ಈಶ್ವರಪ್ಪ ಒಬ್ಬನೇನಾ ಸದನದಲ್ಲಿ ಇರೋದು?, ಜನ ನಮ್ಮನ್ನೂ ಆರಿಸಿ ಕಳಿಸಿದ್ದಾರೆ; ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ

ದೊರೆಸ್ವಾಮಿ ವಿರುದ್ದದ ಹೇಳಿಕೆಯ ಹಿಂದೆ ವ್ಯವಸ್ಥಿತ ಸಂಚಿದೆ, ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸಂಘ ಪರಿವಾರದವರು ಬಿಜೆಪಿ ಶಾಸಕರಿಂದ ಇಂತಹ ಹೇಳಿಕೆಗಳನ್ನು ನೀಡಿಸುತ್ತಿದ್ದಾರೆ. ಅನಂತ್ ಕುಮಾರ್ ಹೆಗಡೆ ಗಾಂಧಿಜಿ ಬಗ್ಗೆ ಮಾತನಾಡಿದ್ರು, ಅವರ ವಿರುದ್ದ ಬಿಜೆಪಿ ಏನಾದರು ಕ್ರಮ ತೆಗೆದುಕೊಂಡರಾ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ-ಈಶ್ವರಪ್ಪ.

ಸಿದ್ದರಾಮಯ್ಯ-ಈಶ್ವರಪ್ಪ.

 • Share this:
  ಬೆಂಗಳೂರು (ಮಾರ್ಚ್ 01); ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಈಶ್ವರಪ್ಪ ಒಬ್ಬನೇನಾ ಸದನದಲ್ಲಿ ಇರೋದು?,ಜನ ನಮ್ಮನ್ನೂ ವಿಧಾನಸಭೆಗೆ ಕಳಿಸಿದ್ದಾರೆ, ಈಶ್ವರಪ್ಪ ಹೇಳಿದ್ದೇ ನಡೆಯತ್ತ? ನಾವು ಸದನದಲ್ಲಿ ಇಲ್ವಾ?” ಎಂದು ಕಿಡಿಕಾರಿದ್ದಾರೆ.

  ಈ ಹಿಂದೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಅವಮಾನಕರ ಹೇಳಿಕೆ ನೀಡಿದ್ದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ಯತ್ನಾಳ್ ದೊರೆಸ್ವಾಮಿ ಹೇಳಿಕೆ ಕುರಿತು ಕ್ಷಮೆ ಕೇಳದೆ ಇದ್ದರೆ, ತಾವು ಸದನದ ಕಲಾಪ ನಡೆಯಲು ಬಿಡುವುದಿಲ್ಲ” ಎಂದು ಕಿಡಿಕಾರಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಈಶ್ವರಪ್ಪ, “ಅವರು ಪ್ರತಿಭಟಿಸಿದರೆ ನಾವೇನು ಸುಮ್ನೆ ಇರ್ತೀವಾ” ಎಂದು ಆಕ್ರೋಶ ಹೊರಹಾಕಿದ್ದರು.

  ಈಶ್ವರಪ್ಪ ಅವರ ಆಕ್ರೋಶಕ್ಕೆ ಇಂದು ಏಕವಚನದಲ್ಲೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ದೊರೆಸ್ವಾಮಿ ವಿರುದ್ದದ ಹೇಳಿಕೆಯ ಹಿಂದೆ ವ್ಯವಸ್ಥಿತ ಸಂಚಿದೆ, ಕಾಣದ ಕೈಗಳು ಕೆಲಸ ಮಾಡುತ್ತಿವೆ. ಸಂಘ ಪರಿವಾರದವರು ಬಿಜೆಪಿ ಶಾಸಕರಿಂದ ಇಂತಹ ಹೇಳಿಕೆಗಳನ್ನು ನೀಡಿಸುತ್ತಿದ್ದಾರೆ. ಅನಂತ್ ಕುಮಾರ್ ಹೆಗಡೆ ಗಾಂಧಿಜಿ ಬಗ್ಗೆ ಮಾತನಾಡಿದ್ರು, ಅವರ ವಿರುದ್ದ ಬಿಜೆಪಿ ಏನಾದರು ಕ್ರಮ ತೆಗೆದುಕೊಂಡರಾ?" ಎಂದು ಪ್ರಶ್ನೆ ಮಾಡಿದ್ದಾರೆ.

  ಇದನ್ನೂ ಓದಿ : ದೆಹಲಿ ಕೋಮು ಗಲಭೆ ಪೂರ್ವ ನಿಯೋಜಿತವೇ?; ಗೃಹ ಸಚಿವ ಅಮಿತ್ ಶಾ ವಿರುದ್ಧ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್

  "ಕೇಂದ್ರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಈಶ್ವರಪ್ಪನಂತವರು ಇಂತಹ ಪಿತೂರಿಯ ಒಂದು ಭಾಗ.
  ಪ್ರಸ್ತುತ ನಮ್ಮ ಎದುರು ಎರಡು ಗಂಭೀರ ವಿಚಾರಗಳಿವೆ, ಒಂದು ಹಿಂಸಾಚಾರದ ಮೂಲಕ ಮತ ಸಮೀಕರಣ ಮಾಡುತ್ತಿದ್ದಾರೆ, ಎರಡನೇಯದು ಸಮಾಜದ ನಿಜವಾದ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನ ಮಾಡಲಾಗುತ್ತಿದೆ. ಆರು ವರ್ಷಗಳ ಆಡಳಿತದಲ್ಲಿ ಬಿಜೆಪಿ ಸಂಪೂರ್ಣ ಫೇಲ್ ಆಗಿದ್ದಾರೆ. ಹೀಗಾಗಿ ಜನರ ಭಾವನೆಗಳನ್ನು ಡೈವರ್ಟ್ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ.

  ಈ ಬಾರಿಯ ಸದನದಲ್ಲಿ ಈ ಕುರಿತು ಗಮನ ಸೆಳೆಯಲಾಗುವುದು. ಎಲ್ಲಾ ಸಮಯದಲ್ಲೂ ಈಶ್ವರಪ್ಪ ಹೇಳಿದಂತೆಯೇ ನಡೆಯಲು ಸದನದಲ್ಲಿ ಅವರು ಮಾತ್ರ ಇಲ್ಲ. ಬದಲಾಗಿ ಜನ ನಮ್ಮನ್ನೂ ಆರಿಸಿ ಕಳುಹಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.

  ಬಿಜೆಪಿಯವರು ಒಳ್ಳೆಯ ಬಜೆಟ್ ಮಂಡಿಸಲು ಸಾಧ್ಯವೇ ಇಲ್ಲ:

  ಇದೇ ಸಂದರ್ಭದಲ್ಲಿ ರಾಜ್ಯ ಬಜೆಟ್ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಈಗಾಗಲೇ ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಹೀಗಾಗಿ ಬಿಜೆಪಿಯವರು ಒಳ್ಳೆಯ ಬಜೆಟ್ ಮಂಡಿಸಲು ಸಾಧ್ಯವೇ ಇಲ್ಲ” ಎಂದು ಭವಿಷ್ಯ ನುಡಿದಿದ್ದಾರೆ.

  “ನನ್ನ ಅಂದಾಜಿನ ಪ್ರಕಾರ ಈ ಬಾರಿ 20 ಸಾವಿರ ಕೋಟಿ ಯಷ್ಟು ಖೋತಾ ಬಜೆಟ್ ಆಗಬಹುದು, ಕೇಂದ್ರ ಸರ್ಕಾರ ಯಾವುದೇ ಹಣಕಾಸಿನ ನೆರವೂ ನೀಡ್ತಿಲ್ಲ, ನಾವು ಶೇ.100ರಷ್ಟು ತೆರಿಗೆ ಸಂಗ್ರಹ ಮಾಡಿಕೊಟ್ಟರೆ ಅದರಲ್ಲಿ ರಾಜ್ಯಕ್ಕೆ ಬರೋದು ಬರೀ ಶೇ.45 ಮಾತ್ರ. ಉಳಿದ ಶೇ.55ರಷ್ಟು ಹಣ ಕೇಂದ್ರವೇ ಇಟ್ಟುಕೊಳ್ಳುತ್ತಿದೆ. ನಮ್ಮ ಜಿಎಸ್ ಟಿ ಹಣವನ್ನೂ ಕೊಟ್ಟಿಲ್ಲ, ಬರಬೇಕಾದ ಯಾವ ಅನುದಾನವೂ ಸಿಕ್ಕಿಲ್ಲ.

  ಬಿಜೆಪಿಯ ಯಾವೊಬ್ಬ ಸಂಸದ ಕೂಡ ಈ ಬಗ್ಗೆ ಮಾತನಾಡಲ್ಲ, ಆರಿಸಿ ಕಳಿಸಿದ 25 ಸಂಸದರೂ ಬಾಯಿ ಮೇಲೆ ಬೆರಳು ಇಟ್ಟುಕೊಂಡು ಕೂತಿದ್ದಾರೆ. ಯಡಿಯೂರಪ್ಪ ನೂ ಮಾತಾಡಲ್ಲ, ಯಾವೊಬ್ಬ ಮಂತ್ರಿಯೂ ಮಾತಾಡಲ್ಲ” ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

  ಇದನ್ನೂ ಓದಿ : ಈಶ್ವರಪ್ಪ ಒಬ್ಬನೇನಾ ಸದನದಲ್ಲಿ ಇರೋದು?, ಜನ ನಮ್ಮನ್ನೂ ಆರಿಸಿ ಕಳಿಸಿದ್ದಾರೆ; ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ
  First published: