Siddaramaiah| ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ; ಸಿದ್ದರಾಮಯ್ಯ ಕಿಡಿ
15ನೇ ಕಮೀಷನ್ ನಿಂದ 54495 ಕೋಟಿ ಹಣ ರಾಜ್ಯಕ್ಕೆ ಬರಬೇಕು. ಆದರೆ, ರಾಜ್ಯಕ್ಕೆ ಬರಬೇಕಾದ ಹಣವನ್ನು ಸಚಿವೆ ನಿರ್ಮಲಾ ಸೀತಾರಾಮನ್ ತಡೆದಿದ್ದಾರೆ. ಈಯಮ್ಮನನ್ನ ಕರ್ನಾಟಕದಿಂದ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು (ಜುಲೈ 03); ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರ ತಾರಕಕ್ಕೆ ಏರಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್ಟಿ ಪಾಲು ಮತ್ತು ನೆರೆ-ಬರ ಪರಿಹಾರ ಹಣವನ್ನು ಸರಿಯಾಗಿ ನೀಡಿಲ್ಲ ಎಂದು ಸಿದ್ದರಾಮಯ್ಯ ಹಲವು ವರ್ಷಗಳಿಂದ ಆರೋಪಿಸುತ್ತಲೇ ಬಂದಿದ್ದಾರೆ. ಆದರೆ, ಈ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ಬಗ್ಗೆ ಕಿಡಿಕಾರಿದ್ದ ನಿರ್ಮಲಾ ಸೀತಾರಾಮನ್, "ಅವರು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಹಣಕಾಸು ಅಕ್ರಮಗಳ ಬಗ್ಗೆಯೂ ಅವರು ಸ್ವಲ್ಪ ಮಾತನಾಡಲಿ. ಸಿದ್ದರಾಮಯ್ಯ ನವರು ತಪ್ಪು ಮಾಹಿತಿ ಕೊಡಬಾರದು. ಕರ್ನಾಟಕಕ್ಕೆ ತೊಂದರೆ ಮಾಡಬೇಕೆಂದು ನಮ್ಮ ಉದ್ದೇಶವಿರಲಿಲ್ಲ. ರಾಜ್ಯ ಸರ್ಕಾರ ಆದಾಯ ಕೊರತೆ ಪ್ರಮಾಣವನ್ನು ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ತೋರಿಸಿದ್ದರಿಂದ ಕರ್ನಾಟಕ ,ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚುವರಿ ಹಣಕಾಸು ಬಿಡುಗಡೆ ತಡೆಹಿಡಿಯಲಾಯ್ತು" ಎಂದು ಮಾಹಿತಿ ನೀಡಿದ್ದರು.
ಆದರೆ, ನಿರ್ಮಲಾ ಸೀತಾರಾಮನ್ ಅವರು ಈ ಹೇಳಿಕೆಗೆ ಇಂದು ಕಟುವಾಗಿ ಟೀಕೆ ಮಾಡಿರುವ ಸಿದ್ದರಾಮಯ್ಯ, "15ನೇ ಕಮೀಷನ್ ನಿಂದ 54495 ಕೋಟಿ ಹಣ ರಾಜ್ಯಕ್ಕೆ ಬರಬೇಕು. ಆದರೆ, ರಾಜ್ಯಕ್ಕೆ ಬರಬೇಕಾದ ಹಣವನ್ನು ಸಚಿವೆ ನಿರ್ಮಲಾ ಸೀತಾರಾಮನ್ ತಡೆದಿದ್ದಾರೆ. ನಾನೇನು ಬೇರೆ ಕಡೆಯಿಂದ ಮಾಹಿತಿ ಪಡೆದ್ನಾ. ನಾನು ಆಯೋಗದಿಂದಲೇ ಮಾಹಿತಿ ಪಡೆದಿದ್ದು. ಹಾಗಾದರೆ 15ನೇ ಪೇ ಕಮೀಷನ್ ಸುಳ್ಳು ಹೇಳುತ್ತಾ?
ಇದರ ಬಗ್ಗೆ ಯಡಿಯೂರಪ್ಪ ಕೂಡ ಮಾತನಾಡಿಲ್ಲ. ಒಂದು ಪತ್ರ ಬರೆದು ಸುಮ್ಮನಾದ್ರು. ಈಯಮ್ಮನನ್ನ ಕರ್ನಾಟಕದಿಂದ ರಾಜ್ಯಸಭೆ ಸದಸ್ಯೆ ಮಾಡಿದ್ದು ಇದಕ್ಕೇನಾ?. ಡೀಸೆಲ್ ಗೆ ಮನಮೋಹನ್ ಸಿಂಗ್ ಅವಧಿಯಲ್ಲಿ 3.45 ಪೈಸೆ ಸೆಸ್ ಇತ್ತು. ಆದರೆ ಈಗ 31.48 ಪೈಸೆಗೆ ಏರಿಸಿದ್ದು ಏಕೆ? ಆಗ ಪೆಟ್ರೋಲ್ ಮೇಲೆ 9.25 ಪೈಸೆ ಇತ್ತು. ಆದರೆ, ಇವತ್ತು 32.92 ಪೈಸೆ ಸೆಸ್ ಹಾಕಿದ್ದಾರೆ.ಇದು ನಿರ್ಮಲಾ ಸೀತಾರಾಮನ್ ಗೆ ಗೊತ್ತಿಲ್ವೇ? ಸೆಸ್ ತೆಗೆಯಿರಿ ಪೆಟ್ರೋಲ್-ಡೀಸೆಲ್ ದರ ಕಡಿಮೆ ಆಗುತ್ತೆ. ರಾಜ್ಯದವರು ಸೆಸ್ ಹಾಕಿದ್ದಾರೆ. ಅವರಿಗೂ ಕಡಿಮೆ ಮಾಡಿ ಅಂತ ಹೇಳ್ತೇನೆ. ಕೇಂದ್ರ ಸೆಸ್ ಹಾಕಿದ್ದು ಏಕೆ?" ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಸೆಕೆಂಡ್ ಡೋಸ್ ಲಸಿಕೆಗೆ ಜನ ಪರದಾಡುತ್ತಿರುವ ವಿಚಾರವನ್ನು ಉಲ್ಲೇಖಿಸಿ ಸಚಿವ ಸುಧಾಕರ್ ಮತ್ತು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ಸಿದ್ದರಾಮಯ್ಯ, "ಈ ಸರ್ಕಾರ ಪದೇ ಪದೇ ವಿಫಲವಾಗಿದೆ. ಉಚಿತ ಲಸಿಕೆ ಕೊಡ್ತೇವೆ ಎಂದು ಪ್ರಧಾನಿ ಹೇಳಿದ್ರು. 18 ವರ್ಷ ಮೇಲ್ಪಟ್ಟವರಿಗೆ ಕೊಡ್ತೇವೆ ಎಂದರು. ಆದರೂ ರಾಜ್ಯದಲ್ಲಿ ಲಸಿಕೆ ಸಿಗ್ತಿಲ್ಲ. ಲಸಿಕೆ ದಾಸ್ತಾನಿಲ್ಲ ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ರು ಸುಧಾಕರ್ ಮಾತ್ರ ನಮ್ಮಲ್ಲಿ ಸಮಸ್ಯೆ ಇಲ್ಲ ಅಂತಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು. ಆದರೆ, ಆ ಕೆಲಸವನ್ನೂ ರಾಜ್ಯ ಸರ್ಕಾರ ಮಾಡುತ್ತಿಲ್ಲ. ಕೇಂದ್ರದಿಂದಲೂ ಲಸಿಕೆ ಬರ್ತಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ" ಎಂದು ಲಸಿಕೆ ಕೊರತೆ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ