ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿರುವ ವರುಣಾ (Varuna) ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ (BJP and Congress) ಕಾರ್ಯಕರ್ತರ ಕಾದಾಟ ಹೆಚ್ಚಾಗುತ್ತಿದೆ. (Karnataka Election 2023) ನಿನ್ನೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಜಗಳ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕೆಎಸ್ ಈಶ್ವರಪ್ಪ (KS Eshwarappa) ಅವರು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಈ ಬಗ್ಗೆ ಇಂದು ಶಿವಮೊಗ್ಗದಲ್ಲಿ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ನಿನ್ನೆ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಗೂಂಡಾಗಿರಿ ನಡೆಸಿದೆ. ಬಕೆಟ್‌ನಲ್ಲಿ ಕಲ್ಲು ತುಂಬಿಕೊಂಡು ಬಂದು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಸೋಲುವ ಹತಾಶೆಯಿಂದ ಕಾಂಗ್ರೆಸ್ ಈ ರೀತಿಯ ಕೆಲಸ ಮಾಡುತ್ತಿದೆ. ಈ ಸಂಬಂಧ ನಾವು ಪೊಲೀಸ್ ದೂರನ್ನು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Varuna: ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಪ್ರಚಾರ ಯಾತ್ರೆ ಮೇಲೆ ಕಲ್ಲು ತೂರಾಟ; ಸೋಮಣ್ಣ, ಪ್ರತಾಪ್ ಸಿಂಹ ಸ್ವಲ್ಪದರಲ್ಲೇ ಪಾರು
ಮಲ್ಲಿಕಾರ್ಜುನ ಖರ್ಗೆಯನ್ನು ತಂದೆಯ ಸ್ಥಾನದಲ್ಲಿ ಇಟ್ಟಿದ್ದೆವು
ಇನ್ನು ನರೇಂದ್ರ ಮೋದಿ ಬಗ್ಗೆ ‘ವಿಷದ ಹಾವು’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಕುರಿತಂತೆಯೂ ಪ್ರತಿಕ್ರಿಯೆ ನೀಡಿರುವ ಕೆಎಸ್ ಈಶ್ವರಪ್ಪ, ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾವು ತಂದೆ ಸ್ಥಾನದಲ್ಲಿ ಇಟ್ಟಿದ್ದೆವು. ಆದರೆ ಇಂಥ ಹೇಳಿಕೆ ಅವರಿಂದ ನಿರೀಕ್ಷಿಸಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಇಂಥ ದುಸ್ಥಿತಿ ಏಕೆ ಬಂತು ಗೊತ್ತಿಲ್ಲ. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಿ ಎಐಸಿಸಿ ಅಧ್ಯಕ್ಷರಾಗಿದ್ದೀರಿ. ಮಲ್ಲಿಕಾರ್ಜುನ ಖರ್ಗೆಯವರಿಗಿಂತ ಕೆಟ್ಟ ಭಾಷೆಯಲ್ಲಿ ಟೀಕಿಸಬಲ್ಲೆ. ಆದರೆ ಆ ಕೆಲಸ ಮಾಡಲ್ಲ. ನಾನು ಟೀಕೆ ಮಾಡಿ ಆಮೇಲೆ ನಾನು ಹಾಗೆ ಹೇಳಿಲ್ಲ ಎಂದು ಹೇಳುವುದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಒಂದು ತೂಕವಿತ್ತು. ಅದಕ್ಕೆ ಎಐಸಿಸಿ ಅಧ್ಯಕ್ಷರಾದರು. ಆದರೆ ಈಗ ಏನಾಗಲು ಹೊರಟಿದ್ದಾರೋ ಗೊತ್ತಿಲ್ಲ. ನರೇಂದ್ರ ಮೋದಿ ಅವರನ್ನು ಟೀಕಿಸಿದವರು ಯಾರೂ ಉದ್ಧಾರವಾಗಿಲ್ಲ ಎಂದರು.
ರಾಷ್ಟ್ರದ್ರೋಹಿಗಳ ಮತ ನನಗೆ ಬೇಡ?
ಮುಂದುವರೆದು ಮಾತನಾಡಿರುವ ಕೆಎಸ್ ಈಶ್ವರಪ್ಪ, ಎಲ್ಲರೂ ಜಗದೀಶ್ ಶೆಟ್ಟರ್ ಅವರ ವಿರುದ್ಧ ಟೀಕೆ ಮಾಡಲು ಅವರು ಇಂಟರ್ ನ್ಯಾಷನಲ್ ಲೀಡರಾ? ಹುಬ್ಬಳ್ಳಿ ಏನು ಪಾಕಿಸ್ತಾನದಲ್ಲಿದೆಯಾ. ಎಲ್ಲ ಕ್ಷೇತ್ರಗಳಿಗೆ ಹೋದಂತೆ ನಾಯಕರು ಹುಬ್ಬಳ್ಳಿಗೂ ಹೋಗಿದ್ದಾರೆ. ಜಗದೀಶ್ ಶೆಟ್ಟರ್ ಪರ್ಮಿಷನ್ ತೆಗೆದುಕೊಂಡು ಹುಬ್ಬಳ್ಳಿಗೆ ಹೋಗಬೇಕಾ ಎಂದು ಪ್ರಶ್ನಿಸಿದ ಈಶ್ವರಪ್ಪ, ನಮಗೆ ರಾಷ್ಟ್ರೀಯವಾದಿ ಮುಸ್ಲಿಮರು ಮತ ಹಾಕುತ್ತಾರೆ. ರಾಷ್ಟ್ರದ್ರೋಹಿಗಳ ಮತ ನನಗೆ ಬೇಡ. ಹಿಂದುಗಳಿಗೆ ಧಕ್ಕೆಯಾದರೆ ಒಂದು ಕ್ಷಣವೂ ನಾನು ತಡೆಯಲ್ಲ. ಶಿವಮೊಗ್ಗ ನಗರ ಸೇರಿದಂತೆ ರಾಜ್ಯದಲ್ಲಿ ನಾವು 140 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ: Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ
ಜಗದೀಶ್ ಶೆಟ್ಟರ್ ತಾಯಿಗೆ ದ್ರೋಹ ಮಾಡಿದವನು. ಬೆಳೆಸಿದ ತಾಯಿಯನ್ನೇ ಸಾಯಿಸಲು ಹೊರಟವನು. ಬಾರಪ್ಪ ವಾಪಸ್ ಬಾ ಎಂದೆ ಆದರೆ ಮಾತು ಕೇಳಲಿಲ್ಲ. ಆದರೆ ಜಗದೀಶ್ ಶೆಟ್ಟರ್ ಗೆ ಸೊಕ್ಕು ಬಂದಿದೆ. 16 ಜನ ಕಾರ್ಪೊರೇಟರ್ ಗಳಲ್ಲಿ ಒಬ್ಬರೂ ಶೆಟ್ಟರ್ ಜೊತೆ ಹೋಗಿಲ್ಲ. ಜಗದೀಶ್ ಶೆಟ್ಟರ್‌ದು ಹಿಂದುತ್ವದ ರಕ್ತ. ಹಿಂದುತ್ವದ ಶೆಟ್ಟರ್ ಹೀಗೆ ಮಾಡುತ್ತಿದ್ದಾರಲ್ಲಾ ಎಂಬ ಕಾರಣಕ್ಕೆ ಆಕ್ರೋಶ ಅಷ್ಟೇ ಎಂದು ಈಶ್ವರಪ್ಪ ಹೇಳಿದರು.
ಇನ್ನು ಶಿವಮೊಗ್ಗದಲ್ಲಿ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗ್ತಾಯಿದೆ ಎಂದ ಕೆ ಎಸ್ ಈಶ್ವರಪ್ಪ, ಎಲ್ಲಾ ಜಾತಿ ವರ್ಗದವರು ಚನ್ನಬಸಪ್ಪ ಅವರನ್ನು ಬೆಂಬಲಿಸ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ನಾನು 46 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ ನಾವು 60,000 ಮತಗಳ ಅಂತರದಿಂದ ಗೆಲ್ಲುತ್ತೇವೆ. ಪ್ರತಿ ಪೇಜ್ ಬೂತ್ ನಲ್ಲಿ ನಮ್ಮ ಸಂಘಟನೆ ಇದೆ. ಎಲ್ಲಾ ವರ್ಗ, ಸಮುದಾಯಕ್ಕೆ ಸರ್ಕಾರದಿಂದ ಅನುದಾನ, ಬೆಂಬಲ ಸಿಕ್ಕಿದೆ. ಏ.30ರಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಶಿವಮೊಗ್ಗಕ್ಕೆ ಬರ್ತಾರೆ. ಅಂದು ವಿವಿಧ ಸಮಾಜದ ಪ್ರಮುಖರ ಸಭೆ ಆಯೋಜಿಸಲಾಗಿದೆ. ಮೇ 3ರಂದು ಅಮಿತ್ ಶಾ ಶಿವಮೊಗ್ಗಕ್ಕೆ ಬರ್ತಿದ್ದಾರೆ. ಅಂದು ಸಂಜೆ ನಗರದಲ್ಲಿ ರೋಡ್ ಶೋ ನಡೆಯಲಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ