಡೋಣ ಎಂದು ಕಾರ್ಯಕ್ರಮದ ಸಂಘಟಕರು ಹೇಳಿದ್ದರು. ಆದರೆ ನಾನು ಗಿಫ್ಟ್ ಬೇಡ, ಮೊದಲು ಸಂಘಟನೆ ಮಾಡೋಣ ಎಂದು ಹೇಳಿದ್ದೆ ಎಂದರು. ಕಳೆದ ಬಾರಿ ಈ ವೇದಿಕೆಗೆ ಮಹಾನಾಯಕರನ್ನು ಕರೆ ತಂದಾಗ ಗಿಫ್ಟ್ ಕೊಟ್ಟು ಎರಡು ಮೂರು ಸಾವಿರ ಜನ ಕೂಡಿದ್ದರಂತೆ. ಗಿಫ್ಟ್ ಕೊಡದೇ ಈಗ ಇಲ್ಲಿ ಸಾವಿರಾರು ಜನರು ಸೇರಿದ್ದೀರಿ ಎಂದು ಹೇಳುವ ಮೂಲಕ ಇದೇ ಮೈದಾನದಲ್ಲಿ ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಆಯೋಜನೆ ಮಾಡಿದ್ದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆಶಿಗೆ ತಿವಿದರು.
'ಸಮಾಜಕ್ಕೆ ಕೆಟ್ಟ ಹುಳು ಅದು'
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧವೂ ಹೆಸರು ಹೇಳದೆ ಕಿಡಿಕಾರಿದ ರಮೇಶ್ ಜಾರಕಿಹೊಳಿ, ಪಕ್ಕದಲ್ಲೇ ಮೊದಗಾ ಗ್ರಾಮದಲ್ಲಿ ಒಂದು ಪೆಂಡಾಲ್ ಹಾಕಿ ಕುಕ್ಕರ್ ಕೊಡುತ್ತಿದ್ದಾರೆ. ನಿಮಗೆ ಕೊಟ್ಟ ಒಂದು ಡಬ್ಬಿಗೆ 70 ರಿಂದ 80 ರೂ. ಇರಬಹುದು. ಮಿಕ್ಸರ್ಗೆ 600-700 ರೂಪಾಯಿ ಇರಬಹುದು. ಜೊತೆಗೆ ಅವರು ಇನ್ನೊಂದು ಐಟಮ್ ಏನಾದರೂ ಕೊಡಬಹುದು. ಅವೆಲ್ಲ ಸೇರಿ 3 ಸಾವಿರ ಆಗಬಹುದು. ಆದರೆ ನಾವು 6 ಸಾವಿರ ಕೊಟ್ಟರೆ ವೋಟ್ ಹಾಕಿ ಎಂದು ಹೇಳಿದ ರಮೇಶ್ ಜಾರಕಿಹೊಳಿ, ನಾನು ಆರು ಚುನಾವಣೆ ಗೆದ್ದಿದ್ದೇನೆ. ಆದ್ರೆ ಯಾವತ್ತೂ ರೊಕ್ಕ ಕೊಟ್ಟಿಲ್ಲ. ಉಲ್ಟಾ ನನಗೆ ದುಡ್ಡು ಕೊಟ್ಟು ನಮ್ಮ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ಎಂತಹ ದುರ್ದೈವ ಬಂತು ಗ್ರಾಮೀಣ ಕ್ಷೇತ್ರದಲ್ಲಿ. ನಾವೇ ತಂದೆವು ಅದನ್ನ. ಸಮಾಜಕ್ಕೆ ಕೆಟ್ಟ ಹುಳ ಅದು, ಅದನ್ನ ಹೇಗಾದರೂ ಮಾಡಿ ತೆಗೆಯಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಠೋರ ಪದಗಳಿಂದ ಜಾರಕಿಹೊಳಿ ತಿವಿದರು.
ಇದನ್ನೂ ಓದಿ: Belagavi: ಹೆಬ್ಬಾಳ್ಕರ್ ಅಖಾಡದಲ್ಲಿ ಸಾಹುಕಾರ್ ಫುಲ್ ಆ್ಯಕ್ಟೀವ್: ಜಾರಕಿಹೊಳಿಗೆ ಚಾಲೆಂಜ್ ಹಾಕಿದ ಲಕ್ಷ್ಮಿ!
ಇನ್ನು, ಅಷ್ಟೂ ಮೀರಿ ಜನ ವೋಟ್ ಹಾಕಿದ್ರೆ ಏನು ಮಾಡೋಕಾಗಲ್ಲ ಎಂದ ಜಾರಕಿಹೊಳಿ, ಈಗಿನ ಶಾಸಕರ ಕಳೆದ ಐದು ವರ್ಷಗಳ ಹಿಂದಿನ ವಿಡಿಯೋ ನೋಡಿ. ಈಗಿನ ವಿಡಿಯೋ ನೋಡಿ. ನಿಮಗೆ ಗೊತ್ತಾಗುತ್ತೆ, ಎಲ್ಲಾ ನಿಮ್ಮ ದುಡ್ಡು. ಹಿಂದೆ ಇದ್ದ ಇನೋವಾ ಕಾರು ನೋಡಿ, ಈಗಿನ ಕಾರು ನೋಡಿ. ಅವರೆಷ್ಟು ಖರ್ಚು ಮಾಡ್ತಾರೆ, ಅದಕ್ಕಿಂತ ಹತ್ತು ಕೋಟಿ ಹೆಚ್ಚು ಖರ್ಚು ನಾವು ಮಾಡೋಣ. ಮೊನ್ನೆ ಎಂಎಲ್ಸಿ ಚುನಾವಣೆಯಲ್ಲಿ ಸಾಲ ಮಾಡಿ ಖರ್ಚು ಮಾಡಿದ್ದಾರೆ ಎಂದರು. ಈ ವೇಳೆ ಡಿಕೆಶಿ ಫಂಡ್ ಅಂತಾ ಓರ್ವ ಬೆಂಬಲಿಗ ಹೇಳಿದ. ಆಗ ಅವನು ಕೊಡೋದಿಲ್ಲ, ಕಸಿದುಕೊಳ್ತಾನೆ ಎಂದು ಜಾರಕಿಹೊಳಿ ಹೇಳಿದರು.
ನಾನು ಮಾಜಿ ಆದ್ಮೇಲೆ ಅವರಿಗೆ ಸೊಕ್ಕು ಬಂದಿದೆ
ಮುಂದುವರಿದು ಮಾತನಾಡಿದ ಜಾರಕಿಹೊಳಿ, ನಾನು ಮಾಜಿ ಆದ ಮೇಲೆ ಅವರಿಗೆ ಸೊಕ್ಕು ಬಂತು. ಮನೆ ಹಿಡಿಯುವ ಮನುಷ್ಯ ನಾನಾಗಲಿ ಅಥವಾ ಜಾರಕಿಹೊಳಿ ಕುಟುಂಬ ಅಲ್ಲ. ಕಳೆದ ಮೂವತ್ತು ವರ್ಷಗಳಿಂದ ಜಾರಕಿಹೊಳಿ ಕುಟುಂಬದಲ್ಲಿ ಎಷ್ಟೋ ಷಡ್ಯಂತ್ರ ಆಗಿವೆ. ಈ ಕಾರ್ಯಕ್ರಮ ಬಿಜೆಪಿ ಹೆಸರಿನ ಮೇಲೆ ಮಾಡಿಲ್ಲ. ಏಕೆಂದರೆ ಈ ಕಾರ್ಯಕ್ರಮದಲ್ಲಿ 70 ಪರ್ಸೆಂಟ್ ಬೇರೆ ಪಕ್ಷದವರು ಬರ್ತಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಂಟು ಜಿ.ಪಂ. ಕ್ಷೇತ್ರದಲ್ಲಿ 3 ಎಂಇಎಸ್ 4 ಕಾಂಗ್ರೆಸ್ ಇದೆ. ಎಂಇಎಸ್ನವರನ್ನು ನಾವ್ಯಾರು ಇಲ್ಲಿ ಕರೆದಿಲ್ಲ. ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೋ ಅವರ ಪರ ಕೆಲಸ ಮಾಡ್ತೇವೆ. ಹಿಂದಿನ ಚುನಾವಣೆಯಲ್ಲಿ ಈಗಿನ ಶಾಸಕರ ಪರ ಇಲ್ಲಿರುವ 70 ಪರ್ಸೆಂಟ್ ಜನ ಇದ್ದರು. ಒಂದು ಒಳ್ಳೆಯ ಮನೆತನ ಒಳ್ಳೆಯ ಹೆಣ್ಣು ಮಗಳು ಅಂತಾ ಮಾಡಿದ್ವಿ. ಈಗ ನಮಗೆ ಗುರ್ ಅಂತಿದ್ದಾರೆ ಎಂದ ರಮೇಶ್ ಜಾರಕಿಹೊಳಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ