ಬೇಕಾಬಿಟ್ಟಿ ವಸೂಲಿಗೆ ನಿಂತಿರುವ ಖಾಸಗಿ ಶಾಲೆಗಳ ಜೊತೆಗೆ ಸರ್ಕಾರ ಶಾಮೀಲಾಗಿದೆ; ಸಿದ್ದರಾಮಯ್ಯ ಟೀಕೆ

ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಮಾಲೀಕರು ಎಲ್ಲರೂ ಬೀದಿಗಿಳಿದಿದ್ದಾರೆ. ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಸುರೇಶ್​ ತಕ್ಷಣ ಸ್ಪಷ್ಟನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

 • Share this:
  ಬೆಂಗಳೂರು (ಡಿಸೆಂಬರ್​ 20); ಕೊರೋನಾ ಸೋಂಕಿನ ಕಾರಣದಿಂದಾಗಿ ಕಳೆದ 9 ತಿಂಗಳಿನಿಂದ ಶಾಲೆಗಳು ಬಂದ್​ ಆಗಿವೆ. ಆದರೆ, ಕೆಲವು ಖಾಸಗಿ ಶಾಲೆಗಳಲ್ಲಿ ಮಾತ್ರ ಆನ್​ಲೈನ್​ ತರಗತಿಗಳನ್ನು ನಡೆಸಲಾಗುತ್ತಿದೆ. ಈ ನಡುವೆ ಶಾಲೆಗಳ ಆಡಳಿತ ಮಂಡಲಿ ನಿತ್ಯ ತರಗತಿಗಳು ಇಲ್ಲದಿದ್ದರೂ ಬೇಕಾಬಿಟ್ಟಿ ಶುಲ್ಕ ವಸೂಲಾತಿ ನಡೆಸುತ್ತಿವೆ. ಈ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರೂ ಸರ್ಕಾರ ಮಾತ್ರ ಗಮನವಹಿಸುತ್ತಿಲ್ಲ. ಈ ಕುರಿತು ಸರಣಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ತರಗತಿಗಳು ನಡೆಯದೆ ಇದ್ದರೂ ಬೋದನಾ ಶುಲ್ಕದ ಜೊತೆಯಲ್ಲಿ ಪ್ರಯೋಗಶಾಲೆ, ಲೈಬ್ರೆರಿ ಮತ್ತಿತರ ಪಠ್ಯೇತರ ಶುಲ್ಕ ವಸೂಲಿಗೆ ಹೊರಟಿರುವ ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳುಬೆದರಿಕೆಗೆ ಜಗ್ಗುತ್ತಿಲ್ಲ. ಕರ್ನಾಟಕದ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆ ಷಾಮೀಲಾಗಿದೆ" ಎಂದು ಆರೋಪಿಸಿದ್ದಾರೆ.

  ಮತ್ತೊಂದು ಟ್ವೀಟ್​ನಲ್ಲಿ, "ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ತರಗತಿಗಳಿಲ್ಲದೆ ಇದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ‌ ಮಾಡಲಾಗುತ್ತಿದೆ. ಇದಕ್ಕಾಗಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ ಪೋಷಕರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಸರ್ಕಾರ ಕಣ್ಣುಮುಚ್ಚಿಕೊಂಡು ಕೂತಿದೆ.  ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಮತ್ತು ಶಿಕ್ಷಣಸಚಿವ ಸುರೇಶ್​ ಅವರೇ ನೇರ ಹೊಣೆಗಾರರು. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಜಗಳ ತಂದು ಹಾಕಿ ಇವರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ"  ಎಂದು ಆರೋಪಿಸಿದ್ದಾರೆ.  "ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಮಾಲೀಕರು ಎಲ್ಲರೂ ಬೀದಿಗಿಳಿದಿದ್ದಾರೆ. ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಸುರೇಶ್​ ತಕ್ಷಣ ಸ್ಪಷ್ಟನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಿ ವಿದ್ಯಾರ್ಥಿಗಳನ್ನು ರಕ್ಷಿಸಬೇಕು. ನ್ಯಾಯ ಒದಗಿಸಬೇಕು" ಎಂದು ಒತ್ತಾಯಿಸಿದ್ದಾರೆ.
  Published by:MAshok Kumar
  First published: