ಯಾರತ್ರಾನೂ ನನ್ನ ಸರ್ಕಾರ ಉಳಿಸ್ರಪ್ಪ ಎಂದು ಭಿಕ್ಷೆ ಬೇಡುವ ರಾಜಕೀಯ ಜಾಯಮಾನ ನನ್ನದಲ್ಲ; ಹೆಚ್​.ಡಿ. ಕುಮಾರಸ್ವಾಮಿ

ನೆರೆ ಸಂತ್ರಸ್ತರು ಆತಂಕದಲ್ಲಿದ್ದಾರೆ, ಆತ್ಮಹತ್ಯೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಸಂತ್ರಸ್ತರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು. ಸಂತ್ರಸ್ತರಿಗೆ ಬದುಕು ಕಟ್ಟಿಕೊಡಬೇಕು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

MAshok Kumar | news18-kannada
Updated:October 28, 2019, 12:03 PM IST
ಯಾರತ್ರಾನೂ ನನ್ನ ಸರ್ಕಾರ ಉಳಿಸ್ರಪ್ಪ ಎಂದು ಭಿಕ್ಷೆ ಬೇಡುವ ರಾಜಕೀಯ ಜಾಯಮಾನ ನನ್ನದಲ್ಲ; ಹೆಚ್​.ಡಿ. ಕುಮಾರಸ್ವಾಮಿ
ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ.
  • Share this:
ಹುಬ್ಬಳ್ಳಿ (ಅಕ್ಟೋಬರ್ 28); ನನ್ನ ಸರ್ಕಾರವನ್ನು ಉಳಿಸಿ ಎಂದು ಯಾರ ಬಳಿಯೂ ಭಿಕ್ಷೆ ಬೇಡುವ ರಾಜಕೀಯ ಜಾಯಮಾನ ನನ್ನದಲ್ಲ. ರೈತರ ಸಾಲಮನ್ನಾ ಮಾಡಬೇಕು ಅನ್ನೋದಕ್ಕಾಗಿ ಕಷ್ಟಪಟ್ಟು ಮೈತ್ರಿ ಸರ್ಕಾರ ಉಳಿಸಿಕೊಂಡಿದ್ದೆ. ಸಾಲಮನ್ನಾ ಆದಮೇಲೆ ಅಧಿಕಾರ ಬಿಟ್ಟು ಸಂತೋಷವಾಗಿ ಹೊರಗೆ ಬಂದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕ ನೆರೆ ವೀಕ್ಷಣೆ ಪ್ರವಾಸದಲ್ಲಿರುವ ಕುಮಾರಸ್ವಾಮಿ ಇಂದು ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ಪತ್ರಕರ್ತರ ಬಳಿ ಮಾತನಾಡುತ್ತಾ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಅವರು, “ಕಳೆದ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ನವರೇ ನಮ್ಮ ಮನವರೆಗೂ ಬಂದ್ರು. ನೀವೆ ಸಿಎಂ ಆಗಿ ಅಂದ್ರು. ಆನಂತರ ಇಂತಹದ್ದೇ ಸಚಿವ ಸ್ಥಾನ ಬೇಕು ಅಂತ ಪಟ್ಟು ಹಿಡಿದ್ರು. ಕೊನೆಗೆ ಸರ್ಕಾರವನ್ನೂ ಉರುಳಿಸಿದ್ರು.

ಆದರೆ, ಯಾರ ಬಳಿಯೂ ಸರ್ಕಾರವನ್ನು ಉಳಿಸಿ ಎಂದು ಭಿಕ್ಷೆ ಬೇಡುವ ಜಾಯಮಾನ ನನ್ನದಲ್ಲ. ರೈತರ ಸಾಲಮನ್ನಾ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ಕಷ್ಟಪಟ್ಟು ಸರ್ಕಾರವನ್ನು ಉಳಿಸಿಕೊಂಡಿದ್ದೆ” ಎಂದು ಕಿಡಿಕಾರಿದ್ದಾರೆ.

“ಸಾಲಮನ್ನಾ ಯೋಜನೆಯಿಂದ ಲಕ್ಷಾಂತರ ಕುಟುಂಬಗಳ ಜೀವ ಉಳಿದಿದೆ. ಇಲ್ಲದಿದ್ದರೆ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಸಾಲಮನ್ನಾ ಮಾಡಲು ಕೇಂದ್ರ ಸರ್ಕಾರದ ಬಳಿ ಹಣ ಕೇಳಬೇಕಿಲ್ಲ. ರಾಜ್ಯದಲ್ಲೇ ಸಾಕಷ್ಟು ಹಣವಿದೆ. ಆದರೆ, ಸರ್ಕಾರಕ್ಕೆ ಇಚ್ಛಾಶಕ್ತಿ ಇರಬೇಕು ಅಷ್ಟೆ.

ಇನ್ನೂ ಸಿದ್ದರಾಮಯ್ಯ ಹೊದಲ್ಲೆಲ್ಲ ಅನ್ನಭಾಗ್ಯ ಯೋಜನೆ ಕೊಟ್ಟೆ ಅಂತಾರೆ. ಪುಕ್ಕಟೆ ಅಕ್ಕಿ ಕೊಡಲು ಎಷ್ಟು ಹಣ ಇಟ್ಟಿದ್ದರು? ಅನ್ನಭಾಗ್ಯಕ್ಕೆ ನಾನೇ ಎಂಟು ನೂರು ಕೋಟಿ ರೂಪಾಯಿ ಹೊಂದಿಸಬೇಕಾಯಿತು” ಎಂದು ಬಿಜೆಪಿ ಸರ್ಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರಾನೇರ ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಡಿಕೆಶಿ ಮೆರವಣಿಗೆಯಲ್ಲಿ ಜೆಡಿಎಸ್ ಧ್ವಜ ಹಿಡಿದಿರುವ ಕುರಿತ ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರ ನೀಡಿರುವ ಕುಮಾರಸ್ವಾಮಿ, “ಲಿಂಗಾಯಿತರು ಯಡಿಯೂರಪ್ಪ ಪರವಾಗಿಲ್ಲ, ಒಕ್ಕಲಿಗರು ಕುಮಾರಸ್ವಾಮಿ ಪರವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಇಂತಹ ಹೇಳಿಕೆ ನೀಡುವುದೇ ಕೋಮುವಾದಿ ತನ.

ಡಿಕೆಶಿ ಅವರಿಗೂ ನಮಗೂ ಸಂಬಂಧ ಇಲ್ಲ. ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಡಿಕೆಶಿಯನ್ನು ಬೆಂಬಲಿಸಿರಬಹುದು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಧ್ವಜ ಹಿಡಿದಿದ್ದಾರೆ. ಅದಕ್ಕೆ ಏನೇನೋ ಅರ್ಥ ಕೊಡುವುದು ಬೇಡ. ನಾನು ಭಾವನಾತ್ಮಕ ಜೀವಿ, ಜನರಿಗಾಗಿ ರಾಜಕೀಯ ಮಾಡುತ್ತಿದ್ದೇನೆ. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ” ಎಂದು ಸ್ಪಷ್ಟನೆ ನೀಡಿದ್ದಾರೆ.ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ಸರ್ಕಾರ ಮುಂದಾಗಬೇಕು;

ನೆರೆ ಸಂತ್ರಸ್ತರು ಆತಂಕದಲ್ಲಿದ್ದಾರೆ, ಆತ್ಮಹತ್ಯೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿ ಸಂತ್ರಸ್ತರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು. ಸಂತ್ರಸ್ತರಿಗೆ ಬದುಕು ಕಟ್ಟಿಕೊಡಬೇಕು ಎಂದು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಉತ್ತರ ಕರ್ನಾಕದ ಪ್ರವಾಹ ಪೀಡಿದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿರುವ ಅವರು, “ರಾಜ್ಯ ಪ್ರವಾಸ ಮಾಡಿ ಪ್ರವಾಹದಿಂದಾಗಿರುವ ನಷ್ಟದ ಕುರಿತು ಅಧ್ಯಯನ ಮಾಡಿದ್ದೇನೆ. ಈ ಕುರಿತು ಚರ್ಚೆ ನಡೆಸಲು ಸಿಎಂ ಬಳಿ ಸಮಯ ಕೇಳಿದ್ದೇನೆ. ನೆರೆ ಸಂತ್ರಸ್ತರ ಪರವಾಗಿ ನನ್ನ ಶಕ್ತಿಯನ್ನು ಧಾರೆ ಎರೆಯಲು ಸಿದ್ದನಿದ್ಧೇನೆ. ಮಳೆಯಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿದೆ. ಯಾವುದೇ ಸರ್ಕಾರ ಇದ್ದರೂ ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ.

ನನ್ನ ಅನಿಸಿಕೆ ಪ್ರಕಾರ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಸಿಎಂ ಸೇರಿದಂತೆ ಎಲ್ಲಾ ಸಚಿವರು ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ವಿಭಿನ್ನ ಹೇಳಿಕೆ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಬದುಕು ಪುನಃ ಕಟ್ಟಿಕೊಡ್ತಾರ ಅನ್ನೋ ಭರವಸೆ ಸಂತ್ರಸ್ತರಿಗೆ ಮೂಡುತ್ತಿಲ್ಲ. ಆದರೆ, ಸಂತ್ರಸ್ತರ ಬದುಕು ಕಟ್ಟಿಕೊಡಬೇಕಾದದ್ದು ಸರ್ಕಾರದ ಕರ್ತವ್ಯ” ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಜಿ. ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣ; ಪೊಲೀಸ್ ವಿಚಾರಣೆಗೆ ಸಹಕರಿಸಲು ಐಟಿ ಹಿಂದೇಟು

First published:October 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading