ಶಿವಮೊಗ್ಗ: ಶಿವಮೊಗ್ಗದ ಆಯನೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅಬ್ಬರದ ಭಾಷಣ ಮಾಡಿದ್ದಾರೆ. ಬೃಹತ್ ಜನರನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ನಾಯಕತ್ವದಲ್ಲಿ ನಾವು ಜನರ ಮುಂದೆ ಹೋಗುತ್ತೇವೆ. ಅವರ ನಾಯಕತ್ವದಲ್ಲಿ (Karnataka Election 2023) ನಾವು ಗೆಲುವು ಸಾಧಿಸುತ್ತೇವೆ ಎಂದರು.
ಸಂಘಟನೆ, ಅಭಿವೃದ್ಧಿಯ ಹೆಸರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದ ಈಶ್ವರಪ್ಪ, ಈಗಿನ ಕಾಂಗ್ರೆಸ್‌ಗೆ ರಾಷ್ಟ್ರಭಕ್ತಿ ಗೊತ್ತಿಲ್ಲ. ಅದಕ್ಕೆ ಗೊತ್ತಿರೋದು ಕೇವಲ ಜಾತಿವಾದ ಮಾತ್ರ. ಡಿಕೆ ಶಿವಕುಮಾರ್ ಜಾತಿ ಹೆಸರು ಹೇಳಿ ಸಿಎಂ ಆಗ್ತಿನಿ ಅಂತಾರೇ. ಆದರೆ ಬಿಜೆಪಿಗೆ ಕೋಮುವಾದಿ ಅಂತಾರೆ. ಆ ಕೆಲಸವನ್ನು ಅವರೇ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: Siddaramaiah: ಶೋಭಾ ಕರಂದ್ಲಾಜೆಯನ್ನು ವಿಚಾರಣೆಗೊಳಪಡಿಸಿ ಚುನಾವಣಾ ಪ್ರಚಾರದಿಂದ ನಿಷೇಧಿಸಿ: ಸಿದ್ದರಾಮಯ್ಯ ಆಕ್ರೋಶ
ಇನ್ನು ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆಯೂ ವ್ಯಂಗ್ಯವಾಡಿದ ಕೆಎಸ್‌ಈ, ಕಾಂಗ್ರೆಸ್ ಪ್ರಣಾಳಿಕೆ ತಂದಿದೆ. ಅದರಲ್ಲಿ ಭಜರಂಗದಳ ನಿಷೇಧ ಮಾಡ್ತೀವಿ ಅಂದಿದ್ದಾರೆ. ಭಜರಂಗದಳ ಮುಟ್ಟಿ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ಧೂಳಿಪಟ ಆಗುತ್ತೆ. ವಿಪಕ್ಷ ನಾಯಕ ಸ್ಥಾನವನ್ನೂ ಕಾಂಗ್ರೆಸ್ ಕಳೆದುಕೊಳ್ಳುತ್ತೆ ಎಂದರಲ್ಲದೇ, ಜಿಲ್ಲೆಯ 7 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಈಶ್ವರಪ್ಪ ಮನವಿ ಮಾಡಿದರು.
ಆರಗ ಜ್ಞಾನೇಂದ್ರ ಹೇಳಿದ್ದೇನು?
ಶಿವಮೊಗ್ಗ ಹೊರವಲಯದ ಆಯನೂರಿನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನರೇಂದ್ರ ಮೋದಿ ಅವರು ದೇಶದ ಏಕತೆ ಹಾಗೂ ಸಮಾನತೆಯ ಬಗ್ಗೆ ತೆಗೆದುಕೊಂಡ ನಿರ್ಧಾರಗಳು ದೇಶವನ್ನು ಗಟ್ಟಿಗೊಳಿಸುತ್ತಿವೆ. ಹಿಂದೆ ದೇಶದಲ್ಲಿ ಬಾಂಬುಗಳು ಪಟಾಕಿಯಂತೆ ಹೊಡೆಯುತ್ತಿದ್ದವು. ಆದರೆ ಮೋದಿ ಅವರು ತೆಗೆದುಕೊಂಡ ಗಟ್ಟಿ ನಿರ್ಧಾರಗಳಿಂದಾಗಿ ಬಾಂಬು ಸಿಡಿಸುತ್ತಿದ್ದವರು ನಾಪತ್ತೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: Karnataka Election 2023 Live Updates: ನರೇಂದ್ರ ಮೋದಿ ರೋಡ್ ಶೋ ಸೇರಿದಂತೆ ಇಂದಿನ ರಾಜಕೀಯ ಸುದ್ದಿಗಳ ವಿವರ ಇಲ್ಲಿವೆ
ಇನ್ನು ರೈತರಿಗೆ ಐದು ಲಕ್ಷರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ನೀಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಲಾಗಿದೆ ಎಂದ ಆರಗ ಜ್ಞಾನೇಂದ್ರ, ಬಡವರಿಗೆ ಆರೋಗ್ಯ ಸಮಸ್ಯೆ ಬಂದಲ್ಲಿ ಅವರಿಗೆ ಹೊರೆಯಾಗಬಾರದು ಎಂದು ಆಯುಷ್ಮಾನ್ ಯೋಜನೆ ರೂಪಿಸಿದ್ದು ನರೇಂದ್ರ ಮೋದಿ ಎಂದರು.
ದೇಶ ವಿರೋಧಿ ಪಿಎಫ್ ಐ ಸಂಘಟನೆಯನ್ನು ನಾವು ಬ್ಯಾನ್ ಮಾಡಿದ್ದೇವೆ. ಆದರೆ ಈಗ ಕಾಂಗ್ರೆಸ್ಸಿಗರು ಪಿಎಫ್ ಐ ಸಂಘಟನೆ ಬ್ಯಾನ್ ಮಾಡುತ್ತೇವೆ ಎಂದಿದ್ದಾರೆ ಎಂದ ಆರಗ, ಈ ಸಂಘಟನೆ ಹೆಸರು ಉಲ್ಲೇಖಿಸಿ ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೀರಿ. ಜನ ಕಾಂಗ್ರೆಸನ್ನೇ ನಿಷೇಧ ಮಾಡಲಿದ್ದಾರೆ. ಹೀಗಾಗಿ ಕಾಂಗ್ರೆಸ್ಸಿಗರು ಬಜರಂಗದಳ ನಿಷೇದ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ