ಜೆಡಿಎಸ್​ ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಬಗೆಯದು; ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಕುಮಾರಸ್ವಾಮಿ

ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

  • Share this:
    ಬೆಂಗಳೂರು (ಡಿಸೆಂಬರ್​ 09); ರೈತರ ಭಾರೀ ವಿರೋಧದ ನಡುವೆಯೂ ರಾಜ್ಯ ಬಿಜೆಪಿ ಸರ್ಕಾರ ನಿನ್ನೆ ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಅಂಗೀಕಾರ ಪಡೆದಿದೆ. ಸರ್ಕಾರದ ಈ ನಡೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷವಾದ ಕಾಂಗ್ರೆಸ್​ ಇದು ರೈತ ವಿರೋಧಿ ಮಸೂದೆ ಎಂದು ತೀವ್ರವಾಗಿ ವಿರೋಧಿಸಿದ್ದರೂ ಸಹ ಮತ್ತೊಂದು ವಿರೋಧ ಪಕ್ಷವಾದ ಜೆಡಿಎಸ್​ ಮತ್ತು ಸಿಎಂ ಕುಮಾರಸ್ವಾಮಿ ಈ ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ, ಜೆಡಿಎಸ್​ ಮತಗಳಿಂದಲೇ ಈ ಮಸೂದೆಗೆ ಅಂಗೀಕಾರ ದೊರಕಿದೆ. ಹೀಗಾಗಿ ರೈತ ಮುಖಂಡರು ಮತ್ತು ಕಾಂಗ್ರೆಸ್​ ಕುಮಾರಸ್ವಾಮಿ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಒಂದು ಹಂತದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​, "ಕುಮಾರಸ್ವಾಮಿ ಇರೋದೆ ಪುಟಗೋಸಿ ರಾಜಕಾರಣ ಮಾಡೋಕೆ" ಎಂದು ಕಿಡಿಕಾರಿದ್ದರು. ಆದರೆ, ಈ ಎಲ್ಲಾ ಆರೋಪಗಳಿಗೆ ಕುಮಾರಸ್ವಾಮಿ ಇಂದು ತಮ್ಮ ಟ್ವೀಟ್​ ಮೂಲಕ ಉತ್ತರ ನೀಡಲು ಯತ್ನಿಸಿದ್ದಾರೆ. 



    ಬಿಜೆಪಿ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿರುವ ತಮ್ಮ ನಿಲುವನ್ನು ಸಮರ್ಥಿಸಿ ಟ್ವೀಟ್​ ಮಾಡಿರುವ ಕುಮಾರಸ್ವಾಮಿ, "ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈ ವರೆಗಿನ ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ.

    ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನು ತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ.



    ಭೂಸುಧಾರಣ ಕಾಯ್ದೆಯಲ್ಲಿ ನಿಜವಾದ ಸುಧಾರಣಾ ಕ್ರಮಗಳನ್ನು ಸಾಧಿಸಿದ್ದು ಜೆಡಿಎಸ್‌. ಆದರೂ ವಿಮರ್ಶೆ ಇಲ್ಲದೇ ಏಕಾಏಕಿ ಜೆಡಿಎಸ್‌ ಅನ್ನು ದೂರಲಾಗುತ್ತಿದೆ. ಜೆಡಿಎಸ್‌ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್‌ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ.



    ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್‌ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್‌ ಕಡೆಯೂ ಇರಲಿಲ್ಲ, ಬಿಜೆಪಿ ಕೆಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್‌ ಮಾಡಿದೆ.



    79(ಎ, ಬಿ) ಕಲಂ ಅಗತ್ಯತೆ, ಸಾಧಕ-ಬಾಧಕಗಳ ಪರಾಮರ್ಶೆಗೆ ಸಿದ್ದರಾಮಯ್ಯ ಅವರೂ ಸಿಎಂ ಆಗಿದ್ದಾಗ ಶ್ರೀನಿವಾಸ ಪ್ರಸಾದ್‌ರ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ ಮಾಡಿದ್ದರು. ಆದರೆ, ಈ ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಅವರದ್ದು ಈಗ ದಿವ್ಯ ಮೌನ. ಈ ಕಲಂ ತೆಗೆದು ಹಾಕಿ ಕೃಷಿ ಮಾಡುವ ಮನಸ್ಸುಗಳಿಗೆ ಕೃಷಿ ಸಾಧ್ಯವಾಗಿಸುತ್ತಿರುವುದು ಜೆಡಿಎಸ್

    ಇದನ್ನೂ ಓದಿ : ಕುಮಾರಸ್ವಾಮಿ ಪುಟಗೋಸಿ ರಾಜಕಾರಣ ಮಾಡೋಕೆ ಇರೋದು; ಕೋಡಿಹಳ್ಳಿ ಚಂದ್ರಶೇಖರ್ ಕಿಡಿ

    79(ಎ, ಬಿ) ಕಲಂಗೆ ಇತಿಶ್ರೀ ಹಾಡಿರುವುದು ನಮ್ಮ ಕೃಷಿ ವ್ಯಾಪ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸಹಾಯಕವಾಗುತ್ತದೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಬಯಸುವವರಿಗೆ ಹಾದಿ ಸುಗಮವಾಗುತ್ತದೆ. ಸಾಂಪ್ರದಾಯಕ ಕೃಷಿಯ ಜಾಗಕ್ಕೆ ವೈಜ್ಞಾನಿಕ ಕೃಷಿ ಬರಲು ಅನುಕೂಲವಾಗುತ್ತದೆ. ಇದನ್ನು ಎಲ್ಲರೂ ಗಮನಿಸಬೇಕು" ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಈ ಸಮರ್ಥನೆಗೆ ರೈತ ಮುಖಂಡರು ಹಾಗೂ ಕಾಂಗ್ರೆಸ್​ ನಾಯಕರು ಯಾವ ರೀತಿ ಉತ್ತರ ನೀಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.
    Published by:MAshok Kumar
    First published: