Ramesh Jarkiholi CD Case: ಬಂಧನದ ಭೀತಿ ಎದುರಿಸುತ್ತಿರುವ ಆರೋಪಿ ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢ!
ರಮೇಶ್ ಜಾರಕಿಹೊಳಿ ಮಾತ್ರ ಸಿಎಂ ಯಡಿಯೂರಪ್ಪ ಹಾಗೂ ನಾಮಪತ್ರ ಸಲ್ಲಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಅವರ ಮುಂದಿನ ನಡೆ ಏನು? ನ್ಯಾಯಾಲಯದ ಬಳಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕುವರೇ? ಎಂಬ ಪ್ರಶ್ನೆಗಳು ಮನೆ ಮಾಡಿವೆ.
ಬೆಳಗಾವಿ (ಮಾರ್ಚ್ 30); ಕಳೆದ ಒಂದು ತಿಂಗಳಿನಿಂದ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯದತ್ತ ಸಮೀಪಿಸಿದೆ. ಇಷ್ಟು ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಸಂತ್ರಸ್ತ ಯುವತಿ ಇಂದು ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸಿದ್ದಾಳೆ. "ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ" ಎಂದೇ ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಾಳೆ ಎನ್ನಲಾಗುತ್ತಿದೆ. ಆಕೆಯ ವಕೀಲರಾದ ಜಗದೀಶ್ ಸಹ ಕೋರ್ಟ್ ವಿಚಾರಣೆಯ ನಂತರ ಮಾಧ್ಯಮಗಳ ಎದುರು ಇದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಮೇಶ್ ಜಾರಕಿಹೊಳಿ ಅವರ ಬಂಧನಕ್ಕೆ ಒತ್ತಾಯಿಸಿದ್ದಾರೆ. ಮುಂದಿನ ನಡೆಯ ಕುರಿತು ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್ಐಟಿ ತಂಡ ಪೊಲೀಸ್ ಆಯುಕ್ತರು ದೀರ್ಘ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ ಆರೋಪಿ ರಮೇಶ್ ಜಾರಕಿಹೊಳಿ ಮಾತ್ರ ಬೆಳಗಾವಿಗೆ ತೆರಳಿದ್ದು, ಅವರ ನಡೆ ಮಾತ್ರ ನಿಗೂಢವಾಗಿದೆ.
ಅಸಲಿಗೆ ನಿನ್ನೆ ಎಸ್ಐಟಿ ಅಧಿಕಾರಿಗಳ ಎದುರು ಹಾಜರಾಗಿ ಹೇಳಿಕೆ ನೀಡಿದ್ದ ಆರೋಪಿ ರಮೇಶ್ ಜಾರಕಿಹೊಳಿ ನಂತರ ಬೆಂಗಳೂರಿನಿಂದ ರಸ್ತೆ ಮೂಲಕ ತಮ್ಮ ಕ್ಷೇತ್ರವಾದ ಗೋಕಾಕ್ಗೆ ತೆರಳಿದ್ದರು. ತಡರಾತ್ರಿ ಗೋಕಾಕ್ ತಲುಪಿದ್ದ ರಮೇಶ ಜಾರಕಿಹೊಳಿ, ನಿನ್ನೆಯಿಂದ ಯಾರನ್ನು ಭೇಟಿಯಾಗದೇ, ಕೆಲ ಆಪ್ತ ಕಾರ್ಯಕರ್ತರ ಜತಗೆ ಬೆಳಗ್ಗೆಯಿಂದ ಮದ್ಯಾಹ್ನದ ವರೆಗೆ ಮನೆಯಲ್ಲೇ ಇದ್ದರು ಎನ್ನಲಾಗಿದೆ.
ಮನೆಯಲ್ಲಿ ಇದ್ದ ಜಾರಕಿಹೊಳಿ, ಮದ್ಯಾಹ್ನದ ನಂತರ ಮತ್ತೆ ರಸ್ತೆ ಮಾರ್ಗವಾಗಿ ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿ ಕೊಲ್ಹಾಪುರದ ಮಹಾಲಕ್ಷ್ಮಿ ದರ್ಶನ ಪಡೆದಿದ್ದಾರೆ. ಆದರೆ, ಈ ವೇಳೆ ಮಾಧ್ಯಮದವರು ಕೋರ್ಟ್ ನಲ್ಲಿ ಯುವತಿ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ರಮೇಶ್ ಜಾರಕಿಹೊಳಿ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ ಎನ್ನಲಾಗಿದೆ. ಇದೀಗ ದೇವರ ದರ್ಶನ ಪಡೆದಿರುವ ರಮೇಶ್ ಜಾರಕಿಹೊಳಿ ಮತ್ತೆ ಗೋಕಾಕ್ ಹೋಗ್ತಾರಾ? ಅಥವಾ ಬೆಂಗಳೂರು ಹೋಗ್ತಾರಾ? ಎಂಬುದು ನಿಗೂಢವಾಗಿದೆ.
ಸದ್ಯಕ್ಕಂತು ಯಾವುದೇ ಸಮಯದಲ್ಲಿ ಪೊಲೀಸರಿಂದ ಬಂಧನದ ಭೀತಿ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ಇಂದು ಬೆಳಗಾವಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದರೂ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಳಗಾವಿ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರು.
ಆದರೆ, ರಮೇಶ್ ಜಾರಕಿಹೊಳಿ ಮಾತ್ರ ಸಿಎಂ ಯಡಿಯೂರಪ್ಪ ಹಾಗೂ ನಾಮಪತ್ರ ಸಲ್ಲಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಅವರ ಮುಂದಿನ ನಡೆ ಏನು? ನ್ಯಾಯಾಲಯದ ಬಳಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕುವರೇ? ಎಂಬ ಪ್ರಶ್ನೆಗಳು ಮನೆ ಮಾಡಿವೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ