BS Yediyurappa: ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಪೊಲೀಸರು ಏನಂತಾರೆ?

ಬಿಎಸ್‌ವೈ ಕುಟುಂಬಕ್ಕೆ ಭಾರೀ ಆಘಾತ ಎದುರಾಗಿದೆ. ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಸಾವಿನಿಂದ ಮುದ್ದು ಕಂದಮ್ಮ ಈಗ ಅಮ್ಮನಿಲ್ಲದೇ ಅನಾಥವಾಗಿದೆ

ಮೃತ ಸೌಂದರ್ಯ

ಮೃತ ಸೌಂದರ್ಯ

  • Share this:
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರ ಕುಟುಂಬಕ್ಕೆ ಭಾರೀ ಆಘಾತ ಎದುರಾಗಿದೆ. ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿಯವರ (Padmavathi) ಕುಟುಂಬದಲ್ಲಿ ಅನಾಹುತವೊಂದು ನಡೆದು ಹೋಗಿದೆ. ಪದ್ಮಾವತಿಯವರ ಪುತ್ರಿ ಸೌಂದರ್ಯ (Saundarya) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ.ಸೌಂದರ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಇಂದು ಅವರ ಕೋಣೆಯಲ್ಲಿಯೇ ಸೌಂದರ್ಯ ನೇಣಿಗೆ ಶರಣಾಗಿದ್ದಾರೆ. ಮನೆ ಕೆಲಸದವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಹಾಗಿದ್ದರೆ ಸೌಂದರ್ಯ ಆತ್ಮಹತ್ಯೆಗೆ ಶರಣಾಗಲು ಕಾರಣವೇನು? ಅವರ ಸಾವಿನ ಬಗ್ಗೆ ಪೊಲೀಸರು ಹೇಳುವುದೇನು? ಮೃತ ಸೌಂದರ್ಯ ಅವರ ಅಂತ್ಯಕ್ರಿಯೆ ಎಲ್ಲಿ, ಹೇಗೆ ನಡೆಯಲಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

 ಕೋಣೆಯೊಳಗೇ ನೇಣಿಗೇರಿದ ಸೌಂದರ್ಯ

ಬೆಂಗಳೂರಿನ ವಸಂತ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಸೌಂದರ್ಯ ತಮ್ಮ ಪತಿ ನೀರಜ್ ಜೊತೆ ವಾಸವಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಸೌಂದರ್ಯ, ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಏಕಾಏಕಿ ತಮ್ಮ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಸೌಂದರ್ಯ ವಿವಾಹ

ವೈದ್ಯ ವೃತ್ತಿಯಲ್ಲಿದ್ದ ಸೌಂದರ್ಯ ವೈದ್ಯ ವೃತ್ತಿಯಲ್ಲಿರುವ ವರನನ್ನೇ ಕೈಹಿಡಿದಿದ್ದರು. ಡಾ.ನೀರಜ್ ಅವರನ್ನು ಕಳೆದ 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಖ್ಯಾತ ರೇಡಿಯಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿರುವ ನೀರಜ್, ಪತ್ನಿ ಸೌಂದರ್ಯ ಜೊತೆ ವಸಂತ ನಗರದ ಬಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದರು.

ಇದನ್ನೂ ಓದಿ: BSY: ಆತ್ಮಹತ್ಯೆಗೆ ಶರಣಾದ ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳು

ಪತಿ ಮನೆಗೆ ಬಂದಾಗ ಘಟನೆ ಬೆಳಕಿಗೆ

ಬೆಳಗ್ಗೆ ಎದ್ದಾಗ ಸೌಂದರ್ಯ ಸಹಜವಾಗಿಯೇ ಇದ್ದರು ಎನ್ನಲಾಗಿದೆ. ಪತಿ ಡ್ಯೂಟಿಗೆ ಹೊರಟಾಗ ಸೌಂದರ್ಯ ತಮ್ಮ ಕೋಣೆಗೆ ತೆರಳಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಕೆಲಸದವರು ಬಂದು ಸೌಂದರ್ಯ ಅವರನ್ನು ಕರೆದಿದ್ದಾರೆ. ಆದರೆ ಯಾವುದೇ ಉತ್ತರ ಬರಲಿಲ್ಲ. ಶತ ಪ್ರಯತ್ನದ ನಂತರ ಪತಿ ನೀರಜ್ ಅವರಿಗೆ ಕೆಲಸದವರು ವಿಚಾರ ತಿಳಿಸಿದ್ದಾರೆ.

ವಿಷಯ ತಿಳಿದು ಸೌಂದರ್ಯ ಅವರ ಪತಿ ನೀರಜ್, ಮನೆಗೆ ದೌಡಾಯಿಸಿ ಬಂದಿದ್ದಾರೆ. ತಮ್ಮ ಬಳಿ ಇರುವ ಕೀಯಿಂದ ಬಾಗಿಲು ತೆಗೆದು ಕೋಣೆಗೆ ಹೋಗಿದ್ದಾರೆ. ಆಗ ಸೌಂದರ್ಯ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಅವರನ್ನು ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಗೆ ರವಾನಿಸಲಾಯಿತು. ವೆಂಟಿಲೇಟರ್ ಅಳವಡಿಸಿ ಜೀವ ಉಳಿಸಲು ಪ್ರಯತ್ನಿಸಲಾಯಿತಾದರೂ ಅದು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಿಸದೇ ಸೌಂದರ್ಯ ಮೃತಪಟ್ಟಿದ್ದಾರೆ.

ಅಮ್ಮನ ಸಾವಿನಿಂದ ಅನಾಥವಾಯ್ತು ಕಂದಮ್ಮ

ನೀರಜ್ ಹಾಗೂ ಸೌಂದರ್ಯ ದಂಪತಿ ಮದುವೆಯಾಗಿ ಮೂರು ವರ್ಷಗಳಷ್ಟೇ ಕಳೆದಿತ್ತು. ಅವರಿಗೆ ಮುದ್ದಾದ ಮಗುವೂ ಇದೆ.  6 ತಿಂಗಳ ಹಿಂದಷ್ಟೇ ಸೌಂದರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ತಾಯಿ ಆತ್ಮಹತ್ಯೆಯಿಂದ ಪುಟ್ಟ ಕಂದಮ್ಮ ಅನಾಥವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಯಾರನ್ನ ಭೇಟಿ ಮಾಡ್ತಾರೋ ಅದನ್ನ ಕಟ್ಕೊಂಡು ನನಗೇನು? HD Kumaraswamy

ಬಿಎಸ್‌ವೈ ಕುಟುಂಬಕ್ಕೆ ಗಣ್ಯರ ಸಾಂತ್ವನ

ಸೌಂದರ್ಯ ಆತ್ಮಹತ್ಯೆಯಿಂದ ಯಡಿಯೂರಪ್ಪ ಕುಟುಂಬ ಆಘಾತಕ್ಕೆ ಒಳಗಾಗಿದೆ. ಮೊಮ್ಮಗಳನ್ನು ಕಳೆದುಕೊಂಡು ಬಿಎಸ್‌ವೈ ದುಃಖಿತರಾಗಿದ್ದಾರೆ. ಅವರಿಗೆ ಹಾಗೂ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಸಚಿವರು, ಶಾಸಕರು, ಆಪ್ತರು, ಸ್ನೇಹಿತರೆಲ್ಲ ಸಾಂತ್ವನ ಹೇಳಿದ್ದಾರೆ.

ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು

ಮೃತ ಸೌಂದರ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ಸಾಕ್ಷಿ ಸಂಗ್ರಹಿಸುತ್ತಿದ್ದಾರೆ. ಸೌಂದರ್ಯ ಅವರ ಮೊಬೈಲ್ ಸಿಡಿಆರ್ ಪಡೆದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

 ಪತಿ ಮನೆಯಲ್ಲಿ ಅಂತ್ಯಕ್ರಿಯೆ

ಸದ್ಯ ಸೌಂದರ್ಯ ಅವರ ಪತಿ ನೀರಜ್ ಅವರ ಅಬ್ಬಿಗೆರೆ ನಿವಾಸದ ಬಳಿ ಅಂತ್ಯಕ್ರಿಯೆ ನಡೆಯಲಿದೆ ಅಂತ ಮೂಲಗಳು ತಿಳಿಸಿವೆ. ಸೌಂದರ್ಯ ಅಂತಿಮ ಸಂಸ್ಕಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ.
Published by:Annappa Achari
First published: