ಯಾದಗಿರಿ: ಬಿಎಸ್ ಯಡಿಯೂರಪ್ಪ (BS Yediyurappa) ಅವರನ್ನು ನಾನು ತಂದೆಯಂತೆ ಕಾಣುತ್ತೆನೆ, ಸ್ನೇಹಿತ ಬಿ ಶ್ರೀರಾಮುಲು (B Sriramulu) ಹಾಗೂ ನನ್ನ ಸಹೋದರರನ್ನು ನಾನು ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ ಜನಾರ್ದನ ರೆಡ್ಡಿ (Gali Janardhana Reddy) ಹೇಳಿದ್ದಾರೆ. ಯಾದಗಿರಿ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ, ಯಾರನ್ನೂ ದುರುಪಯೋಗ ಮಾಡಿಕೊಂಡು ನಾನು ಪಕ್ಷಕ್ಕೆ ಆಹ್ವಾನ ಮಾಡಿಲ್ಲ. ನೀವು ಲಕ್ಷ ಪ್ರಶ್ನೆ ಕೇಳಿದ್ರೂ ನಾನು ಇನ್ನೊಬ್ಬರ ಹೆಸರು ತೆಗೆದುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಸಕ್ಸಸ್ ಆಗಿಲ್ಲ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಜನಾರ್ದನ ರೆಡ್ಡಿ, ಯಾರೂ ಮಾಡದೇ ಇರುವುದನ್ನು ನಾನು ಮಾಡಿದ್ರೆ ನಾನು ಇತಿಹಾಸ ನಿರ್ಮಾಣ ಮಾಡಿದಂತಾಗುತ್ತದೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸಕ್ಸಸ್ ಫುಲ್ ಆಗಿವೆ. ನಮ್ಮ ಪಕ್ಷ ಸಕ್ಸಸ್ ಕಾಣಲು ಪಕ್ಷದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ನನ್ನ ಬಾಯಲ್ಲಿ ಬಂದಿದ್ದನ್ನು ಮಾಡುತ್ತೇನೆ ಎಂದು ಹೇಳಿದರು.
ನಾನು ಬಡಕುಟುಂಬದಿಂದ ಬಂದವನು
ಇನ್ನು, ನಾವು ಬಡ ಕುಟುಂಬದಿಂದ ಬಂದವರು ಎಂದು ಹೇಳಿದ ರೆಡ್ಡಿ, ನಾನು ಬಡ ಕುಟುಂಬದಿಂದ ಸಾರ್ವಜನಿಕ ಬದುಕಿಗೆ ಬಂದಿದ್ದೇನೆ. ಶ್ರೀಮಂತರೇ ರಾಜಕೀಯ ಮಾಡುವುದು ಇತ್ತು, ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಾವು ಶ್ರೀಮಂತರಿರಲಿಲ್ಲ, ಕರುಣಾಕರ ರೆಡ್ಡಿ, ಶ್ರೀ ರಾಮುಲು ಗೆದ್ದಾಗ ಶ್ರೀಮಂತರಿದ್ದೆವಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Janardhana Reddy: ಜನಾರ್ದನ ರೆಡ್ಡಿಗೆ ಆಂಜನೇಯನ ಹೂವಿನ ಪ್ರಸಾದ! ಗಣಧಣಿಗೆ ಸಿಗುತ್ತಾ ಯಶಸ್ಸು?
ರಾಜ್ಯದ 224 ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಹಾಕುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜನಾರ್ದನ ರೆಡ್ಡಿ, ನೂರಕ್ಕೆ ನೂರರಷ್ಟು ಗೆಲ್ಲುವ ಕಡೆಗಳಲ್ಲಿ ಮಾತ್ರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯನ್ನು ಹಾಕಲಾಗುತ್ತದೆ. ಯಾರನ್ನೋ ಸೋಲಿಸಲು ನಾವು ಅಭ್ಯರ್ಥಿ ಹಾಕುವುದಿಲ್ಲ. ಇತಿಮಿತಿಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಾಗುತ್ತದೆ. ಯಾದಗಿರಿ, ಸುರಪುರ ಸೇರಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕುತ್ತೇವೆ ಎಂದು ಹೇಳಿದರು.
ಸಿಂಧನೂರಿನಲ್ಲಿ ಪಾದಯಾತ್ರೆ
ಇದಕ್ಕೂ ಮೊದಲು ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಂಧನೂರು ತಾ. ವೆಂಕಟಗಿರಿ ಕ್ಯಾಂಪಿನಿಂದ ಅಂಬಾಮಠದವರೆಗೆ ತಮ್ಮ ಪಕ್ಷದ ಸಿಂಧನೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಲ್ಲಿಕಾರ್ಜುನ ನೆಕ್ಕಂಟಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಜನಾರ್ದನ ರೆಡ್ಡಿ, ಗಾಯತ್ರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಶುರು ಮಾಡಿದ್ದೇನೆ. ನಮಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದ್ದರು.
ಅಲ್ಲದೇ ಸೇರಿದ್ದ ಜನರನ್ನು ಉದ್ದೇಶಿಸಿ, ರಾಜ್ಯದ ಜನರಿಗೆ ನನ್ನ ಬಗ್ಗೆ ಅಪಾರ ನಂಬಿಕೆ , ವಿಶ್ವಾಸ ಮತ್ತು ಪ್ರೀತಿಯಿದೆ. ನಾನು ಅಂದುಕೊಂಡಿದ್ದು ಒಂದಿಷ್ಟು, ಆಗುತ್ತಿರುವುದು ಬಹಳಷ್ಟು. ಜನರು ಬದಲಾವಣೆ ಬಯಸಿದ್ದಾರೆ, ಹೇಳಿದ್ದನ್ನ ಮಾಡುತ್ತೇನೆ ಎಂಬ ವಿಶ್ವಾಸವಿದೆ ಎಂದು ರೆಡ್ಡಿ ಹೇಳಿದ್ದರು.
ಇದೇ ವೇಳೆ ಗಾಲಿ ಜನಾರ್ದನ ರೆಡ್ಡಿ ಬಗ್ಗೆ ಸಿದ್ದರಾಮಯ್ಯ ಅವರು ಅನುಕಂಪದ ಹೇಳಿಕೆ ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಹಣದಲ್ಲಿ ರಾಜಕಾರಣ ಮಾಡೋದಾದ್ರೆ ನಮ್ಮ ದೇಶದಲ್ಲಿ ಟಾಟಾ ಬಿರ್ಲಾ, ಅಂಬಾನಿ, ಮಲ್ಯ ಇಂತವರು ಪಕ್ಷ ಕಟ್ಟಿ ಅಧಿಕಾರಕ್ಕೆ ಬರಬಹುದಾಗಿತ್ತು. ನಾನು ಬಡ ಕುಟುಂಬದಿಂದ ಬಂದಿರುವವನು ಎಂದರು.
'ನಾನು ಏನು ಅಂತ ಈಗಾಗಲೇ ತೋರಿಸಿದ್ದೇನೆ'
ರಾಜಕಾರಣದಲ್ಲಿ ನಾನು ಏನು ಅಂತ ಈಗಾಗಲೇ ತೋರಿಸಿದ್ದೇನೆ. 15 ವರ್ಷಗಳ ಹಿಂದೆ ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ 10ರಲ್ಲಿ 9 ಗೆಲ್ಲಿಸಿದ್ದೇನೆ. ಕಲ್ಯಾಣ, ಉತ್ತರ ಕರ್ನಾಟಕದಲ್ಲಿ 40ಕ್ಕೂ ಹೆಚ್ಚು ಶಾಸಕರನ್ನ ಗೆಲ್ಲಿಸುವುದರಲ್ಲಿ ನನ್ನ ಪಾತ್ರವಿತ್ತು. ಅದು ಎಲ್ಲವೂ ಜನರ ಆರ್ಶಿವಾದ, ಆ ನಂಬಿಕೆಯಿಂದಲೇ ನಾನು ಜನರ ಮಧ್ಯೆ ಬಂದಿದ್ದೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ