ಗಂಡಸ್ತನ ತೋರಿಸೋದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡಬೇಡಿ: HD Kumaraswamy ಮಾತಿನೇಟು

ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪಕ್ಷವಾಗಿದ್ದರೆ,ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ ಎಂದು ಕಟುವಾದ ಪದಗಳಿಂದಲೇ HDK ಟ್ವೀಟಿಸಿದ್ದಾರೆ.

ಎಚ್​.ಡಿ.ಕುಮಾರಸ್ವಾಮಿ

ಎಚ್​.ಡಿ.ಕುಮಾರಸ್ವಾಮಿ

  • Share this:
ಬೆಂಗಳೂರು: ಕೊರೊನಾ(corona) ಹೆಚ್ಚಾಗುತ್ತಿರುವ ಮಧ್ಯೆಯೂ ಮೇಕೆದಾಟು ಪಾದಯಾತ್ರೆ (mekedatu padayatra) ನಡೆಸುತ್ತಿರುವ ಕಾಂಗ್ರೆಸ್​ ಹಾಗೂ ಇದನ್ನು ತಡೆಯದ ರಾಜ್ಯ ಸರ್ಕಾರವನ್ನು ಇಂದು ಹೈಕೋರ್ಟ್(high court)​​ ತರಾಟೆಗೆ ತೆಗೆದುಕೊಂಡಿದೆ. ಇದ ಬೆನ್ನಲ್ಲೇ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್​ ಗಳ ಮೂಲಕ ಕಾಂಗ್ರೆಸ್​ ವಿರುದ್ಧ ಕಿಡಿಕಾರಿದ್ದಾರೆ. ಪಾದಯಾತ್ರೆಯ ದೊಂಬರಾಟಕ್ಕೆ ಕೊನೆ ಹಾಡಲು ರಾಜ್ಯ ಸರ್ಕಾರವನ್ನು ಎಚ್​ಡಿಕೆ ಒತ್ತಾಯಿಸಿದ್ದಾರೆ. ಮೇಕೆದಾಟು ಪಾದಯಾತ್ರೆಯನ್ನು ʼಓಮಿಕ್ರಾನ್ ಜಾತ್ರೆʼಯನ್ನಾಗಿ  ಕಾಂಗ್ರೆಸ್ ಪರಿವರ್ತಿಸಿದೆ. ಇದೀಗ ಕಾಂಗ್ರೆಸ್ ಗೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ಸೋಂಕನ್ನು ನಿರ್ಲಕ್ಷಿಸಿದ ಸರ್ಕಾರಕ್ಕೂ ಚಾಟಿ ಬೀಸಿದೆ. ಕೂಡಲೇ ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನೀರಿನ ನೆಪದ ಈ ದೊಂಬರಾಟಕ್ಕೆ ಕೊನೆ ಹಾಡಬೇಕು ಎಂದು ಆಗ್ರಹಿಸಿದ್ದಾರೆ.





ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ

ಕೋವಿಡ್ ರಕ್ಕಸ ರೂಪ ಪಡೆದು ವೇಗವಾಗಿ ಹರಡುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರೇ  ಪಾಸಿಟವ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಸರಿಯಾಗಿ ಪರೀಕ್ಷೆ ನಡೆಸಿದರೆ ದೊಡ್ಡ ಸಂಖ್ಯೆಯ ಜನರು ಸೋಂಕಿತರಾಗಿರುವುದು ಬಯಲಾಗುತ್ತದೆ. ನ್ಯಾಯಾಲಯದಿಂದ ಮತ್ತೆ ಛೀಮಾರಿ ಹಾಕಿಸಿಕೊಳ್ಳುವುದು ಬೇಡ. ಪರಿಸ್ಥಿತಿ ಕೈಮೀರಿದೆ. ಎಚ್ಚರ ತಪ್ಪಿದರೆ ಇರುವ ಆಸ್ಪತ್ರೆಗಳು, ವೈದ್ಯರ ವ್ಯವಸ್ಥೆ ಸಾಲುವುದಿಲ್ಲ. ಮತ್ತೊಮ್ಮೆ ಸರಕಾರ ಮುಜುಗರಕ್ಕೆ ಒಳಗಾಗುವುದು ಸರಿಯಲ್ಲ ಎಂದು ಟೀಕಿಸಿ ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ: High Court ತರಾಟೆ.. ಕಾಂಗ್ರೆಸ್-ಸರ್ಕಾರ ಎರಡಕ್ಕೂ ಬಿಸಿ ತುಪ್ಪವಾದ ‘ಪಾದಯಾತ್ರೆ’..ಮುಂದೇನಾಗುತ್ತೆ?

ಕಾಂಗ್ರೆಸ್ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೇನು ಆತಂಕವಿಲ್ಲ 

ಮೇಕೆದಾಟು ಬಗ್ಗೆ ಏನೇನು ಮಾಡಲಾಗಿದೆ ಎಂದು ಸರಕಾರ ಜಾಹೀರಾತು ನೀಡಿದೆ. ಕಾಂಗ್ರೆಸ್ ಕೂಡ ಜಾಹೀರಾತು ಕೊಟ್ಟುಕೊಂಡು ಸಮಜಾಯಿಷಿ ನೀಡಿವೆ. ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವ ಲೆಕ್ಕವನ್ನು ನಾನು ಜನರ ಮುಂದೆ ಇಡುತ್ತೇನೆ.1924ರಿಂದ ಕಾವೇರಿ ವಿಷಯದಲ್ಲಿ ಏನೆಲ್ಲಾ ನಡೆಯಿತು.? ರಾಜ್ಯಕ್ಕೆಷ್ಟು ಅನ್ಯಾಯ ಆಯಿತು ಎಂಬುದನ್ನು ಮುಂದೆ ನಾನು ವಿವರವಾಗಿ ಚರ್ಚೆ ಮಾಡುತ್ತೇನೆ. ಕಾಂಗ್ರೆಸ್ ಪಾದಯಾತ್ರೆಯಿಂದ ನಮ್ಮ ಪಕ್ಷಕ್ಕೇನು ಆತಂಕವಿಲ್ಲ. ಆದರೆ ಜನ ಆರೋಗ್ಯದ ಆತಂಕದಲ್ಲಿದ್ದಾರೆ. ಹಾಗಂತ, ಇವರ ಯಾತ್ರೆ ಬಗ್ಗೆ ಅಥವಾ ನಾಡಿನ ಪರ ದನಿಯೆತ್ತುವ ಬಗ್ಗೆ ನನ್ನ ತಕರಾರಿಲ್ಲ. ಆದರೆ, ಕೋವಿಡ್ ಅಟ್ಟಹಾಸದ ಹೊತ್ತಿನಲ್ಲಿ ಇದು ಖಂಡಿತಾ ಬೇಕಿರಲಿಲ್ಲ ಎಂದು ಸಲಹೆ ನೀಡಿದರು.

ಮೇಕೆದಾಟನ್ನು ಮಸಣ ಮಾಡುವುದು ಬೇಡ

ಗಾಂಧೀಜಿ ಅವರ ಪಾದಯಾತ್ರೆ ಬಗ್ಗೆ ಓದಿದ್ದೇನೆ. ವಿನೋಬಾ ಭಾವೆ ಅವರ ಪಾದಯಾತ್ರೆ ಬಗ್ಗೆ ಅರಿತಿದ್ದೇನೆ. ದೇವೇಗೌಡರ ಪಾದಪಾತ್ರೆಯನ್ನು ಕಣ್ಣಾರೆ ಕಂಡಿದ್ದೇನೆ.  ಆದರೆ, ಇಂಥ ʼಹೈಟೆಕ್ ಪಾದಯಾತ್ರೆʼಯನ್ನು ನೋಡಿರಲಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದರು. ಇಂಥ ದೊಂಬರಾಟದಿಂದ ಕಾನೂನಿನ ವ್ಯಾಪ್ತಿಯಲ್ಲಿರುವ ಮೇಕೆದಾಟು ಯೋಜನೆ ಜಾರಿ ಸಾಧ್ಯವಿಲ್ಲ. ಚುನಾವಣೆ ಹತ್ತಿರದಲ್ಲಿದೆ, ಕಾಂಗ್ರೆಸ್ ಸಂಘಟನೆ ಮಾಡಿಕೊಳ್ಳಲಿ. ಕೋವಿಡ್ ಇಳಿಮುಖವಾದ ನಂತರ ಅದನ್ನು ಮಾಡಲಿ. ಅದನ್ನು ಬಿಟ್ಟು ಜನರ ಜೀವದ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪಕ್ಷವಾಗಿದ್ದರೆ,ತಕ್ಷಣ ಪಾದಯಾತ್ರೆ ನಿಲ್ಲಿಸಲಿ. ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ ಎಂದು ಕಟುವಾದ ಪದಗಳಿಂದಲೇ ಟ್ವೀಟಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ Corona ಅಟ್ಟಹಾಸ.. ಮಾರುಕಟ್ಟೆಗಳು ಶಿಫ್ಟ್ ಸೇರಿದಂತೆ ಇಂದಿನಿಂದ ಈ ಎಲ್ಲಾ ರೂಲ್ಸ್ ಜಾರಿ!

ಕಳೆದ 4 ದಿನಗಳಿಂದ ಸರಕಾರ ತೋರಿದ ಉದಾರತೆ ಸಾಕು. ಇನ್ನೂ ಔದಾರ್ಯ ತೋರಿದರೆ ರಾಜ್ಯದ ಅವನತಿಗೆ ದಾರಿಯಾದೀತು. ಕೋವಿಡ್ ನಿಯಮ ಪಾಲಿಸುವಂತೆ ಜನರಿಗೆ ಹಿಂಸೆ ಕೊಟ್ಟು, ರಾಜಕಾರಣಿಗಳಿಗೆ ವಿನಾಯಿತಿ ಕೊಡುವುದು ಉತ್ತಮ ಆಡಳಿತದ ಲಕ್ಷಣವಲ್ಲ. ಸರಕಾರ ಕೆಚ್ಚೆದೆಯ ಕ್ರಮ ಕೈಗೊಳ್ಳಬೇಕು ಎಂದು ಚಾಟಿ ಬೀಸಿದರು.

ಡಿಕೆ ಸುರೇಶ್​ ತಿರುಗೇಟು

ಇದಕ್ಕೆ ತಿರುಗೇಟು ನೀಡಿದ ಸಂಸದ ಡಿಕೆ ಸುರೇಶ್​​, ಗಂಡಸ್ತನ ಅನ್ನೋ ಮಾತಿಗೆ ಈಗಲೂ ನಾನು ಬದ್ದನಿದ್ದೇನೆ. ಕುಮಾರಸ್ವಾಮಿ ಯಾವ ಕಣ್ಣಿನಿಂದ ನೋಡಿದ್ದಾರೋ ಗೊತ್ತಿಲ್ಲ. ಹಾಗಂತ ಅವ್ರು ಹೇಳಿದ್ರು ಅಂತಾ ನಾವು ಹೋರಾಟ ನಿಲ್ಸಲ್ಲ. ಇದು ರಾಜಕೀಯಕ್ಕಾಗಿ ನಡೆಯುತ್ತಿರುವ ಹೋರಾಟ ಅಲ್ಲ. ಇದು ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು, ಇದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಲಿ ಎಂದರು.
Published by:Kavya V
First published: