ಬೆಂಗಳೂರು: ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಧ್ಯೆ ಬಿರುಸಿನ ಕಿತ್ತಾಟ ನಡೆಯುತ್ತಿರುವ ಮಧ್ಯೆಯೇ ಒಂದು ಕಾಲದ ಸಿದ್ದರಾಮಯ್ಯ ಆಪ್ತ, ಮಾಜಿ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರು ಹೊಸದೊಂದು ಬಾಂಬ್ ಎಸೆದು ಕಾಂಗ್ರೆಸ್‌ನ ಜಗಳದ ಬೆಂಕಿಯಲ್ಲಿ ಬಿಸಿ ಕಾಯಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿರುವ ಹೊತ್ತಿನಲ್ಲೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಮಾಜಿ ಸಚಿವ ಡಾ.ಕೆ ಸುಧಾಕರ್, ‘2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು’ ಎಂದು ಸುಧಾಕರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: B Ramanath Rai: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ನಾಯಕ ಬಿ ರಮಾನಾಥ ರೈ!
ಆಗ ‘2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು. ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು.
ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?’ ಎಂದು ಡಾ ಕೆ ಸುಧಾಕರ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಡಿಕೆಶಿ ಪರ ಬ್ಯಾಟ್ ಬೀಸಿದ್ದ ಸುಧಾಕರ್
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸುತ್ತಿದ್ದಂತೆ ಸಿಎಂ ಸ್ಥಾನಕ್ಕಾಗಿ ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಫೈಟ್ ನಡೆಯುವ ಆರಂಭದಲ್ಲಿ ಕಳೆದ ಭಾನುವಾರ ಟ್ವೀಟ್ ಮಾಡಿ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಸಚಿವ ಸುಧಾಕರ್, ‘ಒಕ್ಕಲಿಗ ಸಮುದಾಯದ ಈ ನಿರೀಕ್ಷೆಯನ್ನ ಕಾಂಗ್ರೆಸ್ ಪಕ್ಷ ಹುಸಿಯಾಗಿಸುವುದಿಲ್ಲ, ನಾಡಿಗೆ ಅನ್ನ ನೀಡುವ ಅನ್ನದಾತರ ಸಮುದಾಯವಾದ ಒಕ್ಕಲಿಗ ಸಮಾಜ ಕಾಂಗ್ರೆಸ್ ಪಕ್ಷದ ಮೇಲಿಟ್ಟಿರುವ ಈ ನಂಬಿಕೆಗೆ ದ್ರೋಹ ಎಸಗುವುದಿಲ್ಲ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದರು.
ಇದನ್ನೂ ಓದಿ: Chikkaballapur: ಚುನಾವಣೆಯಲ್ಲಿ ಸೋಲು; ಆತ್ಮಹತ್ಯೆಗೆ ಶರಣಾದ ಸುಧಾಕರ್ ಅಭಿಮಾನಿ
ಅಲ್ಲದೇ, ‘ಮಾನ್ಯ ಎಸ್.ಎಂ.ಕೃಷ್ಣ ಅವರ ನಂತರ ಒಕ್ಕಲಿಗ ಸಮುದಾಯದ ನಾಯಕರೊಬ್ಬರು ಸ್ಪಷ್ಟ ಬಹುಮತದೊಂದಿಗೆ ನಾಡಿನ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ವಿಶ್ವಾಸದಿಂದ ಈ ಬಾರಿ ಒಕ್ಕಲಿಗ ಸಮಾಜ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದು, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನ 5% ಮತಗಳು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಯಾಗಿರುವುದೇ ಇದಕ್ಕೆ ಸಾಕ್ಷಿ.’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದು ಹೇಳಿದ್ದರು.
ಸಿದ್ದರಾಮಯ್ಯ ಅವರಿಗೆ ಇದೇ ಕೊನೆಯ ಚುನಾವಣೆ ಆಗಿದ್ದು, ಮುಂಬರುವ ಚುನಾವಣೆ ವೇಳೆಗೆ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳಲಿದ್ದಾರೆ. ಆ ಬಳಿಕ ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್‌ನ ನಂಬರ್ ವನ್ ನಾಯಕನಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಕಾಲದ ಸಿದ್ದರಾಮಯ್ಯ ಶಿಷ್ಯ, ಡಾ ಕೆ ಸುಧಾಕರ್ ಅವರು ತನ್ನ ಗುರುವನ್ನು ಬಿಟ್ಟು ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡ್ತಿರೋದು ಭಾರೀ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ