HOME » NEWS » State » EX CM SIDDARAMAIAH TWEET WAR AGAINST RSS AND SANGHPARIVAR LEADERS MAK

ಗಾಂಧಿಯನ್ನು ಕೊಂದ ಸಂಘ ಪರಿವಾರದವರು ರಾಮ ಭಕ್ತರೇ?, ದೇಶ ಪ್ರೇಮದ ಪಾಠ ಇವರಿಂದ ಕಲಿಬೇಕಾ?; ಸಿದ್ದರಾಮಯ್ಯ

ಹೆಡ್ಗೇವಾರ್, ಗೊಲ್ವಾಲ್ಕರ್ ಇವರೆಲ್ಲ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದದ್ದು ಯಾಕೆ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರು ಇವತ್ತು ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ ಸ್ವಾಮಿ? ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

news18-kannada
Updated:February 22, 2021, 3:56 PM IST
ಗಾಂಧಿಯನ್ನು ಕೊಂದ ಸಂಘ ಪರಿವಾರದವರು ರಾಮ ಭಕ್ತರೇ?, ದೇಶ ಪ್ರೇಮದ ಪಾಠ ಇವರಿಂದ ಕಲಿಬೇಕಾ?; ಸಿದ್ದರಾಮಯ್ಯ
ಸಿದ್ದರಾಮಯ್.
  • Share this:
ಬೆಂಗಳೂರು (ಫೆಬ್ರವರಿ 22); ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಮತ್ತು ಆರ್​ಎಸ್​ಎಸ್​ ನಾಯಕರು ಈ ಹಿಂದೆ ಸಂಗ್ರಹಿಸಿದ್ದ ಹಾಗೂ ಪ್ರಸ್ತುತ ಸಂಗ್ರಹಿಸುತ್ತಿರುವ ದೇಣಿಗೆಯ ಲೆಕ್ಕ ನೀಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೇಳುತ್ತಿದ್ದಂತೆ ಇದೀಗ ರಾಜ್ಯಾದ್ಯಂತ ಲೆಕ್ಕಕೊಡಿ ಅಭಿಯಾನ ಆರಂಭವಾಗಿದೆ. ಆದರೆ, ಇದರ ಬೆನ್ನಿಗೆ ಬಿಜೆಪಿಯ ಹಲವು ನಾಯಕರು ಸಿದ್ದರಾಮಯ್ಯ ಅವರ ದೇಶಭಕ್ತಿಯನ್ನು ಪ್ರಶ್ನಿಸಿದ್ದರು. ಇದಕ್ಕೆ ಇಂದು ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ, "ಗಾಂಧಿಯವರನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವೇ? ರಾಮಭಕ್ತರೆಂದರೆ ಕಾಯುವವರೋ? ಕೊಲ್ಲುವವರೋ" ಎಂದು ಪ್ರಶ್ನೆ ಮಾಡುವ ಮೂಲಕ ಆರ್​ಎಸ್​ಎಸ್​ ಮತ್ತು ಸಂಘಪರಿವಾರದ ನಾಯಕರ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ.



ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ. ಮಹಾತ್ಮ ಗಾಂಧಿಯವರಂತೆ ನಾನು ರಾಮಭಕ್ತನೆ. ದೇಶಕ್ಕೆ ಬೇಕಿರುವುದು ಗಾಂಧಿಯವರ ಆದರ್ಶ ಪುರುಷ ರಾಮ. ಗಾಂಧಿಯವರನ್ನು ಕೊಂದ ಸಂಘಪರಿವಾರದವರು ರಾಮಭಕ್ತರಾಗಲು ಸಾಧ್ಯವೇ? ರಾಮಭಕ್ತರೆಂದರೆ ಕಾಯುವವರೋ? ಕೊಲ್ಲುವವರೋ?" ಎಂದು ಪ್ರಶ್ನೆ ಮಾಡಿದ್ದಾರೆ.



ಮತ್ತೊಂದು ಟ್ವೀಟ್​ನಲ್ಲಿ, "ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿರುವಂತಹುದು.
ಧರ್ಮದ ಹೆಸರಿನಲ್ಲಿ ಸಮಾಜ ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು.



ಒಂದು ಕಾಲದಲ್ಲಿ ಸರ್ವಧರ್ಮ ಸಮನ್ವಯತೆಯ ತವರಾಗಿದ್ದ ದಕ್ಷಿಣ ಕನ್ನಡವನ್ನು ಬಿಜೆಪಿ ನಾಯಕರು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿನ ಜನ ಪರಸ್ಪರ ಅಪನಂಬಿಕೆಯಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅದಕ್ಕೆ ಆರ್.ಎಸ್.ಎಸ್ ಮತ್ತು ಬಿಜೆಪಿಯೇ ಕಾರಣ" ಎಂದು ಆಕ್ರೋಶ ಹೊರಹಾಕಿದ್ದಾರೆ.



ಇದೇ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್​ ಕೊಡುಗೆ ಏನು? ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, "ದೇಶಪ್ರೇಮದ ಪಾಠ ಮಾಡುವ ಭಾರತದ ಬಿಜೆಪಿ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಲಿ. ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರ್.ಎಸ್‌.ಎಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ.



ಹೆಡ್ಗೇವಾರ್, ಗೊಲ್ವಾಲ್ಕರ್ ಇವರೆಲ್ಲ ಸ್ವಾತಂತ್ರ್ಯ ಚಳವಳಿಯಿಂದ ದೂರ ಉಳಿದದ್ದು ಯಾಕೆ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಯವರನ್ನು ಕೊಂದವರು ಇವತ್ತು ದೇಶಪ್ರೇಮದ ಪಾಠ ಮಾಡುತ್ತಾರೆ. ಇಂಥವರ ದೇಶಪ್ರೇಮದ ಪಾಠ ಯಾರಿಗೆ ಬೇಕಿದೆ ಸ್ವಾಮಿ?" ಎಂದು ಕಿಡಿಕಾರಿದ್ದಾರೆ.



ಕೇಂದ್ರ ಮತ್ತು ರಾಜ್ಯದ ಆರ್ಥಿಕ ನೀತಿಯನ್ನೂ ಟ್ವೀಟ್​ ಮೂಲಕ ಪ್ರಶ್ನೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು 3 ಕೆ.ಜಿ ಗೆ ಇಳಿಸಿ ಬಡಜನರ ಊಟ ಕಸಿದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ನನಗಿದೆ. ಆಗ ಪ್ರತೀ ವ್ಯಕ್ತಿಗೆ ಉಚಿತವಾಗಿ ತಲಾ 10 ಕೆ.ಜಿ ಅಕ್ಕಿ ನೀಡುತ್ತೇವೆ.



ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಇಂದು ದೇಶದ ಉತ್ಪಾದನಾ ವಲಯ ನಿಷ್ಕ್ರಿಯಗೊಂಡಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಬೀಡಿ ಉದ್ಯಮವನ್ನು ನಂಬಿಕೊಂಡಿದ್ದ 50,000 ಜನರ ಬದುಕು ಬೀದಿಪಾಲಾಗಿದೆ. ಇದರ ಪುನಶ್ಚೇತನಕ್ಕಾಗಿ ಕರ್ನಾಟಕದ ಬಿಜೆಪಿ ಸರ್ಕಾರ ಯಾವ ಕ್ರಮ ಕೈಗೊಂಡಿದೆ?" ಎಂದಿದ್ದಾರೆ.
Published by: MAshok Kumar
First published: February 22, 2021, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories