ಬೆಂಗಳೂರು: ಟಿಪ್ಪುವನ್ನು (Tipu Sultan ) ಹೊಡೆದು ಹಾಕಿದಂತೆ ಸಿದ್ದರಾಮಯ್ಯ (Siddaramaiah) ಅವರನ್ನು ಹೊಡದು ಹಾಕಬೇಕು ಎಂದು ಹೇಳಿದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ (Ashwath Narayan ) ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಾರವಾಗಿಯೇ ತಿರುಗೇಟು ನೀಡಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ನನ್ನನ್ನು ಹತ್ಯೆ ಮಾಡಲು ನೀವೇ ಕೋವಿ ಹಿಡಿದುಕೊಂಡು ಬನ್ನಿ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಅಲ್ಲದೆ, ಇಂತಹ ಹೇಳಿಕೆಗೆ ನಾನು ಅಚ್ಚರಿಕೊಂಡಿಲ್ಲ ಎಂದಿರುವ ಸಿದ್ದರಾಮಯ್ಯ ಅವರು, ಗಾಂಧಿಯನ್ನು (Mahatma Gandhi) ಕೊಂದವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳುವ ಮೂಲಕ ಬಿಜೆಪಿಗೆ (BJP) ತಿವಿದಿದ್ದಾರೆ.
ಸಿದ್ದರಾಮಯ್ಯ ಅವರ ಟ್ವೀಟ್ನಲ್ಲಿ ಏನಿದೆ?
ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ್ ಅವರು ಜನರಿಗೆ ಕರೆ ನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ. ನನ್ನ ಹತ್ಯೆಗೆ ಅಶ್ವತ್ಥ್ ನಾರಾಯಣ್ ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ನನ್ನ ಹತ್ಯೆಗೆ @drashwathcn ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? 2/4
— Siddaramaiah (@siddaramaiah) February 15, 2023
ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ. ಸಚಿವ ಅಶ್ವತ್ಥ್ ನಾರಾಯಣ್ ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ? ಎಂದಿದ್ದಾರೆ.
ಅಶ್ವತ್ಥ್ ನಾರಾಯಣ್ ಮನುಷ್ಯರೋ ರಾಕ್ಷಸರೋ?
ಇದಕ್ಕೂ ಮುನ್ನ ಬಾಗಲಕೋಟೆಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದ ವೇದಿಕೆಯಲ್ಲೇ ತಿರುಗೇಟು ನೀಡಿದ್ದ ಸಿದ್ದರಾಮಯ್ಯ ಅವರು, ಅಶ್ವತ್ಥ್ ನಾರಾಯಣ್ ಮನುಷ್ಯರೋ ರಾಕ್ಷಸರೋ ನೀವೇ ತಿಳಿದುಕೊಳ್ಳಿ. ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದರಂತೆ. ಹೊಡೆದು ಹಾಕೋಕೆ ನೀವು ಬಿಡ್ತೀರಾ? ನಾನು ಟಿಪ್ಪು, ಬಸವಣ್ಣ, ರಾಯಣ್ಣ ಎಲ್ಲರನ್ನೂ ಗೌರವಿಸ್ತೇನೆ. ನಾನು ಮನುಷ್ಯತ್ವ ಇರೋನು. ಹಿಂದುಗಳನ್ನು ಪ್ರೀತಿಸ್ತಿನಿ, ಮುಸ್ಲಿಂ, ಕ್ರೈಸ್ತ, ವಾಲ್ಮೀಕಿ ಎಲ್ಲರನ್ನೂ ಪ್ರೀತಿಸ್ತಿನಿ ಎಂದು ಟಾಂಗ್ ಕೊಟ್ಟಿದ್ದರು.
ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದೇನು?
ಮಂಡ್ಯದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅಶ್ವತ್ಥ್ ನಾರಾಯಣ್ ಅವರು, ಹಿಂದುಗಳ ಮತಗಳನ್ನು ಸೆಳೆಯಲು ಟಿಪ್ಪು ಅಸ್ತ್ರ ಪ್ರಯೋಗ ಮಾಡಿದ್ದರು. ಟಿಪ್ಪು ಹೆಸರು ಹೇಳಿದರೆ ಸಿದ್ದರಾಮಯ್ಯ ಅವರು ಬಂದು ಬಿಡುತ್ತಾರೆ. ಟಿಪ್ಪು ಸುಲ್ತಾನ್ ಬೇಕಾ ಅಥವಾ ಸಾವರ್ಕರ್ ಬೇಕಾ ಎಂದು ಪ್ರಶ್ನೆ ಮಾಡಿದರು. ಟಿಪ್ಪುವನ್ನು ಎಲ್ಲಿಗೆ ಕಳುಹಿಸಬೇಕು? ಟಿಪ್ಪುವನ್ನು ಉರಿಗೌಡ ಮತ್ತು ದೊಡ್ಡ ನಂಜೇಗೌಡ ಏನು ಮಾಡಿದರು ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Crime News: ಅನೈತಿಕ ಸಂಬಂಧ ಪ್ರಶ್ನಿಸಿದ್ದೇ ತಪ್ಪಾಯ್ತಾ? ಪ್ರಿಯಕರನೊಂದಿಗೆ ಸೇರಿ ಪತಿಯ ಉಸಿರುಗಟ್ಟಿಸಿ ಕೊಲೆಗೈದ ಪತ್ನಿ
ಆಗ ನೆರೆದಿದ್ದ ಜನ ಹೊಡೆದು ಹಾಕಿದರು ಎಂದು ಉತ್ತರಿಸಿದರು. ಇದರ ಬೆನ್ನಲ್ಲೇ ಅದೇ ರೀತಿ ಇವರನ್ನು ಹೊಡೆದು ಹಾಕಬೇಕು ಎಂದು ಹೇಳುವ ಮೂಲಕ ವಿವಾದತ್ಮಾಕ ಹೇಳಿಕೆ ನೀಡಿದ್ದರು. ನಮ್ಮ ಪಕ್ಷವನ್ನು ಕೈ ಹಿಡಿದು ನಮ್ಮತನವನ್ನು ಕಾಪಾಡಿ. ನಮ್ಮತನ ಕಾಪಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಕರೆ ನೀಡಿದ್ದರು. ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎನ್ನುವ ಅರ್ಥದಲ್ಲಿ ಅಶ್ವತ್ಥ್ ನಾರಾಯಣ್ ಅವರು ಹೇಳಿಕೆ ನೀಡಿದ್ದರೂ ಕೂಡ ಸದ್ಯ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ