'ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ'; ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ, ಮತ್ತೆ ತಿರುಗೇಟು ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ

ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ,ಈಗ ವಿಶ್ವನಾಥ್... ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು ಎಂದು ಟ್ವೀಟ್ ಮಾಡಿದ್ದಾರೆ.

ಎಚ್​. ವಿಶ್ವನಾಥ್​- ಸಿದ್ದರಾಮಯ್ಯ

ಎಚ್​. ವಿಶ್ವನಾಥ್​- ಸಿದ್ದರಾಮಯ್ಯ

  • News18
  • Last Updated :
  • Share this:
ಬೆಂಗಳೂರು: ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಮಾಡಿದ್ದಾದರೂ ಏನು. ಅವರ ಕೊಡುಗೆ ಏನೇನು ಇಲ್ಲ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ನೆನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗೆ ಟೀಕೆಗಳು ಕೇಳಿಬರುತ್ತಿವೆ.

ಈ ಹೇಳಿಕೆ ಸಂಬಂಧ ಸ್ವತಃ ಸಿದ್ದರಾಮಯ್ಯ ಅವರೇ ಇಂದು ಟ್ವಿಟರ್​ನಲ್ಲಿ ಅಸಮಧಾನ ಹೊರಹಾಕಿದ್ದಾರೆ. "ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು.ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ," ಎಂದು ಟ್ವೀಟ್​ ಮಾಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ "ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ,ಈಗ ವಿಶ್ವನಾಥ್... ಮುಂದೆ ಯಾರು ಗೊತ್ತಿಲ್ಲ.
ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು," ಎಂದು ವಿಶ್ವನಾಥ್ ಜೊತೆಗೆ ಜಿ.ಟಿ.ದೇವೇಗೌಡ ಕೂಡ ಅವರ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ನೆನ್ನೆ ಮೈಸೂರಿನಲ್ಲಿ ಮಾತನಾಡಿದ್ದ ವಿಶ್ವನಾಥ್ ಅವರು, "ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿ ಏನು ಮಾಡಿದ್ದಾರೆ? ಕೆಲವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಅಂತಾ ಚಮಚಾಗಿರಿ ಮಾಡುತ್ತಿದ್ದಾರೆ.  ದೇವರಾಜ ಅರಸು ಅವರನ್ನು ಜನ ಈಗಲೂ ನೆನೆಯುತ್ತಾರೆ. ಯಾಕೆಂದರೆ ಅವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಏನು ದೇವರಾಜ ಅರಸು ಅವರ ರೀತಿ ಆಡಳಿತ ಕೊಟ್ಟರಾ?. "ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಆಡಳಿತ ಇತ್ತು. 5 ವರ್ಷ ಪೂರೈಸಿದ ಸಿಎಂ ನಾನು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ 130 ಇದ್ದ ಸಂಖ್ಯಾಬಲ 78 ಕ್ಕೆ ಏಕೆ ಕುಸಿಯಿತು,"  ಎಂದು ಪ್ರಶ್ನೆ ಮಾಡಿದ್ದಾರೆ. "ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಇನ್ನೂ ನಾಲ್ಕು ವರ್ಷ ಎಚ್​​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್​​ಗೆ ಕರೆತಂದದ್ದು ನಾವು. ಆದರೆ ಅವರು ಮಾಡಿದ್ದೇನು? ನಮ್ಮಂತಹ ಶ್ರೀಸಾಮಾನ್ಯರು ಅವರ ಕಣ್ಣಿಗೆ ಕಾಣಲ್ಲ ಬಿಡಿ," ಎಂದು ಕುಟುಕಿದರು.

ಇದನ್ನು ಓದಿ: ಮೈತ್ರಿಯಲ್ಲಿ ಕಿಡಿ ಹತ್ತಿಸಿದ ವಿಶ್ವನಾಥ್ ಹೇಳಿಕೆ; ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ರಾಜ್ಯಾಧ್ಯಕ್ಷರ ಮಾತಿಗೆ ಕೈ ಮುಖಂಡರ ಆಕ್ರೋಶ

ಇದನ್ನು ಓದಿ: ಫಲಿತಾಂಶಕ್ಕೂ ಮುನ್ನ ಮೈತ್ರಿ ನಾಯಕರಲ್ಲಿ ಬಿರುಕು; ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ರಾಜ್ಯಾಧ್ಯಕ್ಷ ಹೇಳಿಕೆಗೆ ದಿನೇಶ್​ ಗುಂಡೂರಾವ್ ಗರಂ

ಸಮನ್ವಯ ಸಮಿತಿ ಸಭೆಯಲ್ಲಿ ವಿಶ್ವನಾಥ್ ಹೇಳಿಕೆ ಪ್ರಸ್ತಾಪಿಸುತ್ತೇನೆ ಎಂದು ಸಿದ್ದರಾಮಯ್ಯ ಮಾಡಿರುವ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್, ನನ್ನನ್ನು ಸಮನ್ವಯ ಸಮಿತಿಗೆ ಆಹ್ವಾನಿಸಲಿ. ನಾನು ಸಮಿತಿಯಲ್ಲೇ ಉತ್ತರಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಮೈತ್ರಿ ಧರ್ಮಕ್ಕೆ ಧಕ್ಕೆ ತರುವ ‘ನಾನೇ ಸಿಎಂ’ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಈ ವಿಚಾರ ಸಿದ್ದರಾಮಯ್ಯ ಅವರಿಂದಲೇ ಮೊದಲು ಆರಂಭವಾಗಿದ್ದು. ನನ್ನ ಹೇಳಿಕೆ ಜವಾಬ್ದಾರಿಯುತವಾಗಿದೆ. ಸುಳ್ಳು ಹೇಳುವುದು ನನ್ನ ಜನ್ಮದಲ್ಲಿ, ನನ್ನ ರಕ್ತದಲ್ಲೇ ಇಲ್ಲ
ಕುಲದೇವರು ವೀರೇಶ್ವರ ಸ್ವಾಮಿ ಸಿದ್ದರಾಮಯ್ಯಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.

ಜಿಟಿಡಿ ಸ್ಪಷ್ಟನೆ

ಸಿದ್ದರಾಮಯ್ಯ ಅವರು ಜಿ.ಟಿ.ದೇವೇಗೌಡ ಅವರ ಹೆಸರನ್ನು ಟ್ವಿಟರ್​ನಲ್ಲಿ ಪ್ರಸ್ತಾಪಿಸಿ, ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.  "ಸಿದ್ದರಾಮಯ್ಯ ವಿರುದ್ದ ನಾನು ಯಾವತ್ತು ಮಾತನಾಡಿಲ್ಲ. ಅವರ ಮೇಲೆ ಯಾವಾಗಲೂ ಗೌರವ ಇದೆ. ಅವರು ನನ್ನ ಬಗ್ಗೆ ಟ್ವಿಟ್ ಮಾಡಿದ್ದಾರಂತೆ. ಅದನ್ನ ನಾನು ನೋಡಿಲ್ಲ.  ಅವರು ಮೊದಲು ಜಿಟಿಡಿ ಮಾತನಾಡಿದ್ರು ಈಗ ವಿಶ್ವನಾಥ್ ಮಾತನಾಡಿದ್ದಾರೆ ಎಂದು ಹೇಳಿದ್ದಾರಂತೆ. ಆದರೆ ಅವರೇನು ಚುನಾವಣೆ ಬಗ್ಗೆ ಮಾತನಾಡಿಲ್ಲ. ಅವರು ಯಾಕೆ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ," ಎಂದಿದ್ದಾರೆ.

"ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾತನಾಡಬೇಕು‌. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಹೇಳಿದ್ದಾರೆ. ಇನ್ಯಾಕೇ ಬೇರೆ ಮಾತು. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿಬಾರದು. 23ರ ರಿಸಲ್ಟ್ ಬರುವವರೆಗೂ ಎಲ್ಲರ ಹೇಳಿಕೆಯೂ ವ್ಯರ್ಥ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಜಿಟಿಡಿ ಎಲ್ಲವನ್ನು ಮರೆತು ಸಿದ್ದರಾಮಯ್ಯ ಜೊತೆ ಪ್ರಚಾರ ಮಾಡಿದ್ದಾರೆ. ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ಆದರೆ ಅವರು ಪಾಲಿಸಿಲ್ಲ ಅಂತ ನೇರವಾಗಿ ಒಪ್ಪಿಕೊಂಡಿದ್ದಾರೆ. ಜಿಟಿಡಿ ಹೇಗೆ ಕೆಲಸ ಮಾಡಿದ್ದಾರೆ ಅಂತ ಚೆಲುವರಾಯಸ್ವಾಮಿಯನ್ನೇ ಕೇಳಿ ಎಂದು ಜಿಟಿಡಿ ಹೇಳಿದರು.

First published: